Showing posts with label ಕನ್ನಡ : Kannada. Show all posts
Showing posts with label ಕನ್ನಡ : Kannada. Show all posts

Friday, January 19, 2018

ಬೆಳಗು - ಬೆರಗು

2014 ರ ಏಪ್ರಿಲ್ ತಿಂಗಳ ನಂತರ ಇಲ್ಲಿನ ನನ್ನ ಬರವಣಿಗೆಗೆ ಅಲ್ಪ(?) ವಿರಾಮ ದೊರೆತಿರುವುದರ ಅರಿವಿದ್ದರೂ ಸಹ ಅದು ನಾಲ್ಕು ವರ್ಷಗಳಷ್ಟು ಸುದೀರ್ಘವಾಗಿದೆ ಎಂಬುದರ ಪರಿವೆಯೇ ಇರಲಿಲ್ಲ! ದಿನಗಳು ತ್ವರಿತವಾಗಿ ಕಳೆದುಹೋಗುತ್ತಿವೆಯೋ, ಅಥವಾ ಜೀವನವೆಂಬ ಕತ್ತಲೆ-ಬೆಳಕಿನ ಆಟದ ಕೈಗೊಂಬೆಯಾಗಿ ನಾನೇ ಕಳೆದುಹೋಗುತ್ತಿದ್ದೇನೋ ಸ್ಪಷ್ಟವಾಗಿ ತಿಳಿಯುತ್ತಿಲ್ಲ. ಬಹುದಿನಗಳ ನಂತರ ಇಂದು ನನ್ನನ್ನು ಭೇಟಿಮಾಡಿದ ಹಿರಿಯರೊಬ್ಬರ "ಏನು, ಕೂದ್ಲಿಗೆ ಡೈ ಹಾಕಿದ್ದೀರಾ?" ಪ್ರಶ್ನೆಗೆ ನಗುವೇ ಉತ್ತರವಾದಾಗ "ಏಜ್ ಫ್ಯಾಕ್ಟರ್.." ಎನ್ನುತ್ತಾ ಮುಗುಳ್ನಕ್ಕರು. ಆ ಮುಗುಳ್ನಗೆಯಲ್ಲಿ ವಿಶಾಲವಾದ ಜೀವನಾನುಭವದ ದಿವ್ಯದರ್ಶನವಾಯಿತು; ನಾನೂ ಮುಗುಳ್ನಕ್ಕೆ..

ಕಳೆದೆರಡು ದಿನಗಳ ಹಿಂದೆ, ....... (ಅವರನ್ನು ಏನೆಂದು ಗುರುತಿಸುವುದು? ಹೆಸರು ಹೇಳಲು ವಯಸ್ಸಿನಲ್ಲಿ ನಾನು ಹಿರಿಯನಲ್ಲ; ಸ್ನೇಹಿತರೆನ್ನಲು ಸಮವಯಸ್ಕನಲ್ಲ; ಸಹೋದ್ಯೋಗಿ ಎನ್ನಲು ಮನಸ್ಸು ಒಪ್ಪುತ್ತಿಲ್ಲ; ಸರಿ, ಹಿಗೆನ್ನೋಣ.....) ಕಳೆದೆರಡು ದಿನಗಳ ಹಿಂದೆ, ನನ್ನ ಮಾರ್ಗದರ್ಶಕರೊಬ್ಬರು 'ಬೆಳಗು' ಎಂಬ ಪದದ ಅರ್ಥವನ್ನು ಅರಸುತ್ತಾ ನನಗೆ ಕಿರುಸಂದೇಶ ಕಳುಹಿಸಿದ್ದರು. ತತ್ಕ್ಷಣಕ್ಕೆ ಏನೂ ಹೊಳೆಯದಿದ್ದಾಗ, "ಯಾವುದೇ ಪದದ ಅರ್ಥವು ಗ್ರಹಿಸುವವರನ್ನವಲಂಬಿಸಿ ವಿಸ್ತಾರವಾಗಿ ರೂಪುಗೊಳ್ಳುತ್ತದೆ. ಶಬ್ಧಕೋಶದಲ್ಲಿರುವ ಅರ್ಥವನ್ನು ನಂತರ ತಿಳಿಸುತ್ತೇನೆ" ಎಂದಷ್ಟೇ ಉತ್ತರಿಸಿದೆ. 'ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡರೆ ನೂರು ವರ್ಷ ಆಯಸ್ಸು' ಅಲ್ಲವೇ?

ನನಗೆ ಕಳುಹಿಸಲಾಗಿದ್ದ ಕಿರುಸಂದೇಶದಲ್ಲಿ 'ಬೆಳಗು' ಪದದ ಕೆಲವೊಂದು ಅರ್ಥವನ್ನು ಹೀಗೆ ವ್ಯಾಖ್ಯಾನಿಸಲಾಗಿತ್ತು: Benevolent; Efforts to contribute to; Life; Around us with; Greater; Understanding. ಮೇಲಿನ ವ್ಯಾಖ್ಯಾನಗಳನ್ನು ಪದೇ ಪದೇ ಓದಿಕೊಂಡೆ; ನನ್ನ ಊಹೆಯು ಸುಳ್ಳಾಗುತ್ತಲೇ ಹೋಯಿತು. ಪ್ರತೀ ಬಾರಿ ಓದಿಕೊಂಡಾಗಲೂ ಸಹ ಪ್ರತಿಯೊಂದು ವ್ಯಾಖ್ಯಾನವೂ ಮೂಲ ಪದದಿಂದ ಹೆಚ್ಚು ಹೆಚ್ಚು ವಿಭಿನ್ನವಾಗಿ ಗೋಚರಿಸತೊಡಗಿತು. ಎರಡು ದಿನ ಕಳೆದಿದೆ; ಇಂದಿಗೂ ಸಹ 'ಬೆಳಗು' ಪದಕ್ಕೂ, Benevolent; Efforts to contribute to; Life; Around us with; Greater; Understanding ಪದಗಳಿಗೂ ಕಿಂಚಿತ್ತೂ ಜೋಡಣೆ ನನ್ನಿಂದ ಸಾಧ್ಯವಾಗಿಲ್ಲ! ನನ್ನ ಸೀಮಿತ ಅರ್ಥಗ್ರಹಣೆಗೆ ಹೊಣೆ ಯಾರು?

ಕೊನೆಗೆ, ಶಬ್ಧಕೋಶದ ಮೊರೆಹೋದ ನನಗೆ ಸ್ವಲ್ಪ ಸಮಾಧಾನ ದೊರೆಯದೇ ಇರಲಿಲ್ಲ.

ಬೆಳಗು 
ನಾಮಪದ: ಕಾಂತಿ; ಪ್ರಾತಃಕಾಲ; ಹಗಲು; ಅರಿವು; ಜ್ಞಾನ
ಕ್ರಿಯಾಪದ: ಹೊಳೆ; ಪ್ರಕಾಶಿಸುವಂತೆ ಮಾಡು; ದೀಪವನ್ನು ಹಚ್ಚು; ಸ್ವಚ್ಛಮಾಡು

ಆದರೂ, ಅಂತರಾಳದಲ್ಲಿರುವ ಅಲ್ಪಜ್ಞಾನಿಗೆ 'ಬೆಳಗು' ಪದಕ್ಕೂ, Benevolent; Efforts to contribute to; Life; Around us with; Greater; Understanding ವ್ಯಾಖ್ಯಾನಗಳಿಗೂ ಸಂಬಂಧ ಬೆಸೆಯುವ ತವಕ. ಆಪತ್ಬಾಂಧವ Google ನ ಮೊರೆ ಹೋದೆ. ಮೊದಲಿಗೆ, 'ಬೆಳಗು' ಪದದ ವ್ಯಾಖ್ಯಾನವನ್ನು ಹುಡುಕಲು, Google ಕೊಟ್ಟ ಉತ್ತರಗಳು:

outshine: ಪ್ರಕಾಶಿಸು, ಮೀರಿಸಿ-ಹೊಳೆ
illuminate: ಬೆಳಗಿಸು, ಬೆಳಕು ಮಾಡು, ಪ್ರಕಾಶಗೊಳಿಸು, ಬೆಳಕು ಕೊಡು 
burnish: ಒಪ್ಪಹಾಕು, ಮೆರುಗು ಕೊಡು
elucidate: ಸ್ಪಷ್ಟಪಡಿಸು, ಪ್ರಕಾಶಬೀರು
irradiate: ಹೊಳೆ

ಎಂದಿನಂತೆ  Google ತಕ್ಕಮಟ್ಟಿಗೆ ಕನ್ನಡ ಪದದ ವಿಸ್ತಾರವಾದ ಭಾವಾರ್ಥವನ್ನು ಹಿಡಿದುಕೊಡುವಲ್ಲಿ ಯಶಸ್ಸು ಗಳಿಸಿತ್ತು. ಇದರೊಂದಿಗೆ 'ಬೆಳಗು' ಪದದ ಅರ್ಥವೂ ಸಹ ನನ್ನ ಅರಿವಿನಲ್ಲಿ ವಿಸ್ತಾರವಾಗುತ್ತಾ ಸಾಗಿತ್ತು.

ಇಷ್ಟಕ್ಕೇ ಅದೇಕೋ ಸಮಾಧಾನವಿರಲಿಲ್ಲ.. ಇನ್ನೇನೋ ತಿಳಿಯುವ ತವಕ. Google ಸದಾ ಸಿದ್ಧ! Benevolent ಪದದ ಮೂಲ Google ನಲ್ಲಿ ಹೀಗಿದ್ದಿತು:

 
ಅರ್ಥ:
1. adjective: well meaning and kindly.
2. (of an organization) serving a charitable rather than a profit-making purpose.
(synonyms:charitable, non-profit-making, non-profit, not-for-profit)

Benevolent ಪದಕ್ಕೆ Google ಕೊಟ್ಟ ಎರಡನೇ ವ್ಯಾಖ್ಯಾನ ನನ್ನನ್ನು 'ಬೆರಗು'ಗೊಳಿಸಿತ್ತು! 'ಬೆಳಗು', 'Benevolent', 'Well wishing', 'Kind', 'Charity' - ಅದೆಂಥಾ ಅರ್ಥೈಕೆ..

'ಬೆಳಗು' - ಇದು ನಮ್ಮ ಮಾರ್ಗದರ್ಶಿಗಳಾದ ಮತ್ತೊಬ್ಬ ಹಿರಿಯರು ಸ್ಥಾಪಿಸಲು ಹೊರಟಿರುವ ಸಮಾಜಸೇವಾ ಸಂಸ್ಥೆಯ ಹೆಸರು. ಈ ಪದಕ್ಕೆ, ಸಂಸ್ಥೆಯ ಉದ್ದೇಶದ ಹಿನ್ನೆಲೆಯಲ್ಲಿ, ಆಳವಾದ ಮತ್ತು ವಿಸ್ತಾರವಾದ ಅರಿವಿನಿಂದ Benevolent ಎಂದು ವ್ಯಾಖ್ಯಾನಿಸಿರುವುದು ನನ್ನಂತಹವನಿಗೆ ಕಬ್ಬಿಣದ ಕಡಲೆಯೇ ಸರಿ; ಈ ರೀತಿಯ ಆಳವಾದ ಚಿಂತನೆಯಿಂದ ಅರ್ಥ-ಮಹತ್ವ ಕಲ್ಪಿಸುವುದು ಸಾಮಾನ್ಯ ಸಾಧ್ಯವಲ್ಲ. Benevolent ಎಂಬ ಒಂದೇ ಒಂದು ವ್ಯಾಖ್ಯಾನದ ಹಿಂದಿರುವ ವಿಶಾಲ ಅರ್ಥೈಕೆಯನ್ನು ಸಂಪೂರ್ಣವಾಗಿ ಅರಗಿಸಿಕೊಳ್ಳಲು ನನಗಿನ್ನೂ ಸಾಧಯವಾಗಿಲ್ಲ. ಹೀಗಿರುವಾಗ, ಉಳಿದ ವ್ಯಾಖ್ಯಾನಗಳ ಗೋಜಿಗೆ ಹೋದೇನೆ? ಸಧ್ಯಕ್ಕಂತೂ ಒಲ್ಲೆ.

Monday, October 21, 2013

ರಾಗಿ ಬ್ರಹ್ಮರ ಕುರಿತ ಚಾರಿತ್ರಿಕ ಕೃತಿ

ಮಡದಿ ಹಾಗೂ ಮಗಳನ್ನು ಭೇಟಿ ಮಾಡಲು ದೆಹಲಿಗೆ ತೆರೆಳಿದ್ದೆನು; ಅಲ್ಲಿ ಕಳೆದ ಏಳು ದಿನಗಳು ಕೇವಲ ಏಳು ಘಂಟೆಗಳಂತೆ ಉರುಳಿಹೋಗಲಾಗಿ, ಹಿಂತಿರುಗಿ ಬೆಂಗಳೂರಿಗೆ ಪಯಣಿಸಲು ಅಣಿಯಾಗುತ್ತಿರುವಾಗ ನನ್ನ ಬಗಲಚೀಲವನ್ನು ಹಿಡಿದು ನನ್ನಾಕೆ "ಏಕಿಷ್ಟು ಭಾರ?" ಎಂದು ಪ್ರಶ್ನಿಸುತ್ತಿರುವಾಗಲೇ ಆಕೆಗೆ ಅದರ ಕಾರಣದ ಅರಿವಾಗಿದ್ದಿರಬೇಕು. "ಓದಲು ಕೆಲವು ಪುಸ್ತಕಗಳನ್ನು ತಂದಿದ್ದೆ.." ನನ್ನ ಮಾತುಗಳನ್ನು ಮುಗಿಸುವ ಮುನ್ನವೇ ಕಂಡ ಆಕೆಯ ಮುಗುಳ್ನಗು 'ನೀವು ಎಂದಿಗೂ ಬದಲಾಗಲಾರಿರಿ..' ಎಂದಂತೆ ಭಾಸವಾಯಿತು. ಅಲ್ಲಿದ್ದ ಐದು ಪುಸ್ತಕಗಳಲ್ಲಿ ನಾನು ಬಹುದಿನಗಳಿಂದ ಒಂದೇ ಹಿಡಿತದಲ್ಲಿ ಓದಿ ಮುಗಿಸಲು ಉದ್ದೇಶಿಸಿದ್ದ 'ರಾಗಿ ಲಕ್ಷ್ಮಣಯ್ಯ'ನವರ ಕುರಿತಾದ ಕೃತಿಯೂ ಒಂದು.

ಸಾಮಾನ್ಯವಾಗಿ ನಾನು ಪುಸ್ತಕಗಳನ್ನು ಸಂಗ್ರಹಿಸುವಾಗ ಅದರಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಲೇಖಕರ ಹಸ್ತಾಕ್ಷರವನ್ನು ಪಡೆದುಕೊಳ್ಳುವುದು ರೋಢಿ; ಈ ಪುಸ್ತಕವೂ ಇದಕ್ಕೆ ಹೊರತಾಗಿರಲಿಲ್ಲ. "ಪ್ರೀತಿಯಿಂದ ಡಾ. ಪ್ರಶಾಂತ್ ರವರಿಗೆ – ಡಾ. ಎಂ. ನಾರಾಯಣಸ್ವಾಮಿ" ಎಂಬ ಹಸ್ತಾಕ್ಷರದ ಹಿಂದಿದ್ದ ಆತ್ಮೀಯತೆಯು ಕೃತಿಯ ಮೇಲಿನ ನನ್ನ ಪ್ರೀತಿಯನ್ನು ಇಮ್ಮಡಿಗೊಳಿಸಿತ್ತು. ದೆಹಲಿಗೆ ಹೊರಟು ಹಿಂತಿರುಗಿ ಬೆಂಗಳೂರಿಗೆ ಮರಳುವುದರೊಳಗೆ ಈ ಪುಸ್ತಕವನ್ನು ಶ್ರದ್ಧೆಯಿಂದ ಓದಿ, ಅದರ ಬಗೆಗಿನ ನನ್ನ ಅನಿಸಿಕೆಗಳನ್ನು ಇಲ್ಲಿ ಹಂಚಿಕೊಳ್ಳುವಂತಾದದ್ದು ಹರ್ಷದ ಸಂಗತಿ.

ಈ ಹೊತ್ತಿಗೆ ನಿಮ್ಮ ಅರಿವನ್ನು "ರಾಗಿ ಲಕ್ಷ್ಮಣಯ್ಯ ಎಂದರೆ ಯಾರು..?" ಎಂಬ ಪ್ರಶ್ನೆಯು ಆವರಿಸಿದ್ದಿರಬಹುದು! ಬಹುಶಃ ಪ್ರೊ. ಎಂ. ನಾರಾಯಣಸ್ವಾಮಿ ಹಾಗೂ ರಮೇಶ್ ಸಂಕ್ರಾಂತಿ ಇವರುಗಳು ಸಂಪಾದಿಸಿರುವ 'ತೆನೆ ಮರೆಯ ಕ್ರಾಂತಿ ರಾಗಿ ಲಕ್ಷ್ಮಣಯ್ಯ – ಇಂಡಾಫ್ ರಾಗಿ ತಳಿಗಳ ಕಂಡುಹಿಡಿದ ವಿಜ್ಞಾನಿ' ಎಂಬ ಕೃತಿಯು ಕಳೆದ ಡಿಸೆಂಬರ್ ಅಂತ್ಯದಲ್ಲಿ ಲೋಕಾರ್ಪಣೆಗೊಳ್ಳದೇ ಹೋಗಿದ್ದರೆ, ಅವಿರತವಾಗಿ ರಾಗಿ ತಳಿ ಅಭಿವೃದ್ಧಿಯಲ್ಲಿ ಮೌನ ಕ್ರಾಂತಿ ನಡೆಸಿದ ಸಂತ ವಿಜ್ಞಾನಿ ಡಾ. ಸಿ. ಹೆಚ್. ಲಕ್ಷ್ಮಣಯ್ಯನವರ ಬಗ್ಗೆ ತಿಳಿದುಕೊಳ್ಳುವ ಸೌಭಾಗ್ಯ ನನ್ನಂತೆ ಇನ್ನೂ ಅನೇಕ ಕನ್ನಡಿಗರಿಗೆ ಖಂಡಿತವಾಗಿಯೂ ಒದಗಿ ಬರುತ್ತಿರಲಿಲ್ಲವೇನೋ.. ಈ ನಿಟ್ಟಿನಲ್ಲಿ ಲೇಖಕರುಗಳದ್ದು ಅದ್ವಿತೀಯ ಸಾಧನೆಯೆಂದೇ ಹೇಳಬೇಕು.

ಪರಕೀಯ ಪರಾಗಸ್ಪರ್ಶಕ್ಕೆ ತೆರೆದುಕೊಳ್ಳದ ರಾಗಿ ಬೆಳೆಯ ತಳಿ ಅಭಿವೃದ್ಧಿಯು ಅಸಾಧ್ಯವೆಂದು ಇಡೀ ಪ್ರಪಂಚವೇ ಕೈಚೆಲ್ಲಿ ಕೂತರೂ, ಡಾ. ಲಕ್ಷ್ಮಣಯ್ಯನವರು ತಮ್ಮ ಛಲಬಿಡದ ನಿರಂತರ ಸಂಶೋಧನೆಯಿಂದಾಗಿ 'ವಿಶೇಷ ಸಂಪರ್ಕ ವಿಧಾನ'ವನ್ನು ಆವಿಷ್ಕರಿಸಿ, ರಾಗಿ ಬೆಳೆಯ ತಳಿ ಅಭಿವೃದ್ಧಿಯಲ್ಲಿ ಯಶಸ್ಸು ಗಳಿಸಿದರು. ಇವರು ಅಭಿವೃದ್ಧಿಪಡಿಸಿದ ಅರುಣ, ಅನ್ನಪೂರ್ಣ, ಉದಯ, ಕಾವೇರಿ ರಾಗಿ ತಳಿಗಳು ಸಾಂಪ್ರದಾಯಿಕ ರಾಗಿ ತಳಿಗಳಿಗಿಂತ ಉತ್ಕೃಷ್ಟವಾಗಿವೆ. ಅಲ್ಲದೇ, ಸ್ಥಳೀಯ ರಾಗಿ ಬೆಳೆ ಹಾಗೂ ಆಫ್ರಿಕ ಮೂಲದ ರಾಗಿ ಬೆಳೆಗಳ ಸಂಕರಣದಿಂದ ಇವರು ಅಭಿವೃದ್ಧಿಪಡಿಸಿದ 'ಇಂಡಾಫ್' - 1 ರಿಂದ 15 ತಳಿಗಳು ರಾಗಿ ಬೇಸಾಯದಲ್ಲಿ ಕ್ರಾಂತಿಯನ್ನೇ ಉಂಟುಮಾಡಿವೆ. ಇದರಿಂದಾಗಿ ರಾಗಿ ಬೆಳೆಯುವ ರೈತರ ಹಸಿವೆ ಮಾತ್ರವಲ್ಲ, ಇಂಡಾಫ್ ಬೆಳೆಗಳಿಂದ ದೊರೆತ ಅಗಾಧ ಹುಲ್ಲಿನಿಂದ ಜಾನುವಾರುಗಳ ಹಸಿವೆಯೂ ಸಹ ನೀಗಿದೆ. ತಮ್ಮ ಫಲಾಪೇಕ್ಷೆ ಇಲ್ಲದ ಸತತ ಪರಿಶ್ರಮದಿಂದ ರೈತರ ಪಾಲಿನ ದೇವತೆಯಾದ ಲಕ್ಷ್ಮಣಯ್ಯನವರು ಕೃಷಿ ವಿಶ್ವವಿದ್ಯಾಲಯ ಹಾಗೂ ಸರ್ಕಾರಗಳ ಪಾಲಿಗೆ ಅಸ್ಪೃಶ್ಯರಾಗಿಯೇ ಉಳಿದುಹೋದದ್ದು ದುರಂತ.

ರಾಗಿ ಲಕ್ಷ್ಮಣಯ್ಯನವರ ಆತ್ಮೀಯರು, ಅವರ ಸಮಕಾಲೀನರಾದವರಿಂದ ಸುಮಾರು 24 ಲೇಖನ ಹಾಗೂ ನಿರೋಪಣಾ ಲೇಖನಗಳನ್ನು ಹೊಂದಿರುವ ಈ ಕೃತಿಯು, ತನ್ನ ಪ್ರತಿಯೊಂದು ಲೇಖನದಲ್ಲೂ ರಾಗಿ ಲಕ್ಷ್ಮಣಯ್ಯನವರ ಶ್ರೀಮಂತ, ವಿಶಿಷ್ಟ, ವಿಶೇಷ, ಸರಳ ವ್ಯಕ್ತಿತವನ್ನು ಹಲವಾರು ದೃಷ್ಟಿಕೋನದಿಂದ ಓದುಗರಿಗೆ ಪರಿಚಯಿಸಿಕೊಡುವಲ್ಲಿ ಯಶಸ್ವಿಯಾಗಿದೆ. ಇಂದಿಗೆ ಸರಿಯಾಗಿ ಎರಡು ದಶಕಗಳ ಹಿಂದೆ ಕಾಲವಾದ, ಜೀವಿತದಲ್ಲೂ ನೇಪಥ್ಯ ಸೇರಿದಂತೆ ಬದುಕಿದ್ದ ವಿಶಾಲ ವ್ಯಕ್ತಿತ್ವದ ಮೌನ ಸಾಧಕರನ್ನು ಈ ಚಾರಿತ್ರಿಕ ಕೃತಿಯ ಮೂಲಕ ಯುವಪೀಳಿಗೆಗೆ ಸಾಹಿತ್ಯಿಕ ರೂಪದಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಪುನರ್ ಸೃಷ್ಟಿಸಿರುವ ಸಂಪಾದಕರುಗಳಿಗೆ ಅನಂತ ನಮನಗಳು ಸಲ್ಲಲೇಬೇಕು. ಅಲ್ಲದೇ, ಈ ಕೃತಿಯನ್ನು ಒಟ್ಟಾರೆ ಸೂಕ್ಷ್ಮವಾಗಿ ಗಮನಿಸಿದಲ್ಲಿ ಅದರ ಹಿಂದಿರಬಹುದಾದ ಸಂಪಾದಕರ ಶ್ರದ್ಧೆ-ಪರಿಶ್ರಮಗಳು ನಮ್ಮ ಅರಿವಿಗೆ ಬರುತ್ತವೆ. ಡಾ. ಜೆ. ಬಾಲಕೃಷ್ಣರ ಮುಖಪುಟ ವಿನ್ಯಾಸ ಪುಸ್ತಕಕ್ಕೆ ಮೆರುಗು ನೀಡಿದೆ. ಇಂತಹ ವಿರಳವೆನ್ನಬಹುದಾದ ಸಾಧನೆಗೆ ಪ್ರೋತ್ಸಾಹಿಸುವ ಮೂಲಕ 'ಅಸೀಮ ಅಕ್ಷರ' ಪ್ರಕಾಶನವು ಸಾರ್ಥಕ್ಯ ಪಡೆದುಕೊಂಡಿದೆ.

ಒಂದು ಕಾಲಘಟ್ಟದಲ್ಲಿ ಕೇವಲ ಬಡವರ-ದಲಿತರ 'ಅನ್ನ'ವಾಗಿದ್ದ 'ಕರಿರಾಗಿ'ಯು ಇಂದಿನ ಹದಗೆಟ್ಟ ಆಹಾರ-ಜೀವನ ಶೈಲಿಯಿಂದಾಗಿ ನಿಧಾನವಾಗಿ ಅದಕ್ಕಂಟಿಕೊಂಡಿದ್ದ ಸಾಮಾಜಿಕ ಅಂತಸ್ತುಗಳ ಸಂಕೋಲೆಗಳ ಕಪಿಮುಷ್ಟಿಯಿಂದ ಮುಕ್ತವಾಗಿ ಪ್ರತಿಯೊಬ್ಬರ ದಿನನಿತ್ಯದ ಆಹಾರವಾಗುತ್ತಿದೆ. ಇಂತಹ ಮಹತ್ವದ ಸಂಕ್ರಮಣ ಕಾಲದಲ್ಲಿ, ರಾಗಿ ಬೆಳೆಯ ಅಭಿವೃದ್ಧಿಗಾಗಿ ತಮ್ಮ ಜೀವಿತಾವಧಿಯನ್ನೇ ಮುಡಿಪಾಗಿಟ್ಟ 'ರಾಗಿ ಲಕ್ಷ್ಮಣಯ್ಯ'ನವರ ಕುರಿತ ಈ ಚಾರಿತ್ರಿಕ ಕೃತಿಯು ಮೂಡಿಬಂದಿರುವುದು ಅತ್ಯಂತ ಸಮಂಜಸವೆನಿಸುತ್ತದೆ. ರಾಗಿಯನ್ನು ಯಾವುದೇ ರೂಪದಲ್ಲಾದರೂ ಆಹಾರವಾಗಿ ಸೇವಿಸುತ್ತಿರುವ ಪ್ರತಿಯೊಬ್ಬರೂ ಈ ಕೃತಿಯನ್ನು ಓದಲೇಬೇಕೆಂಬುದು ನನ್ನ ವೈಯಕ್ತಿಕ ಅಭಿಪ್ರಾಯ.

ಪುಸ್ತಕ ಪರಿಚಯ

ಶೀರ್ಷಿಕೆ: ತೆನೆ ಮರೆಯ ಕ್ರಾಂತಿ ರಾಗಿ ಲಕ್ಷ್ಮಣಯ್ಯ – ಇಂಡಾಫ್ ರಾಗಿ ತಳಿಗಳ ಕಂಡುಹಿಡಿದ ವಿಜ್ಞಾನಿ

ಸಂಪಾದಕರು: ಪ್ರೊ. ಎಂ. ನಾರಾಯಣಸ್ವಾಮಿ ಹಾಗೂ ರಮೇಶ್ ಸಂಕ್ರಾಂತಿ

ಪ್ರಕಾಶಕರು: ಅಸೀಮ ಅಕ್ಷರ, ಅಮೃತನಗರ, ಬೆಂಗಳೂರು

ಪ್ರಥಮ ಮುದ್ರಣ: 2012

ಬೆಲೆ: ರೂ. 100/-
ಪ್ರತಿಯೊಬ್ಬ ಮನುಷ್ಯನೂ ಆಂತರಿಕವಾಗಿ ಸತ್ಯಶೋಧಕನೇ. ಆದರೆ, ಸತ್ಯಶೋಧನೆಗೆ ಏಕಾಗ್ರತೆ, ಸಹನೆ, ಆಳವಾದ ಜ್ಞಾನ, ಫಲಾಪೇಕ್ಷೆ ಇಲ್ಲದ ಸತತ ಸಾಧನೆ ಮುಖ್ಯ.
- ಡಾ. ಸಿ. ಹೆಚ್. ಲಕ್ಷ್ಮಣಯ್ಯ

Friday, July 12, 2013

ಅಂಧೆಯ ಬದುಕಿಗೆ ಬೆಳಕಾದೀತೆ ನ್ಯಾಯಾಂಗ?

ಚಿಕ್ಕಬಳ್ಳಾಪುರ ಜಿಲ್ಲೆಯ ಬಗೇಪಲ್ಲಿ ಎಂಬ ಪುಟ್ಟ ಹಳ್ಳಿ; ತಮ್ಮ ದಿನನಿತ್ಯದ ಕಾಯಕಕ್ಕೆ ಹೊರಟಿದ್ದ ಕುರಿ ಕಾಯುವ ಹುಡುಗರಿಗೆ ಕ್ಷೀಣ ಧ್ವನಿಯ ಹೆಣ್ಣಿನ ರೋದನೆ ಕೇಳಿಸುತ್ತದೆ. ಅತ್ತಿತ್ತ ಹುಡುಕಾಡಿದ ಕುರಿಯವರಿಗೆ, ಸಮೀಪದ ಹೊಲದಲ್ಲಿದ್ದ ಪಾಳುಬಾವಿಯೂಂದರೊಳಗೆ ಬಿದ್ದು ಸಹಾಯಕ್ಕಾಗಿ ಕೂಗಿಕೊಳ್ಳುತ್ತಿದ್ದ ಒಬ್ಬ ಹೆಂಗಸು ಕಾಣಿಸುತ್ತಾಳೆ. ಕೊಳವೆಬಾವಿಗಳ ಹಾವಳಿಯಿಂದ ಮರುಗಿಹೋಗಿದ್ದ ಪುರಾತನ ಪಳೆಯುಳಿಕೆಯೊಳಗಿಂದ ಹೆಣ್ಣುಮಗಳನ್ನು ಹೊರತರಲು ಹರಸಾಹಸ ಮಾಡಿದವರಿಗೆ ಅಚ್ಚರಿ-ಕುತೂಹಲ ಕಾದಿತ್ತು; ಆಕೆ ಗರ್ಭಿಣಿಯಷ್ಟೇ ಅಲ್ಲ, ಅಂಧೆಯೂ ಕೂಡ.

ಜುಲೈ ಆರರ ಶನಿವಾರ, ತಡರಾತ್ರಿಯಲ್ಲಿ "ಆದಪ್ಪ" ಅಂಧೆಯಾದ "ಗೌರಿ"ಯನ್ನು (ಹೆಸರು ಬದಲಿಸಲಾಗಿದೆ) ಮದುವೆಯಾಗುವುದಾಗಿ ನಂಬಿಸಿ ತನ್ನೊಡನೆ ಕರೆದೊಯ್ಯುತ್ತಾನೆ. ಅಂಗವಿಲಕೆಯಾದ ಹೆಣ್ಣು ತನ್ನೊಡಲಿನಲ್ಲಿ ಬೆಳೆಯುತ್ತಿದ್ದ ಕೂಸಿಗೆ ತಂದೆಯಾದ ಆದಪ್ಪನನ್ನಲ್ಲದೆ ಮತ್ತಿನ್ಯಾರನ್ನು ನಂಬಿಯಾಳು? ಗಾಡಾಂಧಕಾರದ ತನ್ನ ಪ್ರಪಂಚದಾಚೆಗೆಲ್ಲೋ ಇರಬಹುದಾದ ನವಜೀವನದ ಸುಂದರ ಕನಸನ್ನು ಕಾಣುತ್ತಾ ಹೊರಟಿದ್ದ ಗೌರಿಗೆ ಆಘಾತ ಕಾದಿತ್ತು.. ಮದುವೆಯಾಗಿ ಬಾಳಿನ ಬೆಳಕು ಹೊತ್ತಿಸುವುದಾಗಿ ವಚನ ನೀಡಿ, ಎಲ್ಲವನ್ನೂ ಪಡೆದುಕೊಂಡಿದ್ದಾತ ನಡುರಾತ್ರಿಯಲ್ಲಿ ಆಕೆಯನ್ನು ಕರೆತಂದು ಹತ್ತಿರದ ಹಾಳುಬಾವಿಯೊಂದಕ್ಕೆ ತಳ್ಳಿಬಿಟ್ಟಿದ್ದ. ತೆವಲು ತೀರಿಸಿಕೊಂಡಾತನಿಗೆ ಕಣ್ಣು ಕಾಣದ ಕುರುಡಿಯಾಗಲೀ, ಆಕೆಯ ಹೊಟ್ಟೆಯಲ್ಲಿ ಬೆಳೆಯುತ್ತಿದ್ದ ತನ್ನ ಪಿಂಡವಾಗಲಿ ಬೇಕಾಗಿರಲಿಲ್ಲ.

ಚಿತ್ರ ಕೃಪೆ: ದಿ ಹಿಂದು, ಗೂಗಲ್. ಪರಿಕಲ್ಪನೆ: ಪ್ರಶಾಂತ್

ಇಷ್ಟಕ್ಕೂ, ಆದಪ್ಪ ಏನೂ ತಿಳಿಯದ ಹದಿಹರೆಯದ ಹುಡುಗನೇನಲ್ಲ; 47ರ "ಪ್ರಾಯದ ಸಭ್ಯ ಗೃಹಸ್ಥ"?! ಸಬಲೆ ಹೆಣ್ಣಿಗೆ ದೇವರದ್ದೇ ಬಲ - ಸತತ ಹದಿನೈದು ಘಂಟೆಗಳ ದೀರ್ಘಾವಧಿ ನರಳಿಕೆಯ ನಂತರ ಅದೃಷ್ಟವಶಾತ್ ಗೌರಿ ಪ್ರಾಣಾಪಾಯದಿಂದ ಪಾರಾಗಿದ್ದಾಳಾದರೂ, ಆದಪ್ಪನ ಕುಟುಂಬದ ಸದಸ್ಯರ ಕಪಟಕ್ಕೆ ಗುರಿಯಾಗಬೇಕಾಯಿತು. ಮೂರೂ ಬಿಟ್ಟವರು ಮಾತ್ರ ಮಾನಕ್ಕೆ ಬೆಲೆ ಕಟ್ಟಲು ಸಾಧ್ಯ - ಗೌರಿಯ ತಂದೆಯನ್ನು ಭೇಟಿಮಾಡಿದ ಆದಪ್ಪನ ಮನೆಯವರು, ಪ್ರಕರಣವನ್ನು ಅಲ್ಲಿಗೇ ಮುಚ್ಚಿಹಾಕಲು ಒಪ್ಪಂದದ ಹೊಂದಾಣಿಕೆಗೆ ಮುಂದಾಗಿದ್ದರು. ಕ್ರೌರ್ಯದ ಆಟಕ್ಕೆ ಕುತಂತ್ರದ ಆಸರೆ - ಇದು ಇಂದಿನ ನಮ್ಮ "ಪ್ರಬುದ್ಧ ಸಮಾಜ"ದ ವಾಸ್ತವ ಸ್ಥಿತಿ. ನತದೃಷ್ಟೆ ಗೌರಿಯ ತಂದೆಯವರ ಕಠಿಣ ಧೋರಣೆಯಿಂದ ಹಾಗೂ ಜಿಲ್ಲಾ ಅಂಗವಿಕಲರ ಕಲ್ಯಾಣ ಸಂಸ್ಥೆಯ ಬೆಂಬಲದಿಂದ ಎರಡು ದಿನ ತಡವಾಗಿಯಾದರೂ ಬಗೇಪಲ್ಲಿ ಪೋಲೀಸ್ ಠಾಣೆಯಲ್ಲಿ ಆದಪ್ಪನ ವಿರುದ್ಧ ದೂರು ದಾಖಲಾಗಿರುವುದಷ್ಟೇ ಸಮಾಧಾನಕರ ಸಂಗತಿ.

ತಲೆಮರೆಸಿಕೊಂಡಿರುವ ಆರೋಪಿ "ಆದಪ್ಪ"ನಿಗಾಗಿ ಪೋಲೀಸರು ಹುಡುಕಾಡುತ್ತಿದ್ದರೆ, ಮಾನಸಿಕ ಹಾಗೂ ದೈಹಿಕ ಆಘಾತಕ್ಕೊಳಗಾಗಿರುವ ಗೌರಿ, ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಅಸಂಖ್ಯಾತ ಹೆಣ್ಣು ದೇವತೆಗಳಿಗೆ ನಿತ್ಯಪೂಜೆ ಸಾಂಗವಾಗಿ ನಡೆಯುತ್ತಿರುವ ನಮ್ಮ ಸಮಾಜದಲ್ಲಿ ಹೆಣ್ಣನ್ನು ಈ ರೀತಿ ಹೀನಾಯವಾಗಿ ನಡೆಸಿಕೊಳ್ಳುತ್ತಿರುವುದು ಧಾರ್ಮಿಕ ಆಚರಣೆಗಳನ್ನು ಅರ್ಥಹೀನವಾಗಿಸಿ, ಹಿಂದೂ ಸಂಸ್ಕೃತಿಯ ಪಾವಿತ್ರ್ಯತೆಗೆ ಕಳಂಕವನ್ನುಂಟುಮಾಡಿದೆ. ಹೊಟ್ಟೆ ನೋವಿನ ಹೊರತಾಗಿ ಗೌರಿಯ ಆರೋಗ್ಯ ಸುಧಾರಿಸುತ್ತಿರುವುದಾಗಿ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದರೂ, ಆರೋಪಿ ಆದಪ್ಪನನ್ನು ನ್ಯಾಯಾಂಗದ ಚೌಕಟ್ಟಿನಲ್ಲಿ ತಪ್ಪಿತಸ್ಥನೆಂದು ಸಾಬೀತು ಮಾಡಿ ಶಿಕ್ಷೆಗೆ ಗುರಿಪಡಿಸಲು ಗೌರಿಯ ಮಡಿಲು ಬರಿದಾಗದಿರುವುದು ಕ್ಷೇಮ. ವಿವಾಹಪೂರ್ವ ಲೈಂಗಿಕ ಸಂಬಂಧವು ದಾಖಲೆಗಳಿಂದ ಸಾಬೀತಾದಲ್ಲಿ, ಅಂತಹವರನ್ನು ಅಧಿಕೃತವಾಗಿ ಪತಿ-ಪತ್ನಿ ಎಂದು ಪರಿಗಣಿಸಬೇಕೆಂಬ ಮಹತ್ವದ ತೀರ್ಪನ್ನು ಇತ್ತೀಚೆಗಷ್ಟೇ ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ನೀಡಲಾಗಿದೆ. ಈ ತೀರ್ಪು ಗೌರಿಯಂತಹ ಇನ್ನೂ ಅನೇಕ ಮುಗ್ಧ, ಅಸಹಾಯಕ ಹಾಗೂ ಶೋಷಿತ ಹೆಣ್ಣುಮಕ್ಕಳ ಬದುಕಿಗೆ ಬೆಳಕಾಗಿ, ಆದಪ್ಪನಂತಹ ಕ್ರೂರಿಗಳ ಕ್ರೌರ್ಯವನ್ನು ಮಟ್ಟಹಾಕುವಲ್ಲಿ ಸಹಾಯಕವಾಗುತ್ತದೆಯೇ? ಕಾದು ನೋಡಬೇಕು.

Wednesday, June 12, 2013

ಅಗಲಿದ ಗುರುವಿಗೆ ನುಡಿನಮನ - ಡಾ. ಕೆ. ಜಯಕುಮಾರ್

19ನೇ ಏಪ್ರಿಲ್ 2013ರ ಸಂಜೆ; ಕಾಲೇಜಿನಿಂದ ಮನೆಗೆ ಹಿಂತಿರುಗಿದವನೇ laptop ಮುಂದೆ ಕುಳಿತು, ಕರ್ನಾಟಕ ಪಶುವೈದ್ಯಕೀಯ ಸಂಘದ ಬಳಕೆಗಾಗಿ Online Web Application ಅಭಿವೃದ್ಧಿಪಡಿಸುವುದರಲ್ಲಿ ಗಾಢವಾಗಿ ತಲ್ಲೀನನಾಗಿದ್ದೆ. ಹಾಸಿಗೆಯ ಮೇಲಿದ್ದ ನನ್ನ mobile ಕೀರಲು ಧ್ವನಿಯಲ್ಲಿ ಸದ್ದುಮಾಡತೊಡಗಿತು - ಅದು ಗುರುಗಳಾದ ಡಾ. ಎಂ. ನಾರಾಯಣಸ್ವಾಮಿಯವರಿಂದ ಬರುತ್ತಿದ್ದ ಕರೆ, ತಕ್ಷಣ ಉತ್ತರಿಸಿದೆ:
"ನಮಸ್ತೆ, ಸರ್.."
"ಪ್ರಶಾಂತ್, college magazine ಗೆ ಏನಾದ್ರೂ ಬರೀತಿದ್ದೀಯ?"
ಸ್ವಲ್ಪ ಹಿಂಜರಿಕೆಯಿಂದಲೇ "ಬರೆಯೋ idea ಏನೂ ಇಲ್ಲ ಸರ್.." ಎಂದಿದ್ದೆ.
"ಒಂದು ಅರ್ಧ ಪುಟದಷ್ಟು ಏನಾದ್ರೂ ಬರೀಬಹುದಲ್ವಾ?"
ತಲೆಯ ತುಂಬೆಲ್ಲಾ ಪ್ರೊಗ್ರಾಮಿಂಗ್ ಕೋಡ್-ಗಳೇ ತುಂಬಿಕೊಂಡಿದ್ದ ನನಗೆ ಆ ಹೊತ್ತಿಗೆ ಲೇಖನ ಬರೆಯುವ ಸಂಯಮ ಇರಲಿಲ್ಲ; ಏನು ಉತ್ತರಿಸಬೇಕೋ ನನಗೆ ತಿಳಿಯದೇ ಹೋಯಿತು.

ಅಂದಿಗೆ ಎರಡು ದಿನಗಳ ಹಿಂದೆಯಷ್ಟೇ ನಮ್ಮನ್ನಗಲಿದ್ದ ಗುರುಗಳಾದ ಡಾ. ಕೆ. ಜಯಕುಮಾರ್ ಅವರಿಗೆ ಗೌರವ ಸಲ್ಲಿಸುವ ಲೇಖನ ಬರೆಯುವ ಸಲುವಾಗಿ ಮನಸ್ಸಿಗೆ ನಾಟಿದ ಕೆಲವು ವಿಷಯಗಳನ್ನು ಮರೆಯಬಾರದೆಂಬ ಕಾರಣಕ್ಕಾಗಿ ಇದೇ ಬ್ಲಾಗ್ ನಲ್ಲಿ ಬೆರಳಚ್ಚಿಸಿ ಕರಡಿಗೆ ಸೇರಿಸಿದ್ದೆ. ಹೆಚ್ಚು ಆಲೋಚಿಸದೇ, ಕರಡನ್ನು ತಿದ್ದಿ, ಪುಟ್ಟ ಲೇಖನವೊಂದನ್ನು ಮರುದಿನ ಕಾಲೇಜಿನ ಸಂಪಾದಕೀಯ ತಂಡಕ್ಕೆ ಸಲ್ಲಿಸಿದೆ. "ಪತ್ರಿಕೆ-ಪ್ರಕಟಣೆ" ಎಂದಾಕ್ಷಣ ಅದೇಕೋ ಒಂದು ಸಣ್ಣ ಅಳುಕು ನನ್ನೊಳಗೆ ಮೂಡುತ್ತದೆ; ಇಲ್ಲಿಯೂ ಹಾಗೆಯೇ - "ನನ್ನ ಲೇಖನವು ಪ್ರಕಟಣೆಗೆ ಯೋಗ್ಯವೇ?" ಎಂಬ ಪ್ರಶ್ನೆ ಕಾಡತೊಡಗಿತು.


2013ರ ಬೆಂಗಳೂರು ಪಶುವೈದ್ಯಕೀಯ ಮಹಾವಿದ್ಯಾಲಯದ ವಾರ್ಷಿಕ ಸಂಚಿಕೆ "ಬಿಂಬ" ಇಂದು ಹಲವರ ಕೈಸೇರಿದೆ; ಅದರಲ್ಲಿ ಪ್ರಕಟವಾಗಿರುವ ನನ್ನ ಲೇಖನವು ಇಲ್ಲಿದೆ. ಇದಕ್ಕೆ ಮೂಲಭೂತವಾಗಿ ಕಾರಣಕರ್ತರಾದ ಗುರುಗಳು, ಡಾ. ಎಂ. ನಾರಾಯಣಸ್ವಾಮಿಯವರಿಗೆ ತುಂಬುಹೃದಯದ ಕೃತಜ್ಞತೆ ಸಲ್ಲಿಸುತ್ತೇನೆ.
17-04-2013

ಎಂದಿನಂತೆ ಅಂದೂ ಸಹ ಕಾಲೇಜಿಗೆ ತಡವಾಗಿಯೇ ತಲುಪಿ, ವಾಹನ ನಿಲುಗಡೆ ಸ್ಥಳದಿಂದ ಗಡಿಬಿಡಿಯಲ್ಲಿ ಬೋಧನಾ ಕೊಠಡಿ ಸಂಖ್ಯೆ – 2 ರ ಕಡೆಗೆ ಹೆಜ್ಜೆ ಹಾಕುತ್ತಿದ್ದೆ. ಆ ಹೊತ್ತಿಗಾಗಲೇ 5 ನಿಮಿಷ ತಡವಾಗಿದ್ದುದರಿಂದ ಸಮಯಕ್ಕೆ ಮುಂಚಿತವಾಗಿ ಅಥವಾ ಸಮಯಕ್ಕೆ ಸರಿಯಾಗಿ ತರಗತಿಗೆ ಹಾಜರಾಗಬೇಕೆಂಬ ನನ್ನ ಬಹುದಿನಗಳ ಆಕಾಂಕ್ಷೆಗೆ ಎಳ್ಳು-ನೀರು ಬಿಟ್ಟಂತಾಗಿತ್ತು. ಗುರುಗಳಾದ ಡಾ. ಜಯಕುಮಾರ್ ಅವರು ಬೋಧನಾ ವಿಷಯವಾಗಿ ಅಂದು ನಮ್ಮೊಡನೆ ಚರ್ಚಿಸಬಹುದಾದ ಪ್ರಚಲಿತ ವಿದ್ಯಮಾನಗಳನ್ನು ಅಂದಾಜಿಸಿಕೊಳ್ಳುವ ನನ್ನ ಪ್ರಯತ್ನವು ಫಲಕಾರಿಯಾಗಲಿಲ್ಲ. ನನ್ನ ಸಂಕುಚಿತ ಚಿಂತನೆಗೆ ಅವರ ವಿಶಾಲ ವ್ಯಕ್ತಿತ್ವ-ವಿಚಾರಗಳನ್ನು ಇಡಿಯಾಗಿ ಅರ್ಥೈಸಿಕೊಳ್ಳುವ ಸಾಮರ್ಥ್ಯ ಇರಲಿಲ್ಲ.

ದಾರಿಯಲ್ಲಿ ಭೇಟಿಯಾದ ದೈಹಿಕ ಶಿಕ್ಷಣ ಶಿಕ್ಷಕರ ಮುಖದಲ್ಲಿ ಎಂದಿನ ನಗು ಕಾಣದಿದ್ದರಿಂದ ನಾನು –
"ನಮಸ್ತೆ ಮೇಡಂ; ಏನು.. ತುಂಬಾ ಸೀರಿಯಸ್ಸಾಗಿ ಕಾಣ್ತಿದ್ದೀರ?" ಎನ್ನುತ್ತಾ ಮಾತಿಗೆಳೆದೆ.
"ನಿಮ್ಗೆ ಗೊತ್ತಿಲ್ವಾ? ಅವ್ರು, ಪ್ರೊಫೆಸರ್ ತೀರ್ಕೊಂಡ್ರಂತೆ.." ಎಂದು ಅವರು ಉತ್ತರಿಸಿದಾಗ ಅವರ ಮುಖದಲ್ಲಿದ್ದ ಗಂಭೀರತೆಯ ಕಾರಣದ ಅರಿವಾಗತೊಡಗಿತು.
"ಯಾವ್ ಪ್ರೊಫೆಸರ್?" ಮರುಪ್ರಶ್ನಿಸಿದೆ.
"ಅವ್ರೇ.. ಡಾ. ಜಯ......" ಹೆಸರನ್ನು ಮರೆತಂತೆ ಕಂಡ ಅವರ ಮಾತನ್ನು ತಡೆದು ನಾನು "ಯಾವ್ ಡಿಪಾರ್ಟಮೆಂಟ್ ಹೇಳಿ.." ಎಂದು ಕೇಳಿದೆ.
"ಇದು.. ಫಾರ್ಮಕಾಲಜಿ.."
"ಹೆಚ್. ಒ. ಡಿ. ಅವ್ರ??"
"ಹ್ಹೂ.... ಅವ್ರೆ.."
"ಡಾ. ಜಯಕುಮಾರ್..??"
"ಹಾ.. ಡಾ. ಜಯಕುಮಾರ್.. ಅವ್ರೇ.. ಹಾರ್ಟ್ ಅಟ್ಯಾಕ್ ಆಯ್ತಂತೆ.."
"ನಮ್ಗೆ ಅವ್ರ ಕ್ಲಾಸಿತ್ತಲ್ಲ ಒಂಬತ್ತು ವರೆಗೆ.." – ಈ ಮಾತುಗಳನ್ನು ನನಗರಿವಿಲ್ಲದಂತೆಯೇ ಆಡಿದ್ದೆ; ಅದಕ್ಕವರು ಪ್ರತಿಕ್ರಿಯಿಸಲೂ ಇಲ್ಲ. ಬಂದೆರಗಿದ ಆಘಾತಕರ ಸುದ್ದಿಯಿಂದ 'ವಿಧಿಯ ಕರೆಗೆ ಕಾಲೇಜಿನ ತರಗತಿಗಳು ತಡೆಯೊಡ್ಡಲಾರವು' ಎಂಬ ವಾಸ್ತವವನ್ನು ನಾನು ಮರೆತಿದ್ದೆ.

ಡಾ. ಕೆ. ಜಯಕುಮಾರ್
ಹಾಗೆಯೇ ನಡೆದು, ನಾವು ಕಾಲೇಜಿನ ಮುಖ್ಯಪ್ರಾಂಗಣವನ್ನು ಸಮೀಪಿಸುತ್ತಿದ್ದಂತೆಯೇ ಅಲ್ಲಿ ಆಗಲೇ ನಮ್ಮನ್ನಗಲಿದ ಡಾ. ಜಯಕುಮಾರ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲು ಪ್ರಾಂಶುಪಾಲರಾದಿಯಾಗಿ ಬಹುತೇಕ ಎಲ್ಲ ವಿಭಾಗದ ಮುಖ್ಯಸ್ಥರು, ವಿದ್ಯಾರ್ಥಿಗಳು, ಸಿಬ್ಬಂದಿ ಮುಂತಾದವರು ನೆರೆದಿದ್ದರು; ನಿಧಾನವಾಗಿ ಹೆಜ್ಜೆ ಹಾಕುತ್ತಾ ಗುಂಪಿನಲ್ಲಿ ಒಂದಾದೆ. ಪ್ರಾಂಶುಪಾಲರ ಮಾತುಗಳು ನಾನು ನಿಂತಿದ್ದ ಅಂತರಕ್ಕೆ ತಲುಪುವುದು ಕಷ್ಟಸಾಧ್ಯವಾಗಿದ್ದರಿಂದ, ಅಸ್ಪಷ್ಟವಾಗಿ ಕೇಳಿಸುತ್ತಿದ್ದ ಕೆಲವೊಂದು ಪದಗಳನ್ನು ಆಲಿಸುತ್ತಾ ತಲೆತಗ್ಗಿಸಿ ನಿಂತೆ. ತರಗತಿಯಲ್ಲಿ ಕುಳಿತು ಡಾ. ಜಯಕುಮಾರ್ ಮಾಸ್ತರ ಉಪನ್ಯಾಸ ಕೇಳುವ ಬದಲಾಗಿ ಕಾಲೇಜಿನ ಪ್ರಾಂಗಣದಲ್ಲಿ, ಉರಿಬಿಸಿಲಿನ ಸೂರಿನಡಿ ನಿಂತು ಅದೇ ಮಾಸ್ತರ ಅಗಲಿದ ಆತ್ಮಕ್ಕೆ ಶಾಂತಿ ಕೋರುತ್ತಾ ಮೌನಾಚರಣೆ ಮಾಡುವ ದೌರ್ಭಾಗ್ಯ ತಂದೊದಗಿಸಿದ ವಿಧಿಯನ್ನು ಮೌನವಾಗಿ ಶಪಿಸಿಕೊಳ್ಳುತ್ತಿದ್ದೆ.

ಎರಡು ನಿಮಿಷ ಮೌನಾಚರಣೆಯ ನಂತರ ಎಲ್ಲರೂ ಚದುರಿದರು; ಅಂದು ಯಾವುದೇ ತರಗತಿಗಳು ನಡೆದಂತೆ ಕಾಣಲಿಲ್ಲ. ನಾನು ಅಲ್ಲಿಂದ ನೇರವಾಗಿ ಬಳ್ಳಾರಿ ಮುಖ್ಯರಸ್ತೆಗೆ ಹೊಂದಿಕೊಂಡಂತಿರುವ ಯು. ಎ. ಎಸ್. ವಸತಿಗೃಹಗಳ ಆವರಣದತ್ತ ತೆರಳಿದೆ. ಮುಖ್ಯದ್ವಾರ ಪ್ರವೇಶಿಸಿದ ನಂತರ, ಅಲ್ಲಿ ನೆರೆದಿದ್ದ ವಾಹನ-ಜನರ ಜಾಡನ್ನನುಸರಿಸಿಕೊಂಡು ಹೋದ ನಾನು ಕೆಲವೇ ನಿಮಿಷಗಳಲ್ಲಿ ಡಾ. ಜಯಕುಮಾರ್ ಮಾಸ್ತರ ನಿವಾಸ ತಲುಪಿದ್ದೆ. ಆ ಹೊತ್ತಿಗಾಗಲೇ ಅಗಲಿದ ಗುರುಗಳ ಅಂತಿಮ ದರ್ಶನ ಪಡೆಯಲು ಅನೇಕ ವಿದ್ಯಾರ್ಥಿಗಳು ಆಗಮಿಸಿದ್ದರು; ನೂರಾರು ಮಂದಿ ಒಂದೇ ಸ್ಥಳದಲ್ಲಿದ್ದರೂ ಸಹ 'ಸ್ಮಶಾನ ಮೌನ' ನೆಲೆಸಿತ್ತು.

ಮನೆಯಂಗಳದಲ್ಲಿದ್ದ ಚೆಂದದ ಕೈದೋಟದ ಬದಿಯಲ್ಲಿ ಪಾದರಕ್ಷೆಗಳನ್ನು ಬಿಟ್ಟು, ನಿಧಾನವಾಗಿ ಸಾಗುತಲಿದ್ದ ಸಾಲಿನಲ್ಲಿ ಸೇರಿಕೊಂಡೆ. ಮನೆಯೊಳಗೆ ಜನಸಂದಣಿ ದಟ್ಟವಾಗಿದ್ದು, ಸಾಲಿನಲ್ಲಿ ಒಬ್ಬರಂತೆ ನಡೆದುಹೋಗಬಹುದಾದಷ್ಟು ಮಾತ್ರವೇ ಸ್ಥಳಾವಕಾಶವಿತ್ತು. ಎದೆಯನ್ನು ಭಾರವಾಗಿಸಿದ್ದ ನೋವಿನ ಕಳೆ ಅಲ್ಲಿದ್ದವರ ಮುಖದಲ್ಲಿಯೂ ಗೋಚರಿಸುತ್ತಿತ್ತು; ದುಃಖವು ಜಿಹ್ವೆಯನ್ನು ಮಡುಗಟ್ಟಿಸಿ ಮಾತುಗಳನ್ನು ಮರೆಸಿಬಿಟ್ಟಿತ್ತು. ಒಂದು ಕ್ಷಣ ಆ ನೀರವತೆ ಹಿತವೆನಿಸಿದರೂ, ಅದರ ಕಾರಣವು ಮಾತ್ರ ಅತ್ಯಂತ ಕರಾಳವಾಗಿದ್ದಿತು. ಸಮಯ ಸುಮಾರು ಹತ್ತು ಘಂಟೆ; ಕಾಲೇಜಿನ ಕೊಠಡಿಯ ತರಗತಿಯಲ್ಲಿರಬೇಕಿದ್ದ ಗುರುಗಳು ಶೀತಲ ಪೆಟ್ಟಿಗೆಯೊಳಗೆ ಚಿರನಿದ್ರೆಗೆ ಜಾರಿದ್ದರು, ಅವರ ನಿದ್ರೆಗೆ ಭಂಗ ಬಾರದಂತೆ ಸುತ್ತಲೂ ನಿಶ್ಶಬ್ಧತೆ ನೆಲೆಸಿತ್ತು. ಸರತಿಯ ಸಾಲಿನಲ್ಲಿ ಸುತ್ತು ಬಂದು ಗುರುಗಳ ದಿವ್ಯಚರಣಗಳಿಗೆ ಮನದಲ್ಲೇ ಸಾಷ್ಟಾಂಗ ನಮಿಸುವ ಹೊತ್ತಿಗೆ ಕಣ್ಣಂಚು ತೇವಗೊಂಡಿತ್ತು.

ಒಂದು ತಾಸಿನ ನಂತರ ಕಾಲೇಜಿನ ಮುಖ್ಯದ್ವಾರದ ಬಳಿ ಡಾ. ಜಯಕುಮಾರ್ ಮಾಸ್ತರ ಪಾರ್ಥಿವ ಶರೀರ ಆಗಮಿಸಿದಾಗ ಅನೇಕರು ಅವರ ಅಂತಿಮ ದರ್ಶನ ಪಡೆದರು. ಅಲ್ಲೇ ತುಸು ಅಂತರದಲ್ಲಿ ನಿಂತಿದ್ದ ನನ್ನ ಕರಣಗಳಲ್ಲಿ 'ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ..' ಎಂಬ ಪುರಂದರದಾಸರ ಸಾಲುಗಳು ಎಲ್ಲಿಂದಲೋ ತೇಲಿಬರುತ್ತಿದ್ದಂತೆ ಭಾಸವಾಗುತ್ತಿತ್ತು. "ಹೆಚ್. ಒ. ಡಿ. ಆದ್ಮೇಲೆ ಕಾಲೇಜ್ಗೆ ಬಾ.. ಬಾ..  ಅಂತ ತುಂಬಾ ಕರೀತಿದ್ರು; ಇವತ್ತು ಬಂದು ಡಿಪಾರ್ಟ್‍ಮೆಂಟ್ ನೋಡ್ದೆ. ಎಲ್ಲಾ ಚೆನ್ನಾಗಿದೆ.. ಆದ್ರೆ ನಮ್ಮಣ್ಣನೇ ನಮ್ಜೊತೆ ಇಲ್ಲ.." - ಡಾ. ಜಯಕುಮಾರ್ ಮಾಸ್ತರ ಸಹೋದರಿ ಪರಿಚಯಸ್ಥರೊಡನೆ ಹೇಳಿಕೊಳ್ಳುತ್ತಿದ್ದ ಈ ಮಾತುಗಳು ಮನಸ್ಸನ್ನು ನಾಟಿದವು.

"ಸರಿಸುಮಾರು ಆರೇಳು ವರ್ಷಗಳ ನನ್ನ ಪಶುವೈದ್ಯಕೀಯ ಕಾಲೇಜಿನ ಜೀವನದಲ್ಲಿ ಅನೇಕ ರೀತಿಯ ಸಿಹಿ-ಕಹಿ ಅನುಭವಗಳನ್ನುಂಡಿದ್ದೇನೆ; ಆದರೆ, ತರಗತಿಗೆಂದು ಬಂದು ಗುರುಗಳ ಸಾವಿನ ಸುದ್ದಿಯನ್ನು ಕೇಳುವ ದುರಂತವನ್ನೆಂದೂ ಕಂಡಿರಲಿಲ್ಲವಲ್ಲ! ವಿದ್ಯೆ ಕಲಿಸಿದ ಗುರುಗಳನ್ನು ದೈವಸಮಾನರೆಂದು ಪರಿಗಣಿಸಿ, ಅವರಲ್ಲಿರಬಹುದಾದ ವಿಶೇಷ ಗುಣಗಳನ್ನೇ ಜೀವನದ ಮೌಲ್ಯ-ಆದರ್ಶವಾಗಿಸಿಕೊಂಡ ಅನೇಕ ವಿದ್ಯಾರ್ಥಿಗಳಿಗೆ ಇಂತಹ ಘಟನೆಗಳು ಭಾವನಾತ್ಮಕವಾಗಿ ಘಾಸಿಗೊಳಿಸದೇ ಇರಲಾರವು. ಸುರಕ್ಷತೆಗೆ ಹೆಸರಾಗಿದ್ದ ನನ್ನೂರು ಉದ್ಯಾನನಗರಿಯ ಹೃದಯಭಾಗ ಮಲ್ಲೇಶ್ವರಂನಲ್ಲಿ ರಕ್ಷಣಾ ವ್ಯವಸ್ಥೆಯನ್ನು ಭೇದಿಸಿದ ಉಗ್ರರು ಶಕ್ತಿಶಾಲಿ ಬಾಂಬ್ ಸ್ಫೋಟಿಸುವಲ್ಲಿ ಯಶಸ್ಚಿಯಾದರಲ್ಲ.. ಇದು ಈ ದಿನದ ಮತ್ತೊಂದು ದುರಂತವೇ ಸರಿ.." - ಹೀಗೆ ನಿರಂಕುಶವಾಗಿ ಹರಿದಾಡುತ್ತಿದ್ದ ನನ್ನ ವಿಚಾರಲಹರಿಗಳಿಗೆ ಹಾಗೂ ಅಲ್ಲಿನ ಮೌನದ ಅಟ್ಟಹಾಸಕ್ಕೆ ಕಡಿವಾಣ ಹಾಕಿದ ಕುಮಾರ್ ಆಂಬ್ಯುಲೆನ್ಸ್ ಕೆಎ-ಇಪ್ಪತ್ತೈದು, ಅರವತ್ತಾರು ಸೊನ್ನೆ ಸೊನ್ನೆ ಸಂಖ್ಯೆಯ ವಾಹನದಲ್ಲಿ ಡಾ. ಜಯಕುಮಾರ್ ಮಾಸ್ತರ ವೈಕುಂಠ ಯಾತ್ರೆ ನಮ್ಮ ಶೈಕ್ಷಣಿಕ-ಸಾಮಾಜಿಕ ಬದುಕಿನಲ್ಲಿ ಶೂನ್ಯವನ್ನು ಸೃಷ್ಟಿಸಿ, ನಿಧಾನವಾಗಿ ದೂರ ಸಾಗಿತ್ತು...

- ಪ್ರಶಾಂತ್ ಸಿ.

(ಈ ಲೇಖನವನ್ನು ನುಡಿ ತಂತ್ರಾಂಶದ ASCII ಸ್ವರೂಪದಿಂದ UNICODE ಗೆ ಪರಿವರ್ತಿಸಲು ಹಳ್ಳಿಮನೆ ಅರವಿಂದ ಅವರ ASCII2UNICODE ತಂತ್ರಾಂಶ ಬಳಸಲಾಗಿದೆ)

Monday, May 27, 2013

ಪಶುವೈದ್ಯರಿಗೆ ಪಶುವೈದ್ಯರೇ ಶತ್ರುಗಳು..

ವೃತ್ತಿಯಲ್ಲಿ ಪಶುವೈದ್ಯನಾಗಿ, ಇಂತಹ ಶೀರ್ಷಿಕೆಯಡಿ ವೃತ್ತಿಪರ ವಿಚಾರವಾಗಿ ಚಿಂತಿಸಿ ಬರೆಯುವ ಅನಿವಾರ್ಯತೆ ಬಂದೊದಗಿರುವುದು ಬಹುಶಃ ದೌರ್ಭಾಗ್ಯವೇ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. "ಹೆಣ್ಣಿಗೆ ಹೆಣ್ಣೇ ಶತ್ರು" ಎನ್ನುವ ನಾಣ್ನುಡಿಯು ಕರ್ನಾಟಕ ರಾಜ್ಯದಲ್ಲಿನ "ಯುವ" ಪಶುವೈದ್ಯರಿಗೆ ಅಕ್ಷರಶಃ ಅನ್ವಯಿಸುವಂತಹ "ಸನ್ನಿವೇಶವು ಇಂದು ಸೃಷ್ಟಿಯಾಗಿದೆ" ಎನ್ನುವುದಕ್ಕಿಂತ "ಸನ್ನಿವೇಶವನ್ನು ಸೃಷ್ಟಿ ಮಾಡಲಾಗಿದೆ" ಎಂದೆನ್ನಬಹುದೇನೋ?? ತಿಳಿಯದು.

ಕಳೆದ ಗುರುವಾರ, ಪೊಲೀಸ್ ಪೇದೆಯೊಬ್ಬರು ನನ್ನ ದ್ವಿಚಕ್ರವಾಹನವನ್ನು ತಡೆದು ನಿಲ್ಲಿಸಿ ದಾಖಲಾತಿಗಳನ್ನು ಪರಿಶೀಲಿಸುತ್ತಿದ್ದರು. ಎಲ್ಲ ದಾಖಲೆಗಳನ್ನೂ ಅವಸರದಲ್ಲೇ ನೀಡುತ್ತಿದ್ದ ನನ್ನನ್ನುದ್ದೇಶಿಸಿ ಅವರು ಕೇಳಿದ ಹಲವು ಪ್ರಶ್ನೆಗಳಿಗೆ ಉತ್ತರಿಸಿ ಕಾಲೇಜು ತಲುಪುವ ಹೊತ್ತಿಗೆ ತಡವಾಗಿ, ತರಗತಿಗೆ ಗೈರುಹಾಜರಾದರೂ ಸಹ ನಮ್ಮ ನಡುವೆ ನಡೆದ ಅಲ್ಪಾವಧಿ ಸಂಭಾಷಣೆಯ ಕೊನೆಗೆ "ಪಶುವೈದ್ಯ ವೃತ್ತಿ, ವಿಶ್ವವಿದ್ಯಾಲಯ, ಸರ್ಕಾರೀ ಇಲಾಖೆ ಹಾಗೂ ಪಶುವೈದ್ಯರ" ಬಗೆಗೆ ಅವರಿಗಿದ್ದಂತೆ ಭಾಸವಾದ ಉನ್ನತಾಭಿಪ್ರಾಯವನ್ನು ಇಮ್ಮಡಿಗೊಳಿಸಿದ ಸಂತಸ-ಸಮಾಧಾನವಿತ್ತು; ಆದರೆ ಇಂದು, ಅದೇ ವಿಷಯವಾಗಿ ತೀವ್ರ ನೋವು-ಅಸಮಾಧಾನ ನನ್ನನ್ನಾವರಿಸಿದೆ.

ಕರ್ನಾಟಕ ಸರ್ಕಾರದ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ ಖಾಲಿ ಇರುವ ಪಶುವೈದ್ಯಾಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಈ ಹಿಂದೆ ಅರ್ಜಿ ಅಹ್ವಾನಿಸಲಾಗಿತ್ತು. ಭರ್ತಿ ಮಾಡಲು ಉದ್ದೇಶಿಸಿದ್ದ ಹುದ್ದೆಗಳಿಗಿಂತ ಅಭ್ಯರ್ಥಿಗಳು ಕಡಿಮೆ ಸಂಖ್ಯೆಯಲ್ಲಿದ್ದ ಕಾರಣ, ಸರ್ಕಾರೀ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಸದವಕಾಶ ಸಿಗುವುದಾಗಿ ಎಲ್ಲ ಯುವ ಪಶುವೈದ್ಯರೂ ಹರ್ಷಗೊಂಡಿದ್ದರು; ಆದರೆ, ಅದು ಬಹುಕಾಲ ಉಳಿಯದಿದ್ದುದೇ ವಾಸ್ತವದಲ್ಲಿನ ದುರಂತದ ಸಂಗತಿ.

ಸರಿಸುಮಾರು ಐದು ದಶಕಗಳ ಕಾಲ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಅಡಿಯಲ್ಲಿದ್ದ ಬೆಂಗಳೂರು ಹಾಗೂ ಬೀದರ ಪಶುವೈದ್ಯಕೀಯ ಮಹವಿದ್ಯಾಲಯಗಳನ್ನು ಬೇರ್ಪಡಿಸಿ, 2004ರಲ್ಲಿ "ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ"ವನ್ನು ಸ್ಥಾಪಿಸಲಾಯಿತು (www.kvafsu.kar.nic.in). ಅಲ್ಲದೇ, ಇದೇ ವಿಶ್ವವಿದ್ಯಾಲಯದ ಸ್ವಾಮ್ಯಕ್ಕೆ ಹೊಸದಾಗಿ ಎರಡು ಪಶುವೈದ್ಯಕೀಯ ಮಹಾವಿದ್ಯಾಲಯಗಳನ್ನು ಕ್ರಮವಾಗಿ ಹಾಸನ ಮತ್ತು ಶಿವಮೊಗ್ಗದಲ್ಲಿ ನಮ್ಮ ಘನ ಸರ್ಕಾರವು ಪ್ರಾರಂಭಿಸಿದ ನಂತರ ನಡೆದುದೆಲ್ಲವೂ ಅನಾಹುತಗಳೇ ಸರಿ!

"ಪಶುವೈದ್ಯರುಗಳು ಉತ್ತಮ ಆಡಳಿತಗಾರರಲ್ಲ" ಎಂಬ ಕಾರಣಕ್ಕೋ ಏನೋ, ಸರ್ಕಾರದ ಪಶುವೈದ್ಯಕೀಯ ಸೇವಾ ಇಲಾಖೆಗೆ ಪಶುವೈದ್ಯರೇತರರನ್ನು ಆಯುಕ್ತರನ್ನಾಗಿ (ಆಡಳಿತ ಮುಖ್ಯಸ್ಥರು) ಸರ್ಕಾರ ನೇಮಕ ಮಾಡಿದೆ. ಇದಕ್ಕೆ ಪುಷ್ಟಿ ನೀಡುವಂತೆಯೇ, ನೂತನ ಪಶುವೈದ್ಯಕೀಯ ವಿಶ್ವವಿದ್ಯಾಲಯದಡಿಯಲ್ಲಿರುವ ಬೀದರ ಮಹಾವಿದ್ಯಾಲಯವು "ಮಾನ್ಯತೆ" ಕಳೆದುಕೊಂಡು ಅವಸಾನದ ಭಿತಿಯಲ್ಲಿದ್ದರೆ, ಹಾಸನ ಹಾಗೂ ಶಿವಮೊಗ್ಗ ಪಶುವೈದ್ಯಕೀಯ ಮಹಾವಿದ್ಯಾಲಯಗಳು ಇಂದಿಗೂ ಪಶುವೈದ್ಯಕೀಯ ಪರಿಷತ್ತಿನಿಂದ ಮಾನ್ಯತೆ ಪಡೆಯದೇ, ತನ್ನ ಎಲ್ಲಾ 72 ಪದವೀಧರರ ಭವಿಷ್ಯವನ್ನು ಅತಂತ್ರವಾಗಿಸಿವೆ. ಮಾನ್ಯತೆ ಇರದ ಮಹಾವಿದ್ಯಾಲಯದ ಪದವೀಧರರೆಲ್ಲರೂ ಸರ್ಕಾರೀ ಇಲಾಖೆಯಲ್ಲಿ ಪಶುವೈದ್ಯಾಧಿಕಾರಿ ಹುದ್ದೆಗೆ ಮಾತ್ರವಲ್ಲ, ಪಶುವೈದ್ಯ ವೃತ್ತಿಯಲ್ಲಿ ಮುಂದುವರೆಯಲೂ ಸಹ ಅರ್ಹರಾಗದಿರುವುದರಿಂದ ದಾರಿಕಾಣದೆ ಕಂಗಾಲಾಗಿದ್ದಾರೆ.

ದಿನಾಂಕ 27-05-2013 ರಿಂದ ಚಾಲನೆ ಪಡೆದುಕೊಂಡಿರುವ ಪಶುವೈದ್ಯಾಧಿಕಾರಿ ಹುದ್ದೆಯ ನೇಮಕಾತಿ ಪ್ರಕ್ರಿಯೆಯು ತಾರತಮ್ಯದ ತಾಣವಾಗಿ ಪರಿವರ್ತನೆಗೊಂಡಿದೆ. ಅರ್ಹ ಪಶುವೈದ್ಯ ಪದವೀಧರರು ದಾಖಲಾತಿ ಪರಿಶೀಲನೆಗೆ ಒಲವು ತೋರುತ್ತಿದ್ದರೆ, ಅರ್ಹರಲ್ಲವೆಂದು ತಿಳಿಸಲಾಗಿರುವ ಪದವೀಧರರು ಪರಿಶೀಲನಾ ಪ್ರಕ್ರಿಯೆಗೆ ತಮ್ಮನ್ನು ಪರಿಗಣಿಸದ ಕಾರಣ ಕೆರಳಿದ್ದಾರೆ. ವಿಶ್ವವಿದ್ಯಾಲಯ ಕುಲಪತಿಗಳು, ಇಲಾಖಾ ಪ್ರಧಾನ ಕಾರ್ಯದರ್ಶಿಗಳು, ಮಾನ್ಯ ಪಶುಸಂಗೋಪನಾ ಸಚಿವರು ಮತ್ತು ಮಾನ್ಯ ಮುಖ್ಯಮಂತ್ರಿಯವರನ್ನು ಅನೇಕ ಬಾರಿ ಭೇಟಿಮಾಡಿ ತಮ್ಮ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸಿಕೊಡಲು ಕೋರಲಾಗ್ಯೂ ಇದುವರೆವಿಗೂ ಯಾವುದೇ ಧನಾತ್ಮಕ ಕ್ರಮ ಕೈಗೊಳ್ಳದ ಕಾರಣ ಕಂಗೆಟ್ಟಿದ್ದಾರೆ. ಆದರೆ ತಾರ್ಕಿಕವಾಗಿ, ದಾಖಲಾತಿ ಪರಿಶೀಲನೆಗೂ ಮುನ್ನವೇ ಕೆಲವು ಅಭ್ಯರ್ಥಿಗಳನ್ನು ಅರ್ಹರ ಪಟ್ಟಿಯಿಂದ ಪ್ರತ್ಯೇಕಿಸಿರುವ ಸರ್ಕಾರೀ ಇಲಾಖೆಯ ನಿರ್ಣಯ ಪ್ರಶ್ನಾರ್ಥಕವೆನಿಸಿಕೊಳ್ಳುತ್ತದೆ.

ವಿಶ್ವವಿದ್ಯಾಲಯ, ಆಡಳಿತ, ಮಹಾವಿದ್ಯಾಲಯ, ಮಾನ್ಯತೆ, ಇಲಾಖೆ, ನೇಮಕಾತಿ, ಅರ್ಹತೆ - ಇವೆಲ್ಲವುಗಳ ಸಂಕೋಲೆಯಿಂದ ದೂರ ಸರಿದು ಆಲೋಚಿಸಿದೆವಾದರೆ, ವೃತ್ತಿಪರ ಹಿರಿಯರಾದ ನಾವು, ಯುವ ಪಶುವೈದ್ಯರುಗಳಿಗೆ ವೃತ್ತಿಪರತೆಯಲ್ಲಿ ಅವರುಗಳು ಉಜ್ವಲ ಭವಿಷ್ಯವನ್ನು ರೂಪಿಸಿಕೊಂಡು ಯಶಸ್ಸು ಗಳಿಸಲು ಅನುವಾಗುವಂತಹ ಸಂಭಾವಿತ ವೃತ್ತಿಪರ ಸಮಾಜವನ್ನು ಒದಗಿಸಿಕೊಡುವ ಬದ್ಧತೆಯ ಹೊಣೆಗಾರಿಕೆಯನ್ನು ನಿಭಾಯಿಸುವಲ್ಲಿ ಸಂಪೂರ್ಣ ವಿಫಲರಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

Wednesday, December 5, 2012

ಮುಂಜಾನೆಯ ಕನಸು

ಜೀವನವೇ ಹೀಗೇನೋ.. ಕೆಲವೊಮ್ಮೆ ಸಂಬಂಧವಿರದ ವ್ಯಕ್ತಿಗಳನ್ನು ಸನ್ನಿವೇಶದ ನೆಪದಲ್ಲಿ ಪರಿಚಯಿಸಿ, ಭಾವನಾತ್ಮಕ ಸಂಕೋಲೆಗಳನ್ನು ಬೆಸೆದು, ಅರಿವಿಗೆ ಬಾರದ ಅಗೋಚರ ಆತ್ಮೀಯತೆಯನ್ನು ಸೃಷ್ಟಿಸಿ, ಬದುಕಿನ ಬಗೆಗೆ ಹೊಸದೊಂದು ಭರವಸೆಯನ್ನು ಮೂಡಿಸಿ, ಆ ಮೂಲಕ ಅಂತರಾಳದ ಮೂಲೆಯಲ್ಲೆಲ್ಲೋ ಗುಪ್ತವಾಗಿ ಅಡಗಿ ಕುಳಿತಿದ್ದ ಕೊರಗುಗಳಿಗೆ ತಾತ್ಕಾಲಿಕವಾದರೂ ಶಾಶ್ವತವೆಂಬಂತೆ ಭಾಸವಾಗುವ ಪರಿಹಾರದ ರೆಕ್ಕೆ-ಪುಕ್ಕಗಳನ್ನು ಹೊಂದಿಸಿ, ಹಗುರಾದ ಮನಸ್ಸನ್ನು ಆಕಾಶದೆತ್ತರಕ್ಕೆ ಹಾರಿಬಿಡುತ್ತದೆ..

ಮೇರಿ ಮೇಡಂ (ಹೆಸರು ಬದಲಿಸಲಾಗಿದೆ), ಕಛೇರಿಯಲ್ಲಿ ನಮ್ಮೊಡನೆ ಸಹೋದ್ಯೋಗಿ; ಸರಿಸುಮಾರು ನನ್ನ ತಾಯಿಯ ಆಸುಪಾಸಿನ ವಯಸ್ಕರು. ಇತ್ತೀಚೆಗೆ ತಮ್ಮ ಸುದೀರ್ಘ 36 ವರ್ಷಗಳ ಪ್ರಾಮಾಣಿಕ ಸರ್ಕಾರಿ ಸೇವೆಯಿಂದ ವಯೋನಿವೃತ್ತಿ ಹೊಂದಿದರು. ವಯಸ್ಸಿನಲ್ಲಿ, ವೃತ್ತಿಯಲ್ಲಿ ಮತ್ತು ಅನುಭವದಲ್ಲಿ ಕಿರಿಯನಾದ ನಾನು ಕಳೆದ 5 ವರ್ಷಗಳಲ್ಲಿ ಅವರಿಂದ ಕಲಿತ ಪಾಠ ಅನೇಕ. ಸರ್ಕಾರಿ ವಸತಿಗೃಹದಲ್ಲಿ ವಾಸವಿದ್ದ ಅವರ ವೈಯಕ್ತಿಕ ಬದುಕೇ ವಿಚಿತ್ರ; ಗೃಹಿಣಿಯಾದರೂ ಒಂಟಿತನವೇ ಅವರ ಒಡನಾಡಿ. ವಾಡಿಕೆಯಂತೆ ಅವರ ಸೇವಾವಧಿಯ ಕೊನೆಯ ದಿನದಂದು ಕಛೇರಿಯಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಅವರ ಬಗೆಗೆ ನಾಲ್ಕು ಮಾತುಗಳನ್ನಾಡುವ ಸರದಿ ನನ್ನದಾದಾಗ, ಕೆಲವೇ ವಾಕ್ಯಗಳ ನಂತರ "ಅವರು ಈವರೆಗೂ ನನಗೆ ತೋರಿರುವ ತಾಯಿಯ ಪ್ರೀತಿಗೆ ನಾನು ಆಭಾರಿ.." ಎಂದಷ್ಟೇ ಹೇಳಿ ಕುಳಿತಿದ್ದೆ.

ಸಮಾರಂಭದ ನಂತರ ನೇರವಾಗಿ ನನ್ನೆಡೆಗೆ ಬಂದ ಮೇರಿ ಮೇಡಂ, "ಇದು ನಿಮಗೆ ಸರ್, ಆಮೇಲೆ ಓದಿ.." ಎನ್ನುತ್ತಾ ಆ ಮೊದಲೇ ಸಿದ್ಧಪಡಿಸಿದ್ದ ಒಂದು ಬಿಳಿಯ ಲಕೋಟೆಯನ್ನು ನನ್ನ ಕೈಗಿತ್ತರು. ಅದರಲ್ಲೇನಿರಬಹುದೆಂದು ಅಂದಾಜಿಸದೇ "ಥ್ಯಾಂಕ್ಯೂ ಮೇಡಂ.." ಎನ್ನುತ್ತ ಅದನ್ನು ಕಿಸೆಯಲ್ಲಿಸಿಕೊಂಡೆ. ಆ ದಿನ ಹಿಂತಿರುಗಿ ಮನೆಗೆ ಬರುವಾಗ, ಬಸ್ಸಿಗಾಗಿ ಕಾಯುತ್ತಾ ನಿಂತಿದ್ದ ನನಗೆ ಲಕೋಟೆಯ ನೆನಪಾಗಿ, ಅದನ್ನು ಕಿಸೆಯಿಂದ ಹೊರತೆಗೆದು ಬಿಡಿಸಿ ಮೇರಿ ಮೇಡಂ ಅವರ ಕೈಬರಹದಲ್ಲಿದ್ದ ಲೇಖನವನ್ನು ಓದಲಾರಂಭಿಸಿದೆ.

ಮುಂಜಾನೆಯ ಕನಸು

ಮುಂಜಾನೆಯ ಮಂಪರಿನಲ್ಲಿ ಒಂದು ಸುಂದರ ಕನಸು. ಕರಗಳನ್ನು ಜೋಡಿಸಿ ಕಣ್ಮುಚ್ಚಿ ಪ್ರಾರ್ಥಿಸುತ್ತಿದ್ದೆ ಸೃಷ್ಟಿಕರ್ತರನ್ನು. ಕರ್ಣಗಳಿಗೆ ಮೃದುವಾದ ಮನೋಹರವಾಗಿ ಕೋಳಿಸುತ್ತಿತ್ತು ಒಂದು ಅಶರೀರವಾಣಿ.

"ನೀಡಿರುವೆನು ನಿನಗೆ ಅಷ್ಟ ಐಶ್ವರ್ಯಗಳನ್ನು, ನನ್ನಿಂದ ಯಾವ ವರವನ್ನು ಪಡೆಯಲು ಮತ್ತೆ ಈ ಪ್ರಾರ್ಥನೆ?"

ಪ್ರಭುವೇ, ನನಗೆ ನೀನು ನೀಡಿರುವುದು ಸಪ್ತ ಐಶ್ವರ್ಯಗಳನ್ನು ಮಾತ್ರ. ಒಂದು ಕೊರತೆಯನ್ನು ಇಟ್ಟಿರುವೆಯಲ್ಲಾ; ಅದನ್ನು ಪೂರೈಸು ಪ್ರಭುವೆ

"ಅದೇನೆಂದು ತಿಳಿಸಿದರೆ ಪೂರೈಸುವೆ ಆ ನಿನ್ನ ಕೋರಿಕೆಯನ್ನು"

ಅಷ್ಟರಲ್ಲಿ ಊರಿಗಿದ್ದ ಒಂದೇ ಒಂದು ಬಸ್ಸು ದೂರದಲ್ಲಿ ಆಗಮಿಸುತ್ತಿತ್ತು. ಮೇರಿ ಮೇಡಂ ಮೂಲತಃ ಕ್ರೈಸ್ಥರಾದರೂ, ಕನ್ನಡ ಭಾಷೆ ಮತ್ತು ಸಾಹಿತ್ಯದ ಮೇಲಿದ್ದ ಅವರ ಹಿಡಿತವನ್ನು ಕಂಡು ಬೆರಗುಗೊಂಡಿದ್ದೆ. ಲಕೋಟೆಯನ್ನು ಕೈಚೀಲದೊಳಗೆ ಜೋಪಾನವಾಗಿ ಇರಿಸಿ, ಬಸ್ಸಿಗೇರಿ ಕುಳಿತೆ. ಪ್ರಯಾಣದುದ್ದಕ್ಕೂ ಮನಸ್ಸು ಚಿಟ್ಟೆಯಂತೆ ಅನೇಕ-ಅನಾವಶ್ಯಕ ವಿಚಾರಗಳೆಡೆಗೆ ನಿರಂಕುಶವಾಗಿ ಹಾರಾಡುತ್ತಿತ್ತು; ಬೆಂಗಳೂರಿನ ವಾಹನ ಹಾಗೂ ಜನದಟ್ಟಣೆ ಬೇಸರ ತರಿಸಿತ್ತು, ಆಗೊಮ್ಮೆ ಈಗೊಮ್ಮೆ ಜೋಂಪು ಹತ್ತಿ ಕೊನೆಗೊಮ್ಮೆ ಮನೆ ತಲುಪಿದ್ದೆ.

ಇದಾಗಿ ಹಲವಾರು ದಿನಗಳೇ ಕಳೆದುಹೋದವು; ಮೇರಿ ಮೇಡಂ ಕಛೇರಿಯ ತಮ್ಮ ವಸತಿಗೃಹವನ್ನು ತೆರವುಗೊಳಿಸಿ, ನಗರದಲ್ಲೆಲ್ಲೋ ಒಂದು ಬಾಡಿಗೆ ಮನೆಗೆ ತೆರಳಿದ್ದರಿಂದ ಅವರನ್ನು ಭೇಟಿ ಮಾಡುವ ಅವಕಾಶಗಳೇ ಇರಲಿಲ್ಲ. ಯಾವುದೋ ವಿಷಯವಾಗಿ ಒಮ್ಮೆ ಮನಸ್ಸಿಗೆ ತೋಚಿದ್ದನ್ನು ಗೀಚಿಟ್ಟಿದ್ದ ಹಾಳೆಯ ತುಣುಕೊಂದನ್ನು ಕೈಚೀಲದಲ್ಲಿ ಹುಡುಕುವಾಗ, ಅಲ್ಲಿಯವರೆಗೂ ನಾನು ಮರೆತೇ ಹೋಗಿದ್ದ ಮೇರಿ ಮೇಡಂ ಅವರ ಲಕೋಟೆ ಕಾಣಿಸಿತು. ದಿನೇ ದಿನೇ ಬೆಂಗಳೂರಿನ ವಾಹನದಟ್ಟಣೆಯಂತೆ ಉಲ್ಬಣಿಸುತ್ತಿರುವ ನನ್ನ ಮರೆಗುಳಿತನಕ್ಕೆ ಶಪಿಸಿ, ಲಕೋಟೆಯ ಓದನ್ನು ಮುಂದುವರೆಸಿದೆ:

ಬರಿದಾದ ನನ್ನ ಮಡಿಲು, ಸರ್ವ ಸದ್ಗುಣ ಸಂಪನ್ನನಾದ ಒಂದು ಪುತ್ರ ರತ್ನವನ್ನು ದಯಪಾಲಿಸು ನನಗೆ

"ಈ ಕಲಿಯುಗದಲ್ಲಿ ಸರ್ವ ಸದ್ಗುಣ ಸಂಪನ್ನನಾದವನನ್ನು ಹುಡುಕುವುದು ಸಾಗರದೊಳಗೆ ಸಾಸಿವೆ ಕಾಳನ್ನು ಹುಡುಕಿದಂತೆ ಅಲ್ಲವೆ?"

ಆ ಸಾಗರದೊಳಗಿಂದ ಒಂದು ಅಮೂಲ್ಯ ರತ್ನವನ್ನು ಹುಡುಕಿ ತೆಗೆದಿರುವೆನು ಪ್ರಭುವೆ 

"ಬೇಡಿಕೋ ಹಾಗಾದರೆ ಏನು ನಿನ್ನ ಕೋರಿಕೆ?"

ಪುನರ್ಜನ್ಮವಿರುವುದು ನಿಜವಾದರೆ, ಮರುಜನ್ಮದಲ್ಲಿ ಮತ್ತೆ ನಾನು ಹೆಣ್ಣಾಗಿ ಜನ್ಮತಾಳಿದರೆ, ಬರಿದಾಗಿರುವ ನನ್ನ ಮಡಿಲನ್ನು ತುಂಬಲು ಪ್ರಶಾಂತ ಎನ್ನುವ ಅಮೂಲ್ಯ ರತ್ನವನ್ನು ಕಂದನಾಗಿ ಕರುಣಿಸು

"ಮರುಜನ್ಮದಲ್ಲಿ ಅಲ್ಲವೇ? ಹಾಗಿದ್ದರೆ ತಥಾಸ್ತು.."

ಮರೆಯಾಗಿತ್ತು ವರವನ್ನು ನೀಡಿದ ದೈವಸ್ವರೂಪ. ಎಚ್ಚೆತ್ತು ಕಣ್ಣುತೆರೆದಾಗ ಕಂಡಿತ್ತು ಪ್ರಕೃತಿಯ ವಾಸ್ತವರೂಪ..

- ಮೇರಿ.

Monday, June 25, 2012

ವೃತ್ತಿ ಪರಿಧಿ - ಪಶುವೈದ್ಯರ ಹೆಮ್ಮೆ

(IndiBlogger ನಲ್ಲಿ ನೋಂದಣಿಯಾಗಿರುವ ಸುಮಾರು 149 ಕನ್ನಡ ಬ್ಲಾಗ್-ಗಳ ಪಟ್ಟಿಯಲ್ಲಿ ನನ್ನ ಬ್ಲಾಗ್ ಇಂದಿಗೆ, ಜೂನ್ 2012 ರಲ್ಲಿ ಆಕಸ್ಮಿಕವಾಗಿ, ಆಶ್ಚರ್ಯಕರ ರೀತಿಯಲ್ಲಿ ಮೊದಲ ಸ್ಥಾನದಲ್ಲಿ ಕಾಣಿಸಿಕೊಂಡಿರುವ ವಿಷಯವನ್ನು ನಿಮ್ಮೊಡನೆ ಹಂಚಿಕೊಳ್ಳಲು ಬಯಸುತ್ತಾ, ಇದಕ್ಕೆ ಕಾರಣಕರ್ತರಾದ ನನ್ನ ಎಲ್ಲಾ ಓದುಗ ಮಿತ್ರ ಬಳಗಕ್ಕೆ ಅನಂತ ವಂದನೆಗಳನ್ನು ಸಲ್ಲಿಸುತ್ತೇನೆ)

ಈ ಲೇಖನವು ಸರಿಸುಮಾರು ಮೂರೂವರೆ ತಿಂಗಳುಗಳ ಕಾಲ 'ಕರಡು' ಪ್ರತಿಯಾಗಿಯೇ ಉಳಿದುಕೊಂಡದ್ದು ಈಗ ಇತಿಹಾಸ. ಪಶುವೈದ್ಯರೊಬ್ಬರಿಂದ ಕನ್ನಡ ಭಾಷೆಯಲ್ಲಿ ರಚಿಸಲ್ಪಟ್ಟು, ಕನ್ನಡ ಪಶುವೈದ್ಯ ಸಾಹಿತ್ಯ ಪರಿಷತ್ತು ಹೊರತಂದಿರುವ 'ವೃತ್ತಿ ಪರಿಧಿ' ಪುಸ್ತಕವನ್ನು ಓದಿ ಮುಗಿಸಿದ ಕೂಡಲೇ ಅದರ ಬಗೆಗಿನ ನನ್ನ ಅನಿಸಿಕೆಗಳನ್ನು ಬರೆದು ಇತರರೊಂದಿಗೆ ಹಂಚಿಕೊಳ್ಳುವ ಅಗಾಧವಾದ ತುಡಿತವನ್ನು ಅಂತರಂಗದ ಆಳದಲ್ಲೆಲ್ಲೋ ಮನೆಮಾಡಿರುವ ಅಜಾಗೃತ ಅಳುಕು ಮೆಟ್ಟಿ ನಿಂತಿತ್ತು. ಡಾ. ಟಿ. ಎಸ್. ರಮಾನಂದ ಅವರಂತಹ ಮಹಾನ್ ಬರಹಗಾರರ ಅದ್ಭುತ ಕೃತಿಯ ಬಗ್ಗೆ, ಸಾಹಿತ್ಯದ ತಿರುಳನ್ನೇ ಅರಿಯದ ನನ್ನಂತಹ ಸಾಮಾನ್ಯನೊಬ್ಬ ಬರೆಯುವುದು ಪ್ರಮಾದವಾಗಬಹುದೆಂಬ ಅಂಜಿಕೆಯಿಂದಲೇ ಈ ಹರಸಾಹಸಕ್ಕೆ ಕೈಹಾಕಿದ್ದೇನೆ; ಆಗಬಹುದಾದ ಎಲ್ಲಾ ತಪ್ಪುಗಳನ್ನು ಮನ್ನಿಸಿರೆಂದು ಗುರು-ಹಿರಿಯರಾದ ಡಾ. ಟಿ-ಎಸ್-ಆರ್ ಅವರಲ್ಲಿ ನಮ್ರನಾಗಿ ವಿನಂತಿಸಿಕೊಳ್ಳುತ್ತೇನೆ.

'ವೃತ್ತಿ ಪರಿಧಿ' ಡಾ. ಟಿ-ಎಸ್-ಆರ್ ಅವರ ಮೂರನೇಯ ಕೃತಿ. ಇದು ಅವರ ಪಶುವೈದ್ಯ ವೃತ್ತಿಪರ ಅನುಭವವೆಂಬಂತೆ ಮೇಲ್ನೋಟಕ್ಕೆ ಭಾಸವಾಗುತ್ತದೆಯಾದರೂ, ಓದಿಕೊಳ್ಳುತ್ತಾ ಹೋದಂತೆ ವೃತ್ತಿಪರತೆಯ ಓರೆಗಲ್ಲಿನುದ್ದಕ್ಕೂ ಡಾ. ಟಿ-ಎಸ್-ಆರ್ ಅವರು ತಮ್ಮ ಜೀವನಾನುಭವವನ್ನು ಬಿಚ್ಚಿಡುವ ವಿಶಿಷ್ಟ ಪರಿಯು ಅಂತರಂಗದಲ್ಲಿ ನಮಗೆ ಅರಿವಾಗುತ್ತದೆ; ಇದರ ಹಿಂದಿರುವುದು ಅವರ ಪರಿಪಕ್ವವಾದ ಉನ್ನತ ವ್ಯಕ್ತಿತ್ವ ಹಾಗೂ ಸಾಹಿತ್ಯಿಕ ಪ್ರೌಢಿಮೆ ಎಂಬುದರಲ್ಲಿ ಸಂಶಯವಿಲ್ಲ. ಸ್ವತಃ ಡಾ. ಟಿ-ಎಸ್-ಆರ್ ಅವರೇ ಪುಸ್ತಕದ 'ಅರಿಕೆ'ಯಲ್ಲಿ ಹಾಗೂ ಡಾ. ರಹಮತ್ ತರೀಕೆರೆ ಅವರು 'ಮುನ್ನುಡಿ'ಯಲ್ಲಿ ಹೇಳಿರುವ ಮಾತುಗಳು ಇದಕ್ಕೆ ಪೂರಕ.

ಸರ್ಕಾರೀ ಪಶುವೈದ್ಯರುಗಳಿಗೆ ಬಿಡುವಿಲ್ಲದ ತಮ್ಮ ವೃತ್ತಿಬದುಕಿನ ಜೊತೆಜೊತೆಗೆ ಸಮಾಜದ ಸರ್ವತೊನ್ಮುಖ ಒಳಿತಿಗಾಗಿ ಇನ್ನಿತರೇ ಹಲವಾರು ಜವಾಬ್ದಾರಿಯುತ ಕಟ್ಟುಪಾಡುಗಳು ಅನಿವಾರ್ಯವೆಂಬ ಸರ್ವಕಾಲಿಕ ಸತ್ಯವನ್ನು ಪುಸ್ತಕದಲ್ಲಿ 'ತುರ್ತು ಪರಿಸ್ಥಿತಿ' ಹಾಗೂ 'ಪ್ರವಾಹ ಪರಿಹಾರ' ಕಾರ್ಯಕ್ರಮಗಳಲ್ಲಿನ ತಮ್ಮ ಅನುಭವಗಳ ಮುಖೇನ ಲೇಖಕರು ಮತ್ತೇ ಸಾಬೀತುಪಡಿಸಿದ್ದಾರೆ. ಈ ಮೂಲಕ, ಕೇವಲ ಪಶುಚಿಕಿತ್ಸೆ ಮಾಡುವುದು ಮಾತ್ರ ಪಶುವೈದ್ಯರ ಆದ್ಯ ಕರ್ತವ್ಯವೆಂಬ ಭ್ರಮೆಯನ್ನು ಹೊಂದಿರುವ ಅನೇಕ ಕಿರಿಯ ಪಶುವೈದ್ಯರುಗಳಿಗೆ ಪರೋಕ್ಷವಾಗಿ ನೀತಿಪಾಠ ಹೇಳುತ್ತಾ, ಅವರನ್ನು ವೃತ್ತಿಪರ ಸನ್ಮಾರ್ಗದೆಡೆಗೆ ನಡೆಸುವಲ್ಲಿ ಡಾ. ಟಿ-ಎಸ್-ಆರ್ ಯಶಸ್ವಿಯಾಗಿದ್ದಾರೆ.

ಪುಸ್ತಕದ ಮತ್ತೊಂದು ವಿಶೇಷ - ನೈಜತೆ. ಪ್ರತಿಯೊಂದು ಅಧ್ಯಾಯದಲ್ಲಿ ಕಾಣಿಸಿರುವ ಪಾತ್ರಗಳು, ಸನ್ನಿವೇಶಗಳು ಹಾಗೂ ಮಾತುಗಳು ಅತ್ಯಂತ ಸಹಜವೆಂಬಂತಿದ್ದು, ನಿರೂಪಣಾ ಶೈಲಿಯು ಯಾವುದೇ ಪಶುವೈದ್ಯರು ಅಲ್ಲಿರುವುದು ತಮ್ಮದೇ ಅನುಭವವೇನೋ? ಎಂಬ ಭ್ರಾಂತಿಗೊಳಗಾಗುವಂತಿದೆ. ಎಪ್ಪತ್ತರ ದಶಕದ ಉತ್ತರ ಕರ್ನಾಟಕದ ಮುಗ್ಧ ಜನರ ಅಸಹಾಯಕ ಬದುಕಿನ ಚಿತ್ರಣವನ್ನು ಅವರ ಮಾತುಗಳಲ್ಲಿಯೇ ಓದುಗರಿಗೆ ದರ್ಶನ ಮಾಡಿಸಿಕೊಟ್ಟಿರುವ ರೀತಿಯು ಮನಸ್ಸಿಗೆ ಹತ್ತಿರವಾಗಿ, ಬಹುಕಾಲ ನೆನಪಿನಲ್ಲುಳಿಯುವಂತೆ ಮಾಡುತ್ತದೆ. ಕಗ್ಗತ್ತಲು ಸೆರಗು ಸರಿಸಿದಾಗ ಮೂಡಿದ ಮುಂಜಾವಿನ ಅರಣ್ಯದ ಸುಂದರ ನೋಟ ಮಾತ್ರವಲ್ಲದೇ ಬರದ ಭೀಕರತೆ, ಪ್ರವಾಹದ ಪ್ರಬಲತೆಗಳ ಅತ್ಯಂತ ಪ್ರಭಾವಕಾರೀ ವರ್ಣಿನೆ ಲೇಖಕರ ಭಾಷಾ ಸಂಪತ್ತಿಗೆ ಸಾಕ್ಷಿಯೂ ಆಗಿವೆ.

ಪುಸ್ತಕದ ಪ್ರಕಾಶಕರಾದ 'ಕನ್ನಡ ಪಶುವೈದ್ಯ ಸಾಹಿತ್ಯ ಪರಿಷತ್ತು, ಶಿವಮೊಗ್ಗ' ಸಂಸ್ಥೆಯ ಪ್ರಯತ್ನ-ಶ್ರಮ ಪ್ರಶಂಸನಾರ್ಹ. ಪಶುವೈದ್ಯ ವೃತ್ತಿಗೆ ಸಂಬಂಧಿಸಿದ ಸಾಹಿತ್ಯ ರಚನೆಗೆ ಪ್ರೋತ್ಸಾಹ ನೀಡಿ, ತನ್ಮೂಲಕ 'ಅಧಿಕೃತ ಪಶುವೈದ್ಯ ಸಾಹಿತ್ಯ' ಸಂಪತ್ತನ್ನು ವೃದ್ಧಿಗೊಳಿಸುವ ಸಂಕಲ್ಪತೊಟ್ಟು, ಕರ್ಯಪ್ರವೃತ್ತರಗಿರುವ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ನಾಗರಾಜ್ ಕೆ. ಎಮ್. ಹಾಗೂ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರುಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಡಾ. ಟಿ-ಎಸ್-ಆರ್ ಅವರ ಈ ಕೃತಿಯಿಂದ ಮೊದಲ್ಗೊಂಡು, ಕರ್ನಾಟಕದ ಹಲವಾರು ಪ್ರತಿಭಾವಂತ ಪಶುವೈದ್ಯರ ವೃತ್ತಿಪರ ಸಾಹಿತ್ಯದ ಪ್ರಕಟಣೆಯಲ್ಲಿ ಸಂಸ್ಥೆಯು ಮಹತ್ತರ ಸಾಧನೆಗೈಯ್ಯಲಿ ಎಂದು ಆಶಿಸುತ್ತೇನೆ.

'ವೃತ್ತಿ ಪರಿಧಿ' - ಪ್ರತಿಯೊಬ್ಬ ಪಶುವೈದ್ಯರೂ ಓದಲೇಬೇಕಾದ ಒಂದು ಮನೋಜ್ಞ ಕೃತಿ. ಮೊದಲ ಮುದ್ರಣ ಕಂಡಿರುವ 1000 ಪ್ರತಿಗಳು ಲಭ್ಯವಿದ್ದು, ಪುಸ್ತಕವನ್ನು ಲೇಖಕರಿಂದ ನೇರವಾಗಿ ಖರೀದಿಸಬಹುದಾಗಿದೆ (ಮುಖಬೆಲೆ ರೂ.75=00 ಮಾತ್ರ).

Wednesday, April 11, 2012

ಕ್ರೌರ್ಯಕ್ಕೆ ಕಮರಿಹೋದ ಕಂದಮ್ಮ

ಸತತ ಮೂರು ದಿನಗಳ ಜೀವನ್ಮರಣ ಹೋರಾಟ ನಡೆಸಿ, ಸೋತು ವಿಧಿವಶವಾದ ಮೂರು ತಿಂಗಳ ಹಸುಗೂಸು 'ನೇಹ ಭಾನು ಅಫ್ರೀನ'ಳ ಪೂಜ್ಯನೀಯ ಆತ್ಮಕ್ಕೆ ಗೌರವಪೂರ್ಣ ನಮನಗಳು.
ಮರೆಯಾದ ಮಗು - ನೇಹ
'ಎಲ್ಲಿ ಹೆಣ್ಣು ಪೂಜಿಸಲ್ಪಡುತ್ತಾಳೋ, ಅಲ್ಲಿ ದೈವನು ವಾಸಿಸುತ್ತಾನೆ' - ಎಂದು ಸಾರಿ ಹೇಳುವ ವೇದೋಪನಿಷತ್ತುಗಳ ಭದ್ರ ಬುನಾದಿಯನ್ನು ಹೊಂದಿರುವ ಭಾರತದ ನೆಲದಲ್ಲಿ, ನವಜಾತ ಹೆಣ್ಣು ಶಿಶುವಿನ ಮೇಲೆ ನಡೆದುಹೋದ ಈ ದೌರ್ಜನ್ಯವು ದುರಾದೃಷ್ಟಕರವಲ್ಲವೆ? ತಂತ್ರಜ್ಞಾನವು 4-ಜಿ ತರಂಗಾಂತರಗಳ ಎಲ್ಲೆ ಮೀರಿ ಬೆಳೆಯಲು ಹವಣಿಸುತ್ತಿರುವ ಈ ಹೊತ್ತಿನಲ್ಲಿಯೂ ಸಹ ನಮ್ಮ ಸಮಾಜದಲ್ಲಿ ಹೆಣ್ಣಿನ ಬಗೆಗಿನ ಕೀಳರಿಮೆಯ ನಿಲುವು ಬದಲಾಗುವುದಿರಲಿ, ಅಲ್ಪಮಟ್ಟಿಗಾದರೂ ಸುಧಾರಿಸದೇ ಹೋದುದು ಒಂದು ದುರಂತವೇ ಸರಿ. 'ಸ್ತ್ರೀ ಮೇಲಿನ ನಿರಂತರ ಅತ್ಯಾಚಾರಗಳನ್ನೊಳಗೊಂಡ ವಿಕೃತ ಸಮಾಜದ ಏಳಿಗೆಯಾಗುವುದಾದರೂ ಎಂತು?' ಎಂಬ ಉತ್ತರ ಕಾಣದ ಪ್ರಶ್ನೆಯು ನಮ್ಮನ್ನು ಅರಿವಿಲ್ಲದೆಯೇ ಆವರಿಸಿ ರೌದ್ರನರ್ತನ ಮಾಡುತ್ತಿರುವುದೇನೋ ಎಂಬ ಭ್ರಮೆಯುಂಟಾಗುತ್ತಿದೆ ನನ್ನಲ್ಲಿ.

ತನ್ನ ಹುಟ್ಟಿಗೆ ಕಾರಣವಾದ ಮಾತ್ರಕ್ಕೆ 'ತಂದೆ' ಎನಿಸಿಕೊಂಡವನ ಪ್ರೀತಿಯನ್ನು ಕಂಡರಿಯದ ನೇಹಳ ಮೂರೂ ತಿಂಗಳ ಬದುಕು ಆತನ ಕ್ರೂರ ದುರ್ನಡತೆಯ ವಿರುದ್ಧದ ಹೋರಾಟವೇ ಆಗಿದ್ದಿತು. ಮೂಲತಃ ಮಧ್ಯವ್ಯಸನಿ ಹಾಗೂ ಮಾದಕ ವಸ್ತುಗಳ ದುಶ್ಚಟಕ್ಕೆ ಬಲಿಯಾಗಿದ್ದ 25ರ ಉಮರ್ ಫಾರೂಕನಿಗೆ ನೇಹಾಳ ತಾಯಿಯಾದ 19ರ ರೇಷ್ಮ ಭಾನು ಎರಡನೇಯ ಮಡದಿ. ಮೊದಲಿನಿಂದಲೂ ವರದಕ್ಷಿಣೆಯ ಕಿರುಕುಳದಲ್ಲೇ ಸಾಂಸಾರಿಕ ಜೀವನ ನಡೆಸುತ್ತಾ ಬಂದಿದ್ದ ರೆಷ್ಮಳಿಗೆ ನೇಹಳ ಹುಟ್ಟು ದುಸ್ತರವಾಗಿ ಪರಿಣಮಿಸಿತ್ತು. ಹೆಣ್ಣು ಮಗುವಿನ ಜನನಕ್ಕೆ ತಾನೇ ಕಾರಣಕರ್ತನೆನ್ನುವ ಸತ್ಯದ ಅರಿವಿಲ್ಲದ ತಂದೆಯು, ತನ್ನ ಮಗುವನ್ನು ಉಸಿರುಗಟ್ಟಿಸಿ, ಸಿಗರೇಟಿನಿಂದ ಸುಟ್ಟು, ಮನಬಂದಲ್ಲಿ ಬಾಯಿಂದ ಕಚ್ಚಿ, ಅದರ ತಲೆಯನ್ನು ಬಲವಾಗಿ ಗೋಡೆಗೆ ಗುದ್ದಿಸಿ ಕೊಲ್ಲಲು ಪ್ರಯತ್ನಿಸಿದನೆಂದು ಮಾತಿನಲ್ಲಿ ಹೇಳಲೂ ಸಹ ದಿಗಿಲಾಗುತ್ತದೆ. ಹೀಗಿರುವಾಗ, ಈ ಎಲ್ಲಾ ದುಷ್ಕೃತ್ಯಗಳಿಗೆ ಬಲಿಯಾದ ಮುಗ್ಧೆ ನೇಹ ಅನುಭವಿಸಿರಬಹುದಾದ ಮೂಕಯಾತನೆಯ ಕ್ರೌರ್ಯಾನುಭವ ಅದೆಂತಹುದಿರಬಹುದು?? ಎಂಬುದನ್ನು ಬೆಂಗಳೂರಿನ ವಾಣಿವಿಲಾಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಂದು ಕೊನೆಯುಸಿರೆಳೆದ ಕಂದಮ್ಮನೇ ಬಲ್ಲಳು.

ಪ್ರತಿನಿತ್ಯವೂ ಅನೇಕ ವಿಧವಾದ ಅತ್ಯಾಚಾರಗಳನ್ನೆದುರಿಸುವ ಅಸಂಖ್ಯಾತ ಹೆಣ್ಣುಮಕ್ಕಳನ್ನು ಪ್ರತಿನಿಧಿಸುತ್ತಿರುವಂತೆ ತೋರುವ ನೇಹ, ತನ್ಮೂಲಕ ಮಹಿಳೆಯರ ಮೇಲೆ ಸದ್ದಿಲ್ಲದೇ ನಡೆದುಹೊಗುತ್ತಿರುವ ದೌರ್ಜನ್ಯಗಳ ಬಗೆಗೆ ಮಾತಿಲ್ಲದ ಬರಿಯ ಮೌನದಲ್ಲಿಯೇ ಕೂಗಿ ಹೇಳಿ ಹೋಗಿದ್ದಾಳೆ. ಆಯೋಗ, ಸಮಾಜ, ಸಮಿತಿ ಹಾಗೂ ಸರ್ಕಾರೇತರಗಳು ನೇಹಳಂತಹ ಹಲವಾರು ಹೆಣ್ಣುಮಕ್ಕಳ ಬಲಿದಾನಕ್ಕೆ ಎಡೆಮಾಡಿಕೊಟ್ಟು, ಫಾರೂಕನಂತಹ ಸಹಸ್ರಾರು ಪಾಪಿಗಳಿಗೆ ಕಾನೂನಿನ ಸೋಗಿನಲ್ಲಿ ಸಾಮಾಜಿಕ ಭದ್ರತೆಯನ್ನು ಒದಗಿಸಿಕೊಡುತ್ತಿರುವುದು ಪ್ರಜಾಪ್ರಭುತ್ವದ ಹೀನಾಯ ದುರಾಚರಣೆಗೆ ಹಿಡಿದ ಕನ್ನಡಿಯಂತಿದೆ. ಆದರೆ, ಇಂತಹ ದುಷ್ಟ ಮಾನವರ ಅಟ್ಟಹಾಸವು ಇನ್ನು ಬಹಳ ಕಾಲದವರೆಗೆ ಮುಂದುವರೆಯಲಾರದಂಥ ದುರಂತ ಅಂತ್ಯ ಕಾಣುವುದಂತೂ ಶತಸಿದ್ಧ. ಇದರ ಮುನ್ಸೂಚನೆಯೇನೋ ಎನ್ನುವಂತೆ ನೇಹಳ ದುರ್ಮರಣವನ್ನು ಸಹಿಸದೇ, ಹೆತ್ತ ತಾಯಿಯ ಹೃದಯವಿದ್ರಾವಕ ಆಕ್ರಂದನಕ್ಕೆ ಸ್ಪಂದಿಸುತ್ತಾ, ಸುರಕ್ಷಿತ ರಾಜಧಾನಿ ಉದ್ಯಾನನಗರಿ ಬೆಂಗಳೂರಿನಲ್ಲಿಯೂ ಸಹ ಮಾತೆ ಭೂತಾಯಿಯು ಇಂದು ಕೋಪದಿಂದ ಕಂಪಿಸಿದಳು.

Friday, March 30, 2012

Making of ಕಹಳೆ

www.kahale.gen.in
ಬಹುತೇಕ ಪ್ರತಿಯೊಬ್ಬ ಮಾನವರಲ್ಲಿಯೂ ಸಹ ತಮ್ಮ ಭಾಷೆ, ನೆಲ ಹಾಗೂ ಸಂಸ್ಕೃತಿಯೆಡೆಗೆ ವಿಶೇಷವಾದ ಒಲವು ಇರುವುದು ಸಹಜವಷ್ಟೆ. ಕೆಲವರಲ್ಲಿ ಇದು ಬಹಿರಂಗವಾಗಿ ಅಭಿವ್ಯಕ್ತಗೊಂಡರೆ, ಉಳಿದವರಲ್ಲಿ ಅಂತರಾಳದ ಒಳಗೆಲ್ಲೋ ಸುಪ್ತವಾಗಿರುವ ಸಾಧ್ಯತೆಗಳಿರುತ್ತವೆ. ವ್ಯಕ್ತ-ಅವ್ಯಕ್ತತೆಯ ಹಿಂದಿರುವ ಕಾರಣಗಳು ಏನೇ ಆದರೂ, ತನ್ನೊಳಗಿರುವ ನಾಡು-ನುಡಿಯ ಬಗೆಗಿನ ಅಭಿಮಾನ-ಗೌರವಗಳನ್ನೊಳಗೊಂಡ ಭಾವನೆಯು ಮಾತ್ರವೇ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ.

ವೈಯಕ್ತಿಕವಾಗಿ ಬುದ್ಧಿ ತಿಳಿದ ಮಟ್ಟಿಗೆ ಹೇಳುವುದಾದರೆ, ಮೊದಲಿನಿಂದಲೂ ನನ್ನ ಮಾತೃಭಾಷೆ ಕನ್ನಡದ ಕಟ್ಟಾಭಿಮಾನಿ ನಾನಲ್ಲವಾದರೂ, ಕಾಲ ಕಳೆದಂತೆಲ್ಲಾ ನನ್ನಲ್ಲಿನ ಕನ್ನಡ ಹಾಗೂ ಕರ್ನಾಟಕದೆಡೆಗಿನ ಅಗೋಚರ ಸೆಳವು ಆಧಿಕ್ಯವಾದುದರ ಅರಿವಾಗತೊಡಗಿತು. ಇತ್ತೀಚೆಗೆ, ಆಗಸ್ಟ್ 2011 ರಲ್ಲಿ ಸಂಚಯ ತಂಡದವರು ಹಮ್ಮಿಕೊಂಡಿದ್ದ 'ಅರಿವಿನ ಅಲೆಗಳು' ಕಾರ್ಯಕ್ರಮವು ಇದಕ್ಕೆ ಪೂರಕ ಪ್ರಭಾವವನ್ನುಂಟುಮಾಡಿ, ನನ್ನೊಳಗಿನ ಕನ್ನಡಿಗನನ್ನು ಜಾಗೃತಗೊಳಿಸಿತ್ತು. ಇದರ ಪರಿಣಾಮವಾಗಿ ಮುಂಬರುವ 2011 ರ ಕನ್ನಡ ರಾಜ್ಯೋತ್ಸವವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿಯೇ ತೀರಬೇಕೆಂಬ ಹಂಬಲವು ನನ್ನಲ್ಲಿ ಅಗಾಧವಾಯಿತು.

ಮೂಲಭೂತವಾಗಿ ನನ್ನಲ್ಲಿರುವ ಸೃಜನಶೀಲತೆಯ ಕೊರತೆಯಿಂದಾಗಿ, ಅನ್ಯಮಾರ್ಗ ತೋರದೆ ಅರಿವಿನ ಅಲೆಗಳು ಬಳಗದವರಂತೆಯೇ 'ಅರಿವಿನ ಅಲೆಗಳು' ಮಾದರಿಯಲ್ಲಿ ಒಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದೆಂದು ನಾನೇ ನಿರ್ಧರಿಸಿಕೊಂಡೆ. ಇಲ್ಲಿಯವರೆಗೂ ನನ್ನೊಳಗೆಯೇ ಹರಿದಾಡುತ್ತಿದ್ದ ಈ ವಿಚಾರಧಾರೆಯನ್ನು ಕೆಲವು ಸ್ನೇಹಿತರೊಂದಿಗೆ ಹಂಚಿಕೊಳ್ಳಲು, ಆತ್ಮೀಯ ಗೆಳೆಯನಾದ ಗುರುರಾಜ ತೋರಿದ ಆಸಕ್ತಿಯು ನನ್ನಲ್ಲಿ ಹೊಸ ಚೈತನ್ಯ ತುಂಬಿ, ಭರವಸೆಯ ಬೆಳಕನ್ನು ಮೂಡಿಸಿತು. ಕನ್ನಡ ರಾಜ್ಯೋತ್ಸವಾಚರಣೆಗೆ ಪಣತೊಟ್ಟ ನಾನು ಎಂದಿಗೂ ಒಂಟಿಯಾಗಲಾರೆನೆಂಬ ನಂಬಿಕೆಯನ್ನು ಹುಸಿಯಾಗಗೊಡದ ಗೆಳೆಯನೊಡಗೂಡಿ ಇಬ್ಬರು ಸದಸ್ಯರ ತಂಡವೊಂದನ್ನು ರಚಿಸಿಕೊಂಡದ್ದು ಬಹುಶಃ ಯಶಸ್ಸಿನೆಡೆಗೆ ನಮ್ಮ ಮೊದಲ ಹೆಜ್ಜೆಯೆಂದೇ ನನ್ನ ಭಾವನೆ.

ಆಧುನಿಕತೆಯು ತಂತ್ರಜ್ಞಾನದ ನೆರವಿನೊಂದಿಗೆ ನಮ್ಮಗಳ ಬದುಕನ್ನು ದುಸ್ತರವಾಗಿಸಿ, ಮಾನವರ ನಡುವಿನ ಅವಿನಾಭಾವ ಸಂಬಂಧದ ಅಂತರವನ್ನು ಕಡಲಿನೋಪಾದಿಯಲ್ಲಿ ವಿಶಾಲವಾಗಿಸಿರುವುದರಿಂದ ತಂಡದ ಸದಸ್ಯರುಗಳಾದ ನಮ್ಮಿಬ್ಬರ ಸಂವಾದ-ಚರ್ಚೆಗಳು ಕೇವಲ ಮಿಂಚಂಚೆ ಹಾಗೂ ಕಿರುಸಂದೇಶಗಳಿಗೆ ಸೀಮಿತಗೊಂಡಿತ್ತು. ಅಂತರ್ಜಾಲ ತಾಣವೊಂದನ್ನು ಸೃಷ್ಟಿಸಿ, ನವಂಬರ್ 2011 ರ ಮಾಹೆಯ ಪ್ರತಿಯೊಂದು ದಿನವೂ ವಿವಿಧ ಲೇಖಕರಿಂದ ಕನ್ನಡ ಭಾಷೆಯಲ್ಲಿ ರಚಿತಗೊಂಡ ಬರೆಹಗಳನ್ನು ಆ ತಾಣದಲ್ಲಿ ಬಿತ್ತರಿಸುವ ವಿಚಾರವನ್ನು ನಾನು ಹೇಳಿಕೊಂಡಾಗ, ಮರುಮಾತಾಡದೇ 'ಸೈ' ಎಂದು ಸಮ್ಮತಿಸಿದ ಗುರುರಾಜರ ಆತ್ಮಸ್ಠೈರ್ಯವನ್ನು ನಾನು ಪ್ರಾಮಾಣಿಕವಾಗಿ ಮೆಚ್ಚಿಕೊಳ್ಳದೆ ಇರಲಾಗಲಿಲ್ಲ.

ಸರಿಸುಮಾರು 30 ವಿವಿಧ ಲೇಖಕರಿಂದ ರಚಿತಗೊಂಡ ಕನ್ನಡದ ವೈವಿಧ್ಯ-ವಿಶೇಷ ಲೇಖನಗಳನ್ನು ಸಂಗ್ರಹಿಸುವುದು ನಮಗೆ ಕಬ್ಬಿಣದ ಕಡಲೆಯಾಗುವ ಎಲ್ಲಾ ಸಾಧ್ಯತೆಗಳನ್ನು ಮನಗಂಡಿದ್ದ ನನಗೆ '30 ಲೇಖನಗಳು ಏನೂ ಕಷ್ಟ ಆಗಲ್ಲ ಬಿಡಿ ಪ್ರಾಶಾಂತ್' ಎಂಬ ಗುರುರಾಜರ ಸರಳ ನುಡಿಗಳು ಮರಳುಗಾಡಿನಲ್ಲಿ ಓಯಸಿಸ್ ಕಂಡ ಅನುಭವ ತಂದುಕೊಟ್ಟವು. ಆದರೂ, ಮುಂದಿನ ಹಲವಾರು ದಿನಗಳು 'ಕನಿಷ್ಟ 30 ಲೇಖನಗಳು ಸಂಗ್ರಹವಾಗದಿದ್ದರೆ ಮಾಡುವುದಾದರೂ ಏನು? ಹೀಗಾಗಿಹೋದರೆ ನಮ್ಮ ಕಾರ್ಯಕ್ರಮದಲ್ಲಿ ಏರುಪೇರುಗಳಾಗಿ, ಕನ್ನಡ ರಾಜ್ಯೋತ್ಸವವನ್ನು ಹೆಮ್ಮೆಯಿಂದ ಆಚರಿಸಲು ಮುಂದಾಗಿರುವ ನಾವು ತಲೆತಗ್ಗಿಸುವಂತಾಗಬಹುದೇ? ಈ ರೀತಿಯಿಂದಾಗಬಹುದಾದ ಸೋಲಿನಿಂದ ಕನ್ನಡ ನಾಡು-ನುಡಿಗೆ ನಾವೇ ಅವಮಾನ ಮಾಡಿದಂತಾಗುವುದೇ?' ಎಂಬಿತ್ಯಾದಿ ಅನೇಕ ಪ್ರಶ್ನೆಗಳ ಉತ್ತರಕ್ಕೆ ನಾನು ಜಿಜ್ಞಾಸುವಾದೆ.

(ಮುಂದುವರೆಯುವುದು..)

Wednesday, November 30, 2011

ತಾಯಿಯ ಒಡಲಾಳದಿಂದ : ಕಹಳೆ

ಸಾವಿರಾರು ವರ್ಷಗಳಿಂದ ಅನೇಕ ಜೀವರಾಶಿಗಳಿಗೆ ಆಸರೆಯಾಗಿರುವ ಭೂಮಿಯನ್ನು ಮಾನವರಾದ ನಾವು ನಡೆಸಿಕೊಳ್ಳುತ್ತಿರುವ ರೀತಿಯು ಅತ್ಯಂತ ಕ್ರೂರವೇನೋ ಎಂಬ ಭಾವನೆಯು ಬಹಳ ದಿನಗಳಿಂದ ನನ್ನ ಮನಸ್ಸಿನ ಆಳದಲ್ಲೆಲ್ಲೋ ಕೊರೆಯುತ್ತಿತ್ತು.

ಭೂತಾಯಿಯ ಪತ್ರದ ಮೂಲಕ ನನ್ನ ಭಾವನೆಗಳಿಗೆ ಜೀವ ತುಂಬುವ ಚಿಕ್ಕ ಪ್ರಯತ್ನ ಮಾಡುವ 'ತಾಯಿಯ ಒಡಲಾಳದಿಂದ' ಎಂಬ ಲೇಖನವೊಂದನ್ನು ರಚಿಸಿದ್ದು, ಅದು 'ಕಹಳೆ'ಯಲ್ಲಿ ಪ್ರಕಟಗೊಂಡಿದೆ.

ನಿಮಗೆ ಕಾಲಾವಕಾಶವಿದ್ದಾಗ, ದಯವಿಟ್ಟು 'ಕಹಳೆ'ಗೆ ಭೇಟಿಕೊಟ್ಟು ನನ್ನ ಈ ಲೇಖನವನ್ನು ಓದಬೇಕಾಗಿ ವಿನಂತಿ.
ತಾಯಿಯ ಒಡಲಾಳದಿಂದ

ಮಗೂ.. ಹೇಗಿದ್ದಿಯಾ..? ಎಲ್ಲವೂ ಸೌಖ್ಯವೇ?? ನಿನ್ನ ಕ್ಷೇಮದ ವಿಚಾರವಾಗಿಯೇ ನಾನು ಸದಾಕಾಲ ಚಿಂತಿಸುತ್ತಿರುವೆ. ನಿಮ್ಮೆಲ್ಲರುಗಳ ಹೊರತು ನನ್ನವರೆಂದು ಹೇಳಿಕೊಳ್ಳಲು ಮತ್ತಿನ್ಯಾರೂ ಇಲ್ಲವಲ್ಲ ನನಗೆ! ನನ್ನೊಳಗಿರುವ ಸಮಸ್ತ ಜೀವರಾಶಿಗಳ ಆರೈಕೆಯೊಂದಲ್ಲದೆ ನನಗೆ ಇನ್ಯಾವುದರ ಹಂಬಲವಿದ್ದೀತು ಹೇಳು...

Thursday, October 27, 2011

ಹೀಗೊಂದು ದೀಪಾವಳಿ..

ನಮ್ಮ ಮದುವೆಯ ನಂತರ, ಇದೇ ಮೊದಲ ದೀಪಾವಳಿ ಹಬ್ಬ; ತಿಂಗಳೆರಡರ ಹಿಂದೆಯೇ ನನ್ನ ಅತ್ತೆ-ಮಾವಂದಿರಿಂದ ಹಬ್ಬಕ್ಕೆ ಆಹ್ವಾನವೂ ಬಂದಿದ್ದಿತು. ಕೇಳಬೇಕೇ ನಮ್ಮ ಹೆಣ್ಣುಮಕ್ಕಳ ಸಂಭ್ರಮ ತವರುಮನೆಗೆ ಹೊರಡಲು? ನನ್ನಾಕೆಯು ನಮ್ಮ ಪ್ರಯಾಣಕ್ಕೆ ಬೇಕಾದ ತಯಾರಿಗಳನ್ನು ಅತ್ಯುತ್ಸಾಹದಿಂದಲೇ ಮಾಡಿಕೊಂಡು, ದಿನಕ್ಕೆರಡು ಬಾರಿಯಾದರೂ ನನಗೆ ಅದನ್ನು ತಪ್ಪದೇ ನೆನಪಿಸುತ್ತಿದ್ದುದರಿಂದ ನಾನೂ ಸಹ ಮಾವನವರ ಮನೆಯಲ್ಲಿ ಆತಿಥ್ಯ ಸ್ವೀಕರಿಸಲು ಮಾನಸಿಕವಾಗಿ ಎಲ್ಲಾ ತಯಾರಿ ನಡೆಸಿದ್ದೆ.

ಈ ಮಧ್ಯೆ ಕಛೇರಿ ಕೆಲಸದ ನಿಮಿತ್ತ ನಾನು ದೆಹಲಿಗೆ ತೆರಳುವುದು ಅನಿವಾರ್ಯವಾದಾಗ, ಅದನ್ನು ನನ್ನ ಹೆಂಡತಿಗೆ ತಿಳಿಸುವ ಧೈರ್ಯವಾಗಲೇ ಇಲ್ಲ ನನಗೆ. ಆಕೆ ದೀಪಾವಳಿ ಹಬ್ಬದ ಸಂಭ್ರಮಾಚರಣೆಗಾಗಿ ಕಟ್ಟಿಕೊಂಡಿದ್ದ ಆಶಾಗೋಪುರವನ್ನು ಕೆಡವಿಹಾಕುವ ಸಾಹಸಕ್ಕೆ ಬಹಳ ದಿನಗಳವರೆಗೆ ನಾನು ಕೈಹಾಕಲಿಲ್ಲ. ಹೀಗೊಂದು ದಿನ, ಕಛೇರಿಯಿಂದ ದೊರೆತ ಆದೇಶ ಪತ್ರ ಹಾಗೂ ನನ್ನ ಪ್ರಯಾಣಕ್ಕಾಗಿ ಮುಂಗಡ ಕಾಯ್ದಿರಿಸಿದ್ದ ಚೀಟಿಗಳನ್ನು ಉದ್ದೇಶಪೂರ್ವಕವಾಗಿಯೇ ಹಾಸಿಗೆಯ ಮೇಲಿರಿಸಿ ಕಛೇರಿಗೆ ತೆರಳಿದ್ದೆ. ಪ್ರಯತ್ನ ಫಲಿಸಿತ್ತು, ನಾನು ಈ ಬಾರಿಯ ದೀಪಾವಳಿ ಹಬ್ಬಕ್ಕೆ ಊರಿನಲ್ಲಿರದಿರುವ ಸಂಗತಿಯು ನನ್ನಾಕೆಗೆ ಅರಿವಾಗಿತ್ತು. ನಾನು ಕಛೇರಿಯಿಂದ ಹಿಂತಿರುಗಿ ಬಂದಾಗ, ಊರಿಗೆ ತೆರೆಳಲು ಕಾಯ್ದಿರಿಸಿದ್ದ ಮುಂಗಡ ರೈಲು ಚೀಟಿಗಳನ್ನು ರದ್ದುಮಾಡಿ ಮುದ್ರಿಸಿದ ದಾಖಲಾತಿಯು ನನಗಾಗಿ ಹಾಸಿಗೆಯ ಮೇಲೆ ಕಾದುಕುಳಿತು ನನ್ನಾಕೆಯ ಮನದಾಳದ ನೋವಿನ ದರ್ಶನ ಮಾಡಿಸಿತು. ಆದಿನ ಕಛೇರಿಯಿಂದ ಹಿಂತಿರುಗಿದ ನನ್ನ ಮಡದಿಯು ಮುಂದಿನ ಮೂರ್ನಾಲ್ಕು ದಿನಗಳವರೆಗೆ ನನ್ನೊಡನೆ ಪ್ರೀತಿಯಿಂದ ಮಾತನಾಡಲಿಲ್ಲ; ದೀಪಾವಳಿ ಹಬ್ಬದ ದಿನದಂದೂ ಸಹ ನಾನು ದೆಹಲಿಯಲ್ಲಿಯೇ ಉಳಿದುಕೊಳ್ಳುವುದು ಆಕೆಗೆ ಎಳ್ಳಷ್ಟೂ ಹಿಡಿಸಿದಂತೆ ಕಾಣಲಿಲ್ಲ.

ನಿನ್ನೆ ಇಲ್ಲಿ ನಾ ಕಂಡ ದೀಪಾವಳಿಯು, ನನ್ನ ಜೀವನದ ಅತ್ಯಂತ ನೀರಸ ದೀಪಾವಳಿ ಹಬ್ಬವೆಂದರೆ ಆಭಾಸವಾದೀತು. ಹೆತ್ತವರು-ಮೆನೆ-ಮಡದಿಯಿಂದ ದೂರವಿದ್ದು, ಹೊಸದೊಂದು ಸಂಸ್ಕೃತಿಯನ್ನು ಆನಂದದಿಂದ ಸ್ವೀಕರಿಸಿ ಸಂಭ್ರಮಿಸುವ ಉದಾರತೆಯು ನನ್ನಲ್ಲಿರಲಿಲ್ಲ. ಅದೇಕೋ ಮನಸ್ಸು ಖಿನ್ನತೆಗೆ ಜಾರಿಹೋದ ಅನುಭವವಾಯಿತು ನನ್ನಲ್ಲಿ. ಉತ್ತರ ಭಾರತದಲ್ಲಿ ಅದ್ಧೂರಿಯಾಗಿ ಆಚರಿಸಲ್ಪಡುವ ಹಬ್ಬಗಳ ಸಾಲಿಗೆ ದೀಪಾವಳಿಯೂ ಸೇರಿದೆಯೆಂದು ಹಿಂದೆ ಎಲ್ಲೋ ಓದಿ-ಕೇಳಿದ ನೆನಪು. ರಾತ್ರಿಯ ಕಗ್ಗತ್ತಲನ್ನು ದೂರಮಾಡಿ, ಆಕಾಶದಂಗಳದಲ್ಲಿ ಚುಕ್ಕಿಗಳನ್ನು ನಾಚಿಸಿ ಬಣ್ಣ-ಬಣ್ಣದ ಚಿತ್ತಾರ ರಂಗವಲ್ಲಿ ಮೂಡಿಸಿದ ಪಟಾಕಿ ಮದ್ದುಗಳನ್ನು ಹೊರೆತುಪದಿಸಿದರೆ ಇನ್ನಾವುದೇ ರೀತಿಯ ಸಡಗರ ನನಗೆ ಇಲ್ಲಿ ಕಾಣಸಿಗಲಿಲ್ಲ.

ದೀಪಾವಳಿ ಹಬ್ಬವೆಂದರೆ, ನಮ್ಮೂರಿನಲ್ಲಿನ ಹೆಣ್ಣುಮಕ್ಕಳು ರೇಷ್ಮೆ ರವಿಕೆ-ಲಂಗವನ್ನುಟ್ಟು ಅಂಗಳಕ್ಕೆಲ್ಲಾ ಸಗಣಿ-ನೀರಿನ ಮಡಿ ಮಾಡಿ, ಮನೆಯ ಬಾಗಿಲಿನುದ್ದಕ್ಕೂ ಬಣ್ಣದ ರಂಗೋಲಿ ಬಿಡಿಸುತ್ತಾರೆ. ಮನೆಯ ಹೊಸ್ತಿಳುಗಳೆಲ್ಲ ಹಸಿರು ತೋರಣ ಹಾಗೂ ಮಂಗಳದ್ರವ್ಯಗಳಿಂದ ಅಲಂಕೃತಗೊಂಡಿರುತ್ತವೆ. ಅಡುಗೆಯ ಮನೆಯಲ್ಲಿ ಅಕ್ಕಿಯನ್ನು ನೆನೆಸಿ-ಕುಟ್ಟಿ ಬಿಸಿ-ಬಿಸಿ ಕಜ್ಜಾಯ ಸುಡುವ ಸಂಭ್ರಮವಂತೂ ಹೇಳತೀರದು. ಸಂಜೆಯಾಗುತ್ತಿದ್ದಂತೆ ಎಲ್ಲರೂ ಕೂಡಿ ಸಾಲು ದಿಪಗಳನ್ನು ಹೊತ್ತಿಸಿ, ಮೆನೆ-ಮನಗಳನ್ನು ಬೆಳಗಿಸುವ ಪರಿ ಅದ್ಭುತವೇ ಸರಿ!
ಚಿತ್ರ ಕೊಡುಗೆ : ಕೃಷ್ಣ ಶರಣಂ
ವಸತಿಗೃಹದ ನನ್ನ ಕೊಠಡಿಯ ದೀಪಗಳನ್ನೆಲ್ಲಾ ಆರಿಸಿ, ತೆರೆದ ಕಿಟಕಿಯಿಂದಾಚೆಗೆ ದೂರದ ನನ್ನೂರಿನ ಚೆಂದದ ದೀಪಾವಳಿ ಹಬ್ಬದ ಸಂಭ್ರಮವನ್ನು ಬಾನಿನಲ್ಲಿ ದಿಟ್ಟಿಸಿನೋಡುವ ತವಕದಿಂದ ಮೆತ್ತನೆಯ ಹಾಸಿಗೆಯ ಮೇಲೆ ಒರಗಿಕೊಂಡಿದ್ದ ನನ್ನನ್ನು ನಿದ್ರಾದೇವಿಯು ನಿಧಾನವಾಗಿ ಆವರಿಸಿಕೊಂಡದ್ದು ಅರಿವಿಗೆ ಬಾರಲೇ ಇಲ್ಲ..

Monday, September 19, 2011

ಮಾನ್ಯ ಸಚಿವರುಗಳಿಗೆ ___ ಗೃಹ ನಿರ್ಮಾಣ

ಬೆಂಗಳೂರು ನಗರದಿಂದ ಮೇಕ್ರಿ ವೃತ್ತದ ಮಾರ್ಗವಾಗಿ ದೇವನಹಳ್ಳಿಯಲ್ಲಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನೀವು ಸಾಗಿ ಹೋಗುವುದಾದರೆ, ಹೆಬ್ಬಾಳ ಮೇಲುಸೇತುವೆಗೆ ಕೆಲವೇ ಮೀಟರ್ ಅಂತರದಲ್ಲಿ ನಿಮ್ಮ ಎಡಭಾಗಕ್ಕೆ ಮೇಲ್ಕಾಣಿಸಿದ ಫಲಕವೊಂದು ಗೋಚರಿಸುತ್ತದೆ. ಅದರಲ್ಲಿರುವ ಸಾರಾಂಶ ಇಂತಿದೆ:

ಕರ್ನಾಟಕ ಸರ್ಕಾರ
ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
ಯೋಜನೆ ಹೆಸರುಬೆಂಗಳೂರು ನಗರ ಹೆಬ್ಬಾಳದಲ್ಲಿ ಕರ್ನಾಟಕ ಸರ್ಕಾರದ ಮಾನ್ಯ ಸಚಿವರುಗಳಿಗೆ 15 ವಸತಿ ಗೃಹಗಳ ನಿರ್ಮಾಣ
ಯೋಜನಾ ಮೊತ್ತ5,500=00 ಲಕ್ಷಗಳು
ಯೋಜನೆಯ ಕಾಲಾವಧಿ20 ತಿಂಗಳು
ಯೋಜನೆಯ ಪ್ರಾರಂಭಿಕ ದಿನಾಂಕ23-10-2009
ಯೋಜನೆ ಪೂರ್ಣಗೊಳ್ಳುವ ದಿನಾಂಕಜೂನ್ 2011

ಇದೇ ಮಾರ್ಗವಾಗಿ ಕ್ರಮಿಸುತ್ತಾ, ನನ್ನೊಬ್ಬ ಗೆಳೆಯರಿಗಾಗಿ ಕಾದು ನಿಂತಿದ್ದ ನನ್ನ ಕಣ್ಣಿಗೆ ಈ ಫಲಕವು ಕಾಣದೇ ಇರಲಿಲ್ಲ. ಕೂಲಂಕಷವಾಗಿ ಅದರಲ್ಲಿದ್ದ ಮಾಹಿತಿಯನ್ನೆಲ್ಲಾ ನಿಧಾನವಾಗಿ ಓದಿಕೊಂಡೆ. ಮನಸ್ಸಿನ ಆಳದಲ್ಲೆಲ್ಲೋ ಪುಟಿದ ವಿಷಾದದ ಅಲೆಯು ನಿಟ್ಟುಸಿರಾಗಿ ತೇಲಿಹೋಯಿತು.

ಇತ್ತೀಚಿಗೆ, ಅಂದರೆ 2009 ರಲ್ಲಿ, ಬಳ್ಳಾರಿ ರಸ್ತೆಯಲ್ಲಿ 1957 ರಿಂದಲೂ ಅಸ್ತಿತ್ವದಲ್ಲಿದ್ದ ಮೈಸೂರು ಪಶುವೈದ್ಯಕೀಯ ಕಾಲೇಜು ಕಟ್ಟಡವನ್ನು ತೆರವುಗೊಳಿಸಿ, ಸಚಿವರುಗಳಿಗೆ ಅಲ್ಲಿ ವಸತಿಗೃಹಗಳನ್ನು ನಿರ್ಮಾಣ ಮಾಡುವ ಸದು(ದುರು)ದ್ದೇಶವನ್ನು ಅಂದಿನ ಸಚಿವರಾದ 'ಸನ್ಮಾನ್ಯ ಶ್ರೀ' ಕಟ್ಟಾ ಸುಬ್ರಮಣ್ಯ ನಾಯ್ಡು ರವರು ಹೊಂದಿದ್ದರು. ಆದರೆ ಅದೃಷ್ಟವಶಾತ್ ಅವರ ಆಶಯ ಫಲಿಸಲ್ಲಿಲ್ಲ. ಹಾಗಾಗಿ ಅಲ್ಲೇ ಹತ್ತಿರದಲ್ಲೆಲ್ಲೋ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರುಗಳಿಗೆ ವಸತಿಗೃಹ ನಿರ್ಮಾಣ ಮಾಡಿಕೊಡುವುದಾಗಿ ಸುದ್ದಿ ಮಾಡಿ ಸೈ ಎನಿಸಿಕೊಳ್ಳಲು ಹವಣಿಸಿದ್ದು ಈಗ ಇತಿಹಾಸ.

ಕರ್ನಾಟಕದ ಮಾನ್ಯ ಸಚಿವರುಗಳ ವಿರುಧ್ಧ ವೈಯಕ್ತಿಕವಾಗಿ ನನಗೇನೂ ದ್ವೇಷವಿಲ್ಲ. ಒಬ್ಬೊಬ್ಬ ಸಚಿವರುಗಳೂ ಕರ್ನಾಟಕ ಹಾಗೂ ಕನ್ನಡಿಗರು ಕಂಡ ಮಹಾನ್ ಮೆಧಾವಿಗಳಲ್ಲವೇ? ಅವರುಗಳ ಜನಸೇವೆಯನ್ನು ಹಾಡಿ-ಹೊಗಳಿ ಗುಣಗಾನ ಮಾಡಲು ಪದಗಳೇ ಸಿಗುವುದಿಲ್ಲವಲ್ಲ! ಇವರುಗಳಿಗೆಲ್ಲಾ ಹೆಬ್ಬಾಳದ ಪಶುವೈದ್ಯಕೀಯ ಕಾಲೇಜನ್ನು ನೆಲಸಮ ಮಾಡಿ ಅಲ್ಲಿ ವಸತಿ-ಗೃಹಗಳನ್ನು ನಿರ್ಮಿಸಿಕೊಡುವ ಬದಲು, ಪರಪ್ಪನ ಅಗ್ರಹಾರದಲ್ಲೆಲ್ಲಾದರೂ ಖಾಲಿ ಜಾಗವಿದ್ದರೆ ಅಲ್ಲಿ ಹೆಚ್ಚುವರಿಯಾಗಿ ಕೆಲವು ಕಾರಾ-ಗೃಹಗಳನ್ನು ಕಟ್ಟಿಸಿಕೊಟ್ಟರೆ ಉಪಯೋಗಕ್ಕಾದರೂ ಬಂದೀತು.. ಅಲ್ಲವೇ?

Thursday, September 1, 2011

ಕಹಳೆ

ಆತ್ಮಿಯ ಸ್ನೇಹಿತರೆ,
ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ಗೌರಿ ಹಾಗೂ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.

ಸಾಮಾನ್ಯ, ಯಾವುದೇ ವಿಷಯವಾಗಿ ನನಗೆ ಅನುಮಾನ ಅಥವಾ ಪ್ರಶ್ನೆಗಳು ಇದ್ದರೆ ಅವುಗಳನ್ನು ಪರಿಹರಿಸಿಕೊಳ್ಳುವ ನನ್ನ ಪ್ರಯತ್ನವು Google ನಿಂದಲೇ ಶುರುವಾಗುತ್ತದೆ. ಇದುವರೆಗಿನ ನನ್ನ ಅನುಭವದಲ್ಲಿ ವಿಷಯವಾರು ಮಾಹಿತಿಗಳು ಕನ್ನಡ ಭಾಷೆಯಲ್ಲಿ ಹೆಚ್ಚಾಗಿ ಲಭ್ಯವಿಲ್ಲ. ಅಂತರ್ಜಾಲದ ಅಗಾಧತೆಯನ್ನು ಪರಿಗಣಿಸಿ ಹೇಳುವುದಾದರೆ, ಕನ್ನಡದಲ್ಲಿ ಲಭ್ಯವಿರುವ ಮಾಹಿತಿ ಅತ್ಯಂತ ವಿರಳ ಎಂದರೆ ತಪ್ಪಾಗಲಾರದು. ಕನ್ನಡ ಭಾಷೆಯ ವಿಷಯ ವ್ಯಾಖ್ಯಾನ ಮತ್ತು ಮಂಡನೆಗಳ ಬೆನ್ನು ಹತ್ತಿ ಹೊರಟ ನಾನು ಅದೆಷ್ಟೋ ಬಾರಿ Google ಅನ್ನು ಶಪಿಸಿದ್ದುಂಟು.

ಅನ್ಯ ಭಾಷೆಗಳಿಗೆ ಹೋಲಿಸಿಕೊಂಡರೆ ನಮ್ಮ ಕನ್ನಡ ಭಾಷೆಯ ಇತಿಹಾಸ, ಬೆಳವಣಿಗೆ ಹಾಗೂ ವಿಸ್ತಾರ ಕಡಿಮೆಯೇನಿಲ್ಲ. ಆದರೂ ಸಹ ಅಂತರ್ಜಾಲದಲ್ಲಿ ಕನ್ನಡ ಸಾಹಿತ್ಯದ ಬೆಳವಣಿಗೆ ಸಾಲದೇನೋ ಎಂಬ ಭ್ರಮೆ ನನ್ನಲ್ಲಿ ಮೂಡುತ್ತಿದೆ. ರಾಜ್ಯ ಸರ್ಕಾರದ ಕನ್ನಡ ಗಣಕ ಪರಿಷತ್ತು ಹೊರತಂದ Nudi ತಂತ್ರಾಂಶವು ಗಣಕ ಯಂತ್ರದಲ್ಲಿ ಕನ್ನಡ ಭಾಷೆಯನ್ನು ಬೆರಳಚ್ಚಿಸುವ ಸುಲಭ ಸಧನವಾಗಿದ್ದು ಈಗ ಇತಿಹಾಸ. ಮುಂದೆ Baraha ಪರಿಕರವೂ ಸಹ ಜನಸಾಮಾನ್ಯರಲ್ಲಿ ಅತ್ಯಂತ ಚಿರಪರಿಚಿತವಾಯಿತು.

ತಂತ್ರಜ್ಞಾನ ಬೆಳೆದಂತೆ, Nudi ಹಾಗೂ Baraha ದಂತಹ ಸಾಧನಗಳೂ ಬೆಳೆದವಾದರೂ ಅಂತರ್ಜಾಲದ ಮಹಾ ಸ್ಫೋಟಕ್ಕೆ ಸಾಟಿಯಾಗಲಿಲ್ಲ. ಇಂಥಹ ಸಮಯದಲ್ಲಿ ಕನ್ನಡಿಗರಿಗೆ ವರವಾಗಿ ಬಂದದ್ದು Google Transliterate. ಇಂದು, ಈ ತಂತ್ರಾಂಶದ ಸಹಾಯದಿಂದ ನಾವು ಮಾತನಾಡಿದಷ್ಟೇ ಸುಲಭವಾಗಿ ಕನ್ನಡ ಭಾಷಾಕ್ಷರಗಳನ್ನು ಗಣಕ ಯಂತ್ರದ ಮೂಲಕ ಅಂತರ್ಜಾಲದಲ್ಲಿ ಮೂಡಿಸಲು ಸಾಧ್ಯವಾಗಿದೆ. ಇದರ ಸಂಪೂರ್ಣ ಲಾಭವನ್ನು ನಾವೆಲ್ಲರೂ ಪಡೆದುಕೊಳ್ಳುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಅನುಸರಿಸುವುದು ಇಂದು ನಮ್ಮ-ನಿಮ್ಮೆಲ್ಲರ ಮುಂದಿರುವ ಸವಾಲು.

ಈ ಸವಾಲನ್ನು ಸ್ವಿಕರಿಸಿ, ಮುಂಬರುವ ಎಲ್ಲಾ ಕನ್ನಡ ರಾಜ್ಯೋತ್ಸವಗಳನ್ನು ನಾವೆಲ್ಲರೂ ಕೂಡಿ ವಿಭಿನ್ನ ರೀತಿಯಲ್ಲಿ ಆಚರಿಸುವ ಉದ್ದೇಶದೊಂದಿಗೆ 'ಕಹಳೆ' ಎಂಬ ನಾಮಾಂಕಿತದಲ್ಲಿ ಅಂತರ್ಜಾಲ ತಾಣ (www.kahale.gen.in) ವೊಂದನ್ನು ಸಿಧ್ಧಪಡಿಸಿದ್ದೇವೆ. ನವೆಂಬರ್ ಮಾಹೆಯ ಪ್ರತಿಯೊಂದು ದಿನವೂ ಇಲ್ಲಿ ವಿವಿಧ ಬರಹಗಾರರ ಹೊಸ ಕನ್ನಡ ಲೇಖನವೊಂದನ್ನು ಬಿತ್ತರಿಸುವ ಆಶಯ ಹೊಂದಲಾಗಿದೆ. ಹೀಗೆ ಆದಲ್ಲಿ, ಅಪಾರವಾದ ಕನ್ನಡ ಭಾಷಾಸಂಪತ್ತು ಅಂತರ್ಜಾಲದಲ್ಲಿ ಸಧ್ಯದಲ್ಲೇ ಲಭ್ಯವಾಗುವ ಸಾಧ್ಯತೆಗಳಿರುತ್ತವೆ.

ಆದ್ದರಿಂದ, ಈ ಮೂಲಕ ನಿಮ್ಮಲ್ಲಿ ನನ್ನ ಮನವಿ ಇಷ್ಟೇ - ದಯವಿಟ್ಟು ನಮ್ಮ ಈ ಪುಟ್ಟ ಪ್ರಯತ್ನಕ್ಕೆ ಸಂಪೂರ್ಣವಾಗಿ ಬೆಂಬಲಿಸಿ. ನೀವು ಮಾತ್ರವಲ್ಲ, ನಿಮಗೆ ತಿಳಿದಿರುವ ಎಲ್ಲಾ ಕನ್ನಡಿಗರನ್ನೂ ಇದರಲ್ಲಿ ಭಾಗಿಯಾಗುವಂತೆ ಪ್ರೇರೇಪಿಸಿ, ಕನ್ನಡ ಕಹಳೆಯು ಯಶಸ್ವಿಯಾಗಿ ಮೊಳಗುವಂತೆ ಮಾಡಿ.

ಗಣೇಶ ಹಬ್ಬದ ಈ ಶುಭದಿನದಂದು, ವಿಘ್ನನಿವಾರಕನ ಆಶೀರ್ವಾದಗಳೊಂದಿಗೆ ಹಾಗೂ ನಿಮ್ಮೆಲ್ಲರ ಪ್ರೀತಿಪೂರ್ವಕ ಮತ್ತು ಉತ್ಸಾಹದಾಯಕ ಪ್ರೋತ್ಸಾಹದ ನಿರೀಕ್ಷೆಯೊಂದಿಗೆ ಕಹಳೆಯನ್ನು ಕನ್ನಡಿಗರಿಗೆ ಸಮರ್ಪಿಸಿದ್ದೇವೆ; ನಾವೆಲ್ಲರೂ ಇದನ್ನು ಉಳಿಸಿ ಬೆಳೆಸೋಣ.

Friday, August 5, 2011

ಬೆಟ್ಟದ ಜೀವ

ಡಾ|| ಕೆ. ಶಿವರಾಮ ಕಾರಂತರ ಬೆಟ್ಟದ ಜೀವ ಕೃತಿಯು ಪ್ರಪ್ರಥಮವಾಗಿ ನನಗೆ ಪರಿಚಯವಾದದ್ದು ಪಠೄದ ಮೂಲಕ. ಅನಿವಾರ್ಯವೆಂಬಂತೆ ಕಾದಂಬರಿಯನ್ನು ಓದಲು ಪ್ರಾರಂಭಿಸಿದವನಿಗೆ, ಅದರ ವಿವಿಧ-ವೈವಿಧ್ಯ ಅಂತರಾಳಗಳ ದರ್ಶನವನ್ನು ಮಾಡಿಸಿದವರು ನನ್ನ ಪೂಜ್ಯ ಗುರುಗಳಾದ ಡಾ|| ನರಹಳ್ಳಿ ಬಾಲಸುಬ್ರಹ್ಮಣ್ಯಂ ಅವರು. ಜ್ಞಾನಪೀಠ ಪ್ರಶಸ್ತಿ ಸನ್ಮಾನಿತರ ಕೃತಿಯೊಂದು ಸುಪ್ರಸಿದ್ಧ ವಿಮರ್ಶಕರಿಂದ ವ್ಯಾಖ್ಯಾನಗೊಳ್ಳುವುದನ್ನು ಆಲಿಸಿದ ನಾನೇ ಧನ್ಯನೆಂದು ಈಗ ಅರಿವಾಗುತ್ತಿದೆ. ಇದೇ ಕಾದಂಬರಿಯನ್ನು ಆಧರಿಸಿ ಚಲನಚಿತ್ರವೊಂದು ಕನ್ನಡದ ಬೆಳ್ಳಿ ಪರದೆಗೆ ಬರುತ್ತಲಿರುವ ಸಂಗತಿಯು ನನಗೆ ಹರ್ಷವನ್ನುಂಟುಮಾಡಿತ್ತು.

ಕಾದಂಬರಿಯು ಒಂದು ಸಾಹಿತ್ಯ ಪ್ರಕಾರವಾದರೆ, ಚಲನಚಿತ್ರವು ಪ್ರಭಾವೀ ಕಲಾ ಪ್ರಕಾರವಾಗಿದೆ. ಇವೆರಡೂ ಸಹ ತಮ್ಮದೇ ಆದ ರೀತಿಯಲ್ಲಿ ವೈವಿಧ್ಯವೆನಿಸಿಕೊಳ್ಳುವಂಥವು; ಅನ್ಯ ಪ್ರಕಾರದ ಕೃತಿಯನ್ನು ಚಲನಚಿತ್ರವಾಗಿಸುವುದು ಒಂದು ಸವಾಲೇ ಸರಿ. ಇಂಥಹ ಸವಾಲುಗಳು ನಿರ್ದೇಶಕ ಪಿ.ಶೇಷಾದ್ರಿಯವರಿಗೆ ಹೊಸತೇನಲ್ಲ! 'ಅತ್ಯುತ್ತಮ ಪರಿಸರ ಕಾಳಜಿಯುಳ್ಳ ಚಲನಚಿತ್ರ' ರಾಷ್ಟ್ರೀಯ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡ ಬೆಟ್ಟದ ಜೀವ ಚಲನಚಿತ್ರವು, ಆ ಪ್ರಶಸ್ತಿಯ ಘನತೆಯನ್ನು ಉನ್ನತಕ್ಕೇರಿಸಿದೆ ಎಂದರೆ ಬಹುಶಃ ಆಭಾಸವಾಗಲಾರದು.

ಮೂಲ ಕಥೆಯ ಜಾಡನ್ನು ಎಲ್ಲಿಯೂ ತಪ್ಪದವರಂತೆ ಚಿತ್ರಕಥೆ ರಚಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಕಾರಂತರ ಸಾಹಿತ್ಯದ ಪರಿಚಯವಿಲ್ಲದಿದ್ದರೂ ಸಹ ಪ್ರೇಕ್ಷಕರನ್ನು ಚಿತ್ರವು ಹಿಡಿದಿಟ್ಟುಕೊಳ್ಳುವ ರೀತಿಯಲ್ಲಿ, ಕಾದಂಬರಿಯ ಒಟ್ಟಾರೆ ಸಾರಕ್ಕೆ ಕಳಂಕ ಬಾರದಂತೆ ಚಿತ್ರಕಥೆಯು ತನ್ನದೇ ಧಾಟಿಯಲ್ಲಿ ಸಾಗಿ, ಮೆಚ್ಚುಗೆ ಗಳಿಸುತ್ತದೆ. ಚಲನಚಿತ್ರದ ಮತ್ತೊಂದು ವಿಶೇಷತೆ ಅದರ ತಾರಾಗಣ; ಗೋಪಾಲಯ್ಯನಾಗಿರುವ ದತ್ತಾತ್ರೇಯ, ಶಂಕರಮ್ಮನಾಗಿರುವ ರಾಮೇಶ್ವರಿ ವರ್ಮ ಹಾಗೂ ಶಿವರಾಮಯ್ಯನಾಗಿರುವ ಸುಚೇಂದ್ರ ಪ್ರಸಾದ್ ರವರುಗಳು ತಮ್ಮಗಳ ಪಾತ್ರದಲ್ಲಿ ಸಂಪೂರ್ಣ ಲೀನವಾಗಿಹೋಗಿದ್ದಾರೆ. ವಿ. ಮನೋಹರ್ ಅವರ ಸಂಗೀತ ಸಂಯೋಜನೆಯು ಪ್ರತ್ಯೇಕಿಸಲಾಗದಂತೆ ಚಲನಚಿತ್ರದುದ್ದಕ್ಕೂ ಹಾಸುಹೊಕ್ಕಾಗಿದೆ. ಅತ್ಯಂತ ಸಮಂಜಸವೆಂಬಂತೆ ರಚಿಸಲಾಗಿರುವ ಸಂಭಾಷಣೆಗಳು, ನೇರವಾಗಿ ಕಾದಂಬರಿಯ ಪುಟ-ಸಾಲುಗಳನ್ನು ನೆನಪಿಸುವಂತಿವೆ.

'ಬೆಳಗಾಗುವಾಗ ಕಂಗಿನ ಮರಗಳೆಲ್ಲ ನೀಳ ಅಂಗನೆಯರಂತೆ ಮಂಜಿನ ಸೀರೆಯನ್ನುಟ್ಟು ನಿಂತಿದ್ದವು' - ಕಾರಂತರು ಈ ರೀತಿ ಬಣ್ಣಿಸುವ ಮಲೆನಾಡಿನ ಸೊಬಗನ್ನು ಯಥಾವತ್ತಾಗಿ ಸೆರೆಹಿಡಿಯುವಲ್ಲಿ ಛಾಯಾಗ್ರಾಹಕರಾದ ಅನಂತ್ ಅರಸ್ ಗೆದ್ದಿದ್ದಾರೆ. ಬರವಣಿಗೆಯಲ್ಲಿ ಕಾರಂತರು ಸೃಷ್ಟಿಸಿರುವ ಕೆಳಬೈಲು ಹಾಗೂ ಕಾಟುಮೂಲೆಗಳನ್ನು ಇಂದಿಗೂ ಸಹ ನೈಜವಾಗಿ ಚಿತ್ರೀಕರಿಸಿರುವುದು ವಿಸ್ಮಯವೆನಿಸುತ್ತದೆ; ಕುಮಾರ ಪರ್ವತದ ಸೊಬಗಿನ ಚಿತ್ರೀಕರಣ ಅಮೋಘವಾಗಿದೆ.

ಮೂಲತಃ ಸಂಬಂಧಗಳ ಸುತ್ತಲೂ ಹೆಣೆದುಕೊಳ್ಳುವ ಕಥೆಯಲ್ಲಿ, ಪರಕೀಯವೆನಿಸಿಕೊಳ್ಳದಂತೆ ಭಾವನೆಗಳನ್ನು ಸೂಕ್ಷ್ಮವಾಗಿ ಚಿತ್ರೀಕರಿಸಿರುವುದು ನಿರ್ದೇಶಕರ ಯಶಸ್ಸು. ಮುಪ್ಪಿನಲ್ಲೂ, ಜೀವನದ ಪ್ರತಿಯೊಂದು ಘಳಿಗೆಯನ್ನೂ ಸಂತೋಷದಿಂದ ಆಸ್ವಾದಿಸುತ್ತಾ, ಬದುಕನ್ನು ಸಾರ್ಥಕಗೊಳಿಸಿಕೊಳ್ಳುವ ಪರಿಯನ್ನು ಗೋಪಾಲಯ್ಯ-ಶಂಕರಮ್ಮರಿಂದಲೇ ಅರಿತುಕೊಳ್ಳಬೇಕು. ಈ ನಿಟ್ಟಿನಲ್ಲಿ ದತ್ತಾತ್ರೇಯ-ರಾಮೇಶ್ವರಿ ವರ್ಮ ಇವರುಗಳ ನಟನೆ ಬಹುಕಾಲ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುತ್ತದೆ.

ಸಮಕಾಲಿನ ಎಲ್ಲಾ ಚಲನಚಿತ್ರಗಳಿಗಿಂತ ವಿಭಿನ್ನವಾಗಿ, ನೋಡುಗರ ಮನ ಮುಟ್ಟುವಂತೆ, ಅಗಾಧ ಹಾಗೂ ಸಮೃದ್ಧ ಕನ್ನಡ ಸಾಹಿತ್ಯವನ್ನು ಅಚ್ಚುಕಟ್ಟಾಗಿ ಕನ್ನಡ ಚಿತ್ರೋದ್ಯಮದ ಮೂಲಕ ಕನ್ನಡಿಗರಿಗೆ ಅರ್ಪಿಸಿರುವ ಸಾಹಸಕ್ಕಾಗಿ ಬಸಂತ್ ಪ್ರೊಡಕ್ಷನ್ಸ್ ಹಾಗೂ ನಿರ್ಮಾಪಕ ಬಸಂತ್ ಕುಮಾರ್ ಪಾಟೀಲ್ ಅವರಿಗೆ ಕೃತಜ್ಞತೆ ಸಲ್ಲಿಸಬೇಕು. ವಾಣಿಜ್ಯ ಮಾರುಕಟ್ಟೆಯಲ್ಲಿ, ಬೆಟ್ಟದ ಜೀವದಂತಹ ಕಲಾತ್ಮಕ ಚಲನಚಿತ್ರವನ್ನು ಪ್ರದರ್ಶಿಸಲು ಮುಂದಾದ ಪಿ.ವಿ.ಆರ್., ಇನಾಕ್ಸ್, ಉಮಾ ಚಿತ್ರ ಮಂದಿರ ಹಾಗೂ ಇನ್ನಿತರೆ ಚಿತ್ರಪ್ರದರ್ಶಕರ ಉದಾರತೆಯನ್ನು ಮೆಚ್ಚಲೇಬೇಕು. ಇಂಥಹ ಉತ್ತಮ ಚಲನಚಿತ್ರಗಳನ್ನು ತಯಾರಿಸುವ ಮೂಲಕ ಕನ್ನಡ ನಾಡು-ನುಡಿಯ ಏಳಿಗೆಗಾಗಿ ಅಪಾರ ಸೇವೆಯನ್ನು ಸಲ್ಲಿಸಿದ ಶಿವರಾಮ ಕಾರಂತರಂತಹ ಮಹಾನ್ ಚೇತನಗಳಿಗೆ ಗೌರವ ಸಲ್ಲಿಸುವ ಪ್ರಯತ್ನಗಳು ಅವಿರತವಾಗಿ ಮುಂದುವರೆಯಲಿ ಎಂದು ಆಶಿಸುತ್ತೇನೆ.

ಪುಸ್ತಕ ಪರಿಚಯ
ಶೀರ್ಷಿಕೆ : ಬೆಟ್ಟದ ಜೀವ
ಸಾಹಿತಿ : ಡಾ|| ಕೆ. ಶಿವರಾಮ ಕಾರಂತ
ಪ್ರಕಾಶಕರು : ಎಸ್. ಬಿ. ಎಸ್. ಪಬ್ಲಿಷರ್ಸ್ ಡಿಸ್ಟ್ರಿಬ್ಯೂಟರ್ಸ್, ಬೆಂಗಳೂರು - 1
ವಿತರಕರು : ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು - 9
ಬೆಲೆ : ರೂ. 65/-
ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಗಳನ್ನು ಶ್ರೀಮಂತಗೊಳಿಸುವ ಎಲ್ಲಾ ಪ್ರಯತ್ನಗಳಿಗೆ, ಕನ್ನಡಿಗರಾದ ನಾವೆಲ್ಲರೂ ಪ್ರಾಮಾಣಿಕವಾಗಿ ಬೆಂಬಲಿಸಬೇಕೆಂಬುದು ನನ್ನ ವೈಯಕ್ತಿಕ ಅಭಿಪ್ರಾಯ.

Sunday, July 10, 2011

ಹು(ಉ)ರುಳು


ಬೆಂಗಳೂರಿನ ಸುಂದರ ಸಂಜೆ, ಸಮಯ 5:30 ರ ಸುಮಾರು. ಬನಶಂಕರಿಯಲ್ಲಿನ ಹೂವಿನ ಮಾರುಕಟ್ಟೆ ಎಂದಿನಂತೆ ಜನರಿಂದ ತುಂಬಿಹೋಗಿತ್ತು. ತಮ್ಮ ಗುರುವಾರದ ದಿನಚರಿಯಂತೆ, ಇಂದೂ ಸಹ ಸರಿಯಾದ ಸಮಯಕ್ಕೆ ಅದೇ ಹೂವಿನ ಅಂಗಡಿಯಲ್ಲಿ ಹಾಜರಿದ್ದರು ವೆಂಕಟರಾಯರು. ರಾಯರದ್ದು ಎಂಭತ್ತರ ಆಸು-ಪಾಸಿನ ಜೀವ, ನಿವೃತ್ತಿಯ ನಂತರವೂ ಶಿಸ್ತಿನ ಜೀವನ ನಡೆಸುತ್ತಿರುವ ಸರ್ಕಾರಿ ನೌಕರ. ಸಂಬಳದ ದಿನಗಳಿಂದ ಪಿಂಚಿಣಿಯವರೆಗೂ ಲೆಕ್ಕಾಚಾರದ ಮನುಷ್ಯ. ಆರಕ್ಕೇರದ, ಮೂರಕ್ಕಿಳಿಯದ ಇವರ ತುಂಬು ಬದುಕಿನ ಒಡನಾಡಿ ಲಕ್ಷಮ್ಮ, ರಾಯರ ಅರ್ಧಾಂಗಿ.

ಲಕ್ಷ್ಮಮ್ಮನವರದ್ದು ಜೀವನದುದ್ದಕ್ಕೂ ಎರಡೇ ಕಾಯಕ; ಒಂದು ಪತಿಯಾರಾಧನೆ, ಮತ್ತೊಂದು ದೈವಾರಾಧನೆ. ಮದುವೆಯಾದ ಹೊಸತರಲ್ಲಿ ಮಕ್ಕಳಿಲ್ಲದ ಕಾರಣ ದೇವರ ಮೊರೆಹೋದ ಲಕ್ಷ್ಮಮ್ಮನವರು ಹಿಂದಕ್ಕೆ ತಿರುಗಿ ನೋಡಿದ್ದಿಲ್ಲ. ಮಕ್ಕಳಿಲ್ಲದ ಕೊರಗನ್ನು ಪತಿ-ದೈವನ ಪರಮ ಭಕ್ತಿಯ ಆರಾಧನೆಯಲ್ಲಿ ಮರೆಯುವುದು ಇಲ್ಲಿಗೆ ಚೆನ್ನಾಗಿ ಅಭ್ಯಾಸವಾಗಿಹೋಗಿರುವ ಆ ತಾಯಿಯು, ತಾಯಿಯಾಗದೇ ಹೋದದ್ದು ಒಂದು ವಿಷಾಧ.

'ಬನ್ನಿ ರಾಯ್ರೆ, ಕಾಫಿ ಆಯ್ತಾ?' ಹೂವಿನಂಗಡಿಯವನು ರಾಯರನ್ನು ಎಂದಿನಂತೆ ಉಪಚರಿಸುತ್ತಾ, ಎರಡು ಸುಗಂಧರಾಜ ಹಾರಗಳನ್ನು, ಐದು ಮೊಳ ಮಲ್ಲಿಗೆ ಮತ್ತು ಕಾಲು ಕೇಜಿ ಬಿಡಿ ಸೇವಂತಿಗೆಯನ್ನು ಕಟ್ಟಿಟ್ಟ. 'ಆಯ್ತಪ್ಪ, ನಿಂಗೆ ಕಾಫಿ ಕುಡ್ಯೋಕೂ ಪುರುಸೊತ್ತೇ ಇಲ್ವೇನೋ?' ರಾಯರು ಹೂವಿನ ಕಟ್ಟನ್ನು ತೆಗೆದುಕೊಳ್ಳುತ್ತಾ ಅಂಗಡಿಯವನನ್ನು ವಿಚಾರಿಸಿದರು. 'ಇಲ್ಲಾ ರಾಯ್ರೆ, ಜನ ವಿಪರೀತ. ನಾಳೆ ಶುಕ್ರವಾರ ನೋಡಿ.. ಚಿಲ್ರೆ ಇಲ್ವಾ?'. ಇಲ್ಲವೆಂಬಂತೆ ರಾಯರು ತಲೆಯಾಡಿಸಲು, 'ಹಾರಗಳಿಗೆ ನೀವೇ ಖಾಯಂ ಗಿರಾಕಿ ನೋಡಿ ಸಾರ್' ಎನ್ನುತ್ತಾ ತನ್ನಲ್ಲಿದ್ದ ಚಿಲ್ಲರೆಗಳನ್ನು ಜೋಡಿಸಿ ರಾಯರಿಗೆ ಕೊಟ್ಟ. 'ಶುಕ್ರವಾರ ದೇವರಿಗೆ ಹಾರ ಹಾಕಿ ಭಕ್ತಿಯಿಂದ ಪೂಜೆ ಮಾಡಿದ್ರೆನೇ ನನ್ನಾಕೆಗೆ ಸಮಾಧಾನ' ಎಂದು ಹೇಳಿ, ಧನ್ಯವಾದಗಳೆಂಬಂತೆ ಕೈಸನ್ನೆ ಮಾಡಿದ ರಾಯರು ಮನೆಯ ದಾರಿ ಹಿಡಿದರು. ಅಂಗಡಿಯಾತ ನಗುತ್ತಾ ಬೀಳ್ಕೊಟ್ಟ.

ರಾಯರ ಕಣ್ಮುಂದೆಯೇ ಬೆಂಗಳೂರು ಬೃಹದಾಕಾರಕ್ಕೆ ಬೆಳೆದಿತ್ತು. ತೊಂಭತ್ತರ ದಶಕದಲ್ಲಿ ಬಿ.ಡಿ.ಎ. ಇಂದ ದೊರೆತ ನಿವೇಶನದಲ್ಲಿ ಹೆಚ್.ಡಿ.ಎಪ್ಹ್.ಸಿ. ಸಾಲ ಪಡೆದು ರಾಯರು ಚಿಕ್ಕದೊಂದು ಮನೆ ಕಟ್ಟಿಸಿದಾಗಿನ ಬೆಂಗಳೂರೇ ಬೇರೆ. ಅತ್ಯಂತ ತ್ವರಿತವಾಗಿ ಬೆಳೆಯುತ್ತಿರುವ ಬೆಂಗಳೂರಿನ ವೇಗಕ್ಕೆ ಸಾಟಿ ಎಂಬಂತೆ ತಲೆ ಎತ್ತುತ್ತಿರುವ 'ನಮ್ಮ ಮೆಟ್ರೋ' ಕಾಮಗಾರಿಯ ಅಡಚಣೆಗಳ ನಡುವೆ ನಿಧಾನವಾಗಿ ಹಾದು ಬಂದ ರಾಯರು ಬಿ.ಎಮ್.ಟಿ.ಸಿ. ಬಸ್ ಏರಿದರು. 'ಕೋಣನಕುಂಟೆಗೆ ಒಂದು ಟಿಕೆಟ್, ಸೀನಿಯರ್ ಸಿಟಿಜನ್ ಕಾರ್ಡ್ ಇದೆ' ಎಂದ ರಾಯರ ಕೈಗೆ ವಿನಾಯಿತಿ ದರದ ಚೀಟಿ ಕೊಟ್ಟ ಬಸ್ಸಿನ ನಿರ್ವಾಹಕ ಕೊಪದಿಂದಲೆಂಬಂತೆ ಅವರನ್ನು 'ಒಳಗೆ ಹೋಗಿ' ಎನ್ನುತ್ತಾ ಕಿಕ್ಕಿರಿದಿದ್ದ ಜನರ ಮಧ್ಯೆ ದೂಡಿದ. ಯುವಕನೊಬ್ಬ ಹಿರಿಯ ನಾಗರೀಕರಿಗೆ ಮೀಸಲಿಟ್ಟ ಆಸನವನ್ನು ರಾಯರಿಗೆ ಬಿಟ್ಟುಕೊಟ್ಟ. 'ಮುಂದಿನ ನಿಲ್ದಾಣ ಸಾರಕ್ಕಿ; Next stop is Sarakki', ಬಸ್ಸಿನಲ್ಲಿ ಪಯಣ ಸಾಗಿತ್ತು.

ಮುಂದಿನ ಆಸನದಲ್ಲಿ ಬಿಡಿ ಹೂಗಳನ್ನು ಕಟ್ಟುತ್ತಾ ಕುಳಿತು ಮಾತನಾಡುತ್ತಿದ್ದ ಮಹಿಳೆಯರಿಬ್ಬರ ಮಾತುಗಳು ರಾಯರ ಕಿವಿಗೆ ಬಿಳುತ್ತಿದ್ದವು. 'ಏನಮ್ಮಾ, ಇವತ್ತು ಊವ ಮಾತಾಡ್ಸಕಾಗಲ್ಲ'... 'ಇಂಗಾದ್ರೆ ನಾವು ವ್ಯಾಪಾರ ಮಾಡ್ದಂಗೆನೆ. ಅಸ್ಲೂ ಗಿಟ್ಟಲ್ಲ'.. 'ನೀನು ಹಾರ ಆಕಲ್ವಾ?'... 'ಆಕ್ತಿನಿ, ಆದ್ರೆ ಬನಶಂಕ್ರಿ ಮಾರ್ಕೆಟ್ಟಲ್ಲಿ ಹಾರ ತಗಳಂಗಿಲ್ಲ.. ಮಾರ್ಚರಿಯಿಂದ ಸೆಕೆಂಡ್ಸ್ ಬತ್ತವಮ್ಮಾ'... ಆ ಮಾತುಗಳು ಕಿವಿಗೆ ಬೀಳುತ್ತಿದ್ದಂತೆಯೇ ರಾಯರು ಕುಳಿತಲ್ಲೇ ಕುಸಿದುಹೋದರು. ಹಿಡಿದಿದ್ದ ಹೂವಿನ ಹಾರದ ಪೊಟ್ಟಣ ಅವರ ಕೈಜಾರಿ ಕೆಳಗೆ ಬಿದ್ದಿತ್ತು; ವೆಂಕಟರಾಯರ ಕಿವಿಯ ತುಂಬೆಲ್ಲಾ ಲಕ್ಷ್ಮಮ್ಮನವರ ಸ್ತೋತ್ರ-ಪಠಣ, ಪೂಜಾ ಘಂಟನಾದಗಳ ಸದ್ದು ಮೊಳಗುತ್ತಿತ್ತು..

Monday, June 20, 2011

ಬಾಯ್ ಚಿನ್ನ..

ಹಲೋ..
( ...ಅತ್ತಲಿಂದ ಮಾತು... )
ಏನ್ ಚಿನ್ನ.. ಮಧ್ಯಹ್ನದಿಂದ phone ಮಾಡ್ತಿದ್ದೀನಿ, receive ಮಡ್ಕೊತಿಲ್ಲ??
( ...... )
ಹಾಗಲ್ಲ, receive ಮಾಡ್ಬಿಟ್ಟು busy ಅಂತ ಹೇಳಿದ್ರೆ ಸಾಕು..
( ...... )
ಮತ್ತೆ..? Coffee ಕುಡಿದ್ಯಾ?
( ...... )
ನಾನು ಬೆಳಿಗ್ಗೆ ಇಂದ ಏನೂ ತಿಂದಿಲ್ಲ. ಮದ್ಯಾಹ್ನದಿಂದ ತುಂಬಾ ತಲೆ ನೋವು.. ತಲೆನ ಎಲ್ಲಾದ್ರೂ ಜಜ್ಕೊಳ್ಳೋಣ ಅನ್ಸ್ತಿದೆ. ನೀನೂ ಬೇರೆ call answer ಮಾಡಿಲ್ಲ..
( ...... )
ನಾಳೆ ಬಂದ್ಬಿಡ್ಲ ಸಾಗರಕ್ಕೆ?
( ...... )
ನಿನ್ನೆ ಅಷ್ಟೆಲ್ಲ ಹೇಳಿದ್ದೀನಿ.. ಮತ್ತೆ ಯಾಕೆ ಅಂತ ಕೇಳ್ತಿಯ ಚಿನ್ನ??
( ...... )
ಜೀವ ತೆಗಿತಾರ? ನಿನ್ ಜೀವ ಹೋದ್ರೆ, ನಂದೂ ಹೋಗುತ್ತೆ..
( ...... )
ಅಮ್ಮಂಗೆ ಗೊತ್ತಾಗೋ ಮುಂಚೆ ನಿಂಗೆ ಬಿಡ್ಸ್ಕೊಡ್ತೀನಿ..
( ...... )
ಈ ವಿಷ್ಯ ನಂಗೆ-ನಿಂಗೆ ಮಾತ್ರ ಗೊತ್ತಿರ್ಲಿ, ಆಯ್ತಾ?
( ...... )
ನಾಳೆ ಬೇಡ್ವ? ಸರಿ, saturday ಬರ್ತೀನಿ.
( ...... )
ರಾತ್ರಿ ನಿಮ್ ಮನೇಲಿ ಇದ್ದರೆ problem ಇಲ್ಲ ತಾನೆ?
( ...... )
ಒಹ್! ರಾತ್ರಿ ಊಟ ಖರ್ಚಾಗುತ್ತೆ ಅಂತನಾ?.. ಹ್ಹ ಹ್ಹ ಹ್ಹ.. ಇಲ್ಲ ಬಿಡು ಚಿನ್ನ, ನಿಂಗೆ ತೊಂದ್ರೆ ಕೊಡಲ್ಲ.
( ...... )
Uma Gold ಬೇಕಾ?? ಬೇಗ್ನೆ ಬಿಡ್ಸ್ಕೊಡ್ತೀನಿ ಅಂತ ಹೇಳಿದ್ನಲ್ಲ.. ನನ್ಮೇಲೆ ನಂಬ್ಕೆ ಇಲ್ವಾ ಚಿನ್ನ ನಿನ್ಗೆ??
( ...... )
ಇಲ್ಲಿ ಬಸ್ಸು ತುಂಬಾ rush ಇದೆ, traffic ಬೇರೆ.. ಶೆಕೆ ಆಗ್ತಾ ಇದೆ.. ಊಟ ಬೇರೆ ತಿಂದಿಲ್ಲ..
( ...... )
Currency ಕಡ್ಮೆ ಇದೆ, cut ಆದ್ರೆ ರಾತ್ರಿ ಮತ್ತೆ ಮಾಡ್ತೀನಿ ಆಯ್ತಾ?
( ...... )
Saturday ಪಕ್ಕ ತಾನೆ?
( ...... )
ಮತ್ತೊಂದ್ ಸಲ phone ಯಾಕೆ? Saturday ಬಂದ್ಬಿಡ್ತೀನಿ..
( ...... )
ನಿನ್ ಉಪಕಾರ ಯಾವತ್ತೂ ಮರೆಯಲ್ಲ ಚಿನ್ನ..
( ...... )
ಹೂuu ಮತ್ತೆ.. ಕಷ್ಟದಲ್ಲಿ ಯಾರೂ ಉಪಕಾರ ಮಾಡಲ್ಲ ಗೊತ್ತಾ?? ತುಂಬಾ tension ಅಗ್ಹೋಗಿತ್ತು ಮೊನ್ನೆ ಇಂದ.. ನೀನು help ಮಾಡೇ ಮಾಡ್ತಿಯ ಅಂತ ಗೊತ್ತಿತ್ತು..
( ...... )
ಹೇಳಿದ್ನಲ್ಲ.. ಅದಷ್ಟೂ ಬೇಗ ಬಿಡ್ಸ್ಕೊಡ್ತೀನಿ ಅಂತ..
( ...... )
ಈಗ mind ಸ್ವಲ್ಪ free ಆಯ್ತು.. ಹೊಟ್ಟೆ ಹಸಿತಾ ಇದೆ..
( ...... )
ಆಯ್ತು, ನೀನು ಹೇಳಿದ್ಮೇಲೆ ಇಲ್ಲ ಅಂತೀನ ಹೇಳು? ಬಸ್ ಇಂದ ಇಳಿದ್ಕೂಡ್ಲೆ ಏನಾದ್ರು ತಿಂತೀನಿ..ಇಡ್ಲಾ?
( ...... )
ಬಾಯ್ ಚಿನ್ನ..
BMTC ಬಸ್ಸಿನಲ್ಲಿ ನನ್ನ ಪಕ್ಕಕ್ಕೆ ಕುಳಿತಿದ್ದ 20ರ ಆಸುಪಾಸಿನ ಯುವಕ ತನ್ನ ಫೋನಿನಲ್ಲಿ ನಡೆಸಿದ ಸಂಭಾಷಣೆಯಿದು.

ಪ್ರೀತಿಯನ್ನು ಒಂದು ಅಸ್ತ್ರವಾಗಿ ಎಂದೆಂದೂ ಬಳಸಬಾರದೆಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಆದರೇನು ಮಾಡಲು ಸಾಧ್ಯ? "ಪ್ರೀತಿ ಕುರುಡು" ಎನ್ನುತ್ತಾರಲ್ಲ..

Sunday, May 22, 2011

ಮಹಿಳೆಯರೇ.. ಹುಷಾರ್!!

ನಾನು ಅಪ್ರೂಪಕ್ಕೆ ಭಾನ್ವಾರ ಬೆಳಿಗ್ಗೆ ಬೇಗ್ನೆ ಎದ್ದು ನಿದ್ದೆಗಣ್ಣಲ್ಲೇ ಹಲ್ಲುಜ್ತಾ ತೂಕಡ್ಸ್ಕೊಂಡ್ ನಿಂತಿದ್ದಾಗ, ಅದ್ಯಾರೋ ನಮ್ ಮನೆ ಹತ್ರ ಕೂಗ್ಕೊಳ್ತಾ ಇದ್ದ್ರು.. ಥಟ್ ಅಂತ ನಿದ್ದೆ ಮಾಯ ಆಯ್ತು! ಹಲ್ಗೂ-ಬ್ರಶ್ಗೂ ಯುದ್ಧ ನಿಲ್ಸಿ, ಕಿವಿ ಕೊಟ್ ಕೇಳ್ಸ್ಕೋ೦ಡೆ.. ಹೆಣ್ಧ್ವನಿ.. ಒಂದೇ ಸೆಕೆಂಡ್ನಲ್ಲಿ ಸುಮಾರ್ ಧ್ವನಿ-ಸದ್ಗಳು ಸೇರ್ಕೊಂಡು ಏನ್ ನಡೀತಿದೆ ಅಂತ ಅರ್ಥಆಗ್ದಷ್ಟು ಗೊಂದ್ಲ ಆಗ್ಹೋಯ್ತು.. 'ಬೆಳಿಗ್ಗೆ ಬೆಳಿಗ್ಗೆನೇ ಇದೇನಪ್ಪಾ ಗಲಾಟೆ?' ಅನ್ಕೊಂಡು ಮತ್ತೆ ಬ್ರಶ್ ಮಾಡೋಕೆ ಶುರು ಮಾಡ್ದೆ.

ನಾನು-Snowy ವಾಕಿಂಗ್ ಹೊರ್ಟು ಮನೆಯಿಂದ 50 ಮೀಟರ್ ಹೋಗಿದ್ವಿ ಅಷ್ಟೇ, ಅಲ್ಲಿ ಒಂದ್ 10-15 ಜನ ಸೇರಿದ್ರು, ಕಾರು-ಬೈಕು ಎಲ್ಲಾ ನಿಲ್ಸ್ಕೊಂಡು ಅದೇನೋ ಮಾತಾಡ್ಕೋತಾ ಇದ್ದ್ರು. ನಾವೂ ಹತ್ರ ಹೋಗಿ ನಿಂತ್ವಿ. Snowy, ಮನೆಗೆ ಯಾರದ್ರೂ ಬಂದ್ರೆ ಸ್ವಲ್ಪ ಗಲಾಟೆ ಮಾಡ್ತಾನೆ; ಆದ್ರೆ ಅವ್ನಿಗೆ ಈ Road-Sense ತುಂಬಾ ಇದೆ, ಅಷ್ಟೆಲ್ಲ ಜನ ಇದ್ದ್ರೂ ಸುಮ್ನೆ ನಿಂತಿದ್ದ ನಂಜೊತೆಗೆ. ನಾವೂ ಯಾರ್ಗೂ ಕಡ್ಮೆ ಏನಿಲ್ಲ ಅನ್ನೋಥರಾ, ನಮ್ ಏರಿಯಾ ಬೀದಿ-ನಾಯ್ಗಳೂ ಅಲ್ಲೇ ಸೇರ್ಕೊಂಡು ಅವ್ಗಳ್ ಭಾಷೇಲಿ ಏನೇನೋ ಹೇಳ್ಕೋತಾ ಇದ್ದ್ವು.

"ಒಬ್ಬ ಅಟೋ ಓಡ್ಸ್ತಿದ್ದ, ಇನ್ನೊಬ್ಬ ಹಿಂದೆ ಕೂತ್ಕೊಂಡಿದ್ದ.." ಒಬ್ರು ಹೇಳ್ತಿದ್ದ್ರು.
"ನಾನು ಮೇಲಿಂದ ನೋಡ್ತಿದ್ದೆ, ಕೆಳ್ಗಡೆ ಇಳ್ದು ಬರೋದ್ರಲ್ಲಿ ಹೋಗ್ಬಿಟ್ಟ್ರು.." ಇನ್ನೊಬ್ರು ಹೇಳಿದ್ದ್ರು.
"Turning ನಲ್ಲಿ ಆಟೋ pass ಆಯ್ತು, ಇಲ್ಲಿಗೆ ಬಂದ್ಮೇಲೆ ಸರ ಕಿತ್ಕೊಂಡಿದ್ದಾರೆ ಅಂತ ಗೊತ್ತಾಯ್ತು" - ಮೇರು ಟ್ಯಾಕ್ಸಿ ಡ್ರೈವರ್ ಹೀಗೆ ಹೇಳ್ದಾಗ್ಲೇ ನನ್ಗೆ ಗೊತ್ತಾಗಿದ್ದು ಯಾರೋ ಇಬ್ಬ್ರು ಆಟೋಲಿ ಬಂದು ಸರ ಕಿತ್ಕೊಂಡು ಹೋಗಿದಾರೆ ಅಂತ.


ಅಣ್ಣಾವ್ರ 'ಸಂಪತ್ತಿಗೆ ಸವಾಲ್' ಪಿಕ್ಚರ್ ನ ಕೊನೇ ರೀಲ್ ನಲ್ಲಿ ಬರೋ ಪೋಲಿಸ್ ಥರಾ 'ಹೊಯ್ಸಳ-84' ಜಿಪ್ ಬಂತು. ಅಷ್ಟ್ರಲ್ಲಿ ಆಗ್ಲೇ ಸರ ಕಳ್ಕೊಂಡೋರು ಪೋಲಿಸ್ ಸ್ಟೇಷನ್ ಗೆ ಹೋಗಿ ಆಗಿತ್ತು. ಹೊಯ್ಸಳ ಪೋಲಿಸ್ ಗೆ ಜನ್ರೆಲ್ಲಾ ಅಲ್ಲಿ ಏನು-ಹೇಗೆ-ಯಾವಾಗ ನಡೀತು ಅಂತ ಹೇಳೋಕೆ ಶುರು ಮಾಡಿದ್ರು. ಮೊದ್ಲೇ ಅದೆಲ್ಲಾ ಕೇಳಿದ್ದ Snowy ಒಂದೆರ್ಡು ಹೆಜ್ಜೆ ಮುಂದೆ ಹೋದ, ನಾನೂ ಅವ್ನ ಹಿಂದೆ ಅಲ್ಲಿಂದ ಹೊರ್ಟೆ.

'ಪುಷ್ಪಾಂಜಲಿ ಉದ್ಯಾನವನ' - ಗಿರಿನಗರ ಪೋಲಿಸ್ ಸ್ಟೇಷನ್ ಹತ್ರ ಇರೋ ಬಿ.ಬಿ.ಎಂ.ಪಿ. ಪಾರ್ಕ್. ಬೆಳಿಗ್ಗೆ ಇಂದ ಶುರು ಆಗಿ ಸಂಜೆ-ರಾತ್ರಿ ತನಕ ಜನ್ರು ಬೇರೆ-ಬೇರೆ(?) ಕಾರ್ಣಕ್ಕೆ ಆ ಪಾರ್ಕ್ ಗೆ ಬರ್ತಾರೆ. ಅಂಥವ್ರಲ್ಲಿ ವೇಟ್-ಷುಗರ್ ಕಂಟ್ರೋಲ್ ಗೆ ವಾಕ್-ಜಾಗ್ ಮಾಡೋರೆ ಜಾಸ್ತಿ; ಅರ್ಥದಷ್ಟು ಹೆಂಗಸ್ರೆ ಇರ್ತಾರೆ. ಪೋಲಿಸ್ ಸ್ಟೇಷನ್ ನಿಂದ ಹೆಚ್ಚು ಅಂದ್ರೆ 200 ಮೀಟರ್ ದೂರ ಇರೋ ಈ ಪಾರ್ಕ್ ಸುತ್ತ-ಮುತ್ತ ಹೋದ್ವರ್ಷ ಸರಗಳ್ರು ಜಾಸ್ತಿ ಆಗಿದ್ರಿಂದ, ಗಿರಿನಗರ ಪೋಲಿಸ್ ಬೆಳಿಗ್ಗೆ-ಸಂಜೆ ಹೊತ್ನಲ್ಲಿ ಪಾರ್ಕ್ ಹತ್ರ ಕಾವಲು ಇರ್ತಿದ್ದ್ರು, ಈಗ್ಲೂ ಇರ್ತಾರೆ. ಇದ್ರಿಂದ ಕಳ್ರೂ ಕಡ್ಮೆ ಆಗಿದಾರೆ ಅನ್ನಿ. ಆದ್ರೆ, ಇವತ್ತು ಕಳ್ರು ಪಾರ್ಕ್ ಬಿಟ್ಟು ಸ್ವಲ್ಪ ದೂರ ಬಂದು ಕೆಲ್ಸ ಮಾಡಿದಾರೆ. ಇದ್ರಲ್ಲಿ ಪೋಲಿಸ್ ತಪ್ಪೇನಿಲ್ಲ ಬಿಡಿ, ಪಾಪ.

ಚಿನ್ನದ ಬೆಲೆ ಎರ್ಡು ಸಾವ್ರಕ್ಕಿಂತ ಜಾಸ್ತಿ ಆಗಿರೋವಾಗ, ಸರ ಕಳ್ಕೊಳ್ಳೋದು ತಮಾಷೆ ಮಾತಲ್ಲ. ಅದೆಷ್ಟು ಕಷ್ಟಪಟ್ಟು ದುಡ್ಡು ಜೋಡ್ಸಿ ಈ ಅಕ್ಷಯ ತೃತೀಯಕ್ಕೆ ಸರ ತಂದ್ಕೊಂಡಿದ್ರೋ ಗೊತ್ತಿಲ್ಲ, ಇವತ್ತು ಯಾರ್ದೋ ಪಾಲಾಯ್ತು. ಈ ಕಳ್ರೂ ಅಷ್ಟೇ.. ಅದ್ಯಾಕೆ ಹೀಗೆ ಮಾಡ್ತಾರೋ ಗೊತ್ತಾಗಲ್ಲ. ಅವ್ರು ತುಂಬಾ ದಿನ ಆರಾಮಾಗಿ ಇರೋಕಾಗಲ್ಲ; ಅಬ್ಬಬ್ಬಾ ಅಂದ್ರೆ ಒಂದ್ ಸರಕ್ಕೆ ಲಕ್ಷ ಬೆಲೆ ಇರ್ಬಹುದು. ಲಕ್ಷ ಹಣ ಅದೆಷ್ಟು ದಿನ ಬರುತ್ತೆ? ಒಂದಲ್ಲ ಒಂದಿವ್ಸ ಕಳ್ರು ಕಂಬಿ ಏಣ್ಸೋದಂತೂ ತಪ್ಪಲ್ಲ, ಅದಿಕ್ಯಾಕೆ ಈ ಕೆಲ್ಸ ಮಾಡ್ಬೇಕು? ಅನ್ನೋ ಯೋಚ್ನೇನೇ ಅವ್ರಿಗೆ ಬರ್ದಿರೋದು ಆಶ್ಚರ್ಯ!

ಅದೇನೇ ಇರ್ಲಿ, ಆದಷ್ಟೂ ನಾವು ನಮ್ ಎಚ್ಚರ್ಕೆಲಿರೋದು ಒಳ್ಳೇದು. ಅದಕ್ಕೆ, ವಾಕಿಂಗ್/ಜಾಗಿಂಗ್ ಮಾಡೋ ಹೆಂಗಸ್ರು ಮತ್ತು ಹೆಣ್ಮಕ್ಳು ಈ ಕೆಳ್ಗಿರೋ ಅಂಶಗಳ್ನ ಗಮ್ನಿಸ್ಕೊಬೇಕು:
  • ಹೆಂಗಸ್ರು ಒಬ್ಬೊಬ್ರೇ ವಾಕಿಂಗ್ ಹೋಗೋ ಬದ್ಲು, ಏರ್ಡು-ಮೂರ್ ಜನ ಗುಂಪಲ್ಲಿ ಹೋಗೋದು.
  • ಆದಷ್ಟೂ ಬೆಲೆ ಬಾಳೋ ವಸ್ತುಗಳ್ನ ಅಗತ್ಯವಿಲ್ದಾಗ ಮನೇಲೆ ತೆಗ್ದಿಡೋದು.
  • ಜನ ಹೆಚ್ಚಾಗಿರೋ ಜಾಗ್ದಲ್ಲಿ ವಾಕಿಂಗ್ ಮಾಡೋದು.
  • ತೀರ ಬೆಳಿಗ್ಗೆ ಅಥ್ವಾ ತಿರಾ ಸಂಜೆ ಕತ್ಲಾಗೋವರ್ಗೂ ವಾಕಿಂಗ್ ಮಾಡ್ದೆ ಇರೋದು.
  • ಕತ್ನಲ್ಲಿರೋ ಸರ ಮುಚ್ಚೋ ಹಾಗೆ ಸೆರಗು/ದುಪಟ್ಟಾ ಹಾಕೊಳೋದು.
  • ಪ್ರತಿ ದಿನ ಬೇರೆ-ಬೇರೆ ದಾರಿ/ಟೈಮಲ್ಲಿ ವಾಕಿಂಗ್ ಮಾಡೋದು.
  • ವಾಕಿಂಗ್ ಮಾಡ್ವಾಗ ಪಕ್ದಲ್ಲಿ ಬರೋ ಜನ-ಗಾಡಿ ಬಗ್ಗೆ ಎಚ್ಚರ್ಕೆಯಿಂದಿರೋದು.
  • ಸಾಧ್ಯವಾದ್ರೆ ಮೊಬೈಲ್ ಫೋನ್ ಜೊತೇಲಿ ಇಟ್ಕೊಳ್ಳೋದು.

ಬನ್ನಿ, ನಾವೆಲ್ಲಾ ಸೇರಿ ಬೆಂಗ್ಳೂರ್ನಲ್ಲಿ ಸುರಕ್ಷಿತವಾಗಿ ಜೀವ್ನ ನಡಸೋ ಪ್ರಾಮಾಣಿಕ ಪ್ರಯತ್ನ ಮಾಡೋಣ. ಆದ್ರೆ, ಅದು ಸಾಧ್ಯನಾ? ಅನ್ನೋದು ಬೇರೆ ಪ್ರಶ್ನೆ!!

Sunday, May 8, 2011

ಓಂ ಸಾಯಿ ರಾಮ್..

ಸತ್ಯ ಸಾಯಿ ಬಾಬ (ಕೃಪೆ - ಇಂಡಿಯಾ ಟಿವಿ)
ಶ್ರೀ ಸತ್ಯ ಸಾಯಿ ಬಾಬ ರವರ ಮೇಲಿನ ಚಿತ್ರವನ್ನು ನೋಡುತ್ತಿದ್ದಂತೆಯೇ ನನಗೆ ಎಲ್ಲಿಲ್ಲದ ಅಚ್ಚರಿಯಾಯಿತು. ಈ ಚಿತ್ರವು, ನಾನು ಕಂಡ ಸಾಯಿ ಬಾಬ ಅವರ ವಿಶೇಷ-ವಿಭಿನ್ನ ಛಾಯಾಚಿತ್ರ. ಸಾಮಾನ್ಯವಾಗಿ, ಸಾಯಿ ಬಾಬ ರವರ ಎಲ್ಲಾ ಚಿತ್ರಗಳು ಅವರು ಅಭಯ ಹಸ್ತವನ್ನು ತಮ್ಮ ಭಕ್ತರೆಡೆಗೆ ಆಶಿರ್ವದಿಸುವ ರೀತಿಯಲ್ಲಿ ಇರಿಸಿಕೊಂಡ ಭಂಗಿಯಲ್ಲೇ ಇರುವುದನ್ನು ನಾವು ಗಮನಿಸಿದ್ದೇವೆ. ಆದರೆ, ಇಲ್ಲಿ, ಸಾಯಿ ಬಾಬ ಅವರು ತಮ್ಮ ನೈಜ ದೈವೀಯತೆಯನ್ನು ತೊರೆದು, ದೀನ ಭಾವರಾಗಿರುವಂತೆ ತೋರುತ್ತದೆ. ಅಚ್ಚರಿಯಿಂದ ಮೊದಲುಗೊಂಡು ಕುತೂಹಲ ಮೂಡಿಸಿದ ಈ ಚಿತ್ರದ ಬೆನ್ನುಹತ್ತಿ ಹೊರಟ ನನಗೆ ದೊರೆತ ಮಾಹಿತಿ : 25 ನೇ ಮಾರ್ಚ್, 2011 ರಂದು ಸತ್ಯ ಸಾಯಿ ಬಾಬ ತಮ್ಮ ಭಕ್ತರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ, ಅಲ್ಲಿದ್ದ ಭಕ್ತರಲ್ಲೊಬ್ಬರು ಸೆರೆಹಿಡಿದ ಚಿತ್ರವಿದು. ಅದು ಬಾಬಾರೊಡನೆ ತಮ್ಮ ಕಟ್ಟಕಡೆಯ ಸಂದರ್ಶನವೆಂದು, ತಮ್ಮ ಕಣ್ಮುಂದೆ ಕಾಣುತ್ತಿದ್ದ ದೈವವು ಮತ್ತೆಂದೂ ತಮ್ಮ ಮುಂದೆ ಬರಲಾರದಷ್ಟು ದೂರ ಹೊರಟುಹೋಗುತ್ತದೆಂಬ ಅರಿವು ಅಲ್ಲಿ ನೆರೆದಿದ್ದ ಯಾರೊಬ್ಬ ಭಕ್ತನ ಮನಸ್ಸಿನಲ್ಲೂ ಅರಿಕೆಯಾಗಿರಲಿಕ್ಕಿಲ್ಲ. ಆದರೆ, ಅದು ತಮಗೆ ದೊರೆತ ಕೊನೆಯ ಅವಕಾಶವೆಂದು ಅರಿತಿದ್ದ ಬಾಬ, ತಮ್ಮ ಎರಡೂ ಕರಗಳನ್ನು ಜೋಡಿಸಿ ಭಕ್ತರಿಗೆ ಕೈಮುಗಿದಾಗ, ಅವರ ಮನದಾಳದಲ್ಲಿದ್ದ ಕೃತಜ್ಞತಾಭಾವವು ಅವರ ಮುಖದಲ್ಲಿ ಮಡುಗಟ್ಟಿತ್ತು.

ಮೂಲತಃ ನಾನು ಬಾಬ ಅವರ ಪರಮ ಭಕ್ತನೇನಲ್ಲ. ಬಾಲ್ಯದಲ್ಲಿ ನಾನು ಬಾಬಾರನ್ನು ಕಂಡದ್ದು ಒಬ್ಬ ಮಹಾನ್ ಮಾಂತ್ರಿಕನಂತೆ! ತಮಗೆ ಶರಣೆಂದು ಬಂದ ಭಕ್ತಕೊಟಿಗೆ ಕ್ಷಣಾರ್ಧದಲ್ಲಿ ವಿಭೂತಿಯನ್ನೋ ಅಥವಾ ಆಭರಣವನ್ನೋ ಶೂನ್ಯದಿಂದ ಸೃಷ್ಟಿಮಾಡಿ ಆಶಿರ್ವಾದವಾಗಿ ದಯಪಾಲಿಸುತ್ತಿದ್ದ ದೃಶ್ಯವು ಇಂದಿಗೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ನಾನು ಪ್ರಭುದ್ಧನಾದಂತೆಲ್ಲಾ ಬಾಬ ನನ್ನ ಸ್ಮೃತಿಯಿಂದ ಸಂಪೂರ್ಣವಾಗಿ ಮರೆಯಾಗಿಹೋಗಿದ್ದರು. ಅವರು ಕಟ್ಟಿ-ಬೆಳೆಸಿ-ಪೋಷಿಸುತ್ತಿದ್ದ ದಯಾಸಂಸ್ಥೆಗಳ ಒಂದು ಪ್ರಮುಖ ಅಂಗವಾಗಿ, ಮಾಹಿತಿ ತಂತ್ರಜ್ಞಾನದ ಸ್ಪರ್ಧೆಗಿಳಿದು ಬೆಂಗಳೂರಿನ ವೈಟ್-ಫೀಲ್ಡ್ ನಲ್ಲಿ ಕಂಗೆಟ್ಟು ತಲೆಯೆತ್ತಿರುವ ಸಹಸ್ರಾರು ಹವಾನಿಯಂತ್ರಿತ ಕಟ್ಟಡಗಳ ಮಧ್ಯೆ ಸದ್ದಿಲ್ಲದೆ, ಉಚಿತ ಉನ್ನತ ವೈದ್ಯಕೀಯ ಸೇವೆಯನ್ನು ನಿರಂತರವಾಗಿ ಒದಗಿಸುತ್ತಿರುವ 'ಶ್ರೀ ಸತ್ಯ ಸಾಯಿ ಸೂಪರ್ ಸ್ಪೆಶಾಲಿಟಿ ಹಾಸ್ಪಿಟಲ್' ಅನ್ನು ಹಲವಾರು ಬಾರಿ ನಾನು ತಿರುಗಿನೋಡದೇ ತಿರಸ್ಕರಿಸಿದಂತೆ ತಿರುಗಾಡಿದ್ದುಂಟು. ಆದರೆ ಇಂದು, ಅದೊಂದು ಪವಿತ್ರ ಸ್ಥಾನವೆಂಬ ಪ್ರಬಲ ನಂಬಿಕೆ-ಭಾವನೆಯು ನನ್ನಲ್ಲಿ ಮನೆಮಾಡಿದೆ.

ಬಾಬಾರವರು ತಾವು ತಮ್ಮ 96 ನೇ ವಯಸ್ಸಿನವರೆಗೂ ಆರೋಗ್ಯದಿಂದ ಜೀವಿಸುವುದಾಗಿ ಘೋಷಿಸಿದ್ದರು; ಆದರೆ, ವಿಧಿಯ ಹಲವಾರು ಅನಿರೀಕ್ಷಿತ ಅಪಘಾತಗಳ ಕಾರಣದಿಂದಾಗಿ ಬಾಬ 84 ರ ಹರೆಯದಲ್ಲೇ ದೈವನ ಅಧೀನರಾದರು. "ಅವರ ಭಕ್ತರು ಹೇಳುವಂತೆ, ಬಾಬ ಸತ್ತವರನ್ನು ಬದುಕಿಸುವ ಶಕ್ತಿ ಹೊಂದಿದ್ದರೆ, ತಮ್ಮನ್ನು ತಾವು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲವೇಕೆ?" ಎಂಬುದು ಕೆಲವರ ಪ್ರಶ್ನೆ. ಈ ಪ್ರಶ್ನೆಗೆ ಉತ್ತರಿಸುವುದು ಕಷ್ಟ-ಸಾಧ್ಯ. ರಾಮಾಯಣದಲ್ಲಿ ಉಲ್ಲೇಖಿತವಾಗಿರುವ ಪ್ರಸಂಗವೊಂದು ಇಲ್ಲಿ ಪ್ರಸ್ತುತವೆನಿಸಬಹುದು ಎಂಬುದು ನನ್ನ ಭಾವನೆ.
ಲಂಕೆಯನ್ನು ತಲುಪಲು ಶ್ರೀರಾಮನ ಕಪಿಸೈನ್ಯ ಬಂಡೆಕಲ್ಲುಗಳಿಂದ ಸಮುದ್ರಕ್ಕೆ ಸೇತುವೆಯನ್ನು ನಿರ್ಮಿಸುತ್ತಿದ್ದವು. ಪ್ರತಿಯೊಂದು ಬಂಡೆಯ ಮೇಲೆ 'ಶ್ರೀರಾಮ' ಎಂದು ಬರೆದು ಭಕ್ತಿಯಿಂದ ಸಮುದ್ರದ ನೀರಿನ ಮೇಲೆ ಹಾಕಲು, ಅವು ಮುಳುಗದೇ ತೇಲುತ್ತಿದ್ದವು. ಇದನ್ನು ಕಂಡ ಶ್ರೀರಾಮನಿಗೆ ಆಶ್ಚರ್ಯವಾಯಿತು. ಆದಿನ ರಾತ್ರಿ ಏಕಾಂತದಲ್ಲಿ ಶ್ರೀರಾಮ ತಾನೂ ಸಹ ಒಂದು ಕಲ್ಲನ್ನು ತೆಗೆದುಕೊಂಡು ಸಮುದ್ರದ ನೀರಿಗೆ ಹಾಕಲು, ಅದು ಮುಳುಗಿಹೋಯಿತು. ಇದನ್ನೆಲ್ಲಾ ಗಮನಿಸುತ್ತಿದ್ದ ಹನುಮಂತ, ಕಲ್ಲುಗಳು ನೀರಿನ ಮೇಲೆ ತೇಲಲು 'ರಾಮನಾಮ'ವೇ ಕಾರಣ ಎಂದು ಶ್ರೀರಾಮನನ್ನುದ್ದೇಶಿಸಿ ಹೇಳಿದನು. ಇದರಿಂದ, ರಾಮನಿಗೆ ಇರದ ಶಕ್ತಿಯು ಅವನ ಪರಮ ಭಕ್ತರು ಭಜಿಸುವ ಶ್ರೀರಾಮನಾಮದ ಮಹಿಮೆಯ ಅಖಂಡವಾದ ನಂಬಿಕೆಗೆ ಇದ್ದಿತು ಎಂಬುದನ್ನು ಇಡೀ ಜಗತ್ತಿಗೇ ತೋರಿಸಿಕೊಡಲಾಗಿದೆ.
ಮೇಲಿನ ಪ್ರಸಂಗದ ಸಾರಾಂಶವನ್ನು ಗ್ರಹಿಸಿಕೊಂಡು ಹೇಳುವುದಾದರೆ, ಅನ್ಯರಿಗೆ ಒಳಿತನ್ನು ಮಾಡುವ ಶಕ್ತಿ ಬಾಬಾರವರಿಗೆ ಇದ್ದಿತೆ ವಿನಃ ತಮ್ಮ ವೈಯಕ್ತಿಕ ಒಳಿತನ್ನು ಸಾಧಿಸಿಕೊಳ್ಳುವುದಕ್ಕಲ್ಲ. ಅವರು ಜನ್ಮ ತಳೆದದ್ದೇ ಜಗತ್ತಿನ ಕಲ್ಯಾಣಕ್ಕಾಗಿಯೇ ಹೊರೆತು ಸ್ವಾರ್ಥ ಸಾಧನೆಗಾಗಿ ಅಲ್ಲ. ಇದಕ್ಕೆಲ್ಲಾ ಮೂಕ ಸಾಕ್ಷಿಯೆಂಬಂತೆ ಪ್ರಪಂಚದಾದ್ಯಂತ ಅವರು ಹುಟ್ಟಿಹಾಕಿದ ಹತ್ತು ಹಲವು ದಯಾಸಂಸ್ಥೆಗಳು ನಮ್ಮೆದುರಿಗಿವೆ. ಆ ಸಂಸ್ಥೆಗಳಿಂದ ಪ್ರಯೋಜನ ಪಡೆದುಕೊಂಡ ಸಹಸ್ರಾರು ಮಂದಿ ನಮ್ಮ ನಡಿವೆಯೇ ಇದ್ದಾರೆ. ತಮ್ಮ ಹುಟ್ಟೂರಾದ ಪುಟ್ಟಪರ್ತಿಯಲ್ಲಿ ಅವರು ಮಾಡಿರುವ ಜನಸೇವೆಯನ್ನು ಅಲ್ಲಿನ ಘನ ಸರ್ಕಾರವು ಇಲ್ಲಿಯವರೆಗೂ ಮಾಡಲು ಸಾಧ್ಯವಾಗಿಲ್ಲ, ಇಂಥಹ ನಿಸ್ವಾರ್ಥ ಸಮಾಜ ಸೇವೆಯನ್ನು ಅಪಾರ ಪ್ರಮಾಣದಲ್ಲಿ ಒಬ್ಬೊಂಟಿಗರಾಗಿ ಸಾಧಿಸಿದ್ದೇ ಬಾಬಾರವರು ನಡೆಸಿದ ಅದ್ಭುತ ಪವಾಡ. ಅಗಲಿದ ಅಂಥಹ ಮಹಾನ್ ಚೇತನಕ್ಕೆ ಈ ಮೂಲಕ ನನ್ನ ಭಾವಪೂರ್ಣ ಶ್ರದ್ಧಾಂಜಲಿಯ ಅರ್ಪಣೆ..

Monday, April 11, 2011

ಕ್ರಿಕೆಟ್ ಚಕ್ರಾಧಿಪತ್ಯ

Image Courtesy: ESPN (click image to enlarge)
ಪ್ರಪಂಚದಾದ್ಯಂತ ಇರುವ ಅಸಂಖ್ಯಾತ ಭಾರತೀಯ ಕ್ರಿಕೆಟ್ ಪ್ರೇಮಿಗಳ 28 ವರ್ಷಗಳ ಕನಸನ್ನು ನನಸಾಗಿಸಿರುವ ಮಹೇಂದ್ರ ಸಿಂಗ್ ಧೋನಿ ಮತ್ತು ತಂಡದವರು ನಮ್ಮಗಳೆಲ್ಲರ ಹೃದಯ ಸಿಂಹಾಸನವನ್ನಲಂಕರಿಸಿದ್ದಾರೆ. ಅಷ್ಟು ಮಾತ್ರವಲ್ಲ, ಜಗತ್ತಿನ ಅಂತಾರಾಷ್ಟ್ರೀಯ ಕ್ರಿಕೆಟ್ ಚಕ್ರಾಧಿಪತ್ಯವನ್ನು ಇನ್ನು ನಾಲ್ಕು ವರ್ಷಗಳ ಕಾಲ ಭಾರತ ದೇಶಕ್ಕೆ ಮೀಸಲಿರಿಸಿದ್ದಾರೆ. ಇದೊಂದು ಅವಿಸ್ಮರಣೀಯ, ಅದ್ಭುತ ಸಾಧನೆ!

1983 ರಲ್ಲಿ ಕಪಿಲ್ ದೇವ್ ನೇತೃತ್ವದ ಭಾರತ ಕ್ರಿಕೆಟ್ ತಂಡ ಪ್ರಪ್ರಥಮ ಬಾರಿಗೆ ವಿಶ್ವಕಪ್ ಗೆಲ್ಲುವ ಮೂಲಕ ಕ್ರಿಕೆಟ್ ಇತಿಹಾಸದ ಪುಟಗಳಲ್ಲಿ ಭಾರತದ ಸಾಧನೆಯನ್ನು ಸುವರ್ಣಾಕ್ಷರಗಳಲ್ಲಿ ನಮೂದಿಸಿತ್ತು. ಅಂಥಹುದೊಂದು ಮಹತ್ತರ ಸಾಧನೆಯನ್ನು ಮತ್ತೆ ಸಾಧಿಸಿ ತೋರಿಸುವಲ್ಲಿ ಸೌರವ್ ಗಂಗೂಲಿ ಪಡೆ 2003 ರ ವಿಶ್ವಕಪ್ ಸಮರದಲ್ಲಿ ಎಡವಿತ್ತು. ಅಲ್ಲಿಂದೀಚೆಗೆ, ಭಾರತೀಯರೆಲ್ಲರಲ್ಲಿ ಕ್ರಿಕೆಟ್ ವಿಶ್ವಕಪ್ ತಮ್ಮದಾಗಿಸಿಕೊಳ್ಳುವ ಹಂಬಲ ಅಗಾಧವಾಗಿದ್ದಿತು. ಈ ಮಹದಾಸೆಯನ್ನು ಪೂರೈಸುವಲ್ಲಿ ಭಾರತ ಕ್ರಿಕೆಟ್ ತಂಡವು 2011 ರಲ್ಲಿ ಯಶಸ್ವಿಯಾಗಿರುವುದು ಸಂತಸ ಹಾಗೂ ಹೆಮ್ಮೆಯ ವಿಷಯ.

ಮೂಲತಃ ಭಾರತೀಯ ಕ್ರೀಡೆಯಲ್ಲದಿದ್ದರೂ, ಕ್ರಿಕೆಟ್ ಗೆ ಭಾರತದಲ್ಲಿ ವಿಶಿಷ್ಟವಾದ ಸ್ಥಾನವಿದೆ; ಅದ್ಭುತ ಸಾಧಕರೂ ಇದ್ದಾರೆ - ಇದಕ್ಕೆ ಸಚಿನ್ ತೆಂಡೂಲ್ಕರ್ ರವರಿಗಿಂತ ಅನ್ಯ ಉಲ್ಲೇಖದ ಅಗತ್ಯವಿಲ್ಲ. 'ನಾವು ಈ ವಿಶ್ವಕಪ್ ಅನ್ನು ಸಚಿನ್ ರವರಿಗೆ ಗೆದ್ದುಕೊಡುವವರಿದ್ದೇವೆ' ಎಂದು 2011 ರ ವಿಶ್ವಕಪ್ ಪ್ರಾರಂಭಕ್ಕೆ ಮುನ್ನವೇ ಧೋನಿ ಹೇಳಿಕೆ ನೀಡಿದ್ದರು; ಅದರಂತೆ ನಡೆದುಕೊಂಡರೂ ಸಹ. ಇದು ಸಾಧ್ಯವಾದದ್ದು ಸಚಿನ್ ರವರ ಹುಟ್ಟೂರಾದ ಮುಂಬಯಿ ನೆಲದಲ್ಲಿ - ಭಾರತ ತಂಡದ ಆಟಗಾರರಿಗೆ ಒಬ್ಬ ಮೇಧಾವಿ ಕ್ರಿಕೆಟಿಗನಿಗೆ ಅಭಿನಂದನಾ ಗೌರವವನ್ನು ಸಲ್ಲಿಸಲು ಇದಕ್ಕಿಂತ ಉತ್ತಮ ಅವಕಾಶ, ಮಾರ್ಗ ದೊರೆಯುತ್ತಿರಲಿಲ್ಲ. ವಿಶ್ವಕಪ್ ಗೆದ್ದ ಆ ಕ್ಷಣ, ಸಚಿನ್ ಅವರು ತಮ್ಮ ಜೀವನದಲ್ಲಿ ಬಹು ದಿನಗಳಿಂದ ನಿರೀಕ್ಷಿಸಿದ್ದ 'ಅಮೃತ ಘಳಿಗೆ' ಎಂದರೆ ತಪ್ಪಾಗಲಾರದು.

2011 ರಲ್ಲಿ ಕ್ರಿಕೆಟ್ ವಿಶ್ವಕಪ್ ಗೆಲ್ಲಲು ಭಾರತವು ಮೂರು ಫೈನಲ್ ಪಂದ್ಯಗಳಲ್ಲಿ ಜಯಗಳಿಸಬೇಕಾಯಿತು - ಆಸ್ಟ್ರೇಲಿಯಾ, ಪಾಕಿಸ್ತಾನ ಮತ್ತು ಶ್ರೀಲಂಕ ತಂಡಗಳ ವಿರುದ್ಧ. ಕಳೆದ ಹಲವಾರು ವರ್ಷಗಳಿಂದ ಕ್ರಿಕೆಟ್ ಸಾಮ್ರಾಜ್ಯವನ್ನು ಆಳುತ್ತಿದ್ದ ಆಸ್ಟ್ರೇಲಿಯಾ ತಂಡವನ್ನು ಮಣಿಸಿದ್ದೇ ಒಂದು ಮಹತ್ವದ ಜಯ. ಭಾರತವು ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಜಯಗಳಿಸುತ್ತಿದ್ದಂತೆಯೇ ಭಾರತೀಯರೆಲ್ಲರಲ್ಲಿ ವಿಶ್ವಕಪ್ ಗೆದ್ದಷ್ಟೇ ಸಂಭ್ರಮ ಮನೆಮಾಡಿತ್ತು. ಅದರ ಬೆನ್ನಹಿಂದೆಯೇ ಪ್ರಬಲ ಎದುರಾಳಿ ಶ್ರೀಲಂಕ ತಂಡವನ್ನು ಆತ್ಮವಿಶ್ವಾಸ ತುಂಬಿದ ದಿಟ್ಟ ಹೋರಾಟದಿಂದ ಬಗ್ಗುಬಡಿದು ವಿಶ್ವಕಪ್ ಗೆದ್ದಾಗ, ನಮಗೆಲ್ಲ ಸ್ವರ್ಗ ಮೂರೇ ಗೇಣು! ಕ್ರಿಕೆಟ್ ವಿಶ್ವಕಪ್ ಗೆಲ್ಲಲು ಭಾರತವು ನಡೆದು ಬಂದ ದಾರಿ ಈ ಗೆಲುವಿಗೊಂದು ವಿಶೇಷ ಮಹತ್ವ-ಅರ್ಥ ತಂದುಕೊಟ್ಟಿದೆ.

ಚಾಂಪಿಯನ್ನರಾಗಲು ತಂಡದ ಗೆಲುವಿಗೆ ಪ್ರತಿಯೊಬ್ಬ ಆಟಗಾರರೂ ಸಹ ಯತೇಚ್ಛವಾಗಿ ಪ್ರಯತ್ನಿಸುತ್ತಿದ್ದುದು ಪಂದ್ಯಗಳಲ್ಲಿ ಎದ್ದು ಕಾಣುತ್ತಿದ್ದ ಮಹತ್ವದ ಅಂಶ. ಯುವರಾಜ್ ಸಿಂಗ್, ಜಹೀರ್ ಖಾನ್, ಹರ್ಭಜನ್ ಸಿಂಗ್, ಗೌತಮ್ ಗಂಭೀರ್, ವಿರಾಟ್ ಕ್ಹೋಲಿ, ಸುರೇಶ ರೈನಾ ಇವರುಗಳನ್ನೊಳಗೊಂಡು ತಂಡದ ಪ್ರತಿಯೊಬ್ಬ ಆಟಗಾರರೂ ತೋರಿಸಿದ ಶ್ರಧ್ಧೆ ಮತ್ತು ಹೋರಾಟದ ಮನೋಭಾವವನ್ನು ಮೆಚ್ಚಲೇಬೇಕು. ತಂಡದ ತರಬೇತುದಾರ, ದಕ್ಷಿಣ ಆಫ್ರಿಕಾ ದೇಶದ ಮಾಜಿ ಆಟಗಾರ ಗ್ಯಾರಿ ಕರ್ಸ್ಟನ್ ರವರ ತೆರೆಮರೆಯ ಶ್ರಮ ಪ್ರಶಂಸನೀಯ ಹಾಗೂ ಅಭಿನಂದನೀಯ. ಈ ಗೆಲುವು ಸಂಘಟಿತ ಹೋರಾಟಕ್ಕೆ ಸಿಕ್ಕ ಪ್ರತಿಫಲವೇ ಸರಿ.

ಭಾರತ ಕ್ರಿಕೆಟ್ ತಂಡದ ಯಶಸ್ಸಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರಣರಾದ ಪ್ರತಿಯೊಬ್ಬರಿಗೂ ಈ ಮೂಲಕ ಅನಂತಾನಂತ ಧನ್ಯವಾದಗಳನ್ನು  ಹಾಗೂ ತುಂಬು ಹೃದಯದ ಶುಭಾಶಯಗಳನ್ನು ಅರ್ಪಿಸುತ್ತೇನೆ.

Sunday, March 27, 2011

ಮಹಿಳಾ ದಿನಾಚರಣೆ

Mother Teresa
ಪ್ರತಿ ವರ್ಷ 8ನೇ ಮಾರ್ಚ್ ದಿನವನ್ನು 'ವಿಶ್ವ ಮಹಿಳಾ ದಿನಾಚರಣೆ' ಎಂದು ಪರಿಗಣಿಸಿ ಆಚರಿಸಲಾಗುತ್ತಿದೆ. ಮಹಿಳಾ ದಿನಾಚರಣೆಯ ಅಂಗವಾಗಿ ಇದೇ ತಿಂಗಳ 8ನೇ ತಾರೀಖಿನಂದು ಈ ಬರವಣಿಗೆ ಬಿತ್ತರವಾಗಬೇಕಿದ್ದು, ಅನೇಕ ಕಾರಣಗಳಿಂದ ತಡವಾಗಿ ಮೂಡಿಬರುತ್ತಿದೆ; ಕ್ಷಮೆ ಇರಲಿ.

ಇತಿಹಾಸದ ಪುಟಗಳನ್ನು ತಿರುವಿ ಹಾಕಿದಾಗ, 28ನೇ ಫೆಬ್ರವರಿ 1909 ರಂದು ಸೋಶಿಯಲಿಸ್ಟ್ ಪಾರ್ಟಿ ಆಫ್ ಅಮೇರಿಕ ಸಂಘದ ಪ್ರೇರಣೆಯಿಂದ 'ದುಡಿಯುವ ಮಹಿಳೆಯರ ದಿನಾಚರಣೆ'ಯು ಪ್ರಪ್ರಥಮವಾಗಿ ಅಮೆರಿಕೆಯಲ್ಲಿ ಆಚರಿಸಲ್ಪಟ್ಟಿತು. ಮೂಲಭೂತವಾಗಿ ಸಾಮಾಜಿಕ-ರಾಜಕೀಯ ಪ್ರಭಾವ ಹೊಂದಿದ್ದ ಈ ಚಳುವಳಿಯು, ಕ್ರಮೇಣ ತನ್ನ ರೂಪವನ್ನು ಬದಲಿಸಿಕೊಂಡು ಇಂದಿಗೆ 'ಮಹಿಳಾ ದಿನಾಚರಣೆ' ಎಂದೇ ವಿಶ್ವದಾದ್ಯಂತ ಪ್ರಖ್ಯಾತಿ ಪಡೆದುಕೊಂಡಿದೆ. ಮಹಿಳೆಯರ ನಿಸ್ವಾರ್ಥ-ಅಖಂಡ ಸೇವೆಯನ್ನು ನೆನೆದು, ಅತ್ಯಂತ ಗೌರವಯುತ ಪ್ರೀತಿಯನ್ನು ಅವರಿಗೆ ಅರ್ಪಿಸುವ ಆಚರಣೆಯಾಗಿ ಈ ದಿನವು ಇಂದು ಮಾರ್ಪಟ್ಟಿದೆ ಎಂದರೆ ತಪ್ಪಾಗಲಾರದು.

ಬರಿಯ ನಾಲ್ಕು ಗೋಡೆಗಳ ಮನೆಯೇ ಮಹಿಳೆಯರ ಪ್ರಪಂಚವಾಗಿದ್ದ ದಿನಗಳಲ್ಲಿಯೂ ಸಹ ಮಹಿಳೆಯರು ತಮ್ಮ ಸಾಮಾಜಿಕ ಸೇವಾ ಗುಣವನ್ನು ಮೆರೆದು ಇಡೀ ಪ್ರಪಂಚವನ್ನೇ ಬೆರಗುಗೊಳಿಸಿದ್ದಕ್ಕೆ ಮದರ್ ತೆರೇಸಾ ಅವರಿಗಿಂತ ಉತ್ತಮ ಉದಾಹರಣೆಯ ಅಗತ್ಯವಿಲ್ಲ. ಭಾರತದ ರಾಜಕೀಯದಲ್ಲಿ ಇಂದಿರಾ ಗಾಂಧಿಯವರ ಹೆಸರನ್ನು ಮರೆಯುವಂತಿಲ್ಲ. ಸಂಗೀತ ಪ್ರಪಂಚದಲ್ಲಿ ಎಂ. ಎಸ್. ಸುಬ್ಬುಲಕ್ಷ್ಮಿ, ಲತಾ ಮಂಗೇಷ್ಕರ್ ಮುಂತಾದವರ ಸಾಧನೆಯನ್ನು ಕಡೆಗಣಿಸುವಂತಿಲ್ಲ. ಪ್ರಿಯಾಂಕ ಮಲ್ಹೋತ್ರ, ಮಂಜು ಭರತ್ ರಾಮ್ ಅವರುಗಳಂತಹ ಯಶಸ್ವೀ ಉದ್ಯಮಿಗಳು ನಮ್ಮ ಮಧ್ಯೆ ಇಲ್ಲದಿಲ್ಲ. ಶಾಕುಂತಲಾ ದೇವಿಯವರ ಗಣಿತ ಪಾಂಡಿತ್ಯವು ಎಂಥವರನ್ನೂ ಬೆರಗುಗೊಳಿಸದೇ ಇರುವುದಿಲ್ಲ.

ಜೀವಿತಾವಧಿಯ ವಿವಿಧ ಹಂತಗಳಲ್ಲಿ ಒಬ್ಬ ಮಹಿಳೆಯು ವಹಿಸಿಕೊಳ್ಳುವ ಹೊಣೆಗಾರಿಕೆಗಳು ಅನೇಕ. ಬಾಲ್ಯದಲ್ಲಿ ಪ್ರೀತಿಪೂರ್ವಕ ಅಕ್ಕ-ತಂಗಿಯರಾಗಿ, ಯುವ್ವನದಲ್ಲಿ ಬಾಳ ಸಂಗಾತಿಯಾಗಿ, ಪ್ರೌಡಾವಸ್ಥೆಯಲ್ಲಿ ತಾಯಿಯಾಗಿ, ವೃದ್ಧಾಪ್ಯದಲ್ಲಿ ಆಸರೆಯಾಗಿ ಮಹಿಳೆಯು ತನಗೆ ವಹಿಸಲ್ಪಟ್ಟ ವಿಭಿನ್ನ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿರುವ ಪರಿಯು ಅದ್ಭುತ! 'ಪ್ರತಿಯೊಬ್ಬ ಯಶಸ್ವೀ ಪುರಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ' ಎನ್ನುವುದು ಬರಿಯ ನಾಣ್ನುಡಿಯಲ್ಲ ಎಂಬುದನ್ನು ನಾವೆಲ್ಲರೂ ಅರಿತುಕೊಳ್ಳಬೇಕು. ಹೀಗಿರುವಾಗ, ಹಲವಾರು ಬಾರಿ ನಮ್ಮ ಸಮಾಜ ಹಾಗೂ ಕುಟುಂಬದಲ್ಲಿ ಮಹಿಳೆಯರನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಳ್ಳುತ್ತಿರುವುದು ಶೋಚನಿಯ ಮತ್ತು ಖಂಡನೀಯ ಸಂಗತಿ.

ಮಹಿಳೆಯರು ಇಂದಿನ ಪ್ರಗತಿಶೀಲ ಸಮಾಜದಲ್ಲಿ ಹಿಂದೆಂದಿಗಿಂತಲೂ ಉನ್ನತ ಸ್ಥಾನವನ್ನು ಅಲಂಕರಿಸಿದ್ದಾರೆ ಎಂದೇ ಹೇಳಬೇಕು; ಅದಕ್ಕೆ ಅವರು ಅರ್ಹರೂ ಹೌದು. ಆದರೆ, ಅದೆಷ್ಟೋ ಮಂದಿ ಮಹಿಳೆಯರು ಅರಿವಿಗೆ ಬಾರದಂತೆಯೇ ತಮ್ಮ ಜೀವನವನ್ನು ಭವಿಷ್ಯವಿಲ್ಲದ ಕತ್ತಲೆ ಕೋಣೆಗಳ ನರಕದಲ್ಲಿ ಸದ್ದಿಲ್ಲದೇ ಕಳೆದುಬಿಡುತ್ತಿರುವುದೂ ವಾಸ್ತವ. ಪ್ರತಿಯೊಬ್ಬ ಮಹಿಳೆಯೂ ಸಹ ಉತ್ತಮ ಬಾಳಿನ ಕನಸು ಕಾಣುವುದು ಅವರುಗಳ ಆಜನ್ಮಸಿಧ್ಧ ಹಕ್ಕು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಇದು ಸಾಕಾರವಾಗಬೇಕಾದರೆ, ಬದಲಾವಣೆಯ ಅವಶ್ಯಕತೆಯಿದೆ - ಈ ಬದಲಾವಣೆಯನ್ನು ಸಮಾಜದ ತಳಹದಿ ಘಟ್ಟವಾದ ಕುಟುಂಬದಲ್ಲಿ ತರುವ ಪ್ರಾಮಾಣಿಕ ಪ್ರಯತ್ನ ನಾವೆಲ್ಲರೂ ಮಾಡಬೇಕಾಗಿದೆ; ಮಾಡಿಯೇ ತೀರಬೇಕಾಗಿದೆ. ನಮ್ಮಗಳ ಸಂಸಾರದ ಅವಿಭಾಜ್ಯ-ಪ್ರಮುಖ ಅಂಗಗಳಾಗಿರುವ ಪ್ರತಿಯೊಬ್ಬ ಮಹಿಳೆಯನ್ನೂ ಮಹಿಳಾ ದಿನಾಚರಣೆಯಂದು ಮಾತ್ರವಲ್ಲದೇ ದಿನನಿತ್ಯವೂ ಪ್ರೀತಿಯಿಂದ ಕಾಣೋಣ, ಸದ್ನಡತೆಯಿಂದ ಸತ್ಕರಿಸಿ ಗೌರವಿಸೋಣ..