Sunday, January 9, 2011

ಯುವರಾಣಿ!

Junior Thimmi
ಹಿಂದಿನ ಈ ಲೇಖನದಲ್ಲಿ ನಮ್ಮ ಕಛೇರಿಯ ಎಲ್ಲರ ಪ್ರೀತಿಗೆ ಪಾತ್ರವಾಗಿದ್ದ 'ತಿಮ್ಮಿ' ಎಂಬ ಶ್ವಾನದ ಬಗ್ಗೆ ಬರೆದಿದ್ದೆ. ಜೀವ ಹೋಗುವಂಥ ವಯಸ್ಸಾಗಲಿ, ಅನಾರೋಗ್ಯವಾಗಲಿ ಆಕೆಯದಾಗಿರಲಿಲ್ಲ. ಆದರೆ, ವಿಧಿಯ ಆಟ ಬಲ್ಲವರ್ಯಾರು? ತನ್ನ ನಾಲ್ಕು ಮುದ್ದು ಮರಿಗಳನ್ನು ನಾಗರಹಾವಿನಿಂದ ಕಾಪಾಡಲು ಹೋರಾಡಿ, ತನ್ನ ಪ್ರಾಣವನ್ನೇ ಬಿಟ್ಟಿದ್ದಳು ತಿಮ್ಮಿ. ತಾಯಿಯ ಪ್ರೀತಿ-ತ್ಯಾಗಕ್ಕೆ ಮತ್ತೊಂದು ಉದಾಹರಣೆ ಬೇಕೇ? ಮನುಷ್ಯರಾಗಲಿ - ಪ್ರಾಣಿಗಳಾಗಲಿ, ತಾಯಿಯ ಪ್ರೀತಿಯು ಒಂದೇ; ಎಳ್ಳಷ್ಟೂ ಕಳಂಕವಿಲ್ಲದ, ನಿಷ್ಕಲ್ಮಶ-ವಿಶಾಲ ಹೃದಯದ ತ್ಯಾಗ-ಪ್ರೀತಿ ತಾಯಿಯದು.

ಕಛೇರಿಯ ಆವರಣದಲ್ಲಿ 'ತಿಮ್ಮಿ' ಇಲ್ಲದ್ದನ್ನು ಎಂದೆಂದಿಗೂ ನಾನು ಊಹಿಸಿಕೊಳ್ಳಲಾರೆ ಎಂಬುದನ್ನು ಈ ಮೊದಲೇ ತಿಳಿಸಿದ್ದೇನೆ, ಅಂತಹ ಪ್ರೀತಿಭರಿತ ನಮ್ರತೆಯ ನಡವಳಿಕೆ ತಿಮ್ಮಿಯದ್ದು. ನನ್ನ ಮನಸ್ಸಿನ ನೋವು-ಕಳವಳ ದೇವರಿಗೆ ಮುಟ್ಟಿತೋ ಏನೋ? ಆ ನಾಲ್ಕು ಮರಿಗಳಲ್ಲಿ ಒಂದಕ್ಕೆ ನೋಡುನೋಡುತ್ತಿದ್ದಂತೆಯೇ ತಿಮ್ಮಿಯ ಯಥಾರೂಪವನ್ನು ದಯಪಾಲಿಸಿಬಿಟ್ಟ ಪರಮಾತ್ಮ. ಅದೆಷ್ಟು ಹೋಲಿಕೆ ಇದೆ ಎಂದರೆ, ನಮ್ಮ ಕಛೇರಿಯವರಲ್ಲದೆ ಹೊರಗಿನ ಜನರೂ ಕೂಡ ಈ ಮುದ್ದು ಮರಿಯನ್ನು ನೋಡಿದರೆ 'ತಿಮ್ಮಿ ಥರಾನೇ ಇದೆ..' ಎನ್ನುವಷ್ಟು!

ಈ ಮುದ್ದು ಮರಿಗೆ ನಾನು ಪ್ರೀತಿಯಿಂದ 'ತಿಮ್ಮಿ' ಎಂದೇ ಕರೆಯುತ್ತೇನೆ, ಇನ್ನಿತರರೆಲ್ಲರೂ ಹಾಗೆಯೇ ಕರೆಯುತ್ತಾರೆ. ತಿಮ್ಮಿಯದು ಅರ್ಥಾತ್ ಆಕೆಯ ತಾಯಿಯದ್ದೇ ಸ್ವಭಾವ; ಅದೇ ಬಣ್ಣ, ಅದೇ ಹೋಲಿಕೆ, ಅದೇ ಗುಣ, ಅದೇ ನಡತೆ, ಅದೇ ನಮ್ರತೆ, ಅದೇ ಪ್ರೀತಿ - ಕೆಲವೊಮ್ಮೆ ತನ್ನ ತಾಯಿಯೇ ಮತ್ತೆ ಹುಟ್ಟಿ ಬಂದಿದೆಯೇನೋ ಎನ್ನುವಷ್ಟರ ಮಟ್ಟಿಗೆ ತಿಮ್ಮಿ ತನ್ನ ತಾಯಿಯನ್ನು ಹೋಲುತ್ತಾಳೆ - ಬೆರಗುಗೊಳಿಸುವಂತಹ ಪ್ರಕೃತಿಯ ವೈಶಿಷ್ಟ್ಯ! ಕಛೇರಿಯ ನನ್ನ ಕೊಠಡಿಯ ಪ್ರಾಂಗಣವೇ ತಿಮ್ಮಿಯ ಸಧ್ಯದ ಮನೆ. ದಿನವಿಡೀ ಅಲ್ಲೇ ಮಲಗಿರುತ್ತಾಳೆ. ಹೊತ್ತಿಗೊಂದಿಷ್ಟು ನಮ್ಮ ನೌಕರರು ನೀಡುವ ಬ್ರೆಡ್, ಬಿಸ್ಕತ್, ಬನ್ ಇತ್ಯಾದಿಗಳನ್ನು ಇಷ್ಟಪಟ್ಟು ತಿನ್ನುತ್ತಾಳೆ. ನನ್ನ ಹಾಗೂ ಕೇಶು ಸರ್ ಊಟದ ಸಮಯಕ್ಕೆ ತಿಮ್ಮಿಯು ದಿನವೂ ಜೋಡಿ; ತಿಮ್ಮಿಯೊಡನೆ ಹಂಚಿಕೊಂಡು ಊಟಮಾಡುವುದರಲ್ಲಿ ಇರುವ ಖುಷಿಯೇ ಖುಷಿ.

ತಿಮ್ಮಿಯನ್ನು ಕಳೆದುಕೊಂಡು ಕೊರಗುತ್ತಿದ್ದ ನಮಗೆ ಈ ಮುದ್ದು ಮರಿ ನೆಮ್ಮದಿ-ಸಂತಸ-ಆನಂದ ತಂದಿದೆ. ತಿಮ್ಮಿ ತನ್ನ ಮರಿಗಳ ಸೌಖ್ಯಕ್ಕಾಗಿ ಜೀವತ್ಯಾಗ ಮಾಡಿ ತಾಯ್ತನದ ಹಿರಿಮೆ ಮೆರೆದಿದ್ದಾಳೆ. ನಾವೂ ಸಹ ತಿಮ್ಮಿಯ ಆಸೆಯನ್ನು ಪುರೈಸಲೆಂದು ಅತ್ಯಂತ ಪ್ರೀತಿ-ಕಾಳಜಿಯಿಂದ ಈ ಮುದ್ದು ಮರಿಯ ಆರೈಕೆ ಮಾಡುತ್ತಿದ್ದೇವೆ. ನಮ್ಮೆಲ್ಲರ ಪ್ರೀತಿಯಿಂದ ವಂಚಿತಳಾಗಲು ಬಯಸದ ತಿಮ್ಮಿಯು ತನ್ನ ಮಗಳ ರೂಪದಲ್ಲಿ ಮತ್ತೆ ನಮ್ಮೊಡನೆ ಸೇರಿಕೊಂಡಿದ್ದಾಳೆ; 'ಯುವರಾಣಿ'ಯಂತೆ!

2 comments:

  1. ಪ್ರಶಾಂತ್, ನಾನು ಲೋಕಿಕವಾಗಿ ಸುಮ್ಮನೆ ತಮಾಷೆಗಾಗಿ ಕೊಟ್ಟ ಸಲಹೆಯನ್ನು ನೀನು ಇಷ್ಟುಬೇಗ ಅದನ್ನು ಕಾರ್ಯರೂಪಕ್ಕೆ ತರುತ್ತೀಯ ಎಂದು ತಿಳಿದಿರಲಿಲ್ಲ !!.ನಿಜಕ್ಕೂ ಇದು ಒಂದು ಸ್ಮರಣೀಯವಾದ ಸಂಗತಿ ...ದೊಡ್ಡ ತಿಮ್ಮಿ ಯ ಚಿಕ್ಕವಯಸ್ಸಿನ ಫೋಟೋ ಏನಾದರು ಇದ್ದಿದ್ದರೆ ಈ ಎರಡು ಫೋಟೋಗಳನ್ನೂ ಒಟ್ಟಿಗೆ ಇಟ್ಟಿದ್ದರೆ ಗುರುತಿಸಲು ಕಷ್ಟವಾಗುತಿತ್ತೇನೋ ?...ಅಷ್ಟು ಇದು ಅವರ ಅಮ್ಮನ ಹೋಲಿಕೆಯನ್ನು ಹೊಂದಿದೆ .ಇದು ನಿಜಕ್ಕೂ genetics ನ ಒಂದು ಅತಿಶಯಶಕ್ತಿ,ಪವಾಡ ಎನ್ನಬಹುದು .ನೀನು ಹೇಳಿದಂತೆ ಅದು ಅವರ ಅಮ್ಮನ ಎಲ್ಲಾಗುಣಗಳನ್ನು ಹೊಂದಿದೆ ಎನ್ನುವುದರಲ್ಲಿ ಸಂಶಯವಿಲ್ಲ .ಇದನ್ನು ನಾನು ಇಷ್ಟುದಿನದ ಒಡನಾಟದಿಂದ ಮನಗೊಂಡಿದ್ದೇನೆ.ಇದು ನಿಜಕ್ಕೂ ಒಂದು ಸೃಷ್ಟಿಯ ವಿಸ್ಮಯ ಎಂದರೂ ತಪ್ಪಾಗಲಾರದು .ಹಾಗೆಯೇ ತಿಮ್ಮಿಯು ನಮ್ಮನ್ನು ಅಗಲಿದರೂ,ತನ್ನೆಲ್ಲಾ ಗುಣವಿಶೇಷಗಳನ್ನು ಹೊಂದಿದ ಪ್ರತಿರೂಪದ ಯುವರಾಣಿಯನ್ನು ಬಿಟ್ಟುಹೊಗಿರುವುದಕ್ಕೆ ತನ್ನ (ತಿಮ್ಮಿಯ) ಕೊರಗನ್ನು ಹೋಗಲಾಡಿಸಿದ್ದಕ್ಕೆ ಅದಕ್ಕೆ ಎಷ್ಟುಧನ್ಯವಾದಗಳನ್ನು ಹೇಳಿದರೂ ಸಾಲದು ..............ಇದು ನಮ್ಮ ಅವಿಬಾಜ್ಯ ಒಡನಾಡಿಯಗಿರುವುದರಿಂದ ಇದನ್ನು ಬಿಟ್ಟು ಮಧ್ಯಾನದ ಊಟ ಮಾಡಲು ಮನಸೇಬರುವುದಿಲ್ಲ.ಅದಕ್ಕಾಗಿ ನಾನು ನಿತ್ಯವೂ ಹೆಚ್ಚಾಗಿ ಊಟ ತರುತಿದ್ದೇನೆ .ಮುಂದೆ ಇದು ತಿಮ್ಮಿಯಂತೆಯೇ ಎಲ್ಲರ ಮೆಚ್ಚುಗೆ ಗಳಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ !!!.

    ReplyDelete
  2. ಸರ್, ಈ ವಿಷಯದ ಬಗ್ಗೆ ಬರೆಯಬೇಕು ಎಂಬ ತುಡಿತ ಬಹಳ ದಿನಗಳಿಂದ ನನ್ನಲ್ಲಿತ್ತು. ನೀವೂ ಸಹ ಅದನ್ನೇ ಹೇಳಿದ ಮೇಲೆ ಸುಮ್ಮನಿರಲು ಸಾಧ್ಯವೇ? ನೀವು ಹೇಳಿದ ಹಾಗೆ ನಮ್ಮೆಲ್ಲರ ದಿನನಿತ್ಯ ಜೀವನದ ಅವಿಭಾಜ್ಯ ಅಂಗವಾಗಿ ಹೋಗಿದ್ದಾಳೆ ತಿಮ್ಮಿ.
    ಯಾವ ಜನ್ಮದ ಮೈತ್ರಿ, ಈ ಜನ್ಮದಲಿ ಬಂದು ನಮ್ಮೆಲ್ಲರನು ಮಧ್ಯೆ ಬಂಧಿಸಿಹುದೋ ಕಾಣೆ.. :o)

    ReplyDelete

ಖಂಡಿತಾ ನಿಮ್ಮ ಅನಿಸಿಕೆಗಳನ್ನು ತಿಳಿಸಿ. ಧನ್ಯವಾದಗಳು!
Please post your comments. Thank you!