Wednesday, January 19, 2011

ಪ್ರಾರ್ಥನೆ - ಭಾಗ 2

ಭಾಗ-1 ರ ಸಂಚಿಕೆಯಿಂದ ಮುಂದುವರೆದಿದೆ..
ತಾಯೆ ಶಾರದೆ ಲೋಕ ಪೂಜಿತೆ,
ಜ್ಞಾನದಾತೆ ನಮೋಸ್ತುತೆ....
ಪ್ರೇಮದಿಂದಲಿ ಸಲಹು ಮಾತೆ,
ನೀಡು ಸನ್ಮತಿ ಸೌಖ್ಯ ದಾತೆ....

ಡಾ. ಪಿ. ಬಿ. ಶ್ರೀನಿವಾಸ್ ರವರ ಸಿರಿಕಂಠದಲ್ಲಿ ಮೂಡಿಬಂದಿರುವ ಬೆಟ್ಟದ ಹೂವು ಚಿತ್ರದ ಈ ಹಾಡು, ಕಣ್ಮುಚ್ಚಿ ಕುಳಿತು ಒಮ್ಮೆ ಕೇಳಿದರೆ, ನನ್ನನ್ನು ಬೇರೆಯದೇ ಒಂದು ಲೋಕಕ್ಕೆ ಕರೆದೊಯ್ಯುತ್ತದೆ. ಶ್ರದ್ಧೆ, ಭಕ್ತಿ, ಭಾವ, ನಯ, ವಿನಯ, ವಿಧೇಯತೆ ಮತ್ತು ಶಿಸ್ತುಗಳನ್ನೊಳಗೊಂಡ ಸಾಹಿತ್ಯವು ಸಂಯಮವೆನಿಸುವ ಸಂಗೀತಸಾಗರದಲ್ಲಿ ನನ್ನನ್ನು ಅತ್ಯಂತ ದೀನನನ್ನಾಗಿಸುತ್ತದೆ. ಸಮಯ ಸಿಕ್ಕಾಗಲೆಲ್ಲಾ ಈ ಹಾಡನ್ನು ಆಲಿಸಿಕೊಂಡರೆ, ಹೊಸದೊಂದು ಚೈತನ್ಯವು ನನ್ನನ್ನಾವರಿಸಿ - ಆತ್ಮಶುದ್ಧಿಯ ಆನಂದಾನುಭವವಾಗುತ್ತದೆ. ಅಗೋಚರ ದಿವ್ಯಶಕ್ತಿಯೊಂದು ಈ ಹಾಡಿನಲ್ಲಿರುವಂತೆ ಭಾಸವಾಗುತ್ತದೆ ನನಗೆ.

ಹಾಡಿನ ಚಿತ್ರಣವು ಅತ್ಯಂತ ಪ್ರಭಾವಶಾಲಿಯಾಗಿದ್ದು, ನನ್ನ ಬಾಲ್ಯದಲ್ಲಿ ಕಳೆದ ಶಾಲಾದಿನಗಳನ್ನು ನೆನಪಿಗೆ ತರುತ್ತದೆ. ಪ್ರತಿಯೊಬ್ಬರ ಜೀವನದಲ್ಲಿಯೂ ಶಾಲಾದಿನಗಳು ಸುವರ್ಣಾಕ್ಷರಗಳಲ್ಲಿ ಬರೆದಿಡುವಷ್ಟು ಅದ್ಭುತವಾಗಿರುತ್ತವೆ ಎಂದರೆ ಅತಿಶಯೋಕ್ತಿಯಾಗಲಾರದೆಂದು ನನ್ನ ಭಾವನೆ. ಆ ದಿನಗಳನ್ನು ಮೆಲುಕು ಹಾಕುವುದರಲ್ಲಿ ಅದೇನೋ ಸಂಭ್ರಮ!

Prayer

ಬಾಲ್ಯದಲ್ಲಿ ನಾವು ಗುರುಗಳಿಂದ ಕಲಿತ ಪ್ರತಿಯೊಂದು ಪಾಠವೂ ಸಹ ಇಂದಿನ ನಮ್ಮ ಜೀವನಕ್ಕೆ ಭದ್ರ ಬುನಾದಿಯಾಗಿದೆ ಎಂಬ ಮಾತನ್ನು ಯಾರೂ ಅಲ್ಲಗಳೆಯುವಂತಿಲ್ಲ. ಪ್ರತಿಯೊಬ್ಬರ ಮೊದಲ ಪಾಠಶಾಲೆಯಾದ ಮನೆಯನ್ನು ಹೊರೆತುಪಡಿಸಿ ಉಳಿದ ಬಹಳಷ್ಟು ಜ್ಞಾನಾರ್ಜನೆಯು ಶಾಲೆಯಿಂದಲೇ ಆಗುವಂಥದ್ದು. ತಿಂಗಳಿಗೊಂದು ಬಾರಿ ಕಲಿಸಿದ ಕಸೂತಿ, ವಾರಕ್ಕೆ ಮೂರು ಬಾರಿ ಕಲಿಸಿದ ಸಮಾಜ ಶಾಸ್ತ್ರ, ಎರಡು ದಿನಕ್ಕೊಮ್ಮೆ ಕಲಿಸಿದ ಎಷ್ಟೋ ವಿಜ್ಞಾನದ ವಿಷಯಗಳನ್ನು ನಾವು ಇಂದಿಗೂ ಮರೆತಿಲ್ಲ. ಆದರೆ, ಪ್ರತಿದಿನವೂ ತಪ್ಪದೇ ನಮಗೆ ಶಾಲೆಯಲ್ಲಿ ಕಲಿಸಿದ 'ಪ್ರಾರ್ಥನೆ'ಯನ್ನು ಮಾತ್ರ ನಾವು ನಂತರದ ದಿನಗಳಲ್ಲಿ ಜೀವನಕ್ಕೆ ಅಳವಡಿಸಿಕೊಳ್ಳದೇ ಹೋಗುವುದು ವಿಪರ್ಯಾಸವೇನೋ?

ಇಂದಿಗೂ ಶಾಲೆಗಳಲ್ಲಿ, ನಿತ್ಯ ಪ್ರಾರ್ಥನೆಯ ಹೊರೆತು ದಿನದ ಶುಭಾರಂಭಕ್ಕೆ ಅನ್ಯ ಮಾರ್ಗವಿಲ್ಲ. ವೈಯಕ್ತಿಕವಾಗಿ ಹೇಳುವುದಾದರೆ, ಬುಧ್ಧಿ ತಿಳಿದ ನಂತರವೂ ಸಹ ನಾನು ಅನೇಕ ಬಾರಿ ಶಾಲೆಯಲ್ಲಿನ ಬೆಳಗಿನ ಪ್ರಾರ್ಥನೆಗೆ ಉದ್ದೇಶಪೂರ್ವಕವಾಗಿ ಗೈರುಹಾಜರಾಗುತ್ತಿದ್ದುದು ಇಂದಿಗೂ ನೆನಪಿದೆ. ಬೆಳಗಿನ ಪ್ರಾರ್ಥನೆಯೆಂದರೆ ಅದೊಂದು ರೀತಿಯ 'ಶಿಕ್ಷೆ'ಯೇನೋ ಎನ್ನುವಂತಹ ಆಲೋಚನೆ; ಪ್ರಾರ್ಥನೆಯನ್ನು ತಪ್ಪಿಸಿ ನೇರವಾಗಿ ತರಗತಿಗೆ ಹಾಜರಾಗುವುದರಲ್ಲೇ ಸಾರ್ಥಕತೆಯನ್ನು ಕಾಣುತ್ತಿದ್ದ ದಿನಗಳವು. ತರಗತಿಯಲ್ಲಿ ಕಲಿತ ಇನ್ನಿತರೆ ವಿಷಯಗಳಂತೆ ಪ್ರತಿನಿತ್ಯದ ಪ್ರಾರ್ಥನೆಯೂ ಸಹ ನಮ್ಮ ಗುರುಗಳು ಕಲಿಸುತ್ತಿದ್ದ ಜೀವನದ ಅತ್ಯಂತ 'ಪ್ರಮುಖ ಪಾಠ' ಎಂಬ ಅರಿವೆಯೇ ನನಗೆ ಇಲ್ಲದುದನ್ನು ಇಂದು ನೆನೆಸಿಕೊಂಡರೆ ನೋವಾಗುತ್ತದೆ.

ಶಾಲಾ ಸಮವಸ್ತ್ರವನ್ನು ಧರಿಸಿ, ಸಾಲಿನಲ್ಲಿ ಅಚ್ಚುಕಟ್ಟಾಗಿ ನಿಂತು, ವಿನಯದಿಂದ ಕೈಜೋಡಿಸಿ, ಗುರುಗಳು ಹೇಳಿಕೊಡುವ ನಿತ್ಯಶ್ಲೋಕಗಳನ್ನು ಪಠಿಸಿ, ಶ್ರಧ್ಧೆಯಿಂದ ಪ್ರಾರ್ಥನೆ ಸಲ್ಲಿಸುವ ಅದಮ್ಯ ಬಯಕೆಯಾಗಿದೆ ಈಗ. ಆದರೆ, ಅಂತಹ ಪೂಜ್ಯ ಅವಕಾಶವನ್ನು ಮತ್ತೆ ಪಡೆಯುವ ಭಾಗ್ಯ ನನ್ನದಲ್ಲವೆಂಬುದು ಕಹಿಸತ್ಯ. ಆದ್ದರಿಂದ, ಪ್ರತಿದಿನವೂ ಪ್ರತಃಕಾಲ ದೇಹಶುಧ್ಧಿಯಾದ ನಂತರ ಆತ್ಮಶುಧ್ಧಿಗಾಗಿ ಪ್ರಾರ್ಥನೆ ಸಲ್ಲಿಸುವ ಪರಿಪಾಠ ರೂಡಿಸಿಕೊಂಡಿದ್ದೇನೆ - ಇದು ಗುರುಗಳ ಸಮ್ಮುಖದಲ್ಲಿ ನಿತ್ಯವೂ ಪ್ರಾರ್ಥನೆ ಸಲ್ಲಿಸುವ ಅವಕಾಶದಿಂದ ವಂಚಿತನಾದೆನಲ್ಲ ಎಂಬ ಕೊರಗಿನಿಂದ ನನಗೆ ಅಲ್ಪ ಮಟ್ಟಿನ ಮುಕ್ತಿ ದೊರಕಿಸಿಕೊಟ್ಟಿದೆ.

ಮುಂದುವರೆಯುವುದು..

No comments:

Post a Comment

ಖಂಡಿತಾ ನಿಮ್ಮ ಅನಿಸಿಕೆಗಳನ್ನು ತಿಳಿಸಿ. ಧನ್ಯವಾದಗಳು!
Please post your comments. Thank you!