Friday, July 12, 2013

ಅಂಧೆಯ ಬದುಕಿಗೆ ಬೆಳಕಾದೀತೆ ನ್ಯಾಯಾಂಗ?

ಚಿಕ್ಕಬಳ್ಳಾಪುರ ಜಿಲ್ಲೆಯ ಬಗೇಪಲ್ಲಿ ಎಂಬ ಪುಟ್ಟ ಹಳ್ಳಿ; ತಮ್ಮ ದಿನನಿತ್ಯದ ಕಾಯಕಕ್ಕೆ ಹೊರಟಿದ್ದ ಕುರಿ ಕಾಯುವ ಹುಡುಗರಿಗೆ ಕ್ಷೀಣ ಧ್ವನಿಯ ಹೆಣ್ಣಿನ ರೋದನೆ ಕೇಳಿಸುತ್ತದೆ. ಅತ್ತಿತ್ತ ಹುಡುಕಾಡಿದ ಕುರಿಯವರಿಗೆ, ಸಮೀಪದ ಹೊಲದಲ್ಲಿದ್ದ ಪಾಳುಬಾವಿಯೂಂದರೊಳಗೆ ಬಿದ್ದು ಸಹಾಯಕ್ಕಾಗಿ ಕೂಗಿಕೊಳ್ಳುತ್ತಿದ್ದ ಒಬ್ಬ ಹೆಂಗಸು ಕಾಣಿಸುತ್ತಾಳೆ. ಕೊಳವೆಬಾವಿಗಳ ಹಾವಳಿಯಿಂದ ಮರುಗಿಹೋಗಿದ್ದ ಪುರಾತನ ಪಳೆಯುಳಿಕೆಯೊಳಗಿಂದ ಹೆಣ್ಣುಮಗಳನ್ನು ಹೊರತರಲು ಹರಸಾಹಸ ಮಾಡಿದವರಿಗೆ ಅಚ್ಚರಿ-ಕುತೂಹಲ ಕಾದಿತ್ತು; ಆಕೆ ಗರ್ಭಿಣಿಯಷ್ಟೇ ಅಲ್ಲ, ಅಂಧೆಯೂ ಕೂಡ.

ಜುಲೈ ಆರರ ಶನಿವಾರ, ತಡರಾತ್ರಿಯಲ್ಲಿ "ಆದಪ್ಪ" ಅಂಧೆಯಾದ "ಗೌರಿ"ಯನ್ನು (ಹೆಸರು ಬದಲಿಸಲಾಗಿದೆ) ಮದುವೆಯಾಗುವುದಾಗಿ ನಂಬಿಸಿ ತನ್ನೊಡನೆ ಕರೆದೊಯ್ಯುತ್ತಾನೆ. ಅಂಗವಿಲಕೆಯಾದ ಹೆಣ್ಣು ತನ್ನೊಡಲಿನಲ್ಲಿ ಬೆಳೆಯುತ್ತಿದ್ದ ಕೂಸಿಗೆ ತಂದೆಯಾದ ಆದಪ್ಪನನ್ನಲ್ಲದೆ ಮತ್ತಿನ್ಯಾರನ್ನು ನಂಬಿಯಾಳು? ಗಾಡಾಂಧಕಾರದ ತನ್ನ ಪ್ರಪಂಚದಾಚೆಗೆಲ್ಲೋ ಇರಬಹುದಾದ ನವಜೀವನದ ಸುಂದರ ಕನಸನ್ನು ಕಾಣುತ್ತಾ ಹೊರಟಿದ್ದ ಗೌರಿಗೆ ಆಘಾತ ಕಾದಿತ್ತು.. ಮದುವೆಯಾಗಿ ಬಾಳಿನ ಬೆಳಕು ಹೊತ್ತಿಸುವುದಾಗಿ ವಚನ ನೀಡಿ, ಎಲ್ಲವನ್ನೂ ಪಡೆದುಕೊಂಡಿದ್ದಾತ ನಡುರಾತ್ರಿಯಲ್ಲಿ ಆಕೆಯನ್ನು ಕರೆತಂದು ಹತ್ತಿರದ ಹಾಳುಬಾವಿಯೊಂದಕ್ಕೆ ತಳ್ಳಿಬಿಟ್ಟಿದ್ದ. ತೆವಲು ತೀರಿಸಿಕೊಂಡಾತನಿಗೆ ಕಣ್ಣು ಕಾಣದ ಕುರುಡಿಯಾಗಲೀ, ಆಕೆಯ ಹೊಟ್ಟೆಯಲ್ಲಿ ಬೆಳೆಯುತ್ತಿದ್ದ ತನ್ನ ಪಿಂಡವಾಗಲಿ ಬೇಕಾಗಿರಲಿಲ್ಲ.

ಚಿತ್ರ ಕೃಪೆ: ದಿ ಹಿಂದು, ಗೂಗಲ್. ಪರಿಕಲ್ಪನೆ: ಪ್ರಶಾಂತ್

ಇಷ್ಟಕ್ಕೂ, ಆದಪ್ಪ ಏನೂ ತಿಳಿಯದ ಹದಿಹರೆಯದ ಹುಡುಗನೇನಲ್ಲ; 47ರ "ಪ್ರಾಯದ ಸಭ್ಯ ಗೃಹಸ್ಥ"?! ಸಬಲೆ ಹೆಣ್ಣಿಗೆ ದೇವರದ್ದೇ ಬಲ - ಸತತ ಹದಿನೈದು ಘಂಟೆಗಳ ದೀರ್ಘಾವಧಿ ನರಳಿಕೆಯ ನಂತರ ಅದೃಷ್ಟವಶಾತ್ ಗೌರಿ ಪ್ರಾಣಾಪಾಯದಿಂದ ಪಾರಾಗಿದ್ದಾಳಾದರೂ, ಆದಪ್ಪನ ಕುಟುಂಬದ ಸದಸ್ಯರ ಕಪಟಕ್ಕೆ ಗುರಿಯಾಗಬೇಕಾಯಿತು. ಮೂರೂ ಬಿಟ್ಟವರು ಮಾತ್ರ ಮಾನಕ್ಕೆ ಬೆಲೆ ಕಟ್ಟಲು ಸಾಧ್ಯ - ಗೌರಿಯ ತಂದೆಯನ್ನು ಭೇಟಿಮಾಡಿದ ಆದಪ್ಪನ ಮನೆಯವರು, ಪ್ರಕರಣವನ್ನು ಅಲ್ಲಿಗೇ ಮುಚ್ಚಿಹಾಕಲು ಒಪ್ಪಂದದ ಹೊಂದಾಣಿಕೆಗೆ ಮುಂದಾಗಿದ್ದರು. ಕ್ರೌರ್ಯದ ಆಟಕ್ಕೆ ಕುತಂತ್ರದ ಆಸರೆ - ಇದು ಇಂದಿನ ನಮ್ಮ "ಪ್ರಬುದ್ಧ ಸಮಾಜ"ದ ವಾಸ್ತವ ಸ್ಥಿತಿ. ನತದೃಷ್ಟೆ ಗೌರಿಯ ತಂದೆಯವರ ಕಠಿಣ ಧೋರಣೆಯಿಂದ ಹಾಗೂ ಜಿಲ್ಲಾ ಅಂಗವಿಕಲರ ಕಲ್ಯಾಣ ಸಂಸ್ಥೆಯ ಬೆಂಬಲದಿಂದ ಎರಡು ದಿನ ತಡವಾಗಿಯಾದರೂ ಬಗೇಪಲ್ಲಿ ಪೋಲೀಸ್ ಠಾಣೆಯಲ್ಲಿ ಆದಪ್ಪನ ವಿರುದ್ಧ ದೂರು ದಾಖಲಾಗಿರುವುದಷ್ಟೇ ಸಮಾಧಾನಕರ ಸಂಗತಿ.

ತಲೆಮರೆಸಿಕೊಂಡಿರುವ ಆರೋಪಿ "ಆದಪ್ಪ"ನಿಗಾಗಿ ಪೋಲೀಸರು ಹುಡುಕಾಡುತ್ತಿದ್ದರೆ, ಮಾನಸಿಕ ಹಾಗೂ ದೈಹಿಕ ಆಘಾತಕ್ಕೊಳಗಾಗಿರುವ ಗೌರಿ, ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಅಸಂಖ್ಯಾತ ಹೆಣ್ಣು ದೇವತೆಗಳಿಗೆ ನಿತ್ಯಪೂಜೆ ಸಾಂಗವಾಗಿ ನಡೆಯುತ್ತಿರುವ ನಮ್ಮ ಸಮಾಜದಲ್ಲಿ ಹೆಣ್ಣನ್ನು ಈ ರೀತಿ ಹೀನಾಯವಾಗಿ ನಡೆಸಿಕೊಳ್ಳುತ್ತಿರುವುದು ಧಾರ್ಮಿಕ ಆಚರಣೆಗಳನ್ನು ಅರ್ಥಹೀನವಾಗಿಸಿ, ಹಿಂದೂ ಸಂಸ್ಕೃತಿಯ ಪಾವಿತ್ರ್ಯತೆಗೆ ಕಳಂಕವನ್ನುಂಟುಮಾಡಿದೆ. ಹೊಟ್ಟೆ ನೋವಿನ ಹೊರತಾಗಿ ಗೌರಿಯ ಆರೋಗ್ಯ ಸುಧಾರಿಸುತ್ತಿರುವುದಾಗಿ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದರೂ, ಆರೋಪಿ ಆದಪ್ಪನನ್ನು ನ್ಯಾಯಾಂಗದ ಚೌಕಟ್ಟಿನಲ್ಲಿ ತಪ್ಪಿತಸ್ಥನೆಂದು ಸಾಬೀತು ಮಾಡಿ ಶಿಕ್ಷೆಗೆ ಗುರಿಪಡಿಸಲು ಗೌರಿಯ ಮಡಿಲು ಬರಿದಾಗದಿರುವುದು ಕ್ಷೇಮ. ವಿವಾಹಪೂರ್ವ ಲೈಂಗಿಕ ಸಂಬಂಧವು ದಾಖಲೆಗಳಿಂದ ಸಾಬೀತಾದಲ್ಲಿ, ಅಂತಹವರನ್ನು ಅಧಿಕೃತವಾಗಿ ಪತಿ-ಪತ್ನಿ ಎಂದು ಪರಿಗಣಿಸಬೇಕೆಂಬ ಮಹತ್ವದ ತೀರ್ಪನ್ನು ಇತ್ತೀಚೆಗಷ್ಟೇ ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ನೀಡಲಾಗಿದೆ. ಈ ತೀರ್ಪು ಗೌರಿಯಂತಹ ಇನ್ನೂ ಅನೇಕ ಮುಗ್ಧ, ಅಸಹಾಯಕ ಹಾಗೂ ಶೋಷಿತ ಹೆಣ್ಣುಮಕ್ಕಳ ಬದುಕಿಗೆ ಬೆಳಕಾಗಿ, ಆದಪ್ಪನಂತಹ ಕ್ರೂರಿಗಳ ಕ್ರೌರ್ಯವನ್ನು ಮಟ್ಟಹಾಕುವಲ್ಲಿ ಸಹಾಯಕವಾಗುತ್ತದೆಯೇ? ಕಾದು ನೋಡಬೇಕು.

2 comments:

  1. ಇತ್ತೀಚೆಗೆ ಇಂತಹ ಘಟನೆಗಳು ಪುನರಾವರ್ತನೆ ಆಗುತ್ತಲೇ ಇವೆ. ಅತ್ಯಾಚಾರ ಪ್ರಕರಣಗಳು ಮತ್ತು ಲೈಂಗಿಕ ಶೋಷಣೆಗಳು ನಗರ ಮತ್ತು ಗ್ರಾಮೀಣ ಪರಿಸರಕ್ಕೆ ವಿಭಿನ್ನವಾಗಿ ಸರ್ಕಾರ ನೋಡುತ್ತಿದೆ. ಮಣಿಪಾಲದಲ್ಲಿ ಆದರೆ ಖುದ್ದು ಗೃಹ ಮಂತ್ರಿಗಳೇ ಮೊಖಾಮ್, ಅದೇ ಇಂತಹ ಹಳ್ಳಿಗಾಡಿನ ದುರಂತಕ್ಕೆ? ಬದಲಾದೀತೇ ಮನಸ್ಸುಗಳು?
    http://badari-poems.blogspot.in/

    ReplyDelete
    Replies
    1. ನಿಮ್ಮ ಮಾತು ಅಕ್ಷರಶಃ ಸತ್ಯ ಬದರಿ ಸರ್.. ಇಂದಿನ ದಿನಪತ್ರಿಕೆಯಲ್ಲಿ ಬೆಂಗಳೂರಿನ ಕೆಂಗೇರಿ ಸಮೀಪ ಬಿಬಿಎಂಪಿ ವಾಹನ ಚಾಲಕನೊಬ್ಬ ಹದಿನಾರು ವರ್ಷದ ಬಾಲಕಿಯನ್ನು ಪ್ರೀತಿಸುವುದಾಗಿ ನಂಬಿಸಿ, ಆಕೆಯನ್ನು ಗರ್ಭವತಿಯಾಗಿಸಿರುವ ಘಟನೆ ವರದಿಯಾಗಿದೆ. ಆತನಿಗೆ ಈಗಾಗಲೇ ಎರಡು ಮಕ್ಕಳಿರುವುದು ಆಘಾತಕಾರಿ ವಿಷಯ. ಹೆಣ್ಣನ್ನು ಸಮಾಜದಲ್ಲಿ ಪೂಜ್ಯ ಭಾವನೆಯಿಂದ ನಡೆಸಿಕೊಳ್ಳುವ ದಿನವನ್ನು ನೋಡುವ ಕನಸು ಬಹುಶಃ ಕನಸಾಗಿಯೇ ಉಳಿದುಹೊಗುವುದೇನೋ..

      Delete

ಖಂಡಿತಾ ನಿಮ್ಮ ಅನಿಸಿಕೆಗಳನ್ನು ತಿಳಿಸಿ. ಧನ್ಯವಾದಗಳು!
Please post your comments. Thank you!