Monday, June 25, 2012

ವೃತ್ತಿ ಪರಿಧಿ - ಪಶುವೈದ್ಯರ ಹೆಮ್ಮೆ

(IndiBlogger ನಲ್ಲಿ ನೋಂದಣಿಯಾಗಿರುವ ಸುಮಾರು 149 ಕನ್ನಡ ಬ್ಲಾಗ್-ಗಳ ಪಟ್ಟಿಯಲ್ಲಿ ನನ್ನ ಬ್ಲಾಗ್ ಇಂದಿಗೆ, ಜೂನ್ 2012 ರಲ್ಲಿ ಆಕಸ್ಮಿಕವಾಗಿ, ಆಶ್ಚರ್ಯಕರ ರೀತಿಯಲ್ಲಿ ಮೊದಲ ಸ್ಥಾನದಲ್ಲಿ ಕಾಣಿಸಿಕೊಂಡಿರುವ ವಿಷಯವನ್ನು ನಿಮ್ಮೊಡನೆ ಹಂಚಿಕೊಳ್ಳಲು ಬಯಸುತ್ತಾ, ಇದಕ್ಕೆ ಕಾರಣಕರ್ತರಾದ ನನ್ನ ಎಲ್ಲಾ ಓದುಗ ಮಿತ್ರ ಬಳಗಕ್ಕೆ ಅನಂತ ವಂದನೆಗಳನ್ನು ಸಲ್ಲಿಸುತ್ತೇನೆ)

ಈ ಲೇಖನವು ಸರಿಸುಮಾರು ಮೂರೂವರೆ ತಿಂಗಳುಗಳ ಕಾಲ 'ಕರಡು' ಪ್ರತಿಯಾಗಿಯೇ ಉಳಿದುಕೊಂಡದ್ದು ಈಗ ಇತಿಹಾಸ. ಪಶುವೈದ್ಯರೊಬ್ಬರಿಂದ ಕನ್ನಡ ಭಾಷೆಯಲ್ಲಿ ರಚಿಸಲ್ಪಟ್ಟು, ಕನ್ನಡ ಪಶುವೈದ್ಯ ಸಾಹಿತ್ಯ ಪರಿಷತ್ತು ಹೊರತಂದಿರುವ 'ವೃತ್ತಿ ಪರಿಧಿ' ಪುಸ್ತಕವನ್ನು ಓದಿ ಮುಗಿಸಿದ ಕೂಡಲೇ ಅದರ ಬಗೆಗಿನ ನನ್ನ ಅನಿಸಿಕೆಗಳನ್ನು ಬರೆದು ಇತರರೊಂದಿಗೆ ಹಂಚಿಕೊಳ್ಳುವ ಅಗಾಧವಾದ ತುಡಿತವನ್ನು ಅಂತರಂಗದ ಆಳದಲ್ಲೆಲ್ಲೋ ಮನೆಮಾಡಿರುವ ಅಜಾಗೃತ ಅಳುಕು ಮೆಟ್ಟಿ ನಿಂತಿತ್ತು. ಡಾ. ಟಿ. ಎಸ್. ರಮಾನಂದ ಅವರಂತಹ ಮಹಾನ್ ಬರಹಗಾರರ ಅದ್ಭುತ ಕೃತಿಯ ಬಗ್ಗೆ, ಸಾಹಿತ್ಯದ ತಿರುಳನ್ನೇ ಅರಿಯದ ನನ್ನಂತಹ ಸಾಮಾನ್ಯನೊಬ್ಬ ಬರೆಯುವುದು ಪ್ರಮಾದವಾಗಬಹುದೆಂಬ ಅಂಜಿಕೆಯಿಂದಲೇ ಈ ಹರಸಾಹಸಕ್ಕೆ ಕೈಹಾಕಿದ್ದೇನೆ; ಆಗಬಹುದಾದ ಎಲ್ಲಾ ತಪ್ಪುಗಳನ್ನು ಮನ್ನಿಸಿರೆಂದು ಗುರು-ಹಿರಿಯರಾದ ಡಾ. ಟಿ-ಎಸ್-ಆರ್ ಅವರಲ್ಲಿ ನಮ್ರನಾಗಿ ವಿನಂತಿಸಿಕೊಳ್ಳುತ್ತೇನೆ.

'ವೃತ್ತಿ ಪರಿಧಿ' ಡಾ. ಟಿ-ಎಸ್-ಆರ್ ಅವರ ಮೂರನೇಯ ಕೃತಿ. ಇದು ಅವರ ಪಶುವೈದ್ಯ ವೃತ್ತಿಪರ ಅನುಭವವೆಂಬಂತೆ ಮೇಲ್ನೋಟಕ್ಕೆ ಭಾಸವಾಗುತ್ತದೆಯಾದರೂ, ಓದಿಕೊಳ್ಳುತ್ತಾ ಹೋದಂತೆ ವೃತ್ತಿಪರತೆಯ ಓರೆಗಲ್ಲಿನುದ್ದಕ್ಕೂ ಡಾ. ಟಿ-ಎಸ್-ಆರ್ ಅವರು ತಮ್ಮ ಜೀವನಾನುಭವವನ್ನು ಬಿಚ್ಚಿಡುವ ವಿಶಿಷ್ಟ ಪರಿಯು ಅಂತರಂಗದಲ್ಲಿ ನಮಗೆ ಅರಿವಾಗುತ್ತದೆ; ಇದರ ಹಿಂದಿರುವುದು ಅವರ ಪರಿಪಕ್ವವಾದ ಉನ್ನತ ವ್ಯಕ್ತಿತ್ವ ಹಾಗೂ ಸಾಹಿತ್ಯಿಕ ಪ್ರೌಢಿಮೆ ಎಂಬುದರಲ್ಲಿ ಸಂಶಯವಿಲ್ಲ. ಸ್ವತಃ ಡಾ. ಟಿ-ಎಸ್-ಆರ್ ಅವರೇ ಪುಸ್ತಕದ 'ಅರಿಕೆ'ಯಲ್ಲಿ ಹಾಗೂ ಡಾ. ರಹಮತ್ ತರೀಕೆರೆ ಅವರು 'ಮುನ್ನುಡಿ'ಯಲ್ಲಿ ಹೇಳಿರುವ ಮಾತುಗಳು ಇದಕ್ಕೆ ಪೂರಕ.

ಸರ್ಕಾರೀ ಪಶುವೈದ್ಯರುಗಳಿಗೆ ಬಿಡುವಿಲ್ಲದ ತಮ್ಮ ವೃತ್ತಿಬದುಕಿನ ಜೊತೆಜೊತೆಗೆ ಸಮಾಜದ ಸರ್ವತೊನ್ಮುಖ ಒಳಿತಿಗಾಗಿ ಇನ್ನಿತರೇ ಹಲವಾರು ಜವಾಬ್ದಾರಿಯುತ ಕಟ್ಟುಪಾಡುಗಳು ಅನಿವಾರ್ಯವೆಂಬ ಸರ್ವಕಾಲಿಕ ಸತ್ಯವನ್ನು ಪುಸ್ತಕದಲ್ಲಿ 'ತುರ್ತು ಪರಿಸ್ಥಿತಿ' ಹಾಗೂ 'ಪ್ರವಾಹ ಪರಿಹಾರ' ಕಾರ್ಯಕ್ರಮಗಳಲ್ಲಿನ ತಮ್ಮ ಅನುಭವಗಳ ಮುಖೇನ ಲೇಖಕರು ಮತ್ತೇ ಸಾಬೀತುಪಡಿಸಿದ್ದಾರೆ. ಈ ಮೂಲಕ, ಕೇವಲ ಪಶುಚಿಕಿತ್ಸೆ ಮಾಡುವುದು ಮಾತ್ರ ಪಶುವೈದ್ಯರ ಆದ್ಯ ಕರ್ತವ್ಯವೆಂಬ ಭ್ರಮೆಯನ್ನು ಹೊಂದಿರುವ ಅನೇಕ ಕಿರಿಯ ಪಶುವೈದ್ಯರುಗಳಿಗೆ ಪರೋಕ್ಷವಾಗಿ ನೀತಿಪಾಠ ಹೇಳುತ್ತಾ, ಅವರನ್ನು ವೃತ್ತಿಪರ ಸನ್ಮಾರ್ಗದೆಡೆಗೆ ನಡೆಸುವಲ್ಲಿ ಡಾ. ಟಿ-ಎಸ್-ಆರ್ ಯಶಸ್ವಿಯಾಗಿದ್ದಾರೆ.

ಪುಸ್ತಕದ ಮತ್ತೊಂದು ವಿಶೇಷ - ನೈಜತೆ. ಪ್ರತಿಯೊಂದು ಅಧ್ಯಾಯದಲ್ಲಿ ಕಾಣಿಸಿರುವ ಪಾತ್ರಗಳು, ಸನ್ನಿವೇಶಗಳು ಹಾಗೂ ಮಾತುಗಳು ಅತ್ಯಂತ ಸಹಜವೆಂಬಂತಿದ್ದು, ನಿರೂಪಣಾ ಶೈಲಿಯು ಯಾವುದೇ ಪಶುವೈದ್ಯರು ಅಲ್ಲಿರುವುದು ತಮ್ಮದೇ ಅನುಭವವೇನೋ? ಎಂಬ ಭ್ರಾಂತಿಗೊಳಗಾಗುವಂತಿದೆ. ಎಪ್ಪತ್ತರ ದಶಕದ ಉತ್ತರ ಕರ್ನಾಟಕದ ಮುಗ್ಧ ಜನರ ಅಸಹಾಯಕ ಬದುಕಿನ ಚಿತ್ರಣವನ್ನು ಅವರ ಮಾತುಗಳಲ್ಲಿಯೇ ಓದುಗರಿಗೆ ದರ್ಶನ ಮಾಡಿಸಿಕೊಟ್ಟಿರುವ ರೀತಿಯು ಮನಸ್ಸಿಗೆ ಹತ್ತಿರವಾಗಿ, ಬಹುಕಾಲ ನೆನಪಿನಲ್ಲುಳಿಯುವಂತೆ ಮಾಡುತ್ತದೆ. ಕಗ್ಗತ್ತಲು ಸೆರಗು ಸರಿಸಿದಾಗ ಮೂಡಿದ ಮುಂಜಾವಿನ ಅರಣ್ಯದ ಸುಂದರ ನೋಟ ಮಾತ್ರವಲ್ಲದೇ ಬರದ ಭೀಕರತೆ, ಪ್ರವಾಹದ ಪ್ರಬಲತೆಗಳ ಅತ್ಯಂತ ಪ್ರಭಾವಕಾರೀ ವರ್ಣಿನೆ ಲೇಖಕರ ಭಾಷಾ ಸಂಪತ್ತಿಗೆ ಸಾಕ್ಷಿಯೂ ಆಗಿವೆ.

ಪುಸ್ತಕದ ಪ್ರಕಾಶಕರಾದ 'ಕನ್ನಡ ಪಶುವೈದ್ಯ ಸಾಹಿತ್ಯ ಪರಿಷತ್ತು, ಶಿವಮೊಗ್ಗ' ಸಂಸ್ಥೆಯ ಪ್ರಯತ್ನ-ಶ್ರಮ ಪ್ರಶಂಸನಾರ್ಹ. ಪಶುವೈದ್ಯ ವೃತ್ತಿಗೆ ಸಂಬಂಧಿಸಿದ ಸಾಹಿತ್ಯ ರಚನೆಗೆ ಪ್ರೋತ್ಸಾಹ ನೀಡಿ, ತನ್ಮೂಲಕ 'ಅಧಿಕೃತ ಪಶುವೈದ್ಯ ಸಾಹಿತ್ಯ' ಸಂಪತ್ತನ್ನು ವೃದ್ಧಿಗೊಳಿಸುವ ಸಂಕಲ್ಪತೊಟ್ಟು, ಕರ್ಯಪ್ರವೃತ್ತರಗಿರುವ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ನಾಗರಾಜ್ ಕೆ. ಎಮ್. ಹಾಗೂ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರುಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಡಾ. ಟಿ-ಎಸ್-ಆರ್ ಅವರ ಈ ಕೃತಿಯಿಂದ ಮೊದಲ್ಗೊಂಡು, ಕರ್ನಾಟಕದ ಹಲವಾರು ಪ್ರತಿಭಾವಂತ ಪಶುವೈದ್ಯರ ವೃತ್ತಿಪರ ಸಾಹಿತ್ಯದ ಪ್ರಕಟಣೆಯಲ್ಲಿ ಸಂಸ್ಥೆಯು ಮಹತ್ತರ ಸಾಧನೆಗೈಯ್ಯಲಿ ಎಂದು ಆಶಿಸುತ್ತೇನೆ.

'ವೃತ್ತಿ ಪರಿಧಿ' - ಪ್ರತಿಯೊಬ್ಬ ಪಶುವೈದ್ಯರೂ ಓದಲೇಬೇಕಾದ ಒಂದು ಮನೋಜ್ಞ ಕೃತಿ. ಮೊದಲ ಮುದ್ರಣ ಕಂಡಿರುವ 1000 ಪ್ರತಿಗಳು ಲಭ್ಯವಿದ್ದು, ಪುಸ್ತಕವನ್ನು ಲೇಖಕರಿಂದ ನೇರವಾಗಿ ಖರೀದಿಸಬಹುದಾಗಿದೆ (ಮುಖಬೆಲೆ ರೂ.75=00 ಮಾತ್ರ).