Friday, March 30, 2012

Making of ಕಹಳೆ

www.kahale.gen.in
ಬಹುತೇಕ ಪ್ರತಿಯೊಬ್ಬ ಮಾನವರಲ್ಲಿಯೂ ಸಹ ತಮ್ಮ ಭಾಷೆ, ನೆಲ ಹಾಗೂ ಸಂಸ್ಕೃತಿಯೆಡೆಗೆ ವಿಶೇಷವಾದ ಒಲವು ಇರುವುದು ಸಹಜವಷ್ಟೆ. ಕೆಲವರಲ್ಲಿ ಇದು ಬಹಿರಂಗವಾಗಿ ಅಭಿವ್ಯಕ್ತಗೊಂಡರೆ, ಉಳಿದವರಲ್ಲಿ ಅಂತರಾಳದ ಒಳಗೆಲ್ಲೋ ಸುಪ್ತವಾಗಿರುವ ಸಾಧ್ಯತೆಗಳಿರುತ್ತವೆ. ವ್ಯಕ್ತ-ಅವ್ಯಕ್ತತೆಯ ಹಿಂದಿರುವ ಕಾರಣಗಳು ಏನೇ ಆದರೂ, ತನ್ನೊಳಗಿರುವ ನಾಡು-ನುಡಿಯ ಬಗೆಗಿನ ಅಭಿಮಾನ-ಗೌರವಗಳನ್ನೊಳಗೊಂಡ ಭಾವನೆಯು ಮಾತ್ರವೇ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ.

ವೈಯಕ್ತಿಕವಾಗಿ ಬುದ್ಧಿ ತಿಳಿದ ಮಟ್ಟಿಗೆ ಹೇಳುವುದಾದರೆ, ಮೊದಲಿನಿಂದಲೂ ನನ್ನ ಮಾತೃಭಾಷೆ ಕನ್ನಡದ ಕಟ್ಟಾಭಿಮಾನಿ ನಾನಲ್ಲವಾದರೂ, ಕಾಲ ಕಳೆದಂತೆಲ್ಲಾ ನನ್ನಲ್ಲಿನ ಕನ್ನಡ ಹಾಗೂ ಕರ್ನಾಟಕದೆಡೆಗಿನ ಅಗೋಚರ ಸೆಳವು ಆಧಿಕ್ಯವಾದುದರ ಅರಿವಾಗತೊಡಗಿತು. ಇತ್ತೀಚೆಗೆ, ಆಗಸ್ಟ್ 2011 ರಲ್ಲಿ ಸಂಚಯ ತಂಡದವರು ಹಮ್ಮಿಕೊಂಡಿದ್ದ 'ಅರಿವಿನ ಅಲೆಗಳು' ಕಾರ್ಯಕ್ರಮವು ಇದಕ್ಕೆ ಪೂರಕ ಪ್ರಭಾವವನ್ನುಂಟುಮಾಡಿ, ನನ್ನೊಳಗಿನ ಕನ್ನಡಿಗನನ್ನು ಜಾಗೃತಗೊಳಿಸಿತ್ತು. ಇದರ ಪರಿಣಾಮವಾಗಿ ಮುಂಬರುವ 2011 ರ ಕನ್ನಡ ರಾಜ್ಯೋತ್ಸವವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿಯೇ ತೀರಬೇಕೆಂಬ ಹಂಬಲವು ನನ್ನಲ್ಲಿ ಅಗಾಧವಾಯಿತು.

ಮೂಲಭೂತವಾಗಿ ನನ್ನಲ್ಲಿರುವ ಸೃಜನಶೀಲತೆಯ ಕೊರತೆಯಿಂದಾಗಿ, ಅನ್ಯಮಾರ್ಗ ತೋರದೆ ಅರಿವಿನ ಅಲೆಗಳು ಬಳಗದವರಂತೆಯೇ 'ಅರಿವಿನ ಅಲೆಗಳು' ಮಾದರಿಯಲ್ಲಿ ಒಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದೆಂದು ನಾನೇ ನಿರ್ಧರಿಸಿಕೊಂಡೆ. ಇಲ್ಲಿಯವರೆಗೂ ನನ್ನೊಳಗೆಯೇ ಹರಿದಾಡುತ್ತಿದ್ದ ಈ ವಿಚಾರಧಾರೆಯನ್ನು ಕೆಲವು ಸ್ನೇಹಿತರೊಂದಿಗೆ ಹಂಚಿಕೊಳ್ಳಲು, ಆತ್ಮೀಯ ಗೆಳೆಯನಾದ ಗುರುರಾಜ ತೋರಿದ ಆಸಕ್ತಿಯು ನನ್ನಲ್ಲಿ ಹೊಸ ಚೈತನ್ಯ ತುಂಬಿ, ಭರವಸೆಯ ಬೆಳಕನ್ನು ಮೂಡಿಸಿತು. ಕನ್ನಡ ರಾಜ್ಯೋತ್ಸವಾಚರಣೆಗೆ ಪಣತೊಟ್ಟ ನಾನು ಎಂದಿಗೂ ಒಂಟಿಯಾಗಲಾರೆನೆಂಬ ನಂಬಿಕೆಯನ್ನು ಹುಸಿಯಾಗಗೊಡದ ಗೆಳೆಯನೊಡಗೂಡಿ ಇಬ್ಬರು ಸದಸ್ಯರ ತಂಡವೊಂದನ್ನು ರಚಿಸಿಕೊಂಡದ್ದು ಬಹುಶಃ ಯಶಸ್ಸಿನೆಡೆಗೆ ನಮ್ಮ ಮೊದಲ ಹೆಜ್ಜೆಯೆಂದೇ ನನ್ನ ಭಾವನೆ.

ಆಧುನಿಕತೆಯು ತಂತ್ರಜ್ಞಾನದ ನೆರವಿನೊಂದಿಗೆ ನಮ್ಮಗಳ ಬದುಕನ್ನು ದುಸ್ತರವಾಗಿಸಿ, ಮಾನವರ ನಡುವಿನ ಅವಿನಾಭಾವ ಸಂಬಂಧದ ಅಂತರವನ್ನು ಕಡಲಿನೋಪಾದಿಯಲ್ಲಿ ವಿಶಾಲವಾಗಿಸಿರುವುದರಿಂದ ತಂಡದ ಸದಸ್ಯರುಗಳಾದ ನಮ್ಮಿಬ್ಬರ ಸಂವಾದ-ಚರ್ಚೆಗಳು ಕೇವಲ ಮಿಂಚಂಚೆ ಹಾಗೂ ಕಿರುಸಂದೇಶಗಳಿಗೆ ಸೀಮಿತಗೊಂಡಿತ್ತು. ಅಂತರ್ಜಾಲ ತಾಣವೊಂದನ್ನು ಸೃಷ್ಟಿಸಿ, ನವಂಬರ್ 2011 ರ ಮಾಹೆಯ ಪ್ರತಿಯೊಂದು ದಿನವೂ ವಿವಿಧ ಲೇಖಕರಿಂದ ಕನ್ನಡ ಭಾಷೆಯಲ್ಲಿ ರಚಿತಗೊಂಡ ಬರೆಹಗಳನ್ನು ಆ ತಾಣದಲ್ಲಿ ಬಿತ್ತರಿಸುವ ವಿಚಾರವನ್ನು ನಾನು ಹೇಳಿಕೊಂಡಾಗ, ಮರುಮಾತಾಡದೇ 'ಸೈ' ಎಂದು ಸಮ್ಮತಿಸಿದ ಗುರುರಾಜರ ಆತ್ಮಸ್ಠೈರ್ಯವನ್ನು ನಾನು ಪ್ರಾಮಾಣಿಕವಾಗಿ ಮೆಚ್ಚಿಕೊಳ್ಳದೆ ಇರಲಾಗಲಿಲ್ಲ.

ಸರಿಸುಮಾರು 30 ವಿವಿಧ ಲೇಖಕರಿಂದ ರಚಿತಗೊಂಡ ಕನ್ನಡದ ವೈವಿಧ್ಯ-ವಿಶೇಷ ಲೇಖನಗಳನ್ನು ಸಂಗ್ರಹಿಸುವುದು ನಮಗೆ ಕಬ್ಬಿಣದ ಕಡಲೆಯಾಗುವ ಎಲ್ಲಾ ಸಾಧ್ಯತೆಗಳನ್ನು ಮನಗಂಡಿದ್ದ ನನಗೆ '30 ಲೇಖನಗಳು ಏನೂ ಕಷ್ಟ ಆಗಲ್ಲ ಬಿಡಿ ಪ್ರಾಶಾಂತ್' ಎಂಬ ಗುರುರಾಜರ ಸರಳ ನುಡಿಗಳು ಮರಳುಗಾಡಿನಲ್ಲಿ ಓಯಸಿಸ್ ಕಂಡ ಅನುಭವ ತಂದುಕೊಟ್ಟವು. ಆದರೂ, ಮುಂದಿನ ಹಲವಾರು ದಿನಗಳು 'ಕನಿಷ್ಟ 30 ಲೇಖನಗಳು ಸಂಗ್ರಹವಾಗದಿದ್ದರೆ ಮಾಡುವುದಾದರೂ ಏನು? ಹೀಗಾಗಿಹೋದರೆ ನಮ್ಮ ಕಾರ್ಯಕ್ರಮದಲ್ಲಿ ಏರುಪೇರುಗಳಾಗಿ, ಕನ್ನಡ ರಾಜ್ಯೋತ್ಸವವನ್ನು ಹೆಮ್ಮೆಯಿಂದ ಆಚರಿಸಲು ಮುಂದಾಗಿರುವ ನಾವು ತಲೆತಗ್ಗಿಸುವಂತಾಗಬಹುದೇ? ಈ ರೀತಿಯಿಂದಾಗಬಹುದಾದ ಸೋಲಿನಿಂದ ಕನ್ನಡ ನಾಡು-ನುಡಿಗೆ ನಾವೇ ಅವಮಾನ ಮಾಡಿದಂತಾಗುವುದೇ?' ಎಂಬಿತ್ಯಾದಿ ಅನೇಕ ಪ್ರಶ್ನೆಗಳ ಉತ್ತರಕ್ಕೆ ನಾನು ಜಿಜ್ಞಾಸುವಾದೆ.

(ಮುಂದುವರೆಯುವುದು..)