Thursday, July 1, 2010

ಹೀಗೂ ಉಂಟೆ..?

ಸಮಯ ತಿಳಿದಿಲ್ಲ.. ನಿದ್ರೆ ಹರಿದಿಲ್ಲ.. ಮಲಗಿ ಸಾಕಷ್ಟು ಸಮಯವೇನೂ ಕಳೆದಂತಿಲ್ಲ.. ಅದೇಕೋ ಎಚ್ಚರವಾಗಿತ್ತು. ದಿನನಿತ್ಯ ಹೀಗಾಗುವುದಿಲ್ಲ. ಒಮ್ಮೆ ಮಲಗಿದೆನೆಂದರೆ, ಮತ್ತೆ ಎಚ್ಚರವಾಗುವುದು ನನ್ನ Mobile Phone ನಲ್ಲಿನ Alarm ಸುಮಧುರವಾಗಿ ತನ್ನದೇ ಧಾಟಿಯಲ್ಲಿ 'ಸುಪ್ರಭಾತ' ಹಾಡಿದಾಗ ಮಾತ್ರ. ಇಂದೇಕೋ ಮಾರ್ಗ ಮಧ್ಯೆ ನಿದ್ರಾದೇವಿ ನನ್ನ ಕೈಬಿಟ್ಟು ಹೋಗಿದ್ದಳು. ನನ್ನ ಅರಿವು ಎಚ್ಚರವಾಗಿತ್ತು.

ಹಾಸಿಗೆಯ ಮೇಲೆ, ತಲೆದಿಂಬಿನ ಪಕ್ಕ ಸುಪ್ರಭಾತ ಹಾಡಲು ಕಾದು ಕುಳಿತಿದ್ದ ನನ್ನ Mobile Phone ಗೆ "ಸಮಯವೆಷ್ಟು?" ಮನಸ್ಸಿನಲ್ಲೇ ಕೇಳಿದ್ದೆ. ಅದು ನನ್ನ ಪ್ರಶ್ನೆಗೆ ಉತ್ತರಿಸುವುದಿರಲಿ, ಕಿಂಚಿತ್ ಸ್ಪಂದಿಸುವುದೂ ಇಲ್ಲವೆಂದು ತಿಳಿದಿದ್ದ ನಾನು, ಸಮಯ ತಿಳಿಯಲು Phone ಎತ್ತಿಕೊಳ್ಳಲು ಹೊರಟೆ. ಅರೆ..! ಇದೇನಿದು? Phone ಎತ್ತಿಕೊಳ್ಳಲು ಆಗುತ್ತಿಲ್ಲವಲ್ಲ! ಕಾರಣವೇನು? Phone ಅಲ್ಲೇ ಇದೆಯಲ್ಲ.. ಆದರೆ ನಾನು ಅದನ್ನು ಎತ್ತಿಕೊಳ್ಳಲು ನನ್ನ ಕೈ ಮುಂದೆ ಬರುತ್ತಿಲ್ಲ. ಏಕೆ ಹೀಗೆ? ನನ್ನ ಕೈ ಸ್ವಾಧೀನ ಕಳೆದುಕೊಂದಿದೆಯೋ ಹೇಗೆ? ಹೋಗಲಿ, ಗೊಡೆಯಲ್ಲಿನ ಗಡಿಯಾರದಲ್ಲಿ ಸಮಯ ಎಷ್ಟಾಗಿದೆ ಎಂದು ನೋಡೋಣವೆಂದು ಎಡಗಡೆ ಮಗ್ಗುಲಿಗೆ ಮಲಗಿದ್ದವನು ಹಿಂದೆ ತಿರುಗಿದೆ.. ವಿಚಿತ್ರ! ಇಂಥಹ ಅನುಭವ ನನ್ನ ಜೀವನದಲ್ಲಿ ಇದೇ (ಇಂದೇ) ಪ್ರಥಮ.. ಮಲಗಿದ್ದವನು ಎಡ ಮಗ್ಗುಲಿಗೇ ತಿರುಗಿ ಮಲಗಿದ್ದೆ, ಆದರೆ ನನ್ನ ಅರಿವು - ನೋಟ ಮಾತ್ರ ಬಲಕ್ಕೆ, ದೂರ ಸರಿದಿತ್ತು. ಹೀಗೂ ಆಗಲು ಸಾಧ್ಯವೇ? ನನ್ನ ನೋಟ ಮಲಗಿರುವ ನನ್ನ ಮೇಲಿಂದ ಸುಮಾರು 4 ಅಡಿಗಳಷ್ಟು ಎತ್ತರದಿಂದ ಕೇಂದ್ರೀಕೃತವಾಗಿದೆ. ಸ್ಪಷ್ಟವಾಗಿ ಕಾಣುತ್ತಿದೆ, ನಾನು ಇನ್ನೂ ಮಲಗಿದ್ದೇನೆ. ಗೋಡೆಯ ಮೇಲಿನ ಗಡಿಯಾರದ ಕಡೆ ತಿರುಗಿ ನೋಡಿದೆ; ಸಮಯ 1:35 ಗಂಟೆ. ನನಗಾಗುತ್ತಿರುವ ವಿಚಿತ್ರ ಅನುಭವದ ಪರಿವೆಯೇ ಇಲ್ಲವೇನೋ ಎಂಬಂತೆ ಗಡಿಯಾರವು ತನ್ನ ಪಾಡಿಗೆ ತಾನು 'ಟಿಕ್-ಟಿಕ್'ಗುಟ್ಟುತ್ತಿತ್ತು.

ಗಡಿಯಾರವನ್ನು ಬಿಟ್ಟರೆ ಬೇರೆ ಯಾರಿಗೂ ಸದ್ದು ಮಾಡುವ ಧೈರ್ಯವಿದ್ದಂತೆ ಕಾಣಲಿಲ್ಲ. ನಿಶ್ಶಬ್ದ - ಮೌನ ಸುತ್ತಲೂ ಆವರಿಸಿತ್ತು. 'ಸ್ಮಶಾನ ಮೌನ' ಎಂದರೆ ಹೀಗೇನಾ? 'ಸ್ಮಶಾನ' - ಅರೆ!.. ನಾನೇನಾದರು..?? ಇಲ್ಲ ಇಲ್ಲ, ಸಾಯುವ ವಯಸ್ಸೇ ನನ್ನದು? ಖಂಡಿತಾ ಇಲ್ಲ. ಆದರೆ ಇದೇನಿದು ಹೊಸದೊಂದು ಅನುಭವ? ಆವರಿಸಿದ್ದ ಮೌನವನ್ನು ಸೀಳಿಕೊಂಡು TATA Sumo ಒಂದು ಮುಖ್ಯರಸ್ತೆಯಲ್ಲಿ ಹಾದು ಹೋಗಿತ್ತು. ಹೌದು.. ನಾನು ಮಲಗಿರುವುದು ನನ್ನ ರೂಮಿನಲ್ಲಿ. ಇಲ್ಲಿಂದ ಮುಖ್ಯರಸ್ತೆಯು ಕಾಣಿಸುವುದೂ ಇಲ್ಲ; ಹಾಗಾದರೆ ಈಗ ಹಾದುಹೋಗಿದ್ದು TATA Sumo ಎಂದು ನನಗೆ ಹೇಗೆ ತಿಳಿಯಿತು? ಅಗೋಚರ ಶಕ್ತಿಯೊಂದು ನನಗೆ ದೊರೆತಿದೆಯೂ ಹೇಗೆ? ಮಲಗಿದ್ದ ನನ್ನನ್ನು ನಾನೇ ಮುಟ್ಟಲು ಪ್ರಯತಿಸಿದೆ.. ಸಾಧ್ಯವೇ ಇಲ್ಲ! ನನಗಿರುವುದು ಈಗ ಬರಿಯ ನೋಟವಷ್ಟೇ. ತೀರ ಹತ್ತಿರಕ್ಕೆ ಹೋಗಿ ನಾನು ಉಸಿರಾಡುತ್ತಿದ್ದೆನೂ ಇಲ್ಲವೋ ಎಂದು ದೃಷ್ಟಿಸಿ ನೋಡಿದೆ. ಮಲಗಿರುವ ನನ್ನಲ್ಲಿ ಯಾವುದೇ ಚಲನೆ ಇಲ್ಲ; ಸ್ಥಿರವಾಗಿ ಹಾಗೆ ಮಲಗಿದ್ದೇನೆ. ಮೇಜಿನ ಕೆಳಗೆ ಹಾಸಿದ್ದ ಜಮಖಾನದ ಮೇಲೆ ಮಲಗಿದ್ದ Snowy (ನಾಯಿ ಜಾತಿಗೆ ಸೇರುವ ನಮ್ಮ ಕುಟುಂಬದವರಲ್ಲೊಬ್ಬ) ಎಚ್ಚರಗೊಂಡು ನನ್ನತ್ತ ನೋಡುತ್ತಿದ್ದ. ನನ್ನತ್ತ ಎಂದರೆ, ಮಲಗಿರುವ ನನ್ನನ್ನಲ್ಲ! ಮಲಗಿದ್ದ ನನ್ನನ್ನು 'ಅಗಲಿದ' ನನ್ನ ದೃಷ್ಟಿ-ನೋಟವನ್ನೇ ತೀಕ್ಷ್ಣವಾಗಿ ಗಮನಿಸುತ್ತಿದ್ದ. ಸಾಮಾನ್ಯವಾಗಿ ಅವನು ಕೋಪಗೊಂಡು ಧಾಳಿ ಮಾಡಬೇಕಾದವರನ್ನು ನೋಡುವುದೇ ಹೀಗೆ.. ಅವನು ನನ್ನ ಮೇಲೆರಗುವ ಮೊದಲೇ ಮಾತನಾದಿಸಲೆಂದು ನಾನು "Snooooo" (ಅವನನ್ನು ನಾನು ಕರೆಯುವುದೇ ಹಾಗೆ).. ಆದರೆ, ಆದರೆ.. ಏನಾಗಿದೆ ನನ್ನ ಕಂಠಕ್ಕೆ? ಮಾತನಾಡಲು ಸಾಧ್ಯವಾಗುತ್ತಿಲ್ಲ. ಅಷ್ಟರಲ್ಲಿ Snowy ತನ್ನ ಚಾಚಿದ ಎರಡೂ ಮುಂಗಾಲುಗಳ ಮಧ್ಯೆ ತಲೆಯಿಟ್ಟು ನನ್ನನ್ನೇ ಗಮನಿಸುತ್ತಾ ಮಲಗಿದ್ದು ನನ್ನಲ್ಲಿ ಸಮಾಧಾನ ತಂದಿತ್ತು.

ಮತ್ತೆ ಅಸಮಾಧಾನ.. ಏಕೆ ನನಗೆ ಮಾತನಾಡಲು ಆಗುತ್ತಿಲ್ಲ? ಮನಸ್ಸಿನ ಎಲ್ಲಾ ತಳಮಳಗಳನ್ನು ಬದಿಗೊತ್ತಿಟ್ಟು, ಆಲೋಚಿಸತೊಡಗಿದೆ. ನಾನು ಮಲಗಿಯೇ ಇದ್ದೇನೆ; ಆದರೂ ಅರಿವು ಎಚ್ಚರವಾಗಿದೆ; ದೂರದ ರಸ್ತೆಯಲ್ಲಿ ಸಂಚರಿಸುವ ವಾಹನದ ಸ್ಪಷ್ಟ ಚಿತ್ರಣ ನನಗಿದೆ. Snowy ಗೆ ನಾನು ಕಾಣಿಸುತ್ತಿದ್ದೇನೆ; ಆದರೆ ಮಾತನಾಡಲು ಆಗುತ್ತಿಲ್ಲ. ಯಾರೋ ಹೇಳಿದ್ದ ನೆನಪು - ನಾಯಿಗಳಿಗೆ 'ದೆವ್ವ' ಕಾಣಿಸುತ್ತದಂತೆ! ಹಾಗಾದರೆ ಈಗ ನಾನು ಮನುಷ್ಯನಾಗಿ ಉಳಿದಿಲ್ಲವೇ? ದೇಹ-ಆತ್ಮ ಬೇರೆಯಾಗಿದ್ದವೆ? ದೇಹ, ಆತ್ಮ, ದೆವ್ವ - ಇವನ್ನೆಲ್ಲ ನಂಬುವವನಲ್ಲ ನಾನು. ಆದರೆ, ಇದೆಂಥ ಅನುಭವ? ಮಾನವನ ಅರಿವಿಗೆ ಬರುವ ಪ್ರಪಂಚದಿಂದ ನಾನು ಬೇರೆಯಾಗಿರುವ ಅನುಭವ. ಇಷ್ಟೂ ದಿನ ನಾನಿದ್ದ ಪ್ರಪಂಚಕ್ಕೆ ಇನ್ನು ನಾನು ಬೇಡವಾದೆನೇನೂ ಎಂಬ ಅನುಭವ. ಈ ಅನುಭವ ನನಗೆ ಬೇಡ.. ಹೇಗಾದರೂ ಬಿಡುಗಡೆ ಹೊಂದಬೇಕು.. 'ಅಮ್ಮಾaaaaaaaaa'. ಆಶ್ಚರ್ಯ! ನಾನೇಕೆ ಅಮ್ಮನನ್ನು ಕೂಗಿದೆ ಈಗ? ನನಗರಿವಿಲ್ಲದೆಯೇ ನಾನು ನನಗೆ ಜನ್ಮ ಕೊಟ್ಟಾಕೆಯನ್ನು ಕರೆದಿದ್ದಾದರೂ ಏಕೆ? ನನ್ನನ್ನು ಈ ಭೂಮಿಗೆ ತಂದವಳು ಮಾತ್ರ ಈಗ ನನ್ನನ್ನು ಉಳಿಸಲು ಶಕ್ತಳು ಎಂದರ್ಥವೆ? ಹಾಗಾದರೆ.. ನಾನು... ಇಲ್ಲ. ನಾನು ಚೆನ್ನಾಗಿಯೇ ಇದ್ದೆನಲ್ಲ! ಜೀವ ಹೋಗುವಂಥದ್ದು ಏನೂ ಆಗಿರಲ್ಲಿಲ್ಲ ನನಗೆ. ಓಹೋ.. "ದೇವರು ಕರೆದಾಗ ಹೋಗಬೇಕು" ಎನ್ನುವುದು ಇದಕ್ಕೇ ಏನೋ? ಆದರೆ, ವಾಸ್ತವದಲ್ಲಿ ನನ್ನನ್ನು ಯಾರೂ ಕರೆದಿಲ್ಲವಲ್ಲ..? ಸುತ್ತ-ಮುತ್ತ ಎಲ್ಲೂ 'ದೇವರು' ಕಾಣಿಸುತ್ತಿಲ್ಲವಲ್ಲ..?! ನಾನು 'ಹೋಗಿ'ಬಿಟ್ಟೆನೆ? ಇನ್ನೂ ನಾನು ಮಾಡಬೇಕಾದದ್ದು ಬಹಳ ಉಳಿದಿತ್ತಲ್ಲ?.. ಈಗಾಗಲೇ ಶುರುವಾಗಿದ್ದ ಹಲವು ಕೆಲಸಗಳು ಅರ್ಥದಲ್ಲೇ ನಿಂತಿದ್ದವಲ್ಲ.. ಅದನ್ನು ಮುಗಿಸುವವರೆಗಾದರೂ ನಾನು ಬದುಕಬೇಡವೆ? ಇತ್ತೀಚೆಗಷ್ಟೇ ನಾನು ಬ್ಲಾಗ್ ಬರೆಯಲು ಶುರು ಮಾಡಿ, ಹಲವು ವಿಷಯಗಳ ಬಗ್ಗೆ ಚಿಂತಿಸಿ ಬರೆದಿದ್ದ 'Draft' ಗಳು ಹಾಗೆಯೇ ಉಳಿದವಲ್ಲ.. ಹೀಗಾದರೆ, ನನ್ನ ಚಿಂತನೆ-ಆಲೋಚನೆಗಳನ್ನು ಹೊರಗಿನ ಪ್ರಪಂಚಕ್ಕೆ ತಿಳಿಸುವುದಾದರೂ ಹೇಗೆ?.. ನಾಳೆ ನನ್ನ ಸ್ನೇಹಿತರಿಗೆ ನಾಗರಾಜ್ ನ ಅಣ್ಣನ ಮದುವೆಗೆ ಹೊಗಿಬರೂಣವೆಂದು ಹೇಳಿದ್ದೆನಲ್ಲ.. ನಾನು ಸ್ವತಃ ತಯಾರಿಸಿದ ಹಲವು Software ಗಳ ಮುಂದಿನ ಆವೃತ್ತಿ ಬಿಡುಗಡೆ ಮಾಡಬೇಕಾಗಿತ್ತಲ್ಲ.. ನನ್ನನ್ನು ಬಿಟ್ಟರೆ, ಮನೆಯಲ್ಲಿರುವ ಒಂದು bicycle, ಎರಡು bike ಹಾಗು ಕಾರನ್ನು ಇನ್ನು ಮುಂದೆ ನಡೆಸುವವರಾದರೂ ಯಾರು?.. ನನ್ನ ಮಹತ್ವಾಕಾಂಕ್ಷೆಯ ANICARE ಸಂಸ್ಥೆಯು ಬೆಳೆಯುವುದಾದರೂ ಹೇಗೆ?.. ಹತ್ತು ವರ್ಷಗಳಿಂದಲೂ ನಾನು ಉಪಯೋಗಿಸಿದ್ದ ನನ್ನ AirTel Sim Card ನ ಗತಿ?.. Axis Bank ನಲ್ಲಿ ತೊಡಗಿಸಿದ್ದ ಟೇವಣಿಗೆ Nominee ಮಾಡಲು ಮರೆತೆನಲ್ಲ.. ಕಛೇರಿಯಲ್ಲಿ, ಶುಕ್ರವಾರ ರಜೆ ಬೇಕೆಂದು ಕೇಳಿದ ಮೂರ್ತಿಗೆ ಬೈದಿದ್ದೆನಲ್ಲ - ನನ್ನಲ್ಲಿ ಯಾವುದೇ ದುರುದ್ದೆಷವಿರಲಿಲ್ಲ ಎಂದು ಅವನಿಗೆ ತಿಳಿಸುವವರ್ಯಾರು?.. ಇದ್ದಕ್ಕಿದ್ದ ಹಾಗೆ ಹೀಗೆ ನನ್ನನ್ನು 'ಕರೆದುಕೊಂಡು'ಬಿಟ್ಟ ಆ ದೇವರಿರುವುದಾದರೂ ಎಲ್ಲಿ? ನಾನು ಮತ್ತೆ ನನ್ನಲ್ಲಿ ಸೇರಿಕೋಳ್ಳಬೇಕಲ್ಲ.. ಹೋಗಲಿ, ಇದ್ಯಾವುದೂ ಬೇಡ.. ಸತ್ತ ನಂತರದ ಅನುಭವ ಹೇಗಿರುತ್ತದೆ ಎಂದು ನಾನು ಬೇರೆಯವರಲ್ಲಿ ಹೇಳಿಕೊಳ್ಳುವುದಕ್ಕಾದರೂ ನಾನು ಮತ್ತೆ ಬದುಕಬೇಕು.. ನಾನು ಈ ಕ್ಷಣದಲ್ಲಿ ಸಾಯಲು ನಿಜವಾಗಿಯೂ ತಯಾರಿಲ್ಲ.. ಹೇಗಾದರೂ ಬದುಕಲೇ ಬೇಕು.. ಹೇಗೆ?? ದಾರಿಯೇ ತೋಚುತ್ತಿಲ್ಲವಲ್ಲ.. ಯಾರಾದರೂ ದಯವಿಟ್ಟು ನನ್ನನ್ನು ಬದುಕಿಸಿ.. "ಅಯ್ಯೋ ದೇವರೇeeeeeeee".. ಇದ್ದಕ್ಕಿದ್ದ ಹಾಗೆ ಕಣ್ಣು ಬಿಟ್ಟಿದ್ದೆ.. ಮೈಯೆಲ್ಲಾ ಸ್ವಲ್ಪ ಬೆವರಿತ್ತು.. ಗೋಡೆಯ ಗಡಿಯಾರದಲ್ಲಿ ಸಮಯ 12:30 ರ ಸುಮಾರು.. ಎದ್ದು ಕೂತೆ.. ಪಕ್ಕದಲ್ಲಿದ್ದ Mobile Phone ತೆಗೆದುಕೊಂಡು ನೋಡಲು, ಒಂದು SMS ಆಗಮಿಸಿತ್ತು.. "YOU HAVE BEEN NOMINATED FOR 750000 IN TEXACO TELE PROMOTION.." ಮುಂದೆ ಓದದೇ ಇನ್ನಿಲ್ಲದಂತೆ ಅದನ್ನು ಅಳಿಸಿ ಹಾಕಿದ್ದೆ. ಎದ್ದು ಕೂತಿದ್ದ ನನ್ನನ್ನು ಮಲಗಿಕೊಂಡೇ Snowy ದಿಟ್ಟಿಸುತ್ತಿದ್ದ. ಮಂಚದ ಮೇಲಿಂದ ಇಳಿದು, ಮೇಜಿನ ಮೇಲಿದ್ದ ನನ್ನ Laptop ಪರದೆ ಎತ್ತರಿಸಿ, Power ಗುಂಡಿಯನ್ನು ಒತ್ತಿ (blog ಬರೆಯಲು) ಕುರ್ಚಿಯ ಮೇಲೆ ಕುಳಿತಿದ್ದ ನನ್ನನ್ನು ಆವರಿಸಿದ್ದ ಪ್ರಶ್ನೆ - ಸಾವಿನ ನಂತರ 'ಹೀಗೂ ಉಂಟೆ..?'.

3 comments:

  1. ಬೆಳಿಗ್ಗೆ ನನ್ನನ್ನು ಭೇಟಿಮಾಡಿದ ನನ್ನ ಸಹೋದ್ಯೋಗಿ ಡಾ. ನಾಗರಾಜ್, 'ನಿಮ್ಮ ಕಾಲು ತೋರಿಸಿ ಸರ್' ಎಂದಾಗ ನನಗೆ ಆಶ್ಚರ್ಯ!
    'ಕಾಲು ಸರಿಯಾಗಿದೆ' ಎಂದು ಗೊಣಗಿದ ಅವರು, ನಿಮ್ಮ ಬ್ಲಾಗ್ ನಲ್ಲಿ 'ಹೀಗೂ ಉಂಟೆ?' ಬರಹ ಓದಿದೆ ಎಂದಾಗ ಬಿದ್ದು-ಬಿದ್ದು ನಕ್ಕೆವು.

    ReplyDelete
  2. ನಿಮ್ಮ ಕನಸಿನ ಅನುಭವ ಅಲ್ಪ ಅವದಿಯದಾದರು ಅದ್ಬುತ , ನಿಮ್ಮ ಸುಪ್ತ ಮನಸುನೀವು ನಿದ್ದೆ ಮಾಡುವಾಗ ಜಾಗೃತಗೊಂಡು ನಿಮ್ಮಲ್ಲಿಯ ಭಾವನೆಗಳನ್ನು ಹೊರಸುಸಿದೆ . ಇನ್ನುಮೇಲಾದರೂ ನೀವು ಅದಮಿಟ್ಟಿರುವ ಆಸೆ ಅಕಾಮ್ಷೆಗಳನ್ನು ಈಡೇರಿಸಲು ಪ್ರಯತ್ನಿಸಿ ?ಸುಪ್ತಮನಸನ್ನು ತೃಪ್ತಿಗೊಳಿಸಿ .ಅತಿಯಾದ ಈಡೇರದ ಆಸೆಗಳನ್ನು ಇಟ್ಟುಕೊಳ್ಳಬೇಡಿ ....ಈ ಅನುಭವ ಮತ್ತೆ repeat ಆಗದಿರಲಿ !!!

    ReplyDelete
  3. ಅದೆಷ್ಟೋ ವಿಷಯ-ಚಿಂತನೆಗಳು ನಮಗರಿವಿಲ್ಲದೆಯೇ ನಮ್ಮೊಳಗೆ ಮನೆ ಮಾಡಿಬಿಟ್ಟಿರುತ್ತವೆ. ಇಂಥ ಸುಪ್ತ ಚಿಂತನೆಗಳು ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳುವುದೇ ಕನಸಿನ ರೂಪದಲ್ಲಿರಬೇಕು?! ನಿಮ್ಮ ಅನಿಸಿಕೆ-ಅಭಿಪ್ರಾಯಗಳನ್ನು ಒಪ್ಪಿ, ಪರಿಗಣಿಸಲಾಗಿದೆ; ಧನ್ಯವಾದಗಳು ಸರ್!

    ReplyDelete

ಖಂಡಿತಾ ನಿಮ್ಮ ಅನಿಸಿಕೆಗಳನ್ನು ತಿಳಿಸಿ. ಧನ್ಯವಾದಗಳು!
Please post your comments. Thank you!