Monday, May 27, 2013

ಪಶುವೈದ್ಯರಿಗೆ ಪಶುವೈದ್ಯರೇ ಶತ್ರುಗಳು..

ವೃತ್ತಿಯಲ್ಲಿ ಪಶುವೈದ್ಯನಾಗಿ, ಇಂತಹ ಶೀರ್ಷಿಕೆಯಡಿ ವೃತ್ತಿಪರ ವಿಚಾರವಾಗಿ ಚಿಂತಿಸಿ ಬರೆಯುವ ಅನಿವಾರ್ಯತೆ ಬಂದೊದಗಿರುವುದು ಬಹುಶಃ ದೌರ್ಭಾಗ್ಯವೇ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. "ಹೆಣ್ಣಿಗೆ ಹೆಣ್ಣೇ ಶತ್ರು" ಎನ್ನುವ ನಾಣ್ನುಡಿಯು ಕರ್ನಾಟಕ ರಾಜ್ಯದಲ್ಲಿನ "ಯುವ" ಪಶುವೈದ್ಯರಿಗೆ ಅಕ್ಷರಶಃ ಅನ್ವಯಿಸುವಂತಹ "ಸನ್ನಿವೇಶವು ಇಂದು ಸೃಷ್ಟಿಯಾಗಿದೆ" ಎನ್ನುವುದಕ್ಕಿಂತ "ಸನ್ನಿವೇಶವನ್ನು ಸೃಷ್ಟಿ ಮಾಡಲಾಗಿದೆ" ಎಂದೆನ್ನಬಹುದೇನೋ?? ತಿಳಿಯದು.

ಕಳೆದ ಗುರುವಾರ, ಪೊಲೀಸ್ ಪೇದೆಯೊಬ್ಬರು ನನ್ನ ದ್ವಿಚಕ್ರವಾಹನವನ್ನು ತಡೆದು ನಿಲ್ಲಿಸಿ ದಾಖಲಾತಿಗಳನ್ನು ಪರಿಶೀಲಿಸುತ್ತಿದ್ದರು. ಎಲ್ಲ ದಾಖಲೆಗಳನ್ನೂ ಅವಸರದಲ್ಲೇ ನೀಡುತ್ತಿದ್ದ ನನ್ನನ್ನುದ್ದೇಶಿಸಿ ಅವರು ಕೇಳಿದ ಹಲವು ಪ್ರಶ್ನೆಗಳಿಗೆ ಉತ್ತರಿಸಿ ಕಾಲೇಜು ತಲುಪುವ ಹೊತ್ತಿಗೆ ತಡವಾಗಿ, ತರಗತಿಗೆ ಗೈರುಹಾಜರಾದರೂ ಸಹ ನಮ್ಮ ನಡುವೆ ನಡೆದ ಅಲ್ಪಾವಧಿ ಸಂಭಾಷಣೆಯ ಕೊನೆಗೆ "ಪಶುವೈದ್ಯ ವೃತ್ತಿ, ವಿಶ್ವವಿದ್ಯಾಲಯ, ಸರ್ಕಾರೀ ಇಲಾಖೆ ಹಾಗೂ ಪಶುವೈದ್ಯರ" ಬಗೆಗೆ ಅವರಿಗಿದ್ದಂತೆ ಭಾಸವಾದ ಉನ್ನತಾಭಿಪ್ರಾಯವನ್ನು ಇಮ್ಮಡಿಗೊಳಿಸಿದ ಸಂತಸ-ಸಮಾಧಾನವಿತ್ತು; ಆದರೆ ಇಂದು, ಅದೇ ವಿಷಯವಾಗಿ ತೀವ್ರ ನೋವು-ಅಸಮಾಧಾನ ನನ್ನನ್ನಾವರಿಸಿದೆ.

ಕರ್ನಾಟಕ ಸರ್ಕಾರದ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ ಖಾಲಿ ಇರುವ ಪಶುವೈದ್ಯಾಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಈ ಹಿಂದೆ ಅರ್ಜಿ ಅಹ್ವಾನಿಸಲಾಗಿತ್ತು. ಭರ್ತಿ ಮಾಡಲು ಉದ್ದೇಶಿಸಿದ್ದ ಹುದ್ದೆಗಳಿಗಿಂತ ಅಭ್ಯರ್ಥಿಗಳು ಕಡಿಮೆ ಸಂಖ್ಯೆಯಲ್ಲಿದ್ದ ಕಾರಣ, ಸರ್ಕಾರೀ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಸದವಕಾಶ ಸಿಗುವುದಾಗಿ ಎಲ್ಲ ಯುವ ಪಶುವೈದ್ಯರೂ ಹರ್ಷಗೊಂಡಿದ್ದರು; ಆದರೆ, ಅದು ಬಹುಕಾಲ ಉಳಿಯದಿದ್ದುದೇ ವಾಸ್ತವದಲ್ಲಿನ ದುರಂತದ ಸಂಗತಿ.

ಸರಿಸುಮಾರು ಐದು ದಶಕಗಳ ಕಾಲ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಅಡಿಯಲ್ಲಿದ್ದ ಬೆಂಗಳೂರು ಹಾಗೂ ಬೀದರ ಪಶುವೈದ್ಯಕೀಯ ಮಹವಿದ್ಯಾಲಯಗಳನ್ನು ಬೇರ್ಪಡಿಸಿ, 2004ರಲ್ಲಿ "ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ"ವನ್ನು ಸ್ಥಾಪಿಸಲಾಯಿತು (www.kvafsu.kar.nic.in). ಅಲ್ಲದೇ, ಇದೇ ವಿಶ್ವವಿದ್ಯಾಲಯದ ಸ್ವಾಮ್ಯಕ್ಕೆ ಹೊಸದಾಗಿ ಎರಡು ಪಶುವೈದ್ಯಕೀಯ ಮಹಾವಿದ್ಯಾಲಯಗಳನ್ನು ಕ್ರಮವಾಗಿ ಹಾಸನ ಮತ್ತು ಶಿವಮೊಗ್ಗದಲ್ಲಿ ನಮ್ಮ ಘನ ಸರ್ಕಾರವು ಪ್ರಾರಂಭಿಸಿದ ನಂತರ ನಡೆದುದೆಲ್ಲವೂ ಅನಾಹುತಗಳೇ ಸರಿ!

"ಪಶುವೈದ್ಯರುಗಳು ಉತ್ತಮ ಆಡಳಿತಗಾರರಲ್ಲ" ಎಂಬ ಕಾರಣಕ್ಕೋ ಏನೋ, ಸರ್ಕಾರದ ಪಶುವೈದ್ಯಕೀಯ ಸೇವಾ ಇಲಾಖೆಗೆ ಪಶುವೈದ್ಯರೇತರರನ್ನು ಆಯುಕ್ತರನ್ನಾಗಿ (ಆಡಳಿತ ಮುಖ್ಯಸ್ಥರು) ಸರ್ಕಾರ ನೇಮಕ ಮಾಡಿದೆ. ಇದಕ್ಕೆ ಪುಷ್ಟಿ ನೀಡುವಂತೆಯೇ, ನೂತನ ಪಶುವೈದ್ಯಕೀಯ ವಿಶ್ವವಿದ್ಯಾಲಯದಡಿಯಲ್ಲಿರುವ ಬೀದರ ಮಹಾವಿದ್ಯಾಲಯವು "ಮಾನ್ಯತೆ" ಕಳೆದುಕೊಂಡು ಅವಸಾನದ ಭಿತಿಯಲ್ಲಿದ್ದರೆ, ಹಾಸನ ಹಾಗೂ ಶಿವಮೊಗ್ಗ ಪಶುವೈದ್ಯಕೀಯ ಮಹಾವಿದ್ಯಾಲಯಗಳು ಇಂದಿಗೂ ಪಶುವೈದ್ಯಕೀಯ ಪರಿಷತ್ತಿನಿಂದ ಮಾನ್ಯತೆ ಪಡೆಯದೇ, ತನ್ನ ಎಲ್ಲಾ 72 ಪದವೀಧರರ ಭವಿಷ್ಯವನ್ನು ಅತಂತ್ರವಾಗಿಸಿವೆ. ಮಾನ್ಯತೆ ಇರದ ಮಹಾವಿದ್ಯಾಲಯದ ಪದವೀಧರರೆಲ್ಲರೂ ಸರ್ಕಾರೀ ಇಲಾಖೆಯಲ್ಲಿ ಪಶುವೈದ್ಯಾಧಿಕಾರಿ ಹುದ್ದೆಗೆ ಮಾತ್ರವಲ್ಲ, ಪಶುವೈದ್ಯ ವೃತ್ತಿಯಲ್ಲಿ ಮುಂದುವರೆಯಲೂ ಸಹ ಅರ್ಹರಾಗದಿರುವುದರಿಂದ ದಾರಿಕಾಣದೆ ಕಂಗಾಲಾಗಿದ್ದಾರೆ.

ದಿನಾಂಕ 27-05-2013 ರಿಂದ ಚಾಲನೆ ಪಡೆದುಕೊಂಡಿರುವ ಪಶುವೈದ್ಯಾಧಿಕಾರಿ ಹುದ್ದೆಯ ನೇಮಕಾತಿ ಪ್ರಕ್ರಿಯೆಯು ತಾರತಮ್ಯದ ತಾಣವಾಗಿ ಪರಿವರ್ತನೆಗೊಂಡಿದೆ. ಅರ್ಹ ಪಶುವೈದ್ಯ ಪದವೀಧರರು ದಾಖಲಾತಿ ಪರಿಶೀಲನೆಗೆ ಒಲವು ತೋರುತ್ತಿದ್ದರೆ, ಅರ್ಹರಲ್ಲವೆಂದು ತಿಳಿಸಲಾಗಿರುವ ಪದವೀಧರರು ಪರಿಶೀಲನಾ ಪ್ರಕ್ರಿಯೆಗೆ ತಮ್ಮನ್ನು ಪರಿಗಣಿಸದ ಕಾರಣ ಕೆರಳಿದ್ದಾರೆ. ವಿಶ್ವವಿದ್ಯಾಲಯ ಕುಲಪತಿಗಳು, ಇಲಾಖಾ ಪ್ರಧಾನ ಕಾರ್ಯದರ್ಶಿಗಳು, ಮಾನ್ಯ ಪಶುಸಂಗೋಪನಾ ಸಚಿವರು ಮತ್ತು ಮಾನ್ಯ ಮುಖ್ಯಮಂತ್ರಿಯವರನ್ನು ಅನೇಕ ಬಾರಿ ಭೇಟಿಮಾಡಿ ತಮ್ಮ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸಿಕೊಡಲು ಕೋರಲಾಗ್ಯೂ ಇದುವರೆವಿಗೂ ಯಾವುದೇ ಧನಾತ್ಮಕ ಕ್ರಮ ಕೈಗೊಳ್ಳದ ಕಾರಣ ಕಂಗೆಟ್ಟಿದ್ದಾರೆ. ಆದರೆ ತಾರ್ಕಿಕವಾಗಿ, ದಾಖಲಾತಿ ಪರಿಶೀಲನೆಗೂ ಮುನ್ನವೇ ಕೆಲವು ಅಭ್ಯರ್ಥಿಗಳನ್ನು ಅರ್ಹರ ಪಟ್ಟಿಯಿಂದ ಪ್ರತ್ಯೇಕಿಸಿರುವ ಸರ್ಕಾರೀ ಇಲಾಖೆಯ ನಿರ್ಣಯ ಪ್ರಶ್ನಾರ್ಥಕವೆನಿಸಿಕೊಳ್ಳುತ್ತದೆ.

ವಿಶ್ವವಿದ್ಯಾಲಯ, ಆಡಳಿತ, ಮಹಾವಿದ್ಯಾಲಯ, ಮಾನ್ಯತೆ, ಇಲಾಖೆ, ನೇಮಕಾತಿ, ಅರ್ಹತೆ - ಇವೆಲ್ಲವುಗಳ ಸಂಕೋಲೆಯಿಂದ ದೂರ ಸರಿದು ಆಲೋಚಿಸಿದೆವಾದರೆ, ವೃತ್ತಿಪರ ಹಿರಿಯರಾದ ನಾವು, ಯುವ ಪಶುವೈದ್ಯರುಗಳಿಗೆ ವೃತ್ತಿಪರತೆಯಲ್ಲಿ ಅವರುಗಳು ಉಜ್ವಲ ಭವಿಷ್ಯವನ್ನು ರೂಪಿಸಿಕೊಂಡು ಯಶಸ್ಸು ಗಳಿಸಲು ಅನುವಾಗುವಂತಹ ಸಂಭಾವಿತ ವೃತ್ತಿಪರ ಸಮಾಜವನ್ನು ಒದಗಿಸಿಕೊಡುವ ಬದ್ಧತೆಯ ಹೊಣೆಗಾರಿಕೆಯನ್ನು ನಿಭಾಯಿಸುವಲ್ಲಿ ಸಂಪೂರ್ಣ ವಿಫಲರಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.