Wednesday, January 26, 2011

ಪ್ರಜಾಪ್ರಭುತ್ವ?!

ಕರ್ನಾಟಕದಲ್ಲಿ ಇತ್ತೀಚೆಗೆ ನಡೆಯುತ್ತಿರುವ ರಾಜಕೀಯ ವಿದ್ಯಾಮಾನಗಳು ಪ್ರಜಾಪ್ರಭುತ್ವದ ಬುಡಕ್ಕೆ ಆಘಾತಕಾರಿ ಪೆಟ್ಟು ನೀಡುವಂಥವು. ಪ್ರಜಾಪ್ರಭುತ್ವದ ಮೂಲ ಮಂತ್ರಗಳನ್ನು ಗಾಳಿಗೆ ತೂರಿ, ಸ್ವಾರ್ಥ ಅಭಿಲಾಷೆಗಳಿಗೆ - ಸ್ವಜನ ಕ್ಷೇಮಾಭಿವೃದ್ಧಿಗೆ ಸಾರ್ವಜನಿಕರ ಹಕ್ಕು-ಭಾದ್ಯತೆಗಳನ್ನು ಹೊಸಕಿಹಾಕಿ, ವೈಯಕ್ತಿಕ ಫಲಾನುಭವಕ್ಕೆ ಅಧಿಕಾರವನ್ನು ಅನೈತಿಕವಾಗಿ  ದುರುಪಯೋಗ ಮಾಡಿಕೊಂಡು, ಶುಭ್ರ ಶ್ವೇತ ವರ್ಣದ ರಾಜಕೀಯವನ್ನು ಕೊಳೆತ ರಾಡಿಯಾಗಿ ನಾರುವಂತೆ ಮಾಡಿರುವ ರಾಜಕಾರಣಿಗಳೆಂಬ ಗೋಮುಖ ವ್ಯಾಘ್ರಗಳಿಗೆ ಧಿಕ್ಕಾರವಿರಲಿ.

22 ಜನವರಿ, 2011 ರಂದು ನಡೆದ ಕರ್ನಾಟಕ ಬಂದ್, ನನಗೆ ಬುದ್ಧಿ ತಿಳಿದ ನಂತರ ನಡೆದ ಏಕೈಕ ಆಡಳಿತಾರೂಢ ಸರ್ಕಾರ ಪ್ರೇರಿತ-ಪೋಷಿತ-ಪ್ರಾಯೋಜಿತ ಬಂದ್. ತಂತಮ್ಮ ವೈಯಕ್ತಿಕ ಕಾರಣ-ಪ್ರತಿಷ್ಠೆಗಳಿಗಾಗಿ ಸಮಸ್ತ ಕರ್ನಾಟಕ ಜನತೆಯ ದೈನಂದಿನ ಜೀವನವನ್ನು ಬರಡಾಗಿಸಿದ ರಾಜಕೀಯ ಖಳನಾಯಕರು ಸರ್ಕಾರ ನಡೆಸುವ ನೈತಿಕ ಅರ್ಹತೆಯನ್ನು ಕಳೆದುಕೊಂಡರೂ ಸಹ ನಾಚಿಕೆಗೆಟ್ಟು, ಅತ್ಯಂತ ದುರಾಚಾರಗಳಿಂದ ಕೂಡಿದ ದುರಾಡಳಿತವನ್ನು ತ್ಯಜಿಸದೆ ಅಧಿಕಾರಶಾಹಿಗಳಾಗಿ ಮುಂದುವರೆಯುತ್ತಿರುವುದು ಅತ್ಯಂತ ಹೇಯ.

ರಾಜ್ಯದ ಸುಸಂಸ್ಕೃತ, ಸಜ್ಜನ ಕನ್ನಡಿಗರನ್ನು ನೆಪವಾಗಿಸಿ, ತಮ್ಮ ಪಕ್ಷದ ಕಾರ್ಯಕರ್ತರನ್ನು ಪ್ರಚೋದಿಸಿ, ಒತ್ತಾಯಪೂರ್ವಕ ಬಂದ್ ಗೆ 'ಸ್ವಯಂ-ಪ್ರೇರಿತ' ಎಂಬ ಹಣೆಪಟ್ಟಿ ಹಚ್ಚಿ, ಸಾರ್ವಜನಿಕ ಆಸ್ತಿಗಳಿಗೆ ಹಾನಿಯುಂಟು ಮಾಡಿರುವುದು ಆಡಳಿತ ಪಕ್ಷದ ಷಡ್ಯಂತ್ರವೆಂಬುದರಲ್ಲಿ ಸಂಶಯವಿಲ್ಲ. ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಬಂದ್ ನ ಹೆಸರಿನಲ್ಲಿ ನಡೆಸುತ್ತಿದ್ದ ದಾಂಧಲೆಗಳನ್ನು ಕಣ್ಣಾರೆ ಕಂಡ ಜನತೆಗೆ ಆಡಳಿತ ಪಕ್ಷದ ನಾಯಕರುಗಳು ನೀಡಿದ್ದು 'ಇದರಲ್ಲಿ ತಮ್ಮ ತಪ್ಪೇನೂ ಇಲ್ಲ, ಸಾರ್ವಜನಿಕರಿಗೆ ಆದ ನಷ್ಟಗಳಿಗೆಲ್ಲ ನೇರ ಹೊಣೆಗಾರರು ರಾಜ್ಯಪಾಲ' ಎಂಬ ಅಸಂಬಧ್ಧ ಹೇಳಿಕೆ. ಬಾಯಿಗೆ ಬಂದದ್ದನ್ನು ಹರಟಿದರೆ ಜನ ಒಪ್ಪುತ್ತಾರೆಂದು ನಂಬಿಕೊಂಡಿರುವ ಮೂರ್ಖ ರಾಜಕಾರಣಿಗಳಿಗಿಂತ ಕನ್ನಡಿಗರು ಬುಧ್ಧಿವಂತರು ಎಂಬುದು ವಾಸ್ತವ.

ಬಂದ್ ನ ನೆಪದಲ್ಲಿ ಸರ್ಕಾರಿ ವಾಹನಗಳಿಗೆ ಬೆಂಕಿ ಹಚ್ಚುವುದು, ಸಾರ್ವಜನಿಕ ಕಟ್ಟಡಗಳಿಗೆ ಹಾನಿ ಮಾಡುವುದು, ಹೊಟ್ಟೆಪಾಡಿಗಾಗಿ ಪ್ರತಿಯೊಂದಕ್ಕೆ 50 ಪೈಸೆಯಂತೆ ದಿನಪತ್ರಿಕೆಗಳನ್ನು ಮಾರಾಟ ಮಾಡುವ ರಸ್ತೆ ಬದಿಯ ವ್ಯಾಪಾರಿಗಳನ್ನು ಸುಲಿಗೆ ಮಾಡುವುದು, ಹೂಡಿದ ಬಂಡವಾಳದ ಸಂಪಾದನೆಯ ಆಶಯದಿಂದ ವ್ಯಾಪಾರ ಮಾಡುವವರ ಅಂಗಡಿಗಳನ್ನು ಧ್ವಂಸಮಾದುವುದು, ಗಗನಕ್ಕೇರಿರುವ ತರಕಾರಿ ಹಾಗೂ ಇನ್ನಿತರೆಗಳನ್ನು ಬೀದಿಗೆ ಸುರಿದು ನಾಶಮಾಡುವುದರಲ್ಲಿ ಸಾರ್ಥಕತೆ ಕಾಣುವ ರಾಜಕೀಯ ಪಕ್ಷಗಳದ್ದು 'ಹೇಯ-ವಿಕೃತ ರಾಜಕೀಯ'ವಲ್ಲದೆ ಮತ್ತಿನ್ನೇನು?

ಪ್ರಜೆಗಳೇ ಪ್ರಭುಗಳಾಗಬೇಕಿದ್ದ ಪ್ರಜಾಪ್ರಭುತ್ವದಲ್ಲಿ, ಜನತೆ ರಾಜಕಾರಣಿಗಳ ಬ್ರಷ್ಟಾಚಾರದ ಅಟ್ಟಹಾಸ ಹಾಗೂ ಕುತಂತ್ರಗಳಿಗೆ ಹರಕೆಯ ಕುರಿಗಳಾಗಿರುವುದು ಶೋಚನೀಯ ಸಂಗತಿ. ವಿವಿಧ ರಾಜಕೀಯ ಪಕ್ಷಗಳ ಒಳಜಗಳಗಳನ್ನು ಸಮಾಜೀಕರಣಗೊಳಿಸಿ, ಜನಸಾಮಾನ್ಯರ ಜೀವನದೊಂದಿಗೆ ಚೆಲ್ಲಾಟವಾಡುತ್ತಿರುವ ದುಷ್ಟ ರಾಜಕಾರಣಿಗಳು 62ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿರುವ ಭಾರತ ದೇಶದ ಪ್ರಜಾತಂತ್ರ ವ್ಯವಸ್ಥೆಗೆ ಅಂಟಿದ ಕಳಂಕ; ಇವರುಗಳನ್ನು ಬುಡಸಹಿತ ನಿರ್ಮೂಲನೆ ಮಾಡುವ ಹೊರೆತು ಪ್ರಜಾಪ್ರಭುತ್ವದ ಮರುಸ್ಥಾಪನೆಗೆ ಅನ್ಯ ಮಾರ್ಗವಿಲ್ಲ.

2 comments:

  1. @Prashanth

    Very nice image : )
    Did you do that on your own? Photoshop?

    ReplyDelete
  2. Yes Deepa. Its my own creation and yes - done using Photoshop. Good guess :o)

    ReplyDelete

ಖಂಡಿತಾ ನಿಮ್ಮ ಅನಿಸಿಕೆಗಳನ್ನು ತಿಳಿಸಿ. ಧನ್ಯವಾದಗಳು!
Please post your comments. Thank you!