Monday, June 25, 2012

ವೃತ್ತಿ ಪರಿಧಿ - ಪಶುವೈದ್ಯರ ಹೆಮ್ಮೆ

(IndiBlogger ನಲ್ಲಿ ನೋಂದಣಿಯಾಗಿರುವ ಸುಮಾರು 149 ಕನ್ನಡ ಬ್ಲಾಗ್-ಗಳ ಪಟ್ಟಿಯಲ್ಲಿ ನನ್ನ ಬ್ಲಾಗ್ ಇಂದಿಗೆ, ಜೂನ್ 2012 ರಲ್ಲಿ ಆಕಸ್ಮಿಕವಾಗಿ, ಆಶ್ಚರ್ಯಕರ ರೀತಿಯಲ್ಲಿ ಮೊದಲ ಸ್ಥಾನದಲ್ಲಿ ಕಾಣಿಸಿಕೊಂಡಿರುವ ವಿಷಯವನ್ನು ನಿಮ್ಮೊಡನೆ ಹಂಚಿಕೊಳ್ಳಲು ಬಯಸುತ್ತಾ, ಇದಕ್ಕೆ ಕಾರಣಕರ್ತರಾದ ನನ್ನ ಎಲ್ಲಾ ಓದುಗ ಮಿತ್ರ ಬಳಗಕ್ಕೆ ಅನಂತ ವಂದನೆಗಳನ್ನು ಸಲ್ಲಿಸುತ್ತೇನೆ)

ಈ ಲೇಖನವು ಸರಿಸುಮಾರು ಮೂರೂವರೆ ತಿಂಗಳುಗಳ ಕಾಲ 'ಕರಡು' ಪ್ರತಿಯಾಗಿಯೇ ಉಳಿದುಕೊಂಡದ್ದು ಈಗ ಇತಿಹಾಸ. ಪಶುವೈದ್ಯರೊಬ್ಬರಿಂದ ಕನ್ನಡ ಭಾಷೆಯಲ್ಲಿ ರಚಿಸಲ್ಪಟ್ಟು, ಕನ್ನಡ ಪಶುವೈದ್ಯ ಸಾಹಿತ್ಯ ಪರಿಷತ್ತು ಹೊರತಂದಿರುವ 'ವೃತ್ತಿ ಪರಿಧಿ' ಪುಸ್ತಕವನ್ನು ಓದಿ ಮುಗಿಸಿದ ಕೂಡಲೇ ಅದರ ಬಗೆಗಿನ ನನ್ನ ಅನಿಸಿಕೆಗಳನ್ನು ಬರೆದು ಇತರರೊಂದಿಗೆ ಹಂಚಿಕೊಳ್ಳುವ ಅಗಾಧವಾದ ತುಡಿತವನ್ನು ಅಂತರಂಗದ ಆಳದಲ್ಲೆಲ್ಲೋ ಮನೆಮಾಡಿರುವ ಅಜಾಗೃತ ಅಳುಕು ಮೆಟ್ಟಿ ನಿಂತಿತ್ತು. ಡಾ. ಟಿ. ಎಸ್. ರಮಾನಂದ ಅವರಂತಹ ಮಹಾನ್ ಬರಹಗಾರರ ಅದ್ಭುತ ಕೃತಿಯ ಬಗ್ಗೆ, ಸಾಹಿತ್ಯದ ತಿರುಳನ್ನೇ ಅರಿಯದ ನನ್ನಂತಹ ಸಾಮಾನ್ಯನೊಬ್ಬ ಬರೆಯುವುದು ಪ್ರಮಾದವಾಗಬಹುದೆಂಬ ಅಂಜಿಕೆಯಿಂದಲೇ ಈ ಹರಸಾಹಸಕ್ಕೆ ಕೈಹಾಕಿದ್ದೇನೆ; ಆಗಬಹುದಾದ ಎಲ್ಲಾ ತಪ್ಪುಗಳನ್ನು ಮನ್ನಿಸಿರೆಂದು ಗುರು-ಹಿರಿಯರಾದ ಡಾ. ಟಿ-ಎಸ್-ಆರ್ ಅವರಲ್ಲಿ ನಮ್ರನಾಗಿ ವಿನಂತಿಸಿಕೊಳ್ಳುತ್ತೇನೆ.

'ವೃತ್ತಿ ಪರಿಧಿ' ಡಾ. ಟಿ-ಎಸ್-ಆರ್ ಅವರ ಮೂರನೇಯ ಕೃತಿ. ಇದು ಅವರ ಪಶುವೈದ್ಯ ವೃತ್ತಿಪರ ಅನುಭವವೆಂಬಂತೆ ಮೇಲ್ನೋಟಕ್ಕೆ ಭಾಸವಾಗುತ್ತದೆಯಾದರೂ, ಓದಿಕೊಳ್ಳುತ್ತಾ ಹೋದಂತೆ ವೃತ್ತಿಪರತೆಯ ಓರೆಗಲ್ಲಿನುದ್ದಕ್ಕೂ ಡಾ. ಟಿ-ಎಸ್-ಆರ್ ಅವರು ತಮ್ಮ ಜೀವನಾನುಭವವನ್ನು ಬಿಚ್ಚಿಡುವ ವಿಶಿಷ್ಟ ಪರಿಯು ಅಂತರಂಗದಲ್ಲಿ ನಮಗೆ ಅರಿವಾಗುತ್ತದೆ; ಇದರ ಹಿಂದಿರುವುದು ಅವರ ಪರಿಪಕ್ವವಾದ ಉನ್ನತ ವ್ಯಕ್ತಿತ್ವ ಹಾಗೂ ಸಾಹಿತ್ಯಿಕ ಪ್ರೌಢಿಮೆ ಎಂಬುದರಲ್ಲಿ ಸಂಶಯವಿಲ್ಲ. ಸ್ವತಃ ಡಾ. ಟಿ-ಎಸ್-ಆರ್ ಅವರೇ ಪುಸ್ತಕದ 'ಅರಿಕೆ'ಯಲ್ಲಿ ಹಾಗೂ ಡಾ. ರಹಮತ್ ತರೀಕೆರೆ ಅವರು 'ಮುನ್ನುಡಿ'ಯಲ್ಲಿ ಹೇಳಿರುವ ಮಾತುಗಳು ಇದಕ್ಕೆ ಪೂರಕ.

ಸರ್ಕಾರೀ ಪಶುವೈದ್ಯರುಗಳಿಗೆ ಬಿಡುವಿಲ್ಲದ ತಮ್ಮ ವೃತ್ತಿಬದುಕಿನ ಜೊತೆಜೊತೆಗೆ ಸಮಾಜದ ಸರ್ವತೊನ್ಮುಖ ಒಳಿತಿಗಾಗಿ ಇನ್ನಿತರೇ ಹಲವಾರು ಜವಾಬ್ದಾರಿಯುತ ಕಟ್ಟುಪಾಡುಗಳು ಅನಿವಾರ್ಯವೆಂಬ ಸರ್ವಕಾಲಿಕ ಸತ್ಯವನ್ನು ಪುಸ್ತಕದಲ್ಲಿ 'ತುರ್ತು ಪರಿಸ್ಥಿತಿ' ಹಾಗೂ 'ಪ್ರವಾಹ ಪರಿಹಾರ' ಕಾರ್ಯಕ್ರಮಗಳಲ್ಲಿನ ತಮ್ಮ ಅನುಭವಗಳ ಮುಖೇನ ಲೇಖಕರು ಮತ್ತೇ ಸಾಬೀತುಪಡಿಸಿದ್ದಾರೆ. ಈ ಮೂಲಕ, ಕೇವಲ ಪಶುಚಿಕಿತ್ಸೆ ಮಾಡುವುದು ಮಾತ್ರ ಪಶುವೈದ್ಯರ ಆದ್ಯ ಕರ್ತವ್ಯವೆಂಬ ಭ್ರಮೆಯನ್ನು ಹೊಂದಿರುವ ಅನೇಕ ಕಿರಿಯ ಪಶುವೈದ್ಯರುಗಳಿಗೆ ಪರೋಕ್ಷವಾಗಿ ನೀತಿಪಾಠ ಹೇಳುತ್ತಾ, ಅವರನ್ನು ವೃತ್ತಿಪರ ಸನ್ಮಾರ್ಗದೆಡೆಗೆ ನಡೆಸುವಲ್ಲಿ ಡಾ. ಟಿ-ಎಸ್-ಆರ್ ಯಶಸ್ವಿಯಾಗಿದ್ದಾರೆ.

ಪುಸ್ತಕದ ಮತ್ತೊಂದು ವಿಶೇಷ - ನೈಜತೆ. ಪ್ರತಿಯೊಂದು ಅಧ್ಯಾಯದಲ್ಲಿ ಕಾಣಿಸಿರುವ ಪಾತ್ರಗಳು, ಸನ್ನಿವೇಶಗಳು ಹಾಗೂ ಮಾತುಗಳು ಅತ್ಯಂತ ಸಹಜವೆಂಬಂತಿದ್ದು, ನಿರೂಪಣಾ ಶೈಲಿಯು ಯಾವುದೇ ಪಶುವೈದ್ಯರು ಅಲ್ಲಿರುವುದು ತಮ್ಮದೇ ಅನುಭವವೇನೋ? ಎಂಬ ಭ್ರಾಂತಿಗೊಳಗಾಗುವಂತಿದೆ. ಎಪ್ಪತ್ತರ ದಶಕದ ಉತ್ತರ ಕರ್ನಾಟಕದ ಮುಗ್ಧ ಜನರ ಅಸಹಾಯಕ ಬದುಕಿನ ಚಿತ್ರಣವನ್ನು ಅವರ ಮಾತುಗಳಲ್ಲಿಯೇ ಓದುಗರಿಗೆ ದರ್ಶನ ಮಾಡಿಸಿಕೊಟ್ಟಿರುವ ರೀತಿಯು ಮನಸ್ಸಿಗೆ ಹತ್ತಿರವಾಗಿ, ಬಹುಕಾಲ ನೆನಪಿನಲ್ಲುಳಿಯುವಂತೆ ಮಾಡುತ್ತದೆ. ಕಗ್ಗತ್ತಲು ಸೆರಗು ಸರಿಸಿದಾಗ ಮೂಡಿದ ಮುಂಜಾವಿನ ಅರಣ್ಯದ ಸುಂದರ ನೋಟ ಮಾತ್ರವಲ್ಲದೇ ಬರದ ಭೀಕರತೆ, ಪ್ರವಾಹದ ಪ್ರಬಲತೆಗಳ ಅತ್ಯಂತ ಪ್ರಭಾವಕಾರೀ ವರ್ಣಿನೆ ಲೇಖಕರ ಭಾಷಾ ಸಂಪತ್ತಿಗೆ ಸಾಕ್ಷಿಯೂ ಆಗಿವೆ.

ಪುಸ್ತಕದ ಪ್ರಕಾಶಕರಾದ 'ಕನ್ನಡ ಪಶುವೈದ್ಯ ಸಾಹಿತ್ಯ ಪರಿಷತ್ತು, ಶಿವಮೊಗ್ಗ' ಸಂಸ್ಥೆಯ ಪ್ರಯತ್ನ-ಶ್ರಮ ಪ್ರಶಂಸನಾರ್ಹ. ಪಶುವೈದ್ಯ ವೃತ್ತಿಗೆ ಸಂಬಂಧಿಸಿದ ಸಾಹಿತ್ಯ ರಚನೆಗೆ ಪ್ರೋತ್ಸಾಹ ನೀಡಿ, ತನ್ಮೂಲಕ 'ಅಧಿಕೃತ ಪಶುವೈದ್ಯ ಸಾಹಿತ್ಯ' ಸಂಪತ್ತನ್ನು ವೃದ್ಧಿಗೊಳಿಸುವ ಸಂಕಲ್ಪತೊಟ್ಟು, ಕರ್ಯಪ್ರವೃತ್ತರಗಿರುವ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ನಾಗರಾಜ್ ಕೆ. ಎಮ್. ಹಾಗೂ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರುಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಡಾ. ಟಿ-ಎಸ್-ಆರ್ ಅವರ ಈ ಕೃತಿಯಿಂದ ಮೊದಲ್ಗೊಂಡು, ಕರ್ನಾಟಕದ ಹಲವಾರು ಪ್ರತಿಭಾವಂತ ಪಶುವೈದ್ಯರ ವೃತ್ತಿಪರ ಸಾಹಿತ್ಯದ ಪ್ರಕಟಣೆಯಲ್ಲಿ ಸಂಸ್ಥೆಯು ಮಹತ್ತರ ಸಾಧನೆಗೈಯ್ಯಲಿ ಎಂದು ಆಶಿಸುತ್ತೇನೆ.

'ವೃತ್ತಿ ಪರಿಧಿ' - ಪ್ರತಿಯೊಬ್ಬ ಪಶುವೈದ್ಯರೂ ಓದಲೇಬೇಕಾದ ಒಂದು ಮನೋಜ್ಞ ಕೃತಿ. ಮೊದಲ ಮುದ್ರಣ ಕಂಡಿರುವ 1000 ಪ್ರತಿಗಳು ಲಭ್ಯವಿದ್ದು, ಪುಸ್ತಕವನ್ನು ಲೇಖಕರಿಂದ ನೇರವಾಗಿ ಖರೀದಿಸಬಹುದಾಗಿದೆ (ಮುಖಬೆಲೆ ರೂ.75=00 ಮಾತ್ರ).

14 comments:

  1. WOH WOH Thats awesome :D fantastic Congratulations. Prashant this should encourage you to write more frequently :D cause we are waiting to read your blogs:D

    T.S.R avara bagge oodi thildukondu kushi aythu. will try to get the book as well.
    Good post!

    ReplyDelete
  2. Thanks so much, Ramya! It's all because of you guys who have been reading every Blog of mine and commenting. Credit goes to you all :o)

    I definitely want to write more.. but somehow life's gotten too hectic or might be I've gotten much more LAZY :o|

    Actually, the book might not be available in the market. If you want one, I shall get you a copy for sure. Keep me informed.

    ReplyDelete
  3. ನಿಮ್ಮ ಈ ನಲ್ನುಡಿ ಆ ಪುಸ್ತಕಕ್ಕೆ ಹೆಚ್ಚು ಮೆರುಗು ನೀಡಿದೆ. ಸಾಮಾನ್ಯವಾಗಿ ಈ ಪುಸ್ತಕದ ಹೆಸರು ನಿರಾಸಕ್ತಿ ಮೂಡಿದ್ದರೆ, ನಿಮ್ಮ ಈ ಲೇಖನ ಆಸಕ್ತಿ ಹುಟ್ಟುಹಾಕುವಲ್ಲಿ, ಓದುವ ಬಯಕೆ ಮೂಡಿಸುವಲ್ಲಿ ಯಶಸ್ವಿಯಾಗಿದೆ.

    ReplyDelete
  4. ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು, ರಾಜು :o)

    ReplyDelete
  5. Congrats, It is great news & I have read Dr.Ramananda Sir's earlier book. Please get me one copy Dr.Prashanth, hope you will not mind.
    About your writting your introduction to the book itself is so interesting ( is like starter). Think we are seeing JR Dr. Ramanand sir.

    ReplyDelete
  6. ಪ್ರಶಾಂತ್ ,ನಿನ್ನ ಬ್ಲಾಗ್ ಗಳನ್ನೂ ನೋಡುತ್ತಿದ್ದರೆ ಯಾವುದೇ ವೃತ್ತಿಪರ ಲೇಖಕನಿಗೆ ಯಾವುದರಲ್ಲಿ ಕಡಿಮೆಯಿಲ್ಲದಂತೆ ವಿಚಾರ ಮಂಥನವನ್ನು ಮಂಡಿಸುವ ನಿನ್ನ ಶೈಲಿಯನ್ನು ನೋಡಿದಾಗ ಎಲ್ಲರೂ ಮೆಚ್ಚದೆ ಇರಲು ಸಾದ್ಯವೇ ಇಲ್ಲಾ.ಹೀಗಾಗಿ ನಿನ್ನ ಬ್ಲಾಗ್ ಮೊದಲ ಸ್ಥಾನ ಪಡೆದಿದರಲ್ಲಿ ಯಾವ ಅತಿಶಯವಿದೆ ಹೇಳು .ನಾನಿದನ್ನು ಅನೇಕ ಬಾರಿ ಅನಸಿಕೆಯೊಂದಿಗೆ ಹೊರಸೂಸಿದ್ದೇನೆ .
    ಹಾಗೆಯೇ ನೀನು ತಿಳಿಸಿರುವ ಟಿ.ಎಸ್.ಆರ್ .ರವರ ವೃತ್ತಿ ಪರಿಧಿ'ಯ ಬಗ್ಗೆ ನನಗೆ ಕುತೂಹಲ ಮೂಡಿಬಂದಿದ್ದು ಅದನ್ನು ಒಮ್ಮೆ ಓದಬೇಕೆಂಬ ಹಂಬಲವಾಗುತ್ತಿದೆ .ಅದಕ್ಕೆ ನೀನು ನೆರವು ನೀದುತ್ತೀಯೆಂದು ಬಾವಿಸುತ್ತೇನೆ .ನಿನ್ನ ಬ್ಲಾಗ್ ನಲ್ಲಿ ಮೂಡಿ ಬಂದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ನಿನ್ನ ಬರಹಗಳಿಗೆ ಧನ್ಯವಾದಗಳು !

    ReplyDelete
  7. ಶ್ರೀಧರ್ ಸರ್, ನಿಮಗೆ ಧನ್ಯವಾದಗಳು :o)

    ಸತೀಶ್ ಸರ್, ಖಂಡಿತಾ ನಿಮಗೆ ವೃತ್ತಿ ಪರಿಧಿ ಪುಸ್ತಕದ ಪ್ರತಿಯನ್ನು ತಲುಪಿಸುತ್ತೇನೆ. ಈ ಬರಹವು ಪುಸ್ತಕದ ಬಗೆಗಿನ ನಿಮ್ಮ ಕುತೂಹಲವನ್ನು ಹೆಚ್ಚಿಸಿದ್ದಾರೆ, ನಾನು ಧನ್ಯ! ಆದರೆ, ನಿಮ್ಮ ಅನಿಸಿಕೆಯ ಕೊನೆಯ ಸಾಲು ನಿಜವಾಗಿರುವ ಸಾಧ್ಯತೆಗಳು ಬಹಳ ಕಡಿಮೆ. ನಿಮ್ಮ ಪ್ರೋತ್ಸಾಹಕ್ಕೆ ವಂದನೆಗಳು :o)

    ಚೆನ್ನಕೇಶವ ಸರ್, ನಿಮ್ಮ ಅನಿಸಿಕೆಗೆ ಹೇಗೆ ಪ್ರತಿಕ್ರಿಯೆ ನಿಡಬೇಕೋ ತಿಳಿಯುತ್ತಿಲ್ಲ! ನನ್ನ ಬ್ಲಾಗ್ ಇಂದು ಏನೇ ಆಗಿದ್ದರೂ ಅದರಲ್ಲಿ ನಿಮ್ಮ ಪಾತ್ರ ಮಹತ್ತರವಾದುದು. ನಿಮ್ಮ ಆಶೀರ್ವಾದ ಸದಾ ಹೀಗೆಯೇ ಇರಲಿ ಎಂಬುದು ನನ್ನ ಅರಿಕೆ :o)

    ReplyDelete
  8. Congrats Dr. Prashanth!

    Your writeup in Kannada is quite unique and pleasant to read! Keep up the good work.

    Nagaraja

    ReplyDelete
  9. Thank you very much, Sir!

    Am glad that you liked the writeup. With all your blessings and encouragement, definitely will try to write more in the future days to come by :o)

    ReplyDelete
  10. Pritiya Prashant,Jnanada hanchikolluva shyli chetohariyagide,writtiparate ella kshetragala guriyagide, hosa peeligeya tammanta udayonmukh srajanasheela pasuvidya barahagarad tamage nammellara shubh harikegalu...enannoo vapas bayasade manujara badukige poorakavagiha Pashu pranigal mooka veane ge tavu Dhwaniyagiri...avugala novu nivarisuv nimma nammellara uddeshagalu iderisuva desheyalli nimma blog sarthakawagli...jnana pasarisali ellede...sakala jeevigalige lesa bayasona.....nalmeya Rajashekhar.S.Angadi....Belagavi

    ReplyDelete
  11. ರಾಜಶೇಖರ್ ಸರ್, ಧನ್ಯವಾದಗಳು! :o)
    ನೀವು ಹೇಳಿದ ಪ್ರತಿಯೊಂದು ಮಾತುಗಳೂ ಮನಮುಟ್ಟುವಂತಿವೆ. ನಿಮ್ಮ ಮಾರ್ಗದರ್ಶನದೆಡೆಗೆ ನಡೆಯುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ..

    ReplyDelete
  12. ಧನ್ಯವಾದಗಳು ಸರ್ :o)

    ReplyDelete

ಖಂಡಿತಾ ನಿಮ್ಮ ಅನಿಸಿಕೆಗಳನ್ನು ತಿಳಿಸಿ. ಧನ್ಯವಾದಗಳು!
Please post your comments. Thank you!