Wednesday, December 5, 2012

ಮುಂಜಾನೆಯ ಕನಸು

ಜೀವನವೇ ಹೀಗೇನೋ.. ಕೆಲವೊಮ್ಮೆ ಸಂಬಂಧವಿರದ ವ್ಯಕ್ತಿಗಳನ್ನು ಸನ್ನಿವೇಶದ ನೆಪದಲ್ಲಿ ಪರಿಚಯಿಸಿ, ಭಾವನಾತ್ಮಕ ಸಂಕೋಲೆಗಳನ್ನು ಬೆಸೆದು, ಅರಿವಿಗೆ ಬಾರದ ಅಗೋಚರ ಆತ್ಮೀಯತೆಯನ್ನು ಸೃಷ್ಟಿಸಿ, ಬದುಕಿನ ಬಗೆಗೆ ಹೊಸದೊಂದು ಭರವಸೆಯನ್ನು ಮೂಡಿಸಿ, ಆ ಮೂಲಕ ಅಂತರಾಳದ ಮೂಲೆಯಲ್ಲೆಲ್ಲೋ ಗುಪ್ತವಾಗಿ ಅಡಗಿ ಕುಳಿತಿದ್ದ ಕೊರಗುಗಳಿಗೆ ತಾತ್ಕಾಲಿಕವಾದರೂ ಶಾಶ್ವತವೆಂಬಂತೆ ಭಾಸವಾಗುವ ಪರಿಹಾರದ ರೆಕ್ಕೆ-ಪುಕ್ಕಗಳನ್ನು ಹೊಂದಿಸಿ, ಹಗುರಾದ ಮನಸ್ಸನ್ನು ಆಕಾಶದೆತ್ತರಕ್ಕೆ ಹಾರಿಬಿಡುತ್ತದೆ..

ಮೇರಿ ಮೇಡಂ (ಹೆಸರು ಬದಲಿಸಲಾಗಿದೆ), ಕಛೇರಿಯಲ್ಲಿ ನಮ್ಮೊಡನೆ ಸಹೋದ್ಯೋಗಿ; ಸರಿಸುಮಾರು ನನ್ನ ತಾಯಿಯ ಆಸುಪಾಸಿನ ವಯಸ್ಕರು. ಇತ್ತೀಚೆಗೆ ತಮ್ಮ ಸುದೀರ್ಘ 36 ವರ್ಷಗಳ ಪ್ರಾಮಾಣಿಕ ಸರ್ಕಾರಿ ಸೇವೆಯಿಂದ ವಯೋನಿವೃತ್ತಿ ಹೊಂದಿದರು. ವಯಸ್ಸಿನಲ್ಲಿ, ವೃತ್ತಿಯಲ್ಲಿ ಮತ್ತು ಅನುಭವದಲ್ಲಿ ಕಿರಿಯನಾದ ನಾನು ಕಳೆದ 5 ವರ್ಷಗಳಲ್ಲಿ ಅವರಿಂದ ಕಲಿತ ಪಾಠ ಅನೇಕ. ಸರ್ಕಾರಿ ವಸತಿಗೃಹದಲ್ಲಿ ವಾಸವಿದ್ದ ಅವರ ವೈಯಕ್ತಿಕ ಬದುಕೇ ವಿಚಿತ್ರ; ಗೃಹಿಣಿಯಾದರೂ ಒಂಟಿತನವೇ ಅವರ ಒಡನಾಡಿ. ವಾಡಿಕೆಯಂತೆ ಅವರ ಸೇವಾವಧಿಯ ಕೊನೆಯ ದಿನದಂದು ಕಛೇರಿಯಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಅವರ ಬಗೆಗೆ ನಾಲ್ಕು ಮಾತುಗಳನ್ನಾಡುವ ಸರದಿ ನನ್ನದಾದಾಗ, ಕೆಲವೇ ವಾಕ್ಯಗಳ ನಂತರ "ಅವರು ಈವರೆಗೂ ನನಗೆ ತೋರಿರುವ ತಾಯಿಯ ಪ್ರೀತಿಗೆ ನಾನು ಆಭಾರಿ.." ಎಂದಷ್ಟೇ ಹೇಳಿ ಕುಳಿತಿದ್ದೆ.

ಸಮಾರಂಭದ ನಂತರ ನೇರವಾಗಿ ನನ್ನೆಡೆಗೆ ಬಂದ ಮೇರಿ ಮೇಡಂ, "ಇದು ನಿಮಗೆ ಸರ್, ಆಮೇಲೆ ಓದಿ.." ಎನ್ನುತ್ತಾ ಆ ಮೊದಲೇ ಸಿದ್ಧಪಡಿಸಿದ್ದ ಒಂದು ಬಿಳಿಯ ಲಕೋಟೆಯನ್ನು ನನ್ನ ಕೈಗಿತ್ತರು. ಅದರಲ್ಲೇನಿರಬಹುದೆಂದು ಅಂದಾಜಿಸದೇ "ಥ್ಯಾಂಕ್ಯೂ ಮೇಡಂ.." ಎನ್ನುತ್ತ ಅದನ್ನು ಕಿಸೆಯಲ್ಲಿಸಿಕೊಂಡೆ. ಆ ದಿನ ಹಿಂತಿರುಗಿ ಮನೆಗೆ ಬರುವಾಗ, ಬಸ್ಸಿಗಾಗಿ ಕಾಯುತ್ತಾ ನಿಂತಿದ್ದ ನನಗೆ ಲಕೋಟೆಯ ನೆನಪಾಗಿ, ಅದನ್ನು ಕಿಸೆಯಿಂದ ಹೊರತೆಗೆದು ಬಿಡಿಸಿ ಮೇರಿ ಮೇಡಂ ಅವರ ಕೈಬರಹದಲ್ಲಿದ್ದ ಲೇಖನವನ್ನು ಓದಲಾರಂಭಿಸಿದೆ.

ಮುಂಜಾನೆಯ ಕನಸು

ಮುಂಜಾನೆಯ ಮಂಪರಿನಲ್ಲಿ ಒಂದು ಸುಂದರ ಕನಸು. ಕರಗಳನ್ನು ಜೋಡಿಸಿ ಕಣ್ಮುಚ್ಚಿ ಪ್ರಾರ್ಥಿಸುತ್ತಿದ್ದೆ ಸೃಷ್ಟಿಕರ್ತರನ್ನು. ಕರ್ಣಗಳಿಗೆ ಮೃದುವಾದ ಮನೋಹರವಾಗಿ ಕೋಳಿಸುತ್ತಿತ್ತು ಒಂದು ಅಶರೀರವಾಣಿ.

"ನೀಡಿರುವೆನು ನಿನಗೆ ಅಷ್ಟ ಐಶ್ವರ್ಯಗಳನ್ನು, ನನ್ನಿಂದ ಯಾವ ವರವನ್ನು ಪಡೆಯಲು ಮತ್ತೆ ಈ ಪ್ರಾರ್ಥನೆ?"

ಪ್ರಭುವೇ, ನನಗೆ ನೀನು ನೀಡಿರುವುದು ಸಪ್ತ ಐಶ್ವರ್ಯಗಳನ್ನು ಮಾತ್ರ. ಒಂದು ಕೊರತೆಯನ್ನು ಇಟ್ಟಿರುವೆಯಲ್ಲಾ; ಅದನ್ನು ಪೂರೈಸು ಪ್ರಭುವೆ

"ಅದೇನೆಂದು ತಿಳಿಸಿದರೆ ಪೂರೈಸುವೆ ಆ ನಿನ್ನ ಕೋರಿಕೆಯನ್ನು"

ಅಷ್ಟರಲ್ಲಿ ಊರಿಗಿದ್ದ ಒಂದೇ ಒಂದು ಬಸ್ಸು ದೂರದಲ್ಲಿ ಆಗಮಿಸುತ್ತಿತ್ತು. ಮೇರಿ ಮೇಡಂ ಮೂಲತಃ ಕ್ರೈಸ್ಥರಾದರೂ, ಕನ್ನಡ ಭಾಷೆ ಮತ್ತು ಸಾಹಿತ್ಯದ ಮೇಲಿದ್ದ ಅವರ ಹಿಡಿತವನ್ನು ಕಂಡು ಬೆರಗುಗೊಂಡಿದ್ದೆ. ಲಕೋಟೆಯನ್ನು ಕೈಚೀಲದೊಳಗೆ ಜೋಪಾನವಾಗಿ ಇರಿಸಿ, ಬಸ್ಸಿಗೇರಿ ಕುಳಿತೆ. ಪ್ರಯಾಣದುದ್ದಕ್ಕೂ ಮನಸ್ಸು ಚಿಟ್ಟೆಯಂತೆ ಅನೇಕ-ಅನಾವಶ್ಯಕ ವಿಚಾರಗಳೆಡೆಗೆ ನಿರಂಕುಶವಾಗಿ ಹಾರಾಡುತ್ತಿತ್ತು; ಬೆಂಗಳೂರಿನ ವಾಹನ ಹಾಗೂ ಜನದಟ್ಟಣೆ ಬೇಸರ ತರಿಸಿತ್ತು, ಆಗೊಮ್ಮೆ ಈಗೊಮ್ಮೆ ಜೋಂಪು ಹತ್ತಿ ಕೊನೆಗೊಮ್ಮೆ ಮನೆ ತಲುಪಿದ್ದೆ.

ಇದಾಗಿ ಹಲವಾರು ದಿನಗಳೇ ಕಳೆದುಹೋದವು; ಮೇರಿ ಮೇಡಂ ಕಛೇರಿಯ ತಮ್ಮ ವಸತಿಗೃಹವನ್ನು ತೆರವುಗೊಳಿಸಿ, ನಗರದಲ್ಲೆಲ್ಲೋ ಒಂದು ಬಾಡಿಗೆ ಮನೆಗೆ ತೆರಳಿದ್ದರಿಂದ ಅವರನ್ನು ಭೇಟಿ ಮಾಡುವ ಅವಕಾಶಗಳೇ ಇರಲಿಲ್ಲ. ಯಾವುದೋ ವಿಷಯವಾಗಿ ಒಮ್ಮೆ ಮನಸ್ಸಿಗೆ ತೋಚಿದ್ದನ್ನು ಗೀಚಿಟ್ಟಿದ್ದ ಹಾಳೆಯ ತುಣುಕೊಂದನ್ನು ಕೈಚೀಲದಲ್ಲಿ ಹುಡುಕುವಾಗ, ಅಲ್ಲಿಯವರೆಗೂ ನಾನು ಮರೆತೇ ಹೋಗಿದ್ದ ಮೇರಿ ಮೇಡಂ ಅವರ ಲಕೋಟೆ ಕಾಣಿಸಿತು. ದಿನೇ ದಿನೇ ಬೆಂಗಳೂರಿನ ವಾಹನದಟ್ಟಣೆಯಂತೆ ಉಲ್ಬಣಿಸುತ್ತಿರುವ ನನ್ನ ಮರೆಗುಳಿತನಕ್ಕೆ ಶಪಿಸಿ, ಲಕೋಟೆಯ ಓದನ್ನು ಮುಂದುವರೆಸಿದೆ:

ಬರಿದಾದ ನನ್ನ ಮಡಿಲು, ಸರ್ವ ಸದ್ಗುಣ ಸಂಪನ್ನನಾದ ಒಂದು ಪುತ್ರ ರತ್ನವನ್ನು ದಯಪಾಲಿಸು ನನಗೆ

"ಈ ಕಲಿಯುಗದಲ್ಲಿ ಸರ್ವ ಸದ್ಗುಣ ಸಂಪನ್ನನಾದವನನ್ನು ಹುಡುಕುವುದು ಸಾಗರದೊಳಗೆ ಸಾಸಿವೆ ಕಾಳನ್ನು ಹುಡುಕಿದಂತೆ ಅಲ್ಲವೆ?"

ಆ ಸಾಗರದೊಳಗಿಂದ ಒಂದು ಅಮೂಲ್ಯ ರತ್ನವನ್ನು ಹುಡುಕಿ ತೆಗೆದಿರುವೆನು ಪ್ರಭುವೆ 

"ಬೇಡಿಕೋ ಹಾಗಾದರೆ ಏನು ನಿನ್ನ ಕೋರಿಕೆ?"

ಪುನರ್ಜನ್ಮವಿರುವುದು ನಿಜವಾದರೆ, ಮರುಜನ್ಮದಲ್ಲಿ ಮತ್ತೆ ನಾನು ಹೆಣ್ಣಾಗಿ ಜನ್ಮತಾಳಿದರೆ, ಬರಿದಾಗಿರುವ ನನ್ನ ಮಡಿಲನ್ನು ತುಂಬಲು ಪ್ರಶಾಂತ ಎನ್ನುವ ಅಮೂಲ್ಯ ರತ್ನವನ್ನು ಕಂದನಾಗಿ ಕರುಣಿಸು

"ಮರುಜನ್ಮದಲ್ಲಿ ಅಲ್ಲವೇ? ಹಾಗಿದ್ದರೆ ತಥಾಸ್ತು.."

ಮರೆಯಾಗಿತ್ತು ವರವನ್ನು ನೀಡಿದ ದೈವಸ್ವರೂಪ. ಎಚ್ಚೆತ್ತು ಕಣ್ಣುತೆರೆದಾಗ ಕಂಡಿತ್ತು ಪ್ರಕೃತಿಯ ವಾಸ್ತವರೂಪ..

- ಮೇರಿ.

8 comments:

  1. Very touching Sir. Yochanegala mahaapoora haage baruttirali. :)

    ReplyDelete
  2. ಅರವಿಂದ ಅವರೇ, ಈ ನನ್ನ ಪುಟ್ಟ ಪ್ರಪಂಚಕ್ಕೆ ಆತ್ಮೀಯ ಸ್ವಾಗತ :o)

    ನಿಮ್ಮ ಪ್ರೋತ್ಸಾಹದಾಯಕ ಅನಿಸಿಕೆಯು ಇನ್ನೂ ಹೆಚ್ಚು ಬರೆಯಲು ಪ್ರೇರೇಪಿಸಿದೆ, ಪ್ರಯತ್ನಿಸುತ್ತೇನೆ. ಧನ್ಯವಾದಗಳು.

    ReplyDelete
  3. fantastic Prashanth so touched and moved, I mean this post has everything kannadada melina nimma hidita a wonderful words usage I am so very impressed prashant and on top of it all I loved the way this post has come up!!! Hats off keep writing such posts you are amazingly talented.

    ReplyDelete
  4. ರಮ್ಯ ಅವರೇ, ನಿಮ್ಮ ಈ ಅಭೂತಪೂರ್ವ ಅನಿಸಿಕೆ ನನ್ನನ್ನು ಮೂಕನನ್ನಾಗಿಸಿದೆ.. ಹೇಗೆ ಪ್ರತಿಕ್ರಿಯೆ ನೀಡಬೇಕೋ ತಿಳಿಯುತ್ತಿಲ್ಲ. ಮನಸ್ಸಿಗೆ ತೋಚಿದ್ದನ್ನು ನನಗೆ ತಿಳಿದ ಹಾಗೆ ಬರೆಯುತ್ತಿರುತ್ತೇನೆ; ಅದೆಲ್ಲವನ್ನು ಓದಿ, ಸದಾ ಪ್ರೋತ್ಸಾಹದ ಮಾತುಗಳಾಡುವ ನಿಮಗೆ ಅನಂತಾನಂತ ವಂದನೆಗಳು :o)

    ReplyDelete
  5. ಪ್ರಶಾಂತ್ ತುಂಬಾ ಚೆನ್ನಾಗಿದೆ.

    ReplyDelete
  6. ಧನ್ಯವಾದಗಳು, ನಾಗೇಂದ್ರ ಅವರೇ..

    ReplyDelete
  7. ಒಂದು ಹೆಣ್ಣು ಜೀವದ ಸಣ್ಣ ಆಸೆ!! ಮೇರಿ ಮೇಡಂ ಅವರ ಪ್ರಾರ್ಥನಾ ಬರಹ ಹಾಗು ಅದನ್ನು ಇಲ್ಲಿ ಪ್ರಸ್ತುತ ಪಡಿಸಿದ ನಿಮ್ಮ ಬರಹ...ಎರಡೂ ಚೆನ್ನಾಗಿದೆ

    ReplyDelete
  8. ಮತ್ತೆ ನನ್ನ ಬ್ಲಾಗ್ ಗೆ ಭೇಟಿಕೊಟ್ಟು, ಪ್ರೋತ್ಸಾಹದಾಯಕ ಅನಿಸಿಕೆಯನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದ ಸುಧೀರ್ ಸರ್.. :o)

    ReplyDelete

ಖಂಡಿತಾ ನಿಮ್ಮ ಅನಿಸಿಕೆಗಳನ್ನು ತಿಳಿಸಿ. ಧನ್ಯವಾದಗಳು!
Please post your comments. Thank you!