Showing posts with label ಸರಣಿ : Series. Show all posts
Showing posts with label ಸರಣಿ : Series. Show all posts

Wednesday, October 3, 2012

Web Browser : ಜಾಣ್ಮೆಯ ಆಯ್ಕೆ

ಕರ್ನಾಟಕ ಪಶುವೈದ್ಯ ಸಂಘ, ಬೆಂಗಳೂರು ಇವರು ಹೊರತರುತ್ತಿರುವ 'ಪಶುವೈದ್ಯ ಧ್ವನಿ' ಎಂಬ ಚಾತುರ್ಮಾಸಿಕ ವೃತ್ತಿಪರ ಸುದ್ದಿ ಪತ್ರಿಕೆಯಲ್ಲಿ 'ಗಣಕ ಮತ್ತು ಅಂತರ್ಜಾಲ' ವಿಷಯವಾಗಿ ಮೂಲಭೂತ ಅಂಶಗಳನ್ನು ಚರ್ಚಿಸುವ ಉದ್ದೇಶದೊಂದಿಗೆ 'ಜಾಲ ಲೀಲ' ಎಂಬ ಅಂಕಣವನ್ನು ನಿಯತವಾಗಿ ಬರೆಯುವ ಅವಕಾಶ ನನಗೆ ದೊರೆತ ವಿಚಾರವನ್ನು ನಿಮ್ಮೊಡನೆ ಈ ಹಿಂದೆ ಹೇಳಿಕೊಂಡಿದ್ದು ಬಹುಶಃ ನಿಮಗೆ ನೆನಪಿರಬಹುದು.

ಮೇ-ಆಗಸ್ಟ್ 2012 ರ ಸಂಚಿಕೆಯು ಹೊರಬಂದು ಈಗಾಗಲೇ ಬಹಳ ದಿನಗಳೇ ಕಳೆದಿದ್ದು, ಪ್ರಸ್ತುತ ಸಂಚಿಕೆಯಲ್ಲಿ ಪ್ರಕಟವಾದ 'ಜಾಲ ಲೀಲ' ಸರಣಿಯ ನನ್ನ ಬರೆಹವನ್ನು ಇಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ; ತಡವಾದುದ್ದಕ್ಕೆ ಕ್ಷಮೆ ಇರಲಿ. ನಿಮ್ಮ ಅನಿಸಿಕೆ-ಅಭಿಪ್ರಾಯ-ವಿಮರ್ಶೆ-ಟೀಕೆಗಳಿಗೆ ಎಂದಿನಂತೆ ತುಂಬುಹೃದಯದ ಮುಕ್ತ ಸ್ವಾಗತ.

ಈ ಸರಣಿಯ ಹಿಂದಿನ ಲೇಖನವು ಇಲ್ಲಿದೆ: Web Browser : ಅಪಾಯದ ಹೊಸ್ತಿಲು?

ಲೇಖನ - 2

ಹಿಂದಿನ ಸಂಚಿಕೆಯಲ್ಲಿ ನಾವು web browser ಗಳ ಬಳಕೆಯ ಹಿನ್ನೆಲೆಯಲ್ಲಿ, ಸುರಕ್ಷತೆಯ ದೃಷ್ಟಿಯಿಂದ ನಮಗಿರಬೇಕಾದ ಮೂಲಭೂತ ಮಾಹಿತಿ ಹಾಗೂ ಅರಿವಿನ ಬಗೆಗೆಗಿನ ವಿಚಾರ ವಿನಿಮಯ ಮಾಡಿಕೊಂಡಿದ್ದೆವು. ಈ ಲೇಖನದಲ್ಲಿ, ನಮ್ಮಗಳ ವೈಯಕ್ತಿಕ ಅಗತ್ಯ-ಅನುಕೂಲಕ್ಕೆ ಸರಿಹೊಂದಿಕೊಂಡು, ಮಾಹಿತಿಯ ಸುರಕ್ಷತೆಗೆ ಧಕ್ಕೆ ಬಾರದಂತೆ ಅಂತರ್ಜಾಲದ ಮಹಾಸಾಗರದಲ್ಲಿ ನಮ್ಮೊಡನೆ ಸದಾ ವಿಶ್ವಾಸಾರ್ಹ ಸಂಗಾತಿಯಾಗಿರಬಲ್ಲ browser ಗಳ ಬಗ್ಗೆ ಅಗತ್ಯ ಮಾಹಿತಿಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.

Browser ಗಳ ಆಯ್ಕೆ ಪ್ರಕ್ರಿಯೆಯನ್ನು ಪ್ರಾರಂಭಿಸುವ ಮುನ್ನ, ಯಾವುದೇ ಮಾದರಿ/ಆದರ್ಶ browser ಸಾಧನವು ಹೊಂದಿರಬೇಕಾದ ವೈಶಿಷ್ಟ್ಯತೆಗಳ್ಯಾವುವು? ಎಂಬುದರ ಬಗ್ಗೆ ಗಮನ ಹರಿಸುವುದು ಸೂಕ್ತ. ನಮ್ಮ ದಿನನಿತ್ಯ ಬಳಕೆಯ ಸಾಮಾನ್ಯ ಅಗತ್ಯತೆಗಳನ್ನು ಈಡೇರಿಸಲು ನೆರವಾಗುವಂತೆ browser ಗಳು ವೇಗ (speed), ಲಘು (lightweight), ಸರಳ (simple), ಸುರಕ್ಷತೆ (security), ಸಹವರ್ತಿತ್ವ (compatibility), ಗೌಪ್ಯತೆ (privacy), ವಿಶ್ವಾಸಾರ್ಹತೆ (reliability), ಸಹಾಯ (support), ಸ್ಪರ್ಧಾತ್ಮಕ (competitive), ಕಾರ್ಯಕ್ಷಮತೆ (performance), ನವೀಕರಣ (update) ಮುಂತಾದ ಗುಣಲಕ್ಷಣಗಳನ್ನು ಹೊಂದಿರುವುದು ಅತ್ಯಗತ್ಯ. ಆದರೆ, ಈ ದಿನದ ಅಂತರ್ಜಾಲ ಮಾರುಕಟ್ಟೆಯಲ್ಲಿ ಯಾವುದೇ browser ಅನ್ನು ಅಭಿವೃದ್ಧಿಪಡಿಸಿದ ವ್ಯಕ್ತಿ/ಸಂಸ್ಥೆ/ಸಮೂಹ ತನ್ನ ಸಾಧನವು ಮೇಲ್ಕಾಣಿಸಿದ ಎಲ್ಲಾ ಲಕ್ಷಣಗಳನ್ನೂ ಹೊಂದಿದೆಯೆಂದು ಪ್ರಚಾರ ಮಾಡುತ್ತಿರುವುದು ಬಳಕೆದಾರರಾದ ನಮ್ಮಗಳ ನಿದ್ದೆ ಕೆಡಿಸುವ ಸಂಗತಿಯಾಗಿದೆ. ಪ್ರಸಕ್ತ ವಿಷಯ, ಉದ್ದೇಶ ಹಾಗೂ ಪ್ರಸ್ತುತತೆಯ ಚೌಕಟ್ಟಿನಲ್ಲಿ, ಇನ್ನು ಮುಂದೆ ಚರ್ಚಿಸಲ್ಪಡುವ browser ಗಳು ಪ್ರಮುಖವೆನಿಸಿಕೊಳ್ಳುತ್ತವೆ.

ಇದು ಭಾರತವನ್ನೊಳಗೊಂಡಂತೆ ಬಹುಶಃ ಪ್ರಪಂಚದ ಅತ್ಯಂತ ಪ್ರಚಲಿತ browser; ಕಾರಣ, ಗಣಕಯಂತ್ರವನ್ನು ಮೊಟ್ಟಮೊದಲ ಬಾರಿಗೆ ಜನಸಾಮಾನ್ಯರ ಕೈಗೊಂಬೆಯಾಗಿಸುವಲ್ಲಿ ಮಹತ್ತರ ಪಾತ್ರವಹಿಸಿ ಇಂದಿಗೂ ತನ್ನ ಜನಪ್ರಿಯತೆಯನ್ನು ಕಾಯ್ದುಕೊಂಡಿರುವ Microsoft Windows ತಂತ್ರಾಂಶದೊಂದಿಗೆ ಇರುವ ಏಕೈಕ ಪೂರ್ವನಿಯೋಜಿತ browser ಸಾಧನ. ಪ್ರಾರಂಭದಲ್ಲಿದ್ದ ಅನೇಕ ಸುರಕ್ಷಾ ಲೋಪದೋಷಗಳನ್ನು ನಿಧಾನವಾಗಿ ಸರಿಪಡಿಸಿಕೊಳ್ಳುತ್ತಾ, ಇಂದಿಗೆ ವಿಶ್ವಾಸಾರ್ಹ ಸಾಧನವಾಗಿ ರೂಪುಗೊಂಡಿದೆ. ಈ ಲೇಖನವನ್ನು ರಚಿಸುವ ಹೊತ್ತಿಗಿನ ಪ್ರಸ್ತುತ ಆವೃತ್ತಿ (latest version) 9.

ದುಬಾರಿ Mac ಸಾಧನಗಳ ಅಂತರ್ಜಾಲ ಒಡನಾಡಿಯಾದ ಈ browser, Microsoft Windows ಸಹವರ್ತಿತ್ವ ಆವೃತ್ತಿ ಅಭಿವೃದ್ಧಿಗೊಳ್ಳುವವರೆಗೂ ಸಾಮಾನ್ಯ ಗಣಕ ಬಳಕೆದಾರರಿಂದ ದೂರ ಉಳಿದಿದ್ದಿತು. iPad, iPhone ಮುಂತಾದ Apple ಸಾಧನಗಳಿಂದ ಮೊದಲ್ಗೊಂಡು, ಸಾಮಾನ್ಯ ಗಣಕಯಂತ್ರಗಳಲ್ಲಿ ನವನವೀನ ಆವಿಷ್ಕಾರಗಳನ್ನು Safari ತನ್ನ ಬಳಕೆದಾರರಿಗೆ ಒದಗಿಸಿಕೊಟ್ಟಿದೆ. ಪ್ರಸ್ತುತ ಆವೃತ್ತಿ 5.

ಅತ್ಯಂತ ವೈವಿಧ್ಯ ಗಣಕ ಹಾಗೂ ವಿದ್ಯುನ್ಮಾನ ಸಾಧನಗಳಲ್ಲಿ ಅನುಸ್ಥಾಪಿತಗೊಳ್ಳುವ ವಿವಿಧ ಸ್ವರೂಪಗಳಲ್ಲಿ ಲಭ್ಯವಿರುವ ಹೆಗ್ಗಳಿಕೆ Opera browser ನದ್ದು. Mac, Linux, Windows, Android, Mobile ಹೀಗೆ ಹಲವಾರು ತಂತ್ರಾಂಶಗಳಿಗೆ ಸೂಕ್ತವಾಗಿದ್ದು, ಸುರಕ್ಷತೆಯ ದೃಷ್ಟಿಯಿಂದಲೂ ಸಹ ಮೇಲುಗೈ ಸಾಧಿಸಿದೆ. ಪ್ರಸ್ತುತ ಆವೃತ್ತಿ 12.

Mozilla ಸಮೂಹದ ವತಿಯಿಂದ ಆವಿಷ್ಕಾರಗೊಂಡು, ಬಹುತೇಕ ಎಲ್ಲಾ ಮುಕ್ತ ತಂತ್ರಾಂಶಗಳಲ್ಲಿಯೂ ವೈವಿಧ್ಯ ಪ್ರಕಾರಗಳಲ್ಲಿ ಏಕಕಾಲಕ್ಕೆ ಅಭಿವೃದ್ಧಿ ಹೊಂದುತ್ತಿರುವ ಜಗತ್ತಿನ ಅತ್ಯಂತ ವಿಶ್ವಾಸಾರ್ಹ browser ಸಾಧನ. ಆರಂಭದಲ್ಲಿದ್ದ ಮಂದಗತಿಯ ಸಮಸ್ಯೆಯನ್ನು ದೂರವಾಗಿಸಿ, ಇಂದಿಗೆ ತೀವ್ರಗತಿಯಲ್ಲಿ ಕಾರ್ಯನಿರ್ವಹಿಸಬಲ್ಲ ಸಾಮಥ್ರ್ಯ ಹೊಂದಿದೆ. ಪ್ರಸ್ತುತ ಆವೃತ್ತಿ 14.

ಈ ದಿನದ ಅಂತರ್ಜಾಲ ಪ್ರಪಂಚದ ಒಡೆಯ ಎನಿಸಿರುವ 'Google' ಹೊರತಂದಿರುವ ಆತ್ಯಾಧುನಿಕ browser ಸಾಧನ. ಮೂಲತಃ Windows ಆವೃತ್ತಿಯ ತಂತ್ರಾಂಶವಾಗಿದ್ದ Chrome, ಈಗಾಗಲೇ Chromium ಹೆಸರಿನಲ್ಲಿ ಮುಕ್ತ ಪ್ರಪಂಚಕ್ಕೂ ಪ್ರವೇಶ ಪಡೆದುಕೊಂಡಿದೆ. ಅತ್ಯಂತ ತ್ವರಿತ, ಸರಳ ಹಾಗೂ ದಕ್ಷತೆಯಿಂದ ಕಾರ್ಯನಿರ್ವಹಿಸುವ ಸಾಮಥ್ರ್ಯ ಹೊಂದಿರುವ ಈ ಸಾಧನವು ಅತೀವ ತೆರನಾದ ಬಳಕೆದಾರರ ಮಾಹಿತಿ ಕಲೆಹಾಕಿ, ನಿಯಮಿತವಾಗಿ ತನ್ನ ಒಡೆಯನಾದ Google ಗೆ ಅದನ್ನು ನಿಷ್ಠೆಯಿಂದ ರವಾನಿಸುವುದರಲ್ಲಿ ನಿಸ್ಸೀಮ! ಪ್ರಸ್ತುತ ಆವೃತ್ತಿ 20.

ಯಾವುದೇ ಸಾಧನವೂ ಶೇಕಡಾ ನೂರರಷ್ಟು ಸುರಕ್ಷಿತವಲ್ಲ ಎನ್ನುವ ವಾಸ್ತವವನ್ನು ನಾವು ಮನವರಿಕೆ ಮಾಡಿಕೊಳ್ಳಬೇಕು; ಇದು browser ಗಳ ವಿಷಯದಲ್ಲೂ ಸಹ ಸತ್ಯ. ನಮ್ಮ ಅನುಕೂಲ ಹಾಗೂ ಉಪಯುಕ್ತತೆಗೆ ತಕ್ಕಂತೆ, ಒಂದೇ ಗಣಕಯಂತ್ರದಲ್ಲಿ ಒಂದಕ್ಕಿಂತ ಹೆಚ್ಚು browser ಗಳನ್ನು ಅನುಸ್ಥಾಪಿಸಿಕೊಳ್ಳುವುದೂ ಸಹ ಸಾಧ್ಯ; ಆದರೆ, ಇದರ ನಿರ್ಣಯವನ್ನು ಮಾತ್ರ ಬಳಕೆದಾರರು ಅತ್ಯಂತ ವಿವೇಚನೆಗೆಯಿಂದ ಮಾಡಬೇಕಾಗುತ್ತದೆ. ಯಾವುದೇ browser ಸಾಧನವಿರಲಿ, ಇಂದಿಗೆ ಲಭ್ಯವಿರುವ ಪ್ರಸ್ತುತ ಆವೃತ್ತಿ (latest version) ಗಳನ್ನು ಉಪಯೋಗಿಸುವುದು ಸಮಂಜಸ.

ಕೊನೆಯದಾಗಿ, ಒಂದು ವಿಚಾರವನ್ನು ನಾವು ಅಗತ್ಯವಾಗಿ ಗಮನಿಸಲೇಬೇಕು - ಅತ್ಯಂತ ಜಾಗರೂಕತೆಯಿಂದ ಆಯ್ಕೆ ಮಾಡಿಕೊಂಡ browser, ಕೆಲವೊಮ್ಮೆ ನಮ್ಮ ಯಂತ್ರದಲ್ಲಿ ಅನುಸ್ಥಾಪಿತಗೊಳ್ಳದೇ ಹೋಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಯಾವುದೇ ಒಂದು browser ಅನ್ನು ಅನುಸ್ಥಾಪಿಸಿಕೊಳ್ಳಲು ಅದಕ್ಕೆ ಪೂರಕವಾದ ಕಾರ್ಯನಿರ್ವಹಣಾ ತಂತ್ರಾಂಶವು (operating system) ನಮ್ಮ ವಿದ್ಯುನ್ಮಾನ ಸಾಧನ (electronic device) ದಲ್ಲಿ ಇರುವುದು ಅತ್ಯಾವಶ್ಯಕ. ಉದಾಹರಣೆಗೆ, Internet Explorer ಅನ್ನು ನಾವು Linux ತಂತ್ರಾಂಶವನ್ನು ಹೊಂದಿರುವ ಗಣಕಯಂತ್ರದಲ್ಲಿ ನೇರವಾಗಿ ಅನುಸ್ಥಾಪಿಸಲು ಸಾಧ್ಯವಾಗುವುದಿಲ್ಲ; ಹಾಗೆಯೇ, iPad ಸಾಧನವೊಂದರಲ್ಲಿ Safari browser ಹೊರೆತಾಗಿ ಇನ್ಯಾವುದನ್ನೋ ಉಪಯೋಗಿಸುವುದು ಪ್ರಸ್ತುತದಲ್ಲಿ ಕಷ್ಟಸಾಧ್ಯ. ಈ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡು, ನಿಮಗೆ ಸೂಕ್ತವೆನಿಸಿದ browser ಸಾಧನದ ಜಾಣ್ಮೆಯ ಆಯ್ಕೆ ನಿಮ್ಮದು..
(ಈ ಲೇಖನವನ್ನು ನುಡಿ ತಂತ್ರಾಂಶದ ASCII ಸ್ವರೂಪದಿಂದ UNICODE ಗೆ ಪರಿವರ್ತಿಸಲು ಹಳ್ಳಿಮನೆ ಅರವಿಂದ ಅವರ ASCII2UNICODE ತಂತ್ರಾಂಶ ಬಳಸಲಾಗಿದೆ)

Sunday, May 13, 2012

Web Browser : ಅಪಾಯದ ಹೊಸ್ತಿಲು?

ಬರವಣಿಗೆಯು ನನ್ನ ವೃತ್ತಿಯಲ್ಲ, ಹವ್ಯಾಸವಷ್ಟೇ! ಏಳನೇಯ ತರಗತಿಯಲ್ಲಿದ್ದಾಗೊಮ್ಮೆ ರಚಿಸದ 'ಕಥೆ'ಯೊಂದನ್ನು ಬಿಟ್ಟರೆ ನನ್ನ ಬರವಣಿಗೆಗಳೇನೇ ಇದ್ದರೂ ಅವು ಕೇವಲ ಈ ನನ್ನ ಬ್ಲಾಗ್ ಗೆ ಮಾತ್ರ ಸೀಮಿತವಾದಂಥವು. ಯಾವುದೊ ಪ್ರೇರಣೆಗೊಳಪಟ್ಟು ಈಗೊಮ್ಮೆ ಆಗೊಮ್ಮೆ ಲೇಖನಗಳನ್ನು ಕೆಲವು ದಿನಪತ್ರಿಕೆಗಳಿಗೆ ಕಳುಹಿಸಿದ್ದೂ ಉಂಟು; ಆದರೆ ಅವೆಲ್ಲವುಗಳೂ ಸಹ ಇತರೆ ಅನೇಕ ಬರೆಹಗಳ ಜೊತೆ 'ಕಸದ ಬುಟ್ಟಿ' ಸೇರಿಕೊಂಡದ್ದು ಈಗ ನೆನಪು ಮಾತ್ರ.

ಹೀಗಿರುವಾಗ, ಕರ್ನಾಟಕ ಪಶುವೈದ್ಯ ಸಂಘ, ಬೆಂಗಳೂರು ಇವರು ಹೊರತರುತ್ತಿರುವ 'ಪಶುವೈದ್ಯ ಧ್ವನಿ' ಎಂಬ ಚಾತುರ್ಮಾಸಿಕ ವೃತ್ತಿಪರ ಸುದ್ದಿ ಪತ್ರಿಕೆಯ ಸಂಪಾದಕ ಮಂಡಳಿಯ ಸದಸ್ಯನಾಗಿ ಕಾರ್ಯ ನಿರ್ವಹಿಸುವ ಅವಕಾಶ ಮಾಡಿಕೊಟ್ಟಾಗ ನನಗೆ ಆಶ್ಚರ್ಯದ ಜೊತೆಗೆ ಆಘಾತವೂ ಆಯಿತು. ತದನಂತರ ಪ್ರಕಟಗೊಂಡಿರುವ ಎರಡೂ ಸಂಚಿಕೆಗಳಿಗೆ ನನ್ನ ಕೊಡುಗೆ ಶೂನ್ಯ; ಇದರ ಸಂಪೂರ್ಣ ಅರಿವು ನನಗಿದ್ದು, ಮುಂಬರುವ ಸಂಚಿಕೆಗಳಿಗೆ ನನ್ನ ಶಕ್ತಿ-ಸಮಯಾನುಸಾರ ಕೆಲಸ ಮಾಡುವ ಆಶಯ ಹೊಂದಿದ್ದೇನೆ.

ಈ ಮಧ್ಯೆ, 'ಪಶುವೈದ್ಯ ಧ್ವನಿ' ಪತ್ರಿಕೆಯಲ್ಲಿ ಪಶುವೈದ್ಯ ವೃತ್ತಿಪರರಾದ ನಮ್ಮೆಲ್ಲರಿಗೆ ಉಪಯುಕ್ತವಾಗು ರೀತಿಯಲ್ಲಿ 'ಗಣಕ ಮತ್ತು ಅಂತರ್ಜಾಲ' ವಿಷಯವಾಗಿ ಮೂಲಭೂತ ಅಂಶಗಳನ್ನು ಚರ್ಚಿಸುವ ಉದ್ದೇಶದೊಂದಿಗೆ 'ಜಾಲ ಲೀಲ' ಎಂಬ ಅಂಕಣವನ್ನು ನಿಯತವಾಗಿ ಬರೆಯಲು ಅನುಮತಿ ನೀಡುವಂತೆ ನಾನು ಕೋರಿದಾಗ, ಒಮ್ಮತದಿಂದ ಒಪ್ಪಿಕೊಂಡ ಕರ್ನಾಟಕ ಪಶುವೈದ್ಯ ಸಂಘದ ಅಧ್ಯಕ್ಷರು ಹಾಗೂ ಪಶುವೈದ್ಯ ಧ್ವನಿ ಪತ್ರಿಕೆಯ ಪ್ರಧಾನ ಸಂಪಾದಕರಿಗೆ ನಾನು ಚಿರಋಣಿ.

ಗಣಕ ಮತ್ತು ಅಂತರ್ಜಾಲಗಳ ವಿಷಯವಾಗಿ ನನ್ನ ಜ್ಞಾನವು ಅತ್ಯಂತ ಸೀಮಿತವಾದುದು; ಆದರೂ, ನನಗೆ ತಿಳಿದಿರುವುದನ್ನು ನನ್ನ ಪಶುವೈದ್ಯ ವೃತ್ತಿಪರರೊಂದಿಗೆ ಹಂಚಿಕೊಳ್ಳುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಹೊರಟಿದ್ದೇನೆ. ಈ ನಿಟ್ಟಿನಲ್ಲಿ ಮೂಡಿಬಂದಿರುವ ಪ್ರಥಮ ಲೇಖನ 'Web Browser : ಅಪಾಯದ ಹೊಸ್ತಿಲು?' ಮುದ್ರಣ ಕಂಡಿದ್ದು, ಅದನ್ನು ನಿಮ್ಮೊಡನೆ ಹಂಚಿಕೊಂಡಿದ್ದೇನೆ. ನಿಮ್ಮ ಸಲಹೆ, ವ್ಯಾಖ್ಯಾನ, ಅನಿಸಿಕೆ ಹಾಗೂ ವಿಮರ್ಶೆಗಳಿಗೆ ನಾನು ಮುಕ್ತ.
ಲೇಖನ - 1

1995 ರ ಸುಮಾರಿನಲ್ಲಿ ಪ್ರಥಮವಾಗಿ ನಾನು ನನ್ನ personal computer ಗೆ dial-up ಸೇವೆಯ ಮೂಲಕ ಅಂತರ್ಜಾಲದ ಸಂಪರ್ಕ ಕಲ್ಪಿಸಿಕೊಂಡಾಗ ಎದೆಬಡಿತವು ನಿಮಿಷಕ್ಕೆ ನೂರು ದಾಟಿತ್ತು! ಅಂದಿನ ದಿನಗಳಲ್ಲಿ ಅಂತರ್ಜಾಲದೊಂದಿಗಿನ ಸಂಪರ್ಕ ಅತೀ ವಿರಳವಾದ್ದರಿಂದ, ಉದ್ವೇಗ-ಹೆದರಿಕೆ ಒಮ್ಮೆಲೇ ನನ್ನನ್ನು ಆವರಿಸಿಕೊಂಡಿದ್ದವು. ಇಂದು ಅನೇಕ ವಿನೂತನ ತಂತ್ರಜ್ಞಾನಗಳ ಆವಿಷ್ಕಾರವಾಗಿದ್ದು, ಅಂತರ್ಜಾಲದ ಒಡನಾಟವಿಲ್ಲದ ಗಣಕಯಂತ್ರವು ನಿಷ್ಪ್ರಯೋಜಕವೆಂಬ ಭಾವನೆ ಜನಸಾಮಾನ್ಯರಲ್ಲಲ್ಲದಿದ್ದರೂ ವೃತ್ತಿಪರರಲ್ಲಿ ಈಗಾಗಲೇ ಮೂಡಿದೆ.

ಇಂದಿಗೆ ಅಂತರ್ಜಾಲವು ಬೃಹದಾಕಾರವಾಗಿ ಬೆಳೆದು ನಿಂತಿದೆ. ಅಂತರ್ಜಾಲದ ಬೆಳವಣಿಗೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ ಹಲವಾರು ತಂತ್ರಜ್ಞಾನ-ತಂತ್ರಾಂಶಗಳಲ್ಲಿ web browsers ಗಳದ್ದೇ ಸಿಂಹಪಾಲು. Browser ಹೊರತುಪಡಿಸಿ ಬೇರೆ ಇನ್ನಾವ ಸಾಧನದ ಮೂಲಕವೂ ನಮ್ಮ ಅಂತರ್ಜಾಲದ ಬಳಕೆ ಕಷ್ಟಸಾಧ್ಯವೆನ್ನುವುದನ್ನು ಒಪ್ಪಿಕೊಳ್ಳಲೇಬೇಕು. ಪ್ರಪಂಚದ ಬೇರೆ ಯಾವುದೋ ಮೂಲೆಯಲ್ಲಿನ ಗಣಕಯಂತ್ರದಲ್ಲಿರುವ ಉಪಯುಕ್ತ ಮಾಹಿತಿಯನ್ನು ನಾವು ನಮ್ಮ ಯಂತ್ರದ ಪರದೆಯ ಮೇಲೆ ಕುಳಿತಲ್ಲಿಯೇ ಪಡೆದುಕೊಳ್ಳಲು ಅನುವುಮಾಡಿಕೊಡಲು ಹುಟ್ಟಿಕೊಂಡ ಈ browser ಎಂಬ ಸಾಧನವು ಇಂದು ಗಣಕಯಂತ್ರದಲ್ಲಿನ ನಮ್ಮ ಬಹುತೇಕ ಎಲ್ಲಾ ದೈನಂದಿನ ಕಾರ್ಯಗಳನ್ನು ಕ್ಷಣಮಾತ್ರದಲ್ಲಿಯೇ ಮಾಡಿಮುಗಿಸಿ, ಪ್ರತಿಯೊಬ್ಬರ ಬೇಡಿಕೆಗಳಿಗನುಸಾರವಾಗಿ ತನ್ನ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳುವ ಸಾಮರ್ಥ್ಯವನ್ನು ಪಡೆದುಕೊಂಡಿದೆ.

Browser ಗಳು ನಮಗೆ ಎಷ್ಟು ಉಪಕಾರಿಯಾಗಿವೆಯೋ, ಅಷ್ಟೇ ಅಪಾಯಕಾರಿಯಾಗಿ ಪರಿಣಮಿಸಬಹುದಾದ ಸಾಧ್ಯತೆಗಳಿರುವುದೂ ನಿಜವಷ್ಟೆ! ತಪ್ಪೆಸಗುವುದು ಹೇಗೆ ಮಾನವ ಸಹಜ ಗುಣವೋ ಹಾಗೆಯೇ ಮಾನವ ನಿರ್ಮಿತ browser ಗಳು ದೋಷಗಳನ್ನು ಹೊಂದಿರುವುದೂ ಸಹ ಅಷ್ಟೇ ಸಹಜ. ಇಂತಹ ಸೂಕ್ಷ್ಮ ತಾಂತ್ರಿಕ ದೋಷಗಳು ನಾವು ಊಹಿಸಿಕೊಳ್ಳಲಾಗದಂತಹ ತೀವ್ರತರ ಅಪಾಯಗಳಿಗೆ ನಮ್ಮನ್ನು ನಮ್ಮ ಅರಿವಿಗೆ ಬಾರದಂತೆಯೇ ಸಿಲುಕಿಸಿದರೆ ಆಶ್ಚರ್ಯವೇನಿಲ್ಲ! ಇದ್ದಕ್ಕಿದ್ದ ಹಾಗೆಯೇ Net Banking ಸೌಲಭ್ಯವಿರುವ ನಮ್ಮ ಉಳಿತಾಯ ಖಾತೆಯಲ್ಲಿನ ಹಣವು ಇಲ್ಲವಾಗುವುದು, Credit Card ತಂತಾನೇ ಅಂತರ್ಜಾಲ ತಾಣವೊಂದರಲ್ಲಿ ವ್ಯವಹರಿಸಿಕೊಳ್ಳುವುದು, ಯಾವುದೋ ಜಾಲತಾಣದ ಖಾತೆಗೆ ಪ್ರವೇಶಿಸಲು ಬಳಸುವ password ಬದಲಾಗಿಹೋಗುವುದು, ನಮ್ಮ ಗಣಕಯಂತ್ರದಲ್ಲಿ ಶೇಖರಿಸಿದ್ದ ಕಡತದಲ್ಲಿನ ಗುಪ್ತ ಮಾಹಿತಿಯ ಸೋರಿಕೆಯಾಗುವುದು, ನಿನ್ನೆಯವರೆಗೂ ಚಂದವಾಗಿ ಕಾರ್ಯನಿರ್ವಹಿಸುತ್ತಿದ್ದ computer ಇಂದು ದಿಢೀರ್ ಸ್ತಬ್ಧವಾಗುವುದು ಹಾಗೂ ಇನ್ನೂ ಇಂತಹ ಅನೇಕ ಚಮತ್ಕಾರಗಳು ನಡೆದುಹೋಗಲು browser ಗಳು ಕಾರಣವಾಗುವ ಎಲ್ಲಾ ಸಾಧ್ಯತೆಗಳೂ ಇವೆ ಎಂಬುದು ವಾಸ್ತವ.

SQL Injection, Phishing, URL Redirection, Session Hijacking, Cross-Site Request Forgery, Malware/Spyware Attack, DNS Hijacking ಮುಂತಾದ ಸುರಕ್ಷಾ-ಬೇಧ ಅನೈತಿಕ ಚಟುವಟಿಕೆಗಳು ನಾವು ಪ್ರತಿನಿತ್ಯ ಬಳಸುವ browser ಗಳ ಮೂಲಕವೂ ನಡೆಯುತ್ತವೆ ಎನ್ನುವುದರ ಅರಿವು ನಮಗಿರಬೇಕಾಗುತ್ತದೆ. ಈ ರೀತಿಯ ಬಹುತೇಕ ಅನಾಹುತಗಳು browser ಗಳಲ್ಲಿ ಇರಬಹುದಾದ ಸೂಕ್ಷ್ಮ ಅಭಿವೃದ್ಧಿ ದೋಷಗಳಿಂದ ಮಾತ್ರವಲ್ಲದೇ, ಬಳಕೆದಾರರಾದ ನಮ್ಮ ನಿರ್ಲಕ್ಷ್ಯ ಅಥವಾ ಉದಾಸೀನತೆಯಿಂದಲೂ ಸಹ ಸಂಭವಿಸುತ್ತವೆಂಬುದನ್ನು ಅಲ್ಲಗಳೆಯುವಂತಿಲ್ಲ.

ಅಂತರ್ಜಾಲವೆಂಬ ಮಹಾಸಾಗರದ ಹೆಬ್ಬಾಗಿಲಿಗೆ ಹೊಸ್ತಿಲಿನಂತಿರುವ Internet Explorer, Mozilla Firefox, Opera, Google Chrome ಮುಂತಾದ Web Browser ಗಳ ಆಯ್ಕೆ, ಬಳಕೆ ಮತ್ತು ನಿರ್ವಹಣೆಯಲ್ಲಿ ನಾವು ಎಡವಿದರೆ ಅಪಾಯ ತಪ್ಪಿದ್ದಲ್ಲ. ಹಾಗಾದರೆ ಉತ್ತಮ ಹಾಗೂ ಸುರಕ್ಷಿತ browser ನ ಆಯ್ಕೆ ಹೇಗೆ? ಸುರಕ್ಷತೆಯ ದೃಷ್ಟಿಯಿಂದ browser ನ ಬಳಕೆಗೆ ಎಲ್ಲೆ ಯಾವುದು? Browser ಗಳ ಬಳಕೆಯಲ್ಲಿ ನಾವು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳೇನು? Browser ಗಳ ಮೂಲಕ ನಡೆದುಹೋಗಬಹುದಾದ ಅಚಾತುರ್ಯಗಳನ್ನು ತಡೆಗಟ್ಟುವ ಮಾರ್ಗೋಪಾಯಗಳೇನು? ಇಂಥಹ ಹಲವಾರು ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳೋಣ, ಮುಂಬರುವ ಸಂಚಿಕೆಗಳಲ್ಲಿ. . .
(ಈ ಲೇಖನವನ್ನು ನುಡಿ ತಂತ್ರಾಂಶದ ASCII ಸ್ವರೂಪದಿಂದ UNICODE ಗೆ ಪರಿವರ್ತಿಸಲು ಹಳ್ಳಿಮನೆ ಅರವಿಂದ ಅವರ ASCII2UNICODE ತಂತ್ರಾಂಶ ಬಳಸಲಾಗಿದ್ದು, ಇಂಥಹ ಒಂದು ಉಪಯುಕ್ತ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದಕ್ಕಾಗಿ ಆತ್ಮೀಯ ಗೆಳೆಯ ಅರವಿಂದ ಅವರಿಗೆ ನನ್ನ ತುಂಬುಹೃದಯದ ಅಭಿನಂದನೆಗಳು)

ಮುಂದಿನ ಲೇಖನ ಇಲ್ಲಿದೆ: Web Browser : ಜಾಣ್ಮೆಯ ಆಯ್ಕೆ

Friday, March 30, 2012

Making of ಕಹಳೆ

www.kahale.gen.in
ಬಹುತೇಕ ಪ್ರತಿಯೊಬ್ಬ ಮಾನವರಲ್ಲಿಯೂ ಸಹ ತಮ್ಮ ಭಾಷೆ, ನೆಲ ಹಾಗೂ ಸಂಸ್ಕೃತಿಯೆಡೆಗೆ ವಿಶೇಷವಾದ ಒಲವು ಇರುವುದು ಸಹಜವಷ್ಟೆ. ಕೆಲವರಲ್ಲಿ ಇದು ಬಹಿರಂಗವಾಗಿ ಅಭಿವ್ಯಕ್ತಗೊಂಡರೆ, ಉಳಿದವರಲ್ಲಿ ಅಂತರಾಳದ ಒಳಗೆಲ್ಲೋ ಸುಪ್ತವಾಗಿರುವ ಸಾಧ್ಯತೆಗಳಿರುತ್ತವೆ. ವ್ಯಕ್ತ-ಅವ್ಯಕ್ತತೆಯ ಹಿಂದಿರುವ ಕಾರಣಗಳು ಏನೇ ಆದರೂ, ತನ್ನೊಳಗಿರುವ ನಾಡು-ನುಡಿಯ ಬಗೆಗಿನ ಅಭಿಮಾನ-ಗೌರವಗಳನ್ನೊಳಗೊಂಡ ಭಾವನೆಯು ಮಾತ್ರವೇ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ.

ವೈಯಕ್ತಿಕವಾಗಿ ಬುದ್ಧಿ ತಿಳಿದ ಮಟ್ಟಿಗೆ ಹೇಳುವುದಾದರೆ, ಮೊದಲಿನಿಂದಲೂ ನನ್ನ ಮಾತೃಭಾಷೆ ಕನ್ನಡದ ಕಟ್ಟಾಭಿಮಾನಿ ನಾನಲ್ಲವಾದರೂ, ಕಾಲ ಕಳೆದಂತೆಲ್ಲಾ ನನ್ನಲ್ಲಿನ ಕನ್ನಡ ಹಾಗೂ ಕರ್ನಾಟಕದೆಡೆಗಿನ ಅಗೋಚರ ಸೆಳವು ಆಧಿಕ್ಯವಾದುದರ ಅರಿವಾಗತೊಡಗಿತು. ಇತ್ತೀಚೆಗೆ, ಆಗಸ್ಟ್ 2011 ರಲ್ಲಿ ಸಂಚಯ ತಂಡದವರು ಹಮ್ಮಿಕೊಂಡಿದ್ದ 'ಅರಿವಿನ ಅಲೆಗಳು' ಕಾರ್ಯಕ್ರಮವು ಇದಕ್ಕೆ ಪೂರಕ ಪ್ರಭಾವವನ್ನುಂಟುಮಾಡಿ, ನನ್ನೊಳಗಿನ ಕನ್ನಡಿಗನನ್ನು ಜಾಗೃತಗೊಳಿಸಿತ್ತು. ಇದರ ಪರಿಣಾಮವಾಗಿ ಮುಂಬರುವ 2011 ರ ಕನ್ನಡ ರಾಜ್ಯೋತ್ಸವವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿಯೇ ತೀರಬೇಕೆಂಬ ಹಂಬಲವು ನನ್ನಲ್ಲಿ ಅಗಾಧವಾಯಿತು.

ಮೂಲಭೂತವಾಗಿ ನನ್ನಲ್ಲಿರುವ ಸೃಜನಶೀಲತೆಯ ಕೊರತೆಯಿಂದಾಗಿ, ಅನ್ಯಮಾರ್ಗ ತೋರದೆ ಅರಿವಿನ ಅಲೆಗಳು ಬಳಗದವರಂತೆಯೇ 'ಅರಿವಿನ ಅಲೆಗಳು' ಮಾದರಿಯಲ್ಲಿ ಒಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದೆಂದು ನಾನೇ ನಿರ್ಧರಿಸಿಕೊಂಡೆ. ಇಲ್ಲಿಯವರೆಗೂ ನನ್ನೊಳಗೆಯೇ ಹರಿದಾಡುತ್ತಿದ್ದ ಈ ವಿಚಾರಧಾರೆಯನ್ನು ಕೆಲವು ಸ್ನೇಹಿತರೊಂದಿಗೆ ಹಂಚಿಕೊಳ್ಳಲು, ಆತ್ಮೀಯ ಗೆಳೆಯನಾದ ಗುರುರಾಜ ತೋರಿದ ಆಸಕ್ತಿಯು ನನ್ನಲ್ಲಿ ಹೊಸ ಚೈತನ್ಯ ತುಂಬಿ, ಭರವಸೆಯ ಬೆಳಕನ್ನು ಮೂಡಿಸಿತು. ಕನ್ನಡ ರಾಜ್ಯೋತ್ಸವಾಚರಣೆಗೆ ಪಣತೊಟ್ಟ ನಾನು ಎಂದಿಗೂ ಒಂಟಿಯಾಗಲಾರೆನೆಂಬ ನಂಬಿಕೆಯನ್ನು ಹುಸಿಯಾಗಗೊಡದ ಗೆಳೆಯನೊಡಗೂಡಿ ಇಬ್ಬರು ಸದಸ್ಯರ ತಂಡವೊಂದನ್ನು ರಚಿಸಿಕೊಂಡದ್ದು ಬಹುಶಃ ಯಶಸ್ಸಿನೆಡೆಗೆ ನಮ್ಮ ಮೊದಲ ಹೆಜ್ಜೆಯೆಂದೇ ನನ್ನ ಭಾವನೆ.

ಆಧುನಿಕತೆಯು ತಂತ್ರಜ್ಞಾನದ ನೆರವಿನೊಂದಿಗೆ ನಮ್ಮಗಳ ಬದುಕನ್ನು ದುಸ್ತರವಾಗಿಸಿ, ಮಾನವರ ನಡುವಿನ ಅವಿನಾಭಾವ ಸಂಬಂಧದ ಅಂತರವನ್ನು ಕಡಲಿನೋಪಾದಿಯಲ್ಲಿ ವಿಶಾಲವಾಗಿಸಿರುವುದರಿಂದ ತಂಡದ ಸದಸ್ಯರುಗಳಾದ ನಮ್ಮಿಬ್ಬರ ಸಂವಾದ-ಚರ್ಚೆಗಳು ಕೇವಲ ಮಿಂಚಂಚೆ ಹಾಗೂ ಕಿರುಸಂದೇಶಗಳಿಗೆ ಸೀಮಿತಗೊಂಡಿತ್ತು. ಅಂತರ್ಜಾಲ ತಾಣವೊಂದನ್ನು ಸೃಷ್ಟಿಸಿ, ನವಂಬರ್ 2011 ರ ಮಾಹೆಯ ಪ್ರತಿಯೊಂದು ದಿನವೂ ವಿವಿಧ ಲೇಖಕರಿಂದ ಕನ್ನಡ ಭಾಷೆಯಲ್ಲಿ ರಚಿತಗೊಂಡ ಬರೆಹಗಳನ್ನು ಆ ತಾಣದಲ್ಲಿ ಬಿತ್ತರಿಸುವ ವಿಚಾರವನ್ನು ನಾನು ಹೇಳಿಕೊಂಡಾಗ, ಮರುಮಾತಾಡದೇ 'ಸೈ' ಎಂದು ಸಮ್ಮತಿಸಿದ ಗುರುರಾಜರ ಆತ್ಮಸ್ಠೈರ್ಯವನ್ನು ನಾನು ಪ್ರಾಮಾಣಿಕವಾಗಿ ಮೆಚ್ಚಿಕೊಳ್ಳದೆ ಇರಲಾಗಲಿಲ್ಲ.

ಸರಿಸುಮಾರು 30 ವಿವಿಧ ಲೇಖಕರಿಂದ ರಚಿತಗೊಂಡ ಕನ್ನಡದ ವೈವಿಧ್ಯ-ವಿಶೇಷ ಲೇಖನಗಳನ್ನು ಸಂಗ್ರಹಿಸುವುದು ನಮಗೆ ಕಬ್ಬಿಣದ ಕಡಲೆಯಾಗುವ ಎಲ್ಲಾ ಸಾಧ್ಯತೆಗಳನ್ನು ಮನಗಂಡಿದ್ದ ನನಗೆ '30 ಲೇಖನಗಳು ಏನೂ ಕಷ್ಟ ಆಗಲ್ಲ ಬಿಡಿ ಪ್ರಾಶಾಂತ್' ಎಂಬ ಗುರುರಾಜರ ಸರಳ ನುಡಿಗಳು ಮರಳುಗಾಡಿನಲ್ಲಿ ಓಯಸಿಸ್ ಕಂಡ ಅನುಭವ ತಂದುಕೊಟ್ಟವು. ಆದರೂ, ಮುಂದಿನ ಹಲವಾರು ದಿನಗಳು 'ಕನಿಷ್ಟ 30 ಲೇಖನಗಳು ಸಂಗ್ರಹವಾಗದಿದ್ದರೆ ಮಾಡುವುದಾದರೂ ಏನು? ಹೀಗಾಗಿಹೋದರೆ ನಮ್ಮ ಕಾರ್ಯಕ್ರಮದಲ್ಲಿ ಏರುಪೇರುಗಳಾಗಿ, ಕನ್ನಡ ರಾಜ್ಯೋತ್ಸವವನ್ನು ಹೆಮ್ಮೆಯಿಂದ ಆಚರಿಸಲು ಮುಂದಾಗಿರುವ ನಾವು ತಲೆತಗ್ಗಿಸುವಂತಾಗಬಹುದೇ? ಈ ರೀತಿಯಿಂದಾಗಬಹುದಾದ ಸೋಲಿನಿಂದ ಕನ್ನಡ ನಾಡು-ನುಡಿಗೆ ನಾವೇ ಅವಮಾನ ಮಾಡಿದಂತಾಗುವುದೇ?' ಎಂಬಿತ್ಯಾದಿ ಅನೇಕ ಪ್ರಶ್ನೆಗಳ ಉತ್ತರಕ್ಕೆ ನಾನು ಜಿಜ್ಞಾಸುವಾದೆ.

(ಮುಂದುವರೆಯುವುದು..)

Wednesday, January 19, 2011

ಪ್ರಾರ್ಥನೆ - ಭಾಗ 2

ಭಾಗ-1 ರ ಸಂಚಿಕೆಯಿಂದ ಮುಂದುವರೆದಿದೆ..
ತಾಯೆ ಶಾರದೆ ಲೋಕ ಪೂಜಿತೆ,
ಜ್ಞಾನದಾತೆ ನಮೋಸ್ತುತೆ....
ಪ್ರೇಮದಿಂದಲಿ ಸಲಹು ಮಾತೆ,
ನೀಡು ಸನ್ಮತಿ ಸೌಖ್ಯ ದಾತೆ....

ಡಾ. ಪಿ. ಬಿ. ಶ್ರೀನಿವಾಸ್ ರವರ ಸಿರಿಕಂಠದಲ್ಲಿ ಮೂಡಿಬಂದಿರುವ ಬೆಟ್ಟದ ಹೂವು ಚಿತ್ರದ ಈ ಹಾಡು, ಕಣ್ಮುಚ್ಚಿ ಕುಳಿತು ಒಮ್ಮೆ ಕೇಳಿದರೆ, ನನ್ನನ್ನು ಬೇರೆಯದೇ ಒಂದು ಲೋಕಕ್ಕೆ ಕರೆದೊಯ್ಯುತ್ತದೆ. ಶ್ರದ್ಧೆ, ಭಕ್ತಿ, ಭಾವ, ನಯ, ವಿನಯ, ವಿಧೇಯತೆ ಮತ್ತು ಶಿಸ್ತುಗಳನ್ನೊಳಗೊಂಡ ಸಾಹಿತ್ಯವು ಸಂಯಮವೆನಿಸುವ ಸಂಗೀತಸಾಗರದಲ್ಲಿ ನನ್ನನ್ನು ಅತ್ಯಂತ ದೀನನನ್ನಾಗಿಸುತ್ತದೆ. ಸಮಯ ಸಿಕ್ಕಾಗಲೆಲ್ಲಾ ಈ ಹಾಡನ್ನು ಆಲಿಸಿಕೊಂಡರೆ, ಹೊಸದೊಂದು ಚೈತನ್ಯವು ನನ್ನನ್ನಾವರಿಸಿ - ಆತ್ಮಶುದ್ಧಿಯ ಆನಂದಾನುಭವವಾಗುತ್ತದೆ. ಅಗೋಚರ ದಿವ್ಯಶಕ್ತಿಯೊಂದು ಈ ಹಾಡಿನಲ್ಲಿರುವಂತೆ ಭಾಸವಾಗುತ್ತದೆ ನನಗೆ.

ಹಾಡಿನ ಚಿತ್ರಣವು ಅತ್ಯಂತ ಪ್ರಭಾವಶಾಲಿಯಾಗಿದ್ದು, ನನ್ನ ಬಾಲ್ಯದಲ್ಲಿ ಕಳೆದ ಶಾಲಾದಿನಗಳನ್ನು ನೆನಪಿಗೆ ತರುತ್ತದೆ. ಪ್ರತಿಯೊಬ್ಬರ ಜೀವನದಲ್ಲಿಯೂ ಶಾಲಾದಿನಗಳು ಸುವರ್ಣಾಕ್ಷರಗಳಲ್ಲಿ ಬರೆದಿಡುವಷ್ಟು ಅದ್ಭುತವಾಗಿರುತ್ತವೆ ಎಂದರೆ ಅತಿಶಯೋಕ್ತಿಯಾಗಲಾರದೆಂದು ನನ್ನ ಭಾವನೆ. ಆ ದಿನಗಳನ್ನು ಮೆಲುಕು ಹಾಕುವುದರಲ್ಲಿ ಅದೇನೋ ಸಂಭ್ರಮ!

Prayer

ಬಾಲ್ಯದಲ್ಲಿ ನಾವು ಗುರುಗಳಿಂದ ಕಲಿತ ಪ್ರತಿಯೊಂದು ಪಾಠವೂ ಸಹ ಇಂದಿನ ನಮ್ಮ ಜೀವನಕ್ಕೆ ಭದ್ರ ಬುನಾದಿಯಾಗಿದೆ ಎಂಬ ಮಾತನ್ನು ಯಾರೂ ಅಲ್ಲಗಳೆಯುವಂತಿಲ್ಲ. ಪ್ರತಿಯೊಬ್ಬರ ಮೊದಲ ಪಾಠಶಾಲೆಯಾದ ಮನೆಯನ್ನು ಹೊರೆತುಪಡಿಸಿ ಉಳಿದ ಬಹಳಷ್ಟು ಜ್ಞಾನಾರ್ಜನೆಯು ಶಾಲೆಯಿಂದಲೇ ಆಗುವಂಥದ್ದು. ತಿಂಗಳಿಗೊಂದು ಬಾರಿ ಕಲಿಸಿದ ಕಸೂತಿ, ವಾರಕ್ಕೆ ಮೂರು ಬಾರಿ ಕಲಿಸಿದ ಸಮಾಜ ಶಾಸ್ತ್ರ, ಎರಡು ದಿನಕ್ಕೊಮ್ಮೆ ಕಲಿಸಿದ ಎಷ್ಟೋ ವಿಜ್ಞಾನದ ವಿಷಯಗಳನ್ನು ನಾವು ಇಂದಿಗೂ ಮರೆತಿಲ್ಲ. ಆದರೆ, ಪ್ರತಿದಿನವೂ ತಪ್ಪದೇ ನಮಗೆ ಶಾಲೆಯಲ್ಲಿ ಕಲಿಸಿದ 'ಪ್ರಾರ್ಥನೆ'ಯನ್ನು ಮಾತ್ರ ನಾವು ನಂತರದ ದಿನಗಳಲ್ಲಿ ಜೀವನಕ್ಕೆ ಅಳವಡಿಸಿಕೊಳ್ಳದೇ ಹೋಗುವುದು ವಿಪರ್ಯಾಸವೇನೋ?

ಇಂದಿಗೂ ಶಾಲೆಗಳಲ್ಲಿ, ನಿತ್ಯ ಪ್ರಾರ್ಥನೆಯ ಹೊರೆತು ದಿನದ ಶುಭಾರಂಭಕ್ಕೆ ಅನ್ಯ ಮಾರ್ಗವಿಲ್ಲ. ವೈಯಕ್ತಿಕವಾಗಿ ಹೇಳುವುದಾದರೆ, ಬುಧ್ಧಿ ತಿಳಿದ ನಂತರವೂ ಸಹ ನಾನು ಅನೇಕ ಬಾರಿ ಶಾಲೆಯಲ್ಲಿನ ಬೆಳಗಿನ ಪ್ರಾರ್ಥನೆಗೆ ಉದ್ದೇಶಪೂರ್ವಕವಾಗಿ ಗೈರುಹಾಜರಾಗುತ್ತಿದ್ದುದು ಇಂದಿಗೂ ನೆನಪಿದೆ. ಬೆಳಗಿನ ಪ್ರಾರ್ಥನೆಯೆಂದರೆ ಅದೊಂದು ರೀತಿಯ 'ಶಿಕ್ಷೆ'ಯೇನೋ ಎನ್ನುವಂತಹ ಆಲೋಚನೆ; ಪ್ರಾರ್ಥನೆಯನ್ನು ತಪ್ಪಿಸಿ ನೇರವಾಗಿ ತರಗತಿಗೆ ಹಾಜರಾಗುವುದರಲ್ಲೇ ಸಾರ್ಥಕತೆಯನ್ನು ಕಾಣುತ್ತಿದ್ದ ದಿನಗಳವು. ತರಗತಿಯಲ್ಲಿ ಕಲಿತ ಇನ್ನಿತರೆ ವಿಷಯಗಳಂತೆ ಪ್ರತಿನಿತ್ಯದ ಪ್ರಾರ್ಥನೆಯೂ ಸಹ ನಮ್ಮ ಗುರುಗಳು ಕಲಿಸುತ್ತಿದ್ದ ಜೀವನದ ಅತ್ಯಂತ 'ಪ್ರಮುಖ ಪಾಠ' ಎಂಬ ಅರಿವೆಯೇ ನನಗೆ ಇಲ್ಲದುದನ್ನು ಇಂದು ನೆನೆಸಿಕೊಂಡರೆ ನೋವಾಗುತ್ತದೆ.

ಶಾಲಾ ಸಮವಸ್ತ್ರವನ್ನು ಧರಿಸಿ, ಸಾಲಿನಲ್ಲಿ ಅಚ್ಚುಕಟ್ಟಾಗಿ ನಿಂತು, ವಿನಯದಿಂದ ಕೈಜೋಡಿಸಿ, ಗುರುಗಳು ಹೇಳಿಕೊಡುವ ನಿತ್ಯಶ್ಲೋಕಗಳನ್ನು ಪಠಿಸಿ, ಶ್ರಧ್ಧೆಯಿಂದ ಪ್ರಾರ್ಥನೆ ಸಲ್ಲಿಸುವ ಅದಮ್ಯ ಬಯಕೆಯಾಗಿದೆ ಈಗ. ಆದರೆ, ಅಂತಹ ಪೂಜ್ಯ ಅವಕಾಶವನ್ನು ಮತ್ತೆ ಪಡೆಯುವ ಭಾಗ್ಯ ನನ್ನದಲ್ಲವೆಂಬುದು ಕಹಿಸತ್ಯ. ಆದ್ದರಿಂದ, ಪ್ರತಿದಿನವೂ ಪ್ರತಃಕಾಲ ದೇಹಶುಧ್ಧಿಯಾದ ನಂತರ ಆತ್ಮಶುಧ್ಧಿಗಾಗಿ ಪ್ರಾರ್ಥನೆ ಸಲ್ಲಿಸುವ ಪರಿಪಾಠ ರೂಡಿಸಿಕೊಂಡಿದ್ದೇನೆ - ಇದು ಗುರುಗಳ ಸಮ್ಮುಖದಲ್ಲಿ ನಿತ್ಯವೂ ಪ್ರಾರ್ಥನೆ ಸಲ್ಲಿಸುವ ಅವಕಾಶದಿಂದ ವಂಚಿತನಾದೆನಲ್ಲ ಎಂಬ ಕೊರಗಿನಿಂದ ನನಗೆ ಅಲ್ಪ ಮಟ್ಟಿನ ಮುಕ್ತಿ ದೊರಕಿಸಿಕೊಟ್ಟಿದೆ.

ಮುಂದುವರೆಯುವುದು..

Thursday, December 30, 2010

ಪ್ರಾರ್ಥನೆ - ಭಾಗ 1

Prayer (Google Image)
'ಪ್ರಾರ್ಥನೆ' - ಹಾಗೆಂದರೇನು?!

ಮದುವೆಯಾದ ಕೂಡಲೇ 'ಪ್ರಾರ್ಥನೆ' ಮಾಡುವುದು ನನಗೆ ಅನಿವಾರ್ಯವಾಗಿದೆಯೇನೋ ಎಂದುಕೊಂಡಿರ? ಹಾಗೇನಿಲ್ಲ ಬಿಡಿ. ಬಹು ದಿನಗಳಿಂದ ಪ್ರಾರ್ಥನೆಯ ಬಗ್ಗೆ  ಬರೆಯಬೇಕೆಂಬ ಹಂಬಲವಿದ್ದಿತು. ಈ ಲೇಖನವನ್ನು ಬರೆಯಲು ಪ್ರಾರಂಭಿಸಿ ಇಂದಿಗೆ ಸುಮಾರು ಹತ್ತು ದಿನಗಳೇ ಕಳೆದುಹೋಗಿವೆ; ಆದರೆ ಬರವಣಿಗೆಯಿನ್ನೂ ಪೂರ್ಣವಾಗಿಲ್ಲ. ಇದುವೇ 'SOME-ಸಾರ' ಸಾಗರ!!

ವಿಷಯಕ್ಕೆ ಬರುತ್ತೇನೆ.

ಪ್ರಾರ್ಥನೆ - ಬೇರೆ ಬೇರೆ ಧರ್ಮಗ್ರಂಥಗಳಲ್ಲಿ ಬೇರೆ ಬೇರೆ ರೀತಿಯಾಗಿ ವ್ಯಾಖ್ಯಾನಗೊಂಡಿದೆ. ಆದರೆ, ಎಲ್ಲ ವ್ಯಾಖ್ಯಾನಗಳ ಸಾರ ಒಂದೇ - 'ಭಗವಂತನ ಜೊತೆಗಿನ ನಮ್ಮ ನೇರ ಸಂವಹನವೇ ಪ್ರಾರ್ಥನೆ'. ವಾಸ್ತವಕ್ಕೆ ತೀರ ಹತ್ತಿರವಾಗಿ ಹೇಳಬೇಕೆಂದರೆ, 'ಪ್ರಾರ್ಥನೆ, ಭಗವಂತನ ಮೊಬೈಲ್ ಸಂಖ್ಯೆ'! - ಇದು ನನ್ನ ಸ್ವಂತ ವಿಚಾರವಲ್ಲ, ಎಲ್ಲೋ ಓದಿದ್ದನ್ನು ನೆನಪಿಸಿಕೊಂಡು ಇಲ್ಲಿ ಪುನರಾವರ್ತಿಸುತ್ತಿದ್ದೇನೆ ಅಷ್ಟೇ.

ಮೇಲಿನ ಪ್ರಾರ್ಥನೆಯ ಅರ್ಥವನ್ನು ಗ್ರಹಿಸುತ್ತಿದ್ದಂತೆಯೇ, ನಾಸ್ತಿಕರಲ್ಲಿ ಉದ್ಭವಿಸಬಹುದಾದ ಮೊದಲ ಪ್ರಶ್ನೆ - 'ಎಲ್ಲಿದ್ದಾನೆ ಆ ಭಗವಂತ?'. ಈ ತರ್ಕವು ಪ್ರಸ್ತುತ ವಿಷಯಕ್ಕೆ ನೇರವಾಗಿ ಸಂಬಂಧಿಸದಿದ್ದರೂ ಸಹ, ಪ್ರಸಕ್ತ ಚೌಕಟ್ಟಿನಲ್ಲಿ 'ಭಗವಂತ' ಅಥವಾ 'ದೇವರು' ಎಂದರೆ 'ಮನುಷ್ಯರಾದ ನಮಗೆಲ್ಲರಿಗಿಂತ ಹಿರಿದಾದ ಒಂದು ಶಕ್ತಿ'; ಆ ಶಕ್ತಿಯನ್ನು 'ದೇವರು' ಎನ್ನದಿದ್ದರೂ, 'ಪ್ರಕೃತಿ' ಎಂದುಕೊಂಡರೂ ಅಡ್ಡಿಯಿಲ್ಲ. ಪ್ರಾರ್ಥನೆಯನ್ನು ಈಗ ಅರ್ಥೈಸಿ - 'ನಮಗಿಂತ ಪ್ರಬಲವಾದ ಶಕ್ತಿಯೊಡನೆಯ ನಮ್ಮ ನೇರ ಸಂವಾದ' ಎಂದುಕೊಳ್ಳೋಣ.

ಬಹಳಷ್ಟು ಮಂದಿ 'ಪ್ರಾರ್ಥನೆ' ಎಂದಕೂಡಲೇ, 'ಬೇಡುವುದು' ಎಂದುಕೊಳ್ಳುವುದುಂಟು; ಅದು ಸಮಂಜಸವಲ್ಲ. ಬೇಡುವುದೂ ಒಂದು ರೀತಿಯ ಪ್ರಾರ್ಥನೆ, ಹೌದು; ಆದರೆ, ಬೇಡುವುದೇ ಪ್ರಾರ್ಥನೆಯಲ್ಲ. ಪ್ರಾರ್ಥನೆಯು ಮೂಲಭೂತವಾಗಿ ಬರಿಯ 'ಸಂವಾದ' ಅಷ್ಟೇ. ಈ ಸಂವಾದವು ವ್ಯಕ್ತಿಯಿಂದ ವ್ಯಕ್ತಿಗೆ, ಅವರವರ ಭಾವ-ತರ್ಕ-ಇಚ್ಛೆ ಇವುಗಳಿಗನುಗುಣವಾಗಿ ಭಿನ್ನವಾಗಿರುತ್ತದೆ ಎನ್ನುವುದು ಸತ್ಯ. ಮನುಷ್ಯರಾಗಿ ಹುಟ್ಟಿದ ಮೇಲೆ, ಜೀವನದಲ್ಲಿ ಒಂದಲ್ಲ ಒಂದು ದಿನ, ಒಂದಲ್ಲ ಒಂದು ರೀತಿ, ಅರಿವಿದ್ದೋ, ಅರಿವಿಲ್ಲದೆಯೋ, ನಾವೆಲ್ಲರೂ 'ಪ್ರಾರ್ಥನೆ' ಮಾಡಿಯೇ ತಿರುತ್ತೇವೆ. ಆದರೆ, ನಮ್ಮ ಪ್ರಾರ್ಥನೆಯ ಸಾರ-ಉದ್ದೇಶ ವಿಭಿನ್ನವಷ್ಟೇ.

ಪ್ರಾರ್ಥನೆಯ ಸಾರಾಂಶವನ್ನು ಒಂದೇ ಲೇಖನದಲ್ಲಿ ಬರೆದಿಡುವಷ್ಟು ಪ್ರಬುದ್ಧತೆ ನನಗಿಲ್ಲವಾದ್ದರಿಂದ, ಸರಣಿಗಳಲ್ಲಿ ಬಿತ್ತರಿಸುವ ನಿರ್ಧಾರ ಸಮಂಜಸವೆನಿಸುತ್ತದೆ. ನಮ್ಮ ಬದುಕಿನ ಬಹು ಮುಖ್ಯ ಅಂಶಗಳಲ್ಲಿ ಪ್ರಾರ್ಥನೆಯೂ ಒಂದು ಎನ್ನುವುದು ನನ್ನ ಭಾವನೆ, ಆದ್ದರಿಂದ ಈ ಲೇಖನ ಸರಣಿಯು ಆತ್ಮಾವಲೋಕನದ ಒಂದು ಪ್ರಾಮಾಣಿಕ ಪ್ರಯತ್ನ ಎಂದರೂ ತಪ್ಪಾಗಲಾರದು.

ಭಾಗ-2 ರ ಸಂಚಿಕೆಯಲ್ಲಿ ಮುಂದುವರೆದಿದೆ..