Showing posts with label ಪುಸ್ತಕ : Book. Show all posts
Showing posts with label ಪುಸ್ತಕ : Book. Show all posts

Monday, October 21, 2013

ರಾಗಿ ಬ್ರಹ್ಮರ ಕುರಿತ ಚಾರಿತ್ರಿಕ ಕೃತಿ

ಮಡದಿ ಹಾಗೂ ಮಗಳನ್ನು ಭೇಟಿ ಮಾಡಲು ದೆಹಲಿಗೆ ತೆರೆಳಿದ್ದೆನು; ಅಲ್ಲಿ ಕಳೆದ ಏಳು ದಿನಗಳು ಕೇವಲ ಏಳು ಘಂಟೆಗಳಂತೆ ಉರುಳಿಹೋಗಲಾಗಿ, ಹಿಂತಿರುಗಿ ಬೆಂಗಳೂರಿಗೆ ಪಯಣಿಸಲು ಅಣಿಯಾಗುತ್ತಿರುವಾಗ ನನ್ನ ಬಗಲಚೀಲವನ್ನು ಹಿಡಿದು ನನ್ನಾಕೆ "ಏಕಿಷ್ಟು ಭಾರ?" ಎಂದು ಪ್ರಶ್ನಿಸುತ್ತಿರುವಾಗಲೇ ಆಕೆಗೆ ಅದರ ಕಾರಣದ ಅರಿವಾಗಿದ್ದಿರಬೇಕು. "ಓದಲು ಕೆಲವು ಪುಸ್ತಕಗಳನ್ನು ತಂದಿದ್ದೆ.." ನನ್ನ ಮಾತುಗಳನ್ನು ಮುಗಿಸುವ ಮುನ್ನವೇ ಕಂಡ ಆಕೆಯ ಮುಗುಳ್ನಗು 'ನೀವು ಎಂದಿಗೂ ಬದಲಾಗಲಾರಿರಿ..' ಎಂದಂತೆ ಭಾಸವಾಯಿತು. ಅಲ್ಲಿದ್ದ ಐದು ಪುಸ್ತಕಗಳಲ್ಲಿ ನಾನು ಬಹುದಿನಗಳಿಂದ ಒಂದೇ ಹಿಡಿತದಲ್ಲಿ ಓದಿ ಮುಗಿಸಲು ಉದ್ದೇಶಿಸಿದ್ದ 'ರಾಗಿ ಲಕ್ಷ್ಮಣಯ್ಯ'ನವರ ಕುರಿತಾದ ಕೃತಿಯೂ ಒಂದು.

ಸಾಮಾನ್ಯವಾಗಿ ನಾನು ಪುಸ್ತಕಗಳನ್ನು ಸಂಗ್ರಹಿಸುವಾಗ ಅದರಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಲೇಖಕರ ಹಸ್ತಾಕ್ಷರವನ್ನು ಪಡೆದುಕೊಳ್ಳುವುದು ರೋಢಿ; ಈ ಪುಸ್ತಕವೂ ಇದಕ್ಕೆ ಹೊರತಾಗಿರಲಿಲ್ಲ. "ಪ್ರೀತಿಯಿಂದ ಡಾ. ಪ್ರಶಾಂತ್ ರವರಿಗೆ – ಡಾ. ಎಂ. ನಾರಾಯಣಸ್ವಾಮಿ" ಎಂಬ ಹಸ್ತಾಕ್ಷರದ ಹಿಂದಿದ್ದ ಆತ್ಮೀಯತೆಯು ಕೃತಿಯ ಮೇಲಿನ ನನ್ನ ಪ್ರೀತಿಯನ್ನು ಇಮ್ಮಡಿಗೊಳಿಸಿತ್ತು. ದೆಹಲಿಗೆ ಹೊರಟು ಹಿಂತಿರುಗಿ ಬೆಂಗಳೂರಿಗೆ ಮರಳುವುದರೊಳಗೆ ಈ ಪುಸ್ತಕವನ್ನು ಶ್ರದ್ಧೆಯಿಂದ ಓದಿ, ಅದರ ಬಗೆಗಿನ ನನ್ನ ಅನಿಸಿಕೆಗಳನ್ನು ಇಲ್ಲಿ ಹಂಚಿಕೊಳ್ಳುವಂತಾದದ್ದು ಹರ್ಷದ ಸಂಗತಿ.

ಈ ಹೊತ್ತಿಗೆ ನಿಮ್ಮ ಅರಿವನ್ನು "ರಾಗಿ ಲಕ್ಷ್ಮಣಯ್ಯ ಎಂದರೆ ಯಾರು..?" ಎಂಬ ಪ್ರಶ್ನೆಯು ಆವರಿಸಿದ್ದಿರಬಹುದು! ಬಹುಶಃ ಪ್ರೊ. ಎಂ. ನಾರಾಯಣಸ್ವಾಮಿ ಹಾಗೂ ರಮೇಶ್ ಸಂಕ್ರಾಂತಿ ಇವರುಗಳು ಸಂಪಾದಿಸಿರುವ 'ತೆನೆ ಮರೆಯ ಕ್ರಾಂತಿ ರಾಗಿ ಲಕ್ಷ್ಮಣಯ್ಯ – ಇಂಡಾಫ್ ರಾಗಿ ತಳಿಗಳ ಕಂಡುಹಿಡಿದ ವಿಜ್ಞಾನಿ' ಎಂಬ ಕೃತಿಯು ಕಳೆದ ಡಿಸೆಂಬರ್ ಅಂತ್ಯದಲ್ಲಿ ಲೋಕಾರ್ಪಣೆಗೊಳ್ಳದೇ ಹೋಗಿದ್ದರೆ, ಅವಿರತವಾಗಿ ರಾಗಿ ತಳಿ ಅಭಿವೃದ್ಧಿಯಲ್ಲಿ ಮೌನ ಕ್ರಾಂತಿ ನಡೆಸಿದ ಸಂತ ವಿಜ್ಞಾನಿ ಡಾ. ಸಿ. ಹೆಚ್. ಲಕ್ಷ್ಮಣಯ್ಯನವರ ಬಗ್ಗೆ ತಿಳಿದುಕೊಳ್ಳುವ ಸೌಭಾಗ್ಯ ನನ್ನಂತೆ ಇನ್ನೂ ಅನೇಕ ಕನ್ನಡಿಗರಿಗೆ ಖಂಡಿತವಾಗಿಯೂ ಒದಗಿ ಬರುತ್ತಿರಲಿಲ್ಲವೇನೋ.. ಈ ನಿಟ್ಟಿನಲ್ಲಿ ಲೇಖಕರುಗಳದ್ದು ಅದ್ವಿತೀಯ ಸಾಧನೆಯೆಂದೇ ಹೇಳಬೇಕು.

ಪರಕೀಯ ಪರಾಗಸ್ಪರ್ಶಕ್ಕೆ ತೆರೆದುಕೊಳ್ಳದ ರಾಗಿ ಬೆಳೆಯ ತಳಿ ಅಭಿವೃದ್ಧಿಯು ಅಸಾಧ್ಯವೆಂದು ಇಡೀ ಪ್ರಪಂಚವೇ ಕೈಚೆಲ್ಲಿ ಕೂತರೂ, ಡಾ. ಲಕ್ಷ್ಮಣಯ್ಯನವರು ತಮ್ಮ ಛಲಬಿಡದ ನಿರಂತರ ಸಂಶೋಧನೆಯಿಂದಾಗಿ 'ವಿಶೇಷ ಸಂಪರ್ಕ ವಿಧಾನ'ವನ್ನು ಆವಿಷ್ಕರಿಸಿ, ರಾಗಿ ಬೆಳೆಯ ತಳಿ ಅಭಿವೃದ್ಧಿಯಲ್ಲಿ ಯಶಸ್ಸು ಗಳಿಸಿದರು. ಇವರು ಅಭಿವೃದ್ಧಿಪಡಿಸಿದ ಅರುಣ, ಅನ್ನಪೂರ್ಣ, ಉದಯ, ಕಾವೇರಿ ರಾಗಿ ತಳಿಗಳು ಸಾಂಪ್ರದಾಯಿಕ ರಾಗಿ ತಳಿಗಳಿಗಿಂತ ಉತ್ಕೃಷ್ಟವಾಗಿವೆ. ಅಲ್ಲದೇ, ಸ್ಥಳೀಯ ರಾಗಿ ಬೆಳೆ ಹಾಗೂ ಆಫ್ರಿಕ ಮೂಲದ ರಾಗಿ ಬೆಳೆಗಳ ಸಂಕರಣದಿಂದ ಇವರು ಅಭಿವೃದ್ಧಿಪಡಿಸಿದ 'ಇಂಡಾಫ್' - 1 ರಿಂದ 15 ತಳಿಗಳು ರಾಗಿ ಬೇಸಾಯದಲ್ಲಿ ಕ್ರಾಂತಿಯನ್ನೇ ಉಂಟುಮಾಡಿವೆ. ಇದರಿಂದಾಗಿ ರಾಗಿ ಬೆಳೆಯುವ ರೈತರ ಹಸಿವೆ ಮಾತ್ರವಲ್ಲ, ಇಂಡಾಫ್ ಬೆಳೆಗಳಿಂದ ದೊರೆತ ಅಗಾಧ ಹುಲ್ಲಿನಿಂದ ಜಾನುವಾರುಗಳ ಹಸಿವೆಯೂ ಸಹ ನೀಗಿದೆ. ತಮ್ಮ ಫಲಾಪೇಕ್ಷೆ ಇಲ್ಲದ ಸತತ ಪರಿಶ್ರಮದಿಂದ ರೈತರ ಪಾಲಿನ ದೇವತೆಯಾದ ಲಕ್ಷ್ಮಣಯ್ಯನವರು ಕೃಷಿ ವಿಶ್ವವಿದ್ಯಾಲಯ ಹಾಗೂ ಸರ್ಕಾರಗಳ ಪಾಲಿಗೆ ಅಸ್ಪೃಶ್ಯರಾಗಿಯೇ ಉಳಿದುಹೋದದ್ದು ದುರಂತ.

ರಾಗಿ ಲಕ್ಷ್ಮಣಯ್ಯನವರ ಆತ್ಮೀಯರು, ಅವರ ಸಮಕಾಲೀನರಾದವರಿಂದ ಸುಮಾರು 24 ಲೇಖನ ಹಾಗೂ ನಿರೋಪಣಾ ಲೇಖನಗಳನ್ನು ಹೊಂದಿರುವ ಈ ಕೃತಿಯು, ತನ್ನ ಪ್ರತಿಯೊಂದು ಲೇಖನದಲ್ಲೂ ರಾಗಿ ಲಕ್ಷ್ಮಣಯ್ಯನವರ ಶ್ರೀಮಂತ, ವಿಶಿಷ್ಟ, ವಿಶೇಷ, ಸರಳ ವ್ಯಕ್ತಿತವನ್ನು ಹಲವಾರು ದೃಷ್ಟಿಕೋನದಿಂದ ಓದುಗರಿಗೆ ಪರಿಚಯಿಸಿಕೊಡುವಲ್ಲಿ ಯಶಸ್ವಿಯಾಗಿದೆ. ಇಂದಿಗೆ ಸರಿಯಾಗಿ ಎರಡು ದಶಕಗಳ ಹಿಂದೆ ಕಾಲವಾದ, ಜೀವಿತದಲ್ಲೂ ನೇಪಥ್ಯ ಸೇರಿದಂತೆ ಬದುಕಿದ್ದ ವಿಶಾಲ ವ್ಯಕ್ತಿತ್ವದ ಮೌನ ಸಾಧಕರನ್ನು ಈ ಚಾರಿತ್ರಿಕ ಕೃತಿಯ ಮೂಲಕ ಯುವಪೀಳಿಗೆಗೆ ಸಾಹಿತ್ಯಿಕ ರೂಪದಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಪುನರ್ ಸೃಷ್ಟಿಸಿರುವ ಸಂಪಾದಕರುಗಳಿಗೆ ಅನಂತ ನಮನಗಳು ಸಲ್ಲಲೇಬೇಕು. ಅಲ್ಲದೇ, ಈ ಕೃತಿಯನ್ನು ಒಟ್ಟಾರೆ ಸೂಕ್ಷ್ಮವಾಗಿ ಗಮನಿಸಿದಲ್ಲಿ ಅದರ ಹಿಂದಿರಬಹುದಾದ ಸಂಪಾದಕರ ಶ್ರದ್ಧೆ-ಪರಿಶ್ರಮಗಳು ನಮ್ಮ ಅರಿವಿಗೆ ಬರುತ್ತವೆ. ಡಾ. ಜೆ. ಬಾಲಕೃಷ್ಣರ ಮುಖಪುಟ ವಿನ್ಯಾಸ ಪುಸ್ತಕಕ್ಕೆ ಮೆರುಗು ನೀಡಿದೆ. ಇಂತಹ ವಿರಳವೆನ್ನಬಹುದಾದ ಸಾಧನೆಗೆ ಪ್ರೋತ್ಸಾಹಿಸುವ ಮೂಲಕ 'ಅಸೀಮ ಅಕ್ಷರ' ಪ್ರಕಾಶನವು ಸಾರ್ಥಕ್ಯ ಪಡೆದುಕೊಂಡಿದೆ.

ಒಂದು ಕಾಲಘಟ್ಟದಲ್ಲಿ ಕೇವಲ ಬಡವರ-ದಲಿತರ 'ಅನ್ನ'ವಾಗಿದ್ದ 'ಕರಿರಾಗಿ'ಯು ಇಂದಿನ ಹದಗೆಟ್ಟ ಆಹಾರ-ಜೀವನ ಶೈಲಿಯಿಂದಾಗಿ ನಿಧಾನವಾಗಿ ಅದಕ್ಕಂಟಿಕೊಂಡಿದ್ದ ಸಾಮಾಜಿಕ ಅಂತಸ್ತುಗಳ ಸಂಕೋಲೆಗಳ ಕಪಿಮುಷ್ಟಿಯಿಂದ ಮುಕ್ತವಾಗಿ ಪ್ರತಿಯೊಬ್ಬರ ದಿನನಿತ್ಯದ ಆಹಾರವಾಗುತ್ತಿದೆ. ಇಂತಹ ಮಹತ್ವದ ಸಂಕ್ರಮಣ ಕಾಲದಲ್ಲಿ, ರಾಗಿ ಬೆಳೆಯ ಅಭಿವೃದ್ಧಿಗಾಗಿ ತಮ್ಮ ಜೀವಿತಾವಧಿಯನ್ನೇ ಮುಡಿಪಾಗಿಟ್ಟ 'ರಾಗಿ ಲಕ್ಷ್ಮಣಯ್ಯ'ನವರ ಕುರಿತ ಈ ಚಾರಿತ್ರಿಕ ಕೃತಿಯು ಮೂಡಿಬಂದಿರುವುದು ಅತ್ಯಂತ ಸಮಂಜಸವೆನಿಸುತ್ತದೆ. ರಾಗಿಯನ್ನು ಯಾವುದೇ ರೂಪದಲ್ಲಾದರೂ ಆಹಾರವಾಗಿ ಸೇವಿಸುತ್ತಿರುವ ಪ್ರತಿಯೊಬ್ಬರೂ ಈ ಕೃತಿಯನ್ನು ಓದಲೇಬೇಕೆಂಬುದು ನನ್ನ ವೈಯಕ್ತಿಕ ಅಭಿಪ್ರಾಯ.

ಪುಸ್ತಕ ಪರಿಚಯ

ಶೀರ್ಷಿಕೆ: ತೆನೆ ಮರೆಯ ಕ್ರಾಂತಿ ರಾಗಿ ಲಕ್ಷ್ಮಣಯ್ಯ – ಇಂಡಾಫ್ ರಾಗಿ ತಳಿಗಳ ಕಂಡುಹಿಡಿದ ವಿಜ್ಞಾನಿ

ಸಂಪಾದಕರು: ಪ್ರೊ. ಎಂ. ನಾರಾಯಣಸ್ವಾಮಿ ಹಾಗೂ ರಮೇಶ್ ಸಂಕ್ರಾಂತಿ

ಪ್ರಕಾಶಕರು: ಅಸೀಮ ಅಕ್ಷರ, ಅಮೃತನಗರ, ಬೆಂಗಳೂರು

ಪ್ರಥಮ ಮುದ್ರಣ: 2012

ಬೆಲೆ: ರೂ. 100/-
ಪ್ರತಿಯೊಬ್ಬ ಮನುಷ್ಯನೂ ಆಂತರಿಕವಾಗಿ ಸತ್ಯಶೋಧಕನೇ. ಆದರೆ, ಸತ್ಯಶೋಧನೆಗೆ ಏಕಾಗ್ರತೆ, ಸಹನೆ, ಆಳವಾದ ಜ್ಞಾನ, ಫಲಾಪೇಕ್ಷೆ ಇಲ್ಲದ ಸತತ ಸಾಧನೆ ಮುಖ್ಯ.
- ಡಾ. ಸಿ. ಹೆಚ್. ಲಕ್ಷ್ಮಣಯ್ಯ

Monday, June 25, 2012

ವೃತ್ತಿ ಪರಿಧಿ - ಪಶುವೈದ್ಯರ ಹೆಮ್ಮೆ

(IndiBlogger ನಲ್ಲಿ ನೋಂದಣಿಯಾಗಿರುವ ಸುಮಾರು 149 ಕನ್ನಡ ಬ್ಲಾಗ್-ಗಳ ಪಟ್ಟಿಯಲ್ಲಿ ನನ್ನ ಬ್ಲಾಗ್ ಇಂದಿಗೆ, ಜೂನ್ 2012 ರಲ್ಲಿ ಆಕಸ್ಮಿಕವಾಗಿ, ಆಶ್ಚರ್ಯಕರ ರೀತಿಯಲ್ಲಿ ಮೊದಲ ಸ್ಥಾನದಲ್ಲಿ ಕಾಣಿಸಿಕೊಂಡಿರುವ ವಿಷಯವನ್ನು ನಿಮ್ಮೊಡನೆ ಹಂಚಿಕೊಳ್ಳಲು ಬಯಸುತ್ತಾ, ಇದಕ್ಕೆ ಕಾರಣಕರ್ತರಾದ ನನ್ನ ಎಲ್ಲಾ ಓದುಗ ಮಿತ್ರ ಬಳಗಕ್ಕೆ ಅನಂತ ವಂದನೆಗಳನ್ನು ಸಲ್ಲಿಸುತ್ತೇನೆ)

ಈ ಲೇಖನವು ಸರಿಸುಮಾರು ಮೂರೂವರೆ ತಿಂಗಳುಗಳ ಕಾಲ 'ಕರಡು' ಪ್ರತಿಯಾಗಿಯೇ ಉಳಿದುಕೊಂಡದ್ದು ಈಗ ಇತಿಹಾಸ. ಪಶುವೈದ್ಯರೊಬ್ಬರಿಂದ ಕನ್ನಡ ಭಾಷೆಯಲ್ಲಿ ರಚಿಸಲ್ಪಟ್ಟು, ಕನ್ನಡ ಪಶುವೈದ್ಯ ಸಾಹಿತ್ಯ ಪರಿಷತ್ತು ಹೊರತಂದಿರುವ 'ವೃತ್ತಿ ಪರಿಧಿ' ಪುಸ್ತಕವನ್ನು ಓದಿ ಮುಗಿಸಿದ ಕೂಡಲೇ ಅದರ ಬಗೆಗಿನ ನನ್ನ ಅನಿಸಿಕೆಗಳನ್ನು ಬರೆದು ಇತರರೊಂದಿಗೆ ಹಂಚಿಕೊಳ್ಳುವ ಅಗಾಧವಾದ ತುಡಿತವನ್ನು ಅಂತರಂಗದ ಆಳದಲ್ಲೆಲ್ಲೋ ಮನೆಮಾಡಿರುವ ಅಜಾಗೃತ ಅಳುಕು ಮೆಟ್ಟಿ ನಿಂತಿತ್ತು. ಡಾ. ಟಿ. ಎಸ್. ರಮಾನಂದ ಅವರಂತಹ ಮಹಾನ್ ಬರಹಗಾರರ ಅದ್ಭುತ ಕೃತಿಯ ಬಗ್ಗೆ, ಸಾಹಿತ್ಯದ ತಿರುಳನ್ನೇ ಅರಿಯದ ನನ್ನಂತಹ ಸಾಮಾನ್ಯನೊಬ್ಬ ಬರೆಯುವುದು ಪ್ರಮಾದವಾಗಬಹುದೆಂಬ ಅಂಜಿಕೆಯಿಂದಲೇ ಈ ಹರಸಾಹಸಕ್ಕೆ ಕೈಹಾಕಿದ್ದೇನೆ; ಆಗಬಹುದಾದ ಎಲ್ಲಾ ತಪ್ಪುಗಳನ್ನು ಮನ್ನಿಸಿರೆಂದು ಗುರು-ಹಿರಿಯರಾದ ಡಾ. ಟಿ-ಎಸ್-ಆರ್ ಅವರಲ್ಲಿ ನಮ್ರನಾಗಿ ವಿನಂತಿಸಿಕೊಳ್ಳುತ್ತೇನೆ.

'ವೃತ್ತಿ ಪರಿಧಿ' ಡಾ. ಟಿ-ಎಸ್-ಆರ್ ಅವರ ಮೂರನೇಯ ಕೃತಿ. ಇದು ಅವರ ಪಶುವೈದ್ಯ ವೃತ್ತಿಪರ ಅನುಭವವೆಂಬಂತೆ ಮೇಲ್ನೋಟಕ್ಕೆ ಭಾಸವಾಗುತ್ತದೆಯಾದರೂ, ಓದಿಕೊಳ್ಳುತ್ತಾ ಹೋದಂತೆ ವೃತ್ತಿಪರತೆಯ ಓರೆಗಲ್ಲಿನುದ್ದಕ್ಕೂ ಡಾ. ಟಿ-ಎಸ್-ಆರ್ ಅವರು ತಮ್ಮ ಜೀವನಾನುಭವವನ್ನು ಬಿಚ್ಚಿಡುವ ವಿಶಿಷ್ಟ ಪರಿಯು ಅಂತರಂಗದಲ್ಲಿ ನಮಗೆ ಅರಿವಾಗುತ್ತದೆ; ಇದರ ಹಿಂದಿರುವುದು ಅವರ ಪರಿಪಕ್ವವಾದ ಉನ್ನತ ವ್ಯಕ್ತಿತ್ವ ಹಾಗೂ ಸಾಹಿತ್ಯಿಕ ಪ್ರೌಢಿಮೆ ಎಂಬುದರಲ್ಲಿ ಸಂಶಯವಿಲ್ಲ. ಸ್ವತಃ ಡಾ. ಟಿ-ಎಸ್-ಆರ್ ಅವರೇ ಪುಸ್ತಕದ 'ಅರಿಕೆ'ಯಲ್ಲಿ ಹಾಗೂ ಡಾ. ರಹಮತ್ ತರೀಕೆರೆ ಅವರು 'ಮುನ್ನುಡಿ'ಯಲ್ಲಿ ಹೇಳಿರುವ ಮಾತುಗಳು ಇದಕ್ಕೆ ಪೂರಕ.

ಸರ್ಕಾರೀ ಪಶುವೈದ್ಯರುಗಳಿಗೆ ಬಿಡುವಿಲ್ಲದ ತಮ್ಮ ವೃತ್ತಿಬದುಕಿನ ಜೊತೆಜೊತೆಗೆ ಸಮಾಜದ ಸರ್ವತೊನ್ಮುಖ ಒಳಿತಿಗಾಗಿ ಇನ್ನಿತರೇ ಹಲವಾರು ಜವಾಬ್ದಾರಿಯುತ ಕಟ್ಟುಪಾಡುಗಳು ಅನಿವಾರ್ಯವೆಂಬ ಸರ್ವಕಾಲಿಕ ಸತ್ಯವನ್ನು ಪುಸ್ತಕದಲ್ಲಿ 'ತುರ್ತು ಪರಿಸ್ಥಿತಿ' ಹಾಗೂ 'ಪ್ರವಾಹ ಪರಿಹಾರ' ಕಾರ್ಯಕ್ರಮಗಳಲ್ಲಿನ ತಮ್ಮ ಅನುಭವಗಳ ಮುಖೇನ ಲೇಖಕರು ಮತ್ತೇ ಸಾಬೀತುಪಡಿಸಿದ್ದಾರೆ. ಈ ಮೂಲಕ, ಕೇವಲ ಪಶುಚಿಕಿತ್ಸೆ ಮಾಡುವುದು ಮಾತ್ರ ಪಶುವೈದ್ಯರ ಆದ್ಯ ಕರ್ತವ್ಯವೆಂಬ ಭ್ರಮೆಯನ್ನು ಹೊಂದಿರುವ ಅನೇಕ ಕಿರಿಯ ಪಶುವೈದ್ಯರುಗಳಿಗೆ ಪರೋಕ್ಷವಾಗಿ ನೀತಿಪಾಠ ಹೇಳುತ್ತಾ, ಅವರನ್ನು ವೃತ್ತಿಪರ ಸನ್ಮಾರ್ಗದೆಡೆಗೆ ನಡೆಸುವಲ್ಲಿ ಡಾ. ಟಿ-ಎಸ್-ಆರ್ ಯಶಸ್ವಿಯಾಗಿದ್ದಾರೆ.

ಪುಸ್ತಕದ ಮತ್ತೊಂದು ವಿಶೇಷ - ನೈಜತೆ. ಪ್ರತಿಯೊಂದು ಅಧ್ಯಾಯದಲ್ಲಿ ಕಾಣಿಸಿರುವ ಪಾತ್ರಗಳು, ಸನ್ನಿವೇಶಗಳು ಹಾಗೂ ಮಾತುಗಳು ಅತ್ಯಂತ ಸಹಜವೆಂಬಂತಿದ್ದು, ನಿರೂಪಣಾ ಶೈಲಿಯು ಯಾವುದೇ ಪಶುವೈದ್ಯರು ಅಲ್ಲಿರುವುದು ತಮ್ಮದೇ ಅನುಭವವೇನೋ? ಎಂಬ ಭ್ರಾಂತಿಗೊಳಗಾಗುವಂತಿದೆ. ಎಪ್ಪತ್ತರ ದಶಕದ ಉತ್ತರ ಕರ್ನಾಟಕದ ಮುಗ್ಧ ಜನರ ಅಸಹಾಯಕ ಬದುಕಿನ ಚಿತ್ರಣವನ್ನು ಅವರ ಮಾತುಗಳಲ್ಲಿಯೇ ಓದುಗರಿಗೆ ದರ್ಶನ ಮಾಡಿಸಿಕೊಟ್ಟಿರುವ ರೀತಿಯು ಮನಸ್ಸಿಗೆ ಹತ್ತಿರವಾಗಿ, ಬಹುಕಾಲ ನೆನಪಿನಲ್ಲುಳಿಯುವಂತೆ ಮಾಡುತ್ತದೆ. ಕಗ್ಗತ್ತಲು ಸೆರಗು ಸರಿಸಿದಾಗ ಮೂಡಿದ ಮುಂಜಾವಿನ ಅರಣ್ಯದ ಸುಂದರ ನೋಟ ಮಾತ್ರವಲ್ಲದೇ ಬರದ ಭೀಕರತೆ, ಪ್ರವಾಹದ ಪ್ರಬಲತೆಗಳ ಅತ್ಯಂತ ಪ್ರಭಾವಕಾರೀ ವರ್ಣಿನೆ ಲೇಖಕರ ಭಾಷಾ ಸಂಪತ್ತಿಗೆ ಸಾಕ್ಷಿಯೂ ಆಗಿವೆ.

ಪುಸ್ತಕದ ಪ್ರಕಾಶಕರಾದ 'ಕನ್ನಡ ಪಶುವೈದ್ಯ ಸಾಹಿತ್ಯ ಪರಿಷತ್ತು, ಶಿವಮೊಗ್ಗ' ಸಂಸ್ಥೆಯ ಪ್ರಯತ್ನ-ಶ್ರಮ ಪ್ರಶಂಸನಾರ್ಹ. ಪಶುವೈದ್ಯ ವೃತ್ತಿಗೆ ಸಂಬಂಧಿಸಿದ ಸಾಹಿತ್ಯ ರಚನೆಗೆ ಪ್ರೋತ್ಸಾಹ ನೀಡಿ, ತನ್ಮೂಲಕ 'ಅಧಿಕೃತ ಪಶುವೈದ್ಯ ಸಾಹಿತ್ಯ' ಸಂಪತ್ತನ್ನು ವೃದ್ಧಿಗೊಳಿಸುವ ಸಂಕಲ್ಪತೊಟ್ಟು, ಕರ್ಯಪ್ರವೃತ್ತರಗಿರುವ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ನಾಗರಾಜ್ ಕೆ. ಎಮ್. ಹಾಗೂ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರುಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಡಾ. ಟಿ-ಎಸ್-ಆರ್ ಅವರ ಈ ಕೃತಿಯಿಂದ ಮೊದಲ್ಗೊಂಡು, ಕರ್ನಾಟಕದ ಹಲವಾರು ಪ್ರತಿಭಾವಂತ ಪಶುವೈದ್ಯರ ವೃತ್ತಿಪರ ಸಾಹಿತ್ಯದ ಪ್ರಕಟಣೆಯಲ್ಲಿ ಸಂಸ್ಥೆಯು ಮಹತ್ತರ ಸಾಧನೆಗೈಯ್ಯಲಿ ಎಂದು ಆಶಿಸುತ್ತೇನೆ.

'ವೃತ್ತಿ ಪರಿಧಿ' - ಪ್ರತಿಯೊಬ್ಬ ಪಶುವೈದ್ಯರೂ ಓದಲೇಬೇಕಾದ ಒಂದು ಮನೋಜ್ಞ ಕೃತಿ. ಮೊದಲ ಮುದ್ರಣ ಕಂಡಿರುವ 1000 ಪ್ರತಿಗಳು ಲಭ್ಯವಿದ್ದು, ಪುಸ್ತಕವನ್ನು ಲೇಖಕರಿಂದ ನೇರವಾಗಿ ಖರೀದಿಸಬಹುದಾಗಿದೆ (ಮುಖಬೆಲೆ ರೂ.75=00 ಮಾತ್ರ).

Friday, August 5, 2011

ಬೆಟ್ಟದ ಜೀವ

ಡಾ|| ಕೆ. ಶಿವರಾಮ ಕಾರಂತರ ಬೆಟ್ಟದ ಜೀವ ಕೃತಿಯು ಪ್ರಪ್ರಥಮವಾಗಿ ನನಗೆ ಪರಿಚಯವಾದದ್ದು ಪಠೄದ ಮೂಲಕ. ಅನಿವಾರ್ಯವೆಂಬಂತೆ ಕಾದಂಬರಿಯನ್ನು ಓದಲು ಪ್ರಾರಂಭಿಸಿದವನಿಗೆ, ಅದರ ವಿವಿಧ-ವೈವಿಧ್ಯ ಅಂತರಾಳಗಳ ದರ್ಶನವನ್ನು ಮಾಡಿಸಿದವರು ನನ್ನ ಪೂಜ್ಯ ಗುರುಗಳಾದ ಡಾ|| ನರಹಳ್ಳಿ ಬಾಲಸುಬ್ರಹ್ಮಣ್ಯಂ ಅವರು. ಜ್ಞಾನಪೀಠ ಪ್ರಶಸ್ತಿ ಸನ್ಮಾನಿತರ ಕೃತಿಯೊಂದು ಸುಪ್ರಸಿದ್ಧ ವಿಮರ್ಶಕರಿಂದ ವ್ಯಾಖ್ಯಾನಗೊಳ್ಳುವುದನ್ನು ಆಲಿಸಿದ ನಾನೇ ಧನ್ಯನೆಂದು ಈಗ ಅರಿವಾಗುತ್ತಿದೆ. ಇದೇ ಕಾದಂಬರಿಯನ್ನು ಆಧರಿಸಿ ಚಲನಚಿತ್ರವೊಂದು ಕನ್ನಡದ ಬೆಳ್ಳಿ ಪರದೆಗೆ ಬರುತ್ತಲಿರುವ ಸಂಗತಿಯು ನನಗೆ ಹರ್ಷವನ್ನುಂಟುಮಾಡಿತ್ತು.

ಕಾದಂಬರಿಯು ಒಂದು ಸಾಹಿತ್ಯ ಪ್ರಕಾರವಾದರೆ, ಚಲನಚಿತ್ರವು ಪ್ರಭಾವೀ ಕಲಾ ಪ್ರಕಾರವಾಗಿದೆ. ಇವೆರಡೂ ಸಹ ತಮ್ಮದೇ ಆದ ರೀತಿಯಲ್ಲಿ ವೈವಿಧ್ಯವೆನಿಸಿಕೊಳ್ಳುವಂಥವು; ಅನ್ಯ ಪ್ರಕಾರದ ಕೃತಿಯನ್ನು ಚಲನಚಿತ್ರವಾಗಿಸುವುದು ಒಂದು ಸವಾಲೇ ಸರಿ. ಇಂಥಹ ಸವಾಲುಗಳು ನಿರ್ದೇಶಕ ಪಿ.ಶೇಷಾದ್ರಿಯವರಿಗೆ ಹೊಸತೇನಲ್ಲ! 'ಅತ್ಯುತ್ತಮ ಪರಿಸರ ಕಾಳಜಿಯುಳ್ಳ ಚಲನಚಿತ್ರ' ರಾಷ್ಟ್ರೀಯ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡ ಬೆಟ್ಟದ ಜೀವ ಚಲನಚಿತ್ರವು, ಆ ಪ್ರಶಸ್ತಿಯ ಘನತೆಯನ್ನು ಉನ್ನತಕ್ಕೇರಿಸಿದೆ ಎಂದರೆ ಬಹುಶಃ ಆಭಾಸವಾಗಲಾರದು.

ಮೂಲ ಕಥೆಯ ಜಾಡನ್ನು ಎಲ್ಲಿಯೂ ತಪ್ಪದವರಂತೆ ಚಿತ್ರಕಥೆ ರಚಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಕಾರಂತರ ಸಾಹಿತ್ಯದ ಪರಿಚಯವಿಲ್ಲದಿದ್ದರೂ ಸಹ ಪ್ರೇಕ್ಷಕರನ್ನು ಚಿತ್ರವು ಹಿಡಿದಿಟ್ಟುಕೊಳ್ಳುವ ರೀತಿಯಲ್ಲಿ, ಕಾದಂಬರಿಯ ಒಟ್ಟಾರೆ ಸಾರಕ್ಕೆ ಕಳಂಕ ಬಾರದಂತೆ ಚಿತ್ರಕಥೆಯು ತನ್ನದೇ ಧಾಟಿಯಲ್ಲಿ ಸಾಗಿ, ಮೆಚ್ಚುಗೆ ಗಳಿಸುತ್ತದೆ. ಚಲನಚಿತ್ರದ ಮತ್ತೊಂದು ವಿಶೇಷತೆ ಅದರ ತಾರಾಗಣ; ಗೋಪಾಲಯ್ಯನಾಗಿರುವ ದತ್ತಾತ್ರೇಯ, ಶಂಕರಮ್ಮನಾಗಿರುವ ರಾಮೇಶ್ವರಿ ವರ್ಮ ಹಾಗೂ ಶಿವರಾಮಯ್ಯನಾಗಿರುವ ಸುಚೇಂದ್ರ ಪ್ರಸಾದ್ ರವರುಗಳು ತಮ್ಮಗಳ ಪಾತ್ರದಲ್ಲಿ ಸಂಪೂರ್ಣ ಲೀನವಾಗಿಹೋಗಿದ್ದಾರೆ. ವಿ. ಮನೋಹರ್ ಅವರ ಸಂಗೀತ ಸಂಯೋಜನೆಯು ಪ್ರತ್ಯೇಕಿಸಲಾಗದಂತೆ ಚಲನಚಿತ್ರದುದ್ದಕ್ಕೂ ಹಾಸುಹೊಕ್ಕಾಗಿದೆ. ಅತ್ಯಂತ ಸಮಂಜಸವೆಂಬಂತೆ ರಚಿಸಲಾಗಿರುವ ಸಂಭಾಷಣೆಗಳು, ನೇರವಾಗಿ ಕಾದಂಬರಿಯ ಪುಟ-ಸಾಲುಗಳನ್ನು ನೆನಪಿಸುವಂತಿವೆ.

'ಬೆಳಗಾಗುವಾಗ ಕಂಗಿನ ಮರಗಳೆಲ್ಲ ನೀಳ ಅಂಗನೆಯರಂತೆ ಮಂಜಿನ ಸೀರೆಯನ್ನುಟ್ಟು ನಿಂತಿದ್ದವು' - ಕಾರಂತರು ಈ ರೀತಿ ಬಣ್ಣಿಸುವ ಮಲೆನಾಡಿನ ಸೊಬಗನ್ನು ಯಥಾವತ್ತಾಗಿ ಸೆರೆಹಿಡಿಯುವಲ್ಲಿ ಛಾಯಾಗ್ರಾಹಕರಾದ ಅನಂತ್ ಅರಸ್ ಗೆದ್ದಿದ್ದಾರೆ. ಬರವಣಿಗೆಯಲ್ಲಿ ಕಾರಂತರು ಸೃಷ್ಟಿಸಿರುವ ಕೆಳಬೈಲು ಹಾಗೂ ಕಾಟುಮೂಲೆಗಳನ್ನು ಇಂದಿಗೂ ಸಹ ನೈಜವಾಗಿ ಚಿತ್ರೀಕರಿಸಿರುವುದು ವಿಸ್ಮಯವೆನಿಸುತ್ತದೆ; ಕುಮಾರ ಪರ್ವತದ ಸೊಬಗಿನ ಚಿತ್ರೀಕರಣ ಅಮೋಘವಾಗಿದೆ.

ಮೂಲತಃ ಸಂಬಂಧಗಳ ಸುತ್ತಲೂ ಹೆಣೆದುಕೊಳ್ಳುವ ಕಥೆಯಲ್ಲಿ, ಪರಕೀಯವೆನಿಸಿಕೊಳ್ಳದಂತೆ ಭಾವನೆಗಳನ್ನು ಸೂಕ್ಷ್ಮವಾಗಿ ಚಿತ್ರೀಕರಿಸಿರುವುದು ನಿರ್ದೇಶಕರ ಯಶಸ್ಸು. ಮುಪ್ಪಿನಲ್ಲೂ, ಜೀವನದ ಪ್ರತಿಯೊಂದು ಘಳಿಗೆಯನ್ನೂ ಸಂತೋಷದಿಂದ ಆಸ್ವಾದಿಸುತ್ತಾ, ಬದುಕನ್ನು ಸಾರ್ಥಕಗೊಳಿಸಿಕೊಳ್ಳುವ ಪರಿಯನ್ನು ಗೋಪಾಲಯ್ಯ-ಶಂಕರಮ್ಮರಿಂದಲೇ ಅರಿತುಕೊಳ್ಳಬೇಕು. ಈ ನಿಟ್ಟಿನಲ್ಲಿ ದತ್ತಾತ್ರೇಯ-ರಾಮೇಶ್ವರಿ ವರ್ಮ ಇವರುಗಳ ನಟನೆ ಬಹುಕಾಲ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುತ್ತದೆ.

ಸಮಕಾಲಿನ ಎಲ್ಲಾ ಚಲನಚಿತ್ರಗಳಿಗಿಂತ ವಿಭಿನ್ನವಾಗಿ, ನೋಡುಗರ ಮನ ಮುಟ್ಟುವಂತೆ, ಅಗಾಧ ಹಾಗೂ ಸಮೃದ್ಧ ಕನ್ನಡ ಸಾಹಿತ್ಯವನ್ನು ಅಚ್ಚುಕಟ್ಟಾಗಿ ಕನ್ನಡ ಚಿತ್ರೋದ್ಯಮದ ಮೂಲಕ ಕನ್ನಡಿಗರಿಗೆ ಅರ್ಪಿಸಿರುವ ಸಾಹಸಕ್ಕಾಗಿ ಬಸಂತ್ ಪ್ರೊಡಕ್ಷನ್ಸ್ ಹಾಗೂ ನಿರ್ಮಾಪಕ ಬಸಂತ್ ಕುಮಾರ್ ಪಾಟೀಲ್ ಅವರಿಗೆ ಕೃತಜ್ಞತೆ ಸಲ್ಲಿಸಬೇಕು. ವಾಣಿಜ್ಯ ಮಾರುಕಟ್ಟೆಯಲ್ಲಿ, ಬೆಟ್ಟದ ಜೀವದಂತಹ ಕಲಾತ್ಮಕ ಚಲನಚಿತ್ರವನ್ನು ಪ್ರದರ್ಶಿಸಲು ಮುಂದಾದ ಪಿ.ವಿ.ಆರ್., ಇನಾಕ್ಸ್, ಉಮಾ ಚಿತ್ರ ಮಂದಿರ ಹಾಗೂ ಇನ್ನಿತರೆ ಚಿತ್ರಪ್ರದರ್ಶಕರ ಉದಾರತೆಯನ್ನು ಮೆಚ್ಚಲೇಬೇಕು. ಇಂಥಹ ಉತ್ತಮ ಚಲನಚಿತ್ರಗಳನ್ನು ತಯಾರಿಸುವ ಮೂಲಕ ಕನ್ನಡ ನಾಡು-ನುಡಿಯ ಏಳಿಗೆಗಾಗಿ ಅಪಾರ ಸೇವೆಯನ್ನು ಸಲ್ಲಿಸಿದ ಶಿವರಾಮ ಕಾರಂತರಂತಹ ಮಹಾನ್ ಚೇತನಗಳಿಗೆ ಗೌರವ ಸಲ್ಲಿಸುವ ಪ್ರಯತ್ನಗಳು ಅವಿರತವಾಗಿ ಮುಂದುವರೆಯಲಿ ಎಂದು ಆಶಿಸುತ್ತೇನೆ.

ಪುಸ್ತಕ ಪರಿಚಯ
ಶೀರ್ಷಿಕೆ : ಬೆಟ್ಟದ ಜೀವ
ಸಾಹಿತಿ : ಡಾ|| ಕೆ. ಶಿವರಾಮ ಕಾರಂತ
ಪ್ರಕಾಶಕರು : ಎಸ್. ಬಿ. ಎಸ್. ಪಬ್ಲಿಷರ್ಸ್ ಡಿಸ್ಟ್ರಿಬ್ಯೂಟರ್ಸ್, ಬೆಂಗಳೂರು - 1
ವಿತರಕರು : ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು - 9
ಬೆಲೆ : ರೂ. 65/-
ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಗಳನ್ನು ಶ್ರೀಮಂತಗೊಳಿಸುವ ಎಲ್ಲಾ ಪ್ರಯತ್ನಗಳಿಗೆ, ಕನ್ನಡಿಗರಾದ ನಾವೆಲ್ಲರೂ ಪ್ರಾಮಾಣಿಕವಾಗಿ ಬೆಂಬಲಿಸಬೇಕೆಂಬುದು ನನ್ನ ವೈಯಕ್ತಿಕ ಅಭಿಪ್ರಾಯ.