Monday, October 21, 2013

ರಾಗಿ ಬ್ರಹ್ಮರ ಕುರಿತ ಚಾರಿತ್ರಿಕ ಕೃತಿ

ಮಡದಿ ಹಾಗೂ ಮಗಳನ್ನು ಭೇಟಿ ಮಾಡಲು ದೆಹಲಿಗೆ ತೆರೆಳಿದ್ದೆನು; ಅಲ್ಲಿ ಕಳೆದ ಏಳು ದಿನಗಳು ಕೇವಲ ಏಳು ಘಂಟೆಗಳಂತೆ ಉರುಳಿಹೋಗಲಾಗಿ, ಹಿಂತಿರುಗಿ ಬೆಂಗಳೂರಿಗೆ ಪಯಣಿಸಲು ಅಣಿಯಾಗುತ್ತಿರುವಾಗ ನನ್ನ ಬಗಲಚೀಲವನ್ನು ಹಿಡಿದು ನನ್ನಾಕೆ "ಏಕಿಷ್ಟು ಭಾರ?" ಎಂದು ಪ್ರಶ್ನಿಸುತ್ತಿರುವಾಗಲೇ ಆಕೆಗೆ ಅದರ ಕಾರಣದ ಅರಿವಾಗಿದ್ದಿರಬೇಕು. "ಓದಲು ಕೆಲವು ಪುಸ್ತಕಗಳನ್ನು ತಂದಿದ್ದೆ.." ನನ್ನ ಮಾತುಗಳನ್ನು ಮುಗಿಸುವ ಮುನ್ನವೇ ಕಂಡ ಆಕೆಯ ಮುಗುಳ್ನಗು 'ನೀವು ಎಂದಿಗೂ ಬದಲಾಗಲಾರಿರಿ..' ಎಂದಂತೆ ಭಾಸವಾಯಿತು. ಅಲ್ಲಿದ್ದ ಐದು ಪುಸ್ತಕಗಳಲ್ಲಿ ನಾನು ಬಹುದಿನಗಳಿಂದ ಒಂದೇ ಹಿಡಿತದಲ್ಲಿ ಓದಿ ಮುಗಿಸಲು ಉದ್ದೇಶಿಸಿದ್ದ 'ರಾಗಿ ಲಕ್ಷ್ಮಣಯ್ಯ'ನವರ ಕುರಿತಾದ ಕೃತಿಯೂ ಒಂದು.

ಸಾಮಾನ್ಯವಾಗಿ ನಾನು ಪುಸ್ತಕಗಳನ್ನು ಸಂಗ್ರಹಿಸುವಾಗ ಅದರಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಲೇಖಕರ ಹಸ್ತಾಕ್ಷರವನ್ನು ಪಡೆದುಕೊಳ್ಳುವುದು ರೋಢಿ; ಈ ಪುಸ್ತಕವೂ ಇದಕ್ಕೆ ಹೊರತಾಗಿರಲಿಲ್ಲ. "ಪ್ರೀತಿಯಿಂದ ಡಾ. ಪ್ರಶಾಂತ್ ರವರಿಗೆ – ಡಾ. ಎಂ. ನಾರಾಯಣಸ್ವಾಮಿ" ಎಂಬ ಹಸ್ತಾಕ್ಷರದ ಹಿಂದಿದ್ದ ಆತ್ಮೀಯತೆಯು ಕೃತಿಯ ಮೇಲಿನ ನನ್ನ ಪ್ರೀತಿಯನ್ನು ಇಮ್ಮಡಿಗೊಳಿಸಿತ್ತು. ದೆಹಲಿಗೆ ಹೊರಟು ಹಿಂತಿರುಗಿ ಬೆಂಗಳೂರಿಗೆ ಮರಳುವುದರೊಳಗೆ ಈ ಪುಸ್ತಕವನ್ನು ಶ್ರದ್ಧೆಯಿಂದ ಓದಿ, ಅದರ ಬಗೆಗಿನ ನನ್ನ ಅನಿಸಿಕೆಗಳನ್ನು ಇಲ್ಲಿ ಹಂಚಿಕೊಳ್ಳುವಂತಾದದ್ದು ಹರ್ಷದ ಸಂಗತಿ.

ಈ ಹೊತ್ತಿಗೆ ನಿಮ್ಮ ಅರಿವನ್ನು "ರಾಗಿ ಲಕ್ಷ್ಮಣಯ್ಯ ಎಂದರೆ ಯಾರು..?" ಎಂಬ ಪ್ರಶ್ನೆಯು ಆವರಿಸಿದ್ದಿರಬಹುದು! ಬಹುಶಃ ಪ್ರೊ. ಎಂ. ನಾರಾಯಣಸ್ವಾಮಿ ಹಾಗೂ ರಮೇಶ್ ಸಂಕ್ರಾಂತಿ ಇವರುಗಳು ಸಂಪಾದಿಸಿರುವ 'ತೆನೆ ಮರೆಯ ಕ್ರಾಂತಿ ರಾಗಿ ಲಕ್ಷ್ಮಣಯ್ಯ – ಇಂಡಾಫ್ ರಾಗಿ ತಳಿಗಳ ಕಂಡುಹಿಡಿದ ವಿಜ್ಞಾನಿ' ಎಂಬ ಕೃತಿಯು ಕಳೆದ ಡಿಸೆಂಬರ್ ಅಂತ್ಯದಲ್ಲಿ ಲೋಕಾರ್ಪಣೆಗೊಳ್ಳದೇ ಹೋಗಿದ್ದರೆ, ಅವಿರತವಾಗಿ ರಾಗಿ ತಳಿ ಅಭಿವೃದ್ಧಿಯಲ್ಲಿ ಮೌನ ಕ್ರಾಂತಿ ನಡೆಸಿದ ಸಂತ ವಿಜ್ಞಾನಿ ಡಾ. ಸಿ. ಹೆಚ್. ಲಕ್ಷ್ಮಣಯ್ಯನವರ ಬಗ್ಗೆ ತಿಳಿದುಕೊಳ್ಳುವ ಸೌಭಾಗ್ಯ ನನ್ನಂತೆ ಇನ್ನೂ ಅನೇಕ ಕನ್ನಡಿಗರಿಗೆ ಖಂಡಿತವಾಗಿಯೂ ಒದಗಿ ಬರುತ್ತಿರಲಿಲ್ಲವೇನೋ.. ಈ ನಿಟ್ಟಿನಲ್ಲಿ ಲೇಖಕರುಗಳದ್ದು ಅದ್ವಿತೀಯ ಸಾಧನೆಯೆಂದೇ ಹೇಳಬೇಕು.

ಪರಕೀಯ ಪರಾಗಸ್ಪರ್ಶಕ್ಕೆ ತೆರೆದುಕೊಳ್ಳದ ರಾಗಿ ಬೆಳೆಯ ತಳಿ ಅಭಿವೃದ್ಧಿಯು ಅಸಾಧ್ಯವೆಂದು ಇಡೀ ಪ್ರಪಂಚವೇ ಕೈಚೆಲ್ಲಿ ಕೂತರೂ, ಡಾ. ಲಕ್ಷ್ಮಣಯ್ಯನವರು ತಮ್ಮ ಛಲಬಿಡದ ನಿರಂತರ ಸಂಶೋಧನೆಯಿಂದಾಗಿ 'ವಿಶೇಷ ಸಂಪರ್ಕ ವಿಧಾನ'ವನ್ನು ಆವಿಷ್ಕರಿಸಿ, ರಾಗಿ ಬೆಳೆಯ ತಳಿ ಅಭಿವೃದ್ಧಿಯಲ್ಲಿ ಯಶಸ್ಸು ಗಳಿಸಿದರು. ಇವರು ಅಭಿವೃದ್ಧಿಪಡಿಸಿದ ಅರುಣ, ಅನ್ನಪೂರ್ಣ, ಉದಯ, ಕಾವೇರಿ ರಾಗಿ ತಳಿಗಳು ಸಾಂಪ್ರದಾಯಿಕ ರಾಗಿ ತಳಿಗಳಿಗಿಂತ ಉತ್ಕೃಷ್ಟವಾಗಿವೆ. ಅಲ್ಲದೇ, ಸ್ಥಳೀಯ ರಾಗಿ ಬೆಳೆ ಹಾಗೂ ಆಫ್ರಿಕ ಮೂಲದ ರಾಗಿ ಬೆಳೆಗಳ ಸಂಕರಣದಿಂದ ಇವರು ಅಭಿವೃದ್ಧಿಪಡಿಸಿದ 'ಇಂಡಾಫ್' - 1 ರಿಂದ 15 ತಳಿಗಳು ರಾಗಿ ಬೇಸಾಯದಲ್ಲಿ ಕ್ರಾಂತಿಯನ್ನೇ ಉಂಟುಮಾಡಿವೆ. ಇದರಿಂದಾಗಿ ರಾಗಿ ಬೆಳೆಯುವ ರೈತರ ಹಸಿವೆ ಮಾತ್ರವಲ್ಲ, ಇಂಡಾಫ್ ಬೆಳೆಗಳಿಂದ ದೊರೆತ ಅಗಾಧ ಹುಲ್ಲಿನಿಂದ ಜಾನುವಾರುಗಳ ಹಸಿವೆಯೂ ಸಹ ನೀಗಿದೆ. ತಮ್ಮ ಫಲಾಪೇಕ್ಷೆ ಇಲ್ಲದ ಸತತ ಪರಿಶ್ರಮದಿಂದ ರೈತರ ಪಾಲಿನ ದೇವತೆಯಾದ ಲಕ್ಷ್ಮಣಯ್ಯನವರು ಕೃಷಿ ವಿಶ್ವವಿದ್ಯಾಲಯ ಹಾಗೂ ಸರ್ಕಾರಗಳ ಪಾಲಿಗೆ ಅಸ್ಪೃಶ್ಯರಾಗಿಯೇ ಉಳಿದುಹೋದದ್ದು ದುರಂತ.

ರಾಗಿ ಲಕ್ಷ್ಮಣಯ್ಯನವರ ಆತ್ಮೀಯರು, ಅವರ ಸಮಕಾಲೀನರಾದವರಿಂದ ಸುಮಾರು 24 ಲೇಖನ ಹಾಗೂ ನಿರೋಪಣಾ ಲೇಖನಗಳನ್ನು ಹೊಂದಿರುವ ಈ ಕೃತಿಯು, ತನ್ನ ಪ್ರತಿಯೊಂದು ಲೇಖನದಲ್ಲೂ ರಾಗಿ ಲಕ್ಷ್ಮಣಯ್ಯನವರ ಶ್ರೀಮಂತ, ವಿಶಿಷ್ಟ, ವಿಶೇಷ, ಸರಳ ವ್ಯಕ್ತಿತವನ್ನು ಹಲವಾರು ದೃಷ್ಟಿಕೋನದಿಂದ ಓದುಗರಿಗೆ ಪರಿಚಯಿಸಿಕೊಡುವಲ್ಲಿ ಯಶಸ್ವಿಯಾಗಿದೆ. ಇಂದಿಗೆ ಸರಿಯಾಗಿ ಎರಡು ದಶಕಗಳ ಹಿಂದೆ ಕಾಲವಾದ, ಜೀವಿತದಲ್ಲೂ ನೇಪಥ್ಯ ಸೇರಿದಂತೆ ಬದುಕಿದ್ದ ವಿಶಾಲ ವ್ಯಕ್ತಿತ್ವದ ಮೌನ ಸಾಧಕರನ್ನು ಈ ಚಾರಿತ್ರಿಕ ಕೃತಿಯ ಮೂಲಕ ಯುವಪೀಳಿಗೆಗೆ ಸಾಹಿತ್ಯಿಕ ರೂಪದಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಪುನರ್ ಸೃಷ್ಟಿಸಿರುವ ಸಂಪಾದಕರುಗಳಿಗೆ ಅನಂತ ನಮನಗಳು ಸಲ್ಲಲೇಬೇಕು. ಅಲ್ಲದೇ, ಈ ಕೃತಿಯನ್ನು ಒಟ್ಟಾರೆ ಸೂಕ್ಷ್ಮವಾಗಿ ಗಮನಿಸಿದಲ್ಲಿ ಅದರ ಹಿಂದಿರಬಹುದಾದ ಸಂಪಾದಕರ ಶ್ರದ್ಧೆ-ಪರಿಶ್ರಮಗಳು ನಮ್ಮ ಅರಿವಿಗೆ ಬರುತ್ತವೆ. ಡಾ. ಜೆ. ಬಾಲಕೃಷ್ಣರ ಮುಖಪುಟ ವಿನ್ಯಾಸ ಪುಸ್ತಕಕ್ಕೆ ಮೆರುಗು ನೀಡಿದೆ. ಇಂತಹ ವಿರಳವೆನ್ನಬಹುದಾದ ಸಾಧನೆಗೆ ಪ್ರೋತ್ಸಾಹಿಸುವ ಮೂಲಕ 'ಅಸೀಮ ಅಕ್ಷರ' ಪ್ರಕಾಶನವು ಸಾರ್ಥಕ್ಯ ಪಡೆದುಕೊಂಡಿದೆ.

ಒಂದು ಕಾಲಘಟ್ಟದಲ್ಲಿ ಕೇವಲ ಬಡವರ-ದಲಿತರ 'ಅನ್ನ'ವಾಗಿದ್ದ 'ಕರಿರಾಗಿ'ಯು ಇಂದಿನ ಹದಗೆಟ್ಟ ಆಹಾರ-ಜೀವನ ಶೈಲಿಯಿಂದಾಗಿ ನಿಧಾನವಾಗಿ ಅದಕ್ಕಂಟಿಕೊಂಡಿದ್ದ ಸಾಮಾಜಿಕ ಅಂತಸ್ತುಗಳ ಸಂಕೋಲೆಗಳ ಕಪಿಮುಷ್ಟಿಯಿಂದ ಮುಕ್ತವಾಗಿ ಪ್ರತಿಯೊಬ್ಬರ ದಿನನಿತ್ಯದ ಆಹಾರವಾಗುತ್ತಿದೆ. ಇಂತಹ ಮಹತ್ವದ ಸಂಕ್ರಮಣ ಕಾಲದಲ್ಲಿ, ರಾಗಿ ಬೆಳೆಯ ಅಭಿವೃದ್ಧಿಗಾಗಿ ತಮ್ಮ ಜೀವಿತಾವಧಿಯನ್ನೇ ಮುಡಿಪಾಗಿಟ್ಟ 'ರಾಗಿ ಲಕ್ಷ್ಮಣಯ್ಯ'ನವರ ಕುರಿತ ಈ ಚಾರಿತ್ರಿಕ ಕೃತಿಯು ಮೂಡಿಬಂದಿರುವುದು ಅತ್ಯಂತ ಸಮಂಜಸವೆನಿಸುತ್ತದೆ. ರಾಗಿಯನ್ನು ಯಾವುದೇ ರೂಪದಲ್ಲಾದರೂ ಆಹಾರವಾಗಿ ಸೇವಿಸುತ್ತಿರುವ ಪ್ರತಿಯೊಬ್ಬರೂ ಈ ಕೃತಿಯನ್ನು ಓದಲೇಬೇಕೆಂಬುದು ನನ್ನ ವೈಯಕ್ತಿಕ ಅಭಿಪ್ರಾಯ.

ಪುಸ್ತಕ ಪರಿಚಯ

ಶೀರ್ಷಿಕೆ: ತೆನೆ ಮರೆಯ ಕ್ರಾಂತಿ ರಾಗಿ ಲಕ್ಷ್ಮಣಯ್ಯ – ಇಂಡಾಫ್ ರಾಗಿ ತಳಿಗಳ ಕಂಡುಹಿಡಿದ ವಿಜ್ಞಾನಿ

ಸಂಪಾದಕರು: ಪ್ರೊ. ಎಂ. ನಾರಾಯಣಸ್ವಾಮಿ ಹಾಗೂ ರಮೇಶ್ ಸಂಕ್ರಾಂತಿ

ಪ್ರಕಾಶಕರು: ಅಸೀಮ ಅಕ್ಷರ, ಅಮೃತನಗರ, ಬೆಂಗಳೂರು

ಪ್ರಥಮ ಮುದ್ರಣ: 2012

ಬೆಲೆ: ರೂ. 100/-
ಪ್ರತಿಯೊಬ್ಬ ಮನುಷ್ಯನೂ ಆಂತರಿಕವಾಗಿ ಸತ್ಯಶೋಧಕನೇ. ಆದರೆ, ಸತ್ಯಶೋಧನೆಗೆ ಏಕಾಗ್ರತೆ, ಸಹನೆ, ಆಳವಾದ ಜ್ಞಾನ, ಫಲಾಪೇಕ್ಷೆ ಇಲ್ಲದ ಸತತ ಸಾಧನೆ ಮುಖ್ಯ.
- ಡಾ. ಸಿ. ಹೆಚ್. ಲಕ್ಷ್ಮಣಯ್ಯ