Wednesday, April 11, 2012

ಕ್ರೌರ್ಯಕ್ಕೆ ಕಮರಿಹೋದ ಕಂದಮ್ಮ

ಸತತ ಮೂರು ದಿನಗಳ ಜೀವನ್ಮರಣ ಹೋರಾಟ ನಡೆಸಿ, ಸೋತು ವಿಧಿವಶವಾದ ಮೂರು ತಿಂಗಳ ಹಸುಗೂಸು 'ನೇಹ ಭಾನು ಅಫ್ರೀನ'ಳ ಪೂಜ್ಯನೀಯ ಆತ್ಮಕ್ಕೆ ಗೌರವಪೂರ್ಣ ನಮನಗಳು.
ಮರೆಯಾದ ಮಗು - ನೇಹ
'ಎಲ್ಲಿ ಹೆಣ್ಣು ಪೂಜಿಸಲ್ಪಡುತ್ತಾಳೋ, ಅಲ್ಲಿ ದೈವನು ವಾಸಿಸುತ್ತಾನೆ' - ಎಂದು ಸಾರಿ ಹೇಳುವ ವೇದೋಪನಿಷತ್ತುಗಳ ಭದ್ರ ಬುನಾದಿಯನ್ನು ಹೊಂದಿರುವ ಭಾರತದ ನೆಲದಲ್ಲಿ, ನವಜಾತ ಹೆಣ್ಣು ಶಿಶುವಿನ ಮೇಲೆ ನಡೆದುಹೋದ ಈ ದೌರ್ಜನ್ಯವು ದುರಾದೃಷ್ಟಕರವಲ್ಲವೆ? ತಂತ್ರಜ್ಞಾನವು 4-ಜಿ ತರಂಗಾಂತರಗಳ ಎಲ್ಲೆ ಮೀರಿ ಬೆಳೆಯಲು ಹವಣಿಸುತ್ತಿರುವ ಈ ಹೊತ್ತಿನಲ್ಲಿಯೂ ಸಹ ನಮ್ಮ ಸಮಾಜದಲ್ಲಿ ಹೆಣ್ಣಿನ ಬಗೆಗಿನ ಕೀಳರಿಮೆಯ ನಿಲುವು ಬದಲಾಗುವುದಿರಲಿ, ಅಲ್ಪಮಟ್ಟಿಗಾದರೂ ಸುಧಾರಿಸದೇ ಹೋದುದು ಒಂದು ದುರಂತವೇ ಸರಿ. 'ಸ್ತ್ರೀ ಮೇಲಿನ ನಿರಂತರ ಅತ್ಯಾಚಾರಗಳನ್ನೊಳಗೊಂಡ ವಿಕೃತ ಸಮಾಜದ ಏಳಿಗೆಯಾಗುವುದಾದರೂ ಎಂತು?' ಎಂಬ ಉತ್ತರ ಕಾಣದ ಪ್ರಶ್ನೆಯು ನಮ್ಮನ್ನು ಅರಿವಿಲ್ಲದೆಯೇ ಆವರಿಸಿ ರೌದ್ರನರ್ತನ ಮಾಡುತ್ತಿರುವುದೇನೋ ಎಂಬ ಭ್ರಮೆಯುಂಟಾಗುತ್ತಿದೆ ನನ್ನಲ್ಲಿ.

ತನ್ನ ಹುಟ್ಟಿಗೆ ಕಾರಣವಾದ ಮಾತ್ರಕ್ಕೆ 'ತಂದೆ' ಎನಿಸಿಕೊಂಡವನ ಪ್ರೀತಿಯನ್ನು ಕಂಡರಿಯದ ನೇಹಳ ಮೂರೂ ತಿಂಗಳ ಬದುಕು ಆತನ ಕ್ರೂರ ದುರ್ನಡತೆಯ ವಿರುದ್ಧದ ಹೋರಾಟವೇ ಆಗಿದ್ದಿತು. ಮೂಲತಃ ಮಧ್ಯವ್ಯಸನಿ ಹಾಗೂ ಮಾದಕ ವಸ್ತುಗಳ ದುಶ್ಚಟಕ್ಕೆ ಬಲಿಯಾಗಿದ್ದ 25ರ ಉಮರ್ ಫಾರೂಕನಿಗೆ ನೇಹಾಳ ತಾಯಿಯಾದ 19ರ ರೇಷ್ಮ ಭಾನು ಎರಡನೇಯ ಮಡದಿ. ಮೊದಲಿನಿಂದಲೂ ವರದಕ್ಷಿಣೆಯ ಕಿರುಕುಳದಲ್ಲೇ ಸಾಂಸಾರಿಕ ಜೀವನ ನಡೆಸುತ್ತಾ ಬಂದಿದ್ದ ರೆಷ್ಮಳಿಗೆ ನೇಹಳ ಹುಟ್ಟು ದುಸ್ತರವಾಗಿ ಪರಿಣಮಿಸಿತ್ತು. ಹೆಣ್ಣು ಮಗುವಿನ ಜನನಕ್ಕೆ ತಾನೇ ಕಾರಣಕರ್ತನೆನ್ನುವ ಸತ್ಯದ ಅರಿವಿಲ್ಲದ ತಂದೆಯು, ತನ್ನ ಮಗುವನ್ನು ಉಸಿರುಗಟ್ಟಿಸಿ, ಸಿಗರೇಟಿನಿಂದ ಸುಟ್ಟು, ಮನಬಂದಲ್ಲಿ ಬಾಯಿಂದ ಕಚ್ಚಿ, ಅದರ ತಲೆಯನ್ನು ಬಲವಾಗಿ ಗೋಡೆಗೆ ಗುದ್ದಿಸಿ ಕೊಲ್ಲಲು ಪ್ರಯತ್ನಿಸಿದನೆಂದು ಮಾತಿನಲ್ಲಿ ಹೇಳಲೂ ಸಹ ದಿಗಿಲಾಗುತ್ತದೆ. ಹೀಗಿರುವಾಗ, ಈ ಎಲ್ಲಾ ದುಷ್ಕೃತ್ಯಗಳಿಗೆ ಬಲಿಯಾದ ಮುಗ್ಧೆ ನೇಹ ಅನುಭವಿಸಿರಬಹುದಾದ ಮೂಕಯಾತನೆಯ ಕ್ರೌರ್ಯಾನುಭವ ಅದೆಂತಹುದಿರಬಹುದು?? ಎಂಬುದನ್ನು ಬೆಂಗಳೂರಿನ ವಾಣಿವಿಲಾಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಂದು ಕೊನೆಯುಸಿರೆಳೆದ ಕಂದಮ್ಮನೇ ಬಲ್ಲಳು.

ಪ್ರತಿನಿತ್ಯವೂ ಅನೇಕ ವಿಧವಾದ ಅತ್ಯಾಚಾರಗಳನ್ನೆದುರಿಸುವ ಅಸಂಖ್ಯಾತ ಹೆಣ್ಣುಮಕ್ಕಳನ್ನು ಪ್ರತಿನಿಧಿಸುತ್ತಿರುವಂತೆ ತೋರುವ ನೇಹ, ತನ್ಮೂಲಕ ಮಹಿಳೆಯರ ಮೇಲೆ ಸದ್ದಿಲ್ಲದೇ ನಡೆದುಹೊಗುತ್ತಿರುವ ದೌರ್ಜನ್ಯಗಳ ಬಗೆಗೆ ಮಾತಿಲ್ಲದ ಬರಿಯ ಮೌನದಲ್ಲಿಯೇ ಕೂಗಿ ಹೇಳಿ ಹೋಗಿದ್ದಾಳೆ. ಆಯೋಗ, ಸಮಾಜ, ಸಮಿತಿ ಹಾಗೂ ಸರ್ಕಾರೇತರಗಳು ನೇಹಳಂತಹ ಹಲವಾರು ಹೆಣ್ಣುಮಕ್ಕಳ ಬಲಿದಾನಕ್ಕೆ ಎಡೆಮಾಡಿಕೊಟ್ಟು, ಫಾರೂಕನಂತಹ ಸಹಸ್ರಾರು ಪಾಪಿಗಳಿಗೆ ಕಾನೂನಿನ ಸೋಗಿನಲ್ಲಿ ಸಾಮಾಜಿಕ ಭದ್ರತೆಯನ್ನು ಒದಗಿಸಿಕೊಡುತ್ತಿರುವುದು ಪ್ರಜಾಪ್ರಭುತ್ವದ ಹೀನಾಯ ದುರಾಚರಣೆಗೆ ಹಿಡಿದ ಕನ್ನಡಿಯಂತಿದೆ. ಆದರೆ, ಇಂತಹ ದುಷ್ಟ ಮಾನವರ ಅಟ್ಟಹಾಸವು ಇನ್ನು ಬಹಳ ಕಾಲದವರೆಗೆ ಮುಂದುವರೆಯಲಾರದಂಥ ದುರಂತ ಅಂತ್ಯ ಕಾಣುವುದಂತೂ ಶತಸಿದ್ಧ. ಇದರ ಮುನ್ಸೂಚನೆಯೇನೋ ಎನ್ನುವಂತೆ ನೇಹಳ ದುರ್ಮರಣವನ್ನು ಸಹಿಸದೇ, ಹೆತ್ತ ತಾಯಿಯ ಹೃದಯವಿದ್ರಾವಕ ಆಕ್ರಂದನಕ್ಕೆ ಸ್ಪಂದಿಸುತ್ತಾ, ಸುರಕ್ಷಿತ ರಾಜಧಾನಿ ಉದ್ಯಾನನಗರಿ ಬೆಂಗಳೂರಿನಲ್ಲಿಯೂ ಸಹ ಮಾತೆ ಭೂತಾಯಿಯು ಇಂದು ಕೋಪದಿಂದ ಕಂಪಿಸಿದಳು.

5 comments:

 1. Hmmm nijja ri vondondu padda kooda mansige mutthide neevu bardirodu... Manveyathe ne nashisi hogtide ansuthe!!!

  namge uldiro vonde hope andre namma kaili aadashtu janakke naavu educate madoko prayatnisodu.

  ಸುರಕ್ಷಿತ ರಾಜಧಾನಿ ಉದ್ಯಾನನಗರಿ ಬೆಂಗಳೂರಿನಲ್ಲಿಯೂ ಸಹ ಮಾತೆ ಭೂತಾಯಿಯು ಇಂದು ಕೋಪದಿಂದ ಕಂಪಿಸಿದಳು.

  hmmm so true!!! Tumba chenaggi bardidira thought provoking post keep it up.

  ReplyDelete
 2. ತುಂಬಾ ಚೆನ್ನಾಗಿ ಬರೆದಿದ್ದೀರಿ. ಮನ ಮರುಗುವ ದುರಂತಕ್ಕೆ ಮನ ಕಲುಕುವ ಚರಮಗೀತೆಯಂತಿದೆ ನಿಮ್ಮ ಬರಹ.. ಕೊನೆಯಲ್ಲಿ ಭೂಕಂಪವನ್ನೂ ಈ ದುರಂತವನ್ನೂ ಹೊಂದಾಣಿಸಿದ ರೀತಿ ನಿಮ್ಮ ಬರಹ ಪ್ರೌಡಿಮೆಗೆ ಸಾಕ್ಷಿ..

  ReplyDelete
 3. Thanks for the supporting words in encouragement Ramya. I always am against any sort of violence against women and children. And yes, a Blog might also be a better medium to educate people. So I blogged about this issue here :o)


  ರಾಜು, ನಿಜ ಹೇಳಬೇಕೆಂದರೆ ಮೇಲಿನ ನಿಮ್ಮ ಪ್ರತಿಕ್ರಿಯೆಯಲ್ಲಿನ ಅನೇಕ ಪದಗಳಿಗೆ ನಾನು ಅರ್ಥ ಕಂಡುಕೊಳ್ಳಬೇಕಾಗಿದೆ. ನಿಮ್ಮ ನಿರಂತರ ಪ್ರೋತ್ಸಾಹಕ್ಕೆ ಧನ್ಯವಾದ :o)

  ReplyDelete
 4. ಪ್ರಶಾಂತ್ ,ಇದನ್ನು ವಾರ್ತಾ ಪತ್ರಿಕೆ ಹಾಗೂ ನಿನ್ನ ಈ ಲೇಖನ ವನ್ನು ನೋಡಿದ ನಂತರ ನನಗೆನಿಸುತ್ತಿದೆ ,ಈ ಹೆಣ್ಣು ಕೂಸುಗಳ ಜನನ ಏಕೆ ಇಷ್ಟು ಅಸಹ್ಯಕರವಾಗಿ ಪರಿಣಮಿಸುತ್ತಿದೆ ಈ ಮಕ್ಕಳ ಜನಕರಿಗೆ ?.ಏಕೆ ವಿಶೇಷವಾಗಿ ತಂದೆಗೆ ಈ ಮಗುವಿನ ಹುಟ್ಟು ಸಹ್ಯವಾಗುವುದಿಲ್ಲ .ಮುಂದೆ ಈ ಮಗುವುನಿಂದ ಹೆಚ್ಚು ಲಾಭವಾಗದೇ ಆರ್ಥಿಕವಾಗಿ ಮುಂದೆ ಮದುವೆಸಮಯದಲ್ಲಿ ಕಷ್ಟಪಡ ಬೇಕಾಗಬವುದೆಂದು ಮುಂದಾಲೋಚನೆ ಮಾಡಿ ಈ ರೀತಿ ವರ್ತಿಸುತ್ತಾರೆಯೇ .ಇದು ಸರ್ವೇ ಸಾಮಾನ್ಯವಾಗಿ ಬಡಕುಟುಂಬದ ಹೆಚ್ಚು ಹೆಣ್ಣುಮಕ್ಕಳನ್ನು ಹೊಂದಿದವರಲ್ಲಿ ಕಂಡುಬರುವ ಕಟುಸತ್ಯದ ವರ್ತನೆ .ನನಗೆ ತಿಳಿದಂತೆ ಒಂದು ಊರಿನಲ್ಲಿ ನಡೆದ ಮನಕರಗುವ ನಿಜವಾದ ಘಟನೆ .ಹೆಂಡತಿಗೆ ಅವಳ ಗಂಡ ನೀನು ಆಸ್ಪತ್ರೆ ಯಿಂದ ವಾಪಸ್ಸು ಬರುವಾಗ ಏನಾದರು ಹೆಣ್ಣುಮಗುವನ್ನು ಹೆತ್ತು ತಂದಯೋ ನಿನ್ನನ್ನು ಮನಗೆ ಸೇರಿಸುವುದಿಲ್ಲ ಎಂದು ಆಜ್ಞೆ ಮಾಡಿದ್ದನಂತೆ .ದುರಾದ್ರುಷ್ಟವಷತ್ ಅವಳಿಗೆ ಎರಡು ಅವಳಿ ಜವಳಿ ಹೆಣ್ಣು ಮಕ್ಕಳೇ ಜನಿಸಿದಾಗ ,ವಿದಿಯಿಲ್ಲದೆ ಗಂಡನ ಆಜ್ಞೆಯ ಭಯದಿಂದ ಆ ಎರಡು ಮಕ್ಕಳನ್ನೂ ಆಸ್ಪತ್ರೆಯಲ್ಲಿಯೇ ಯಾರಿಗೋ ಕೊಟ್ಟು ಬರಿಕೈಯಲ್ಲಿ ಗಂಡನಮನಗೆ ಹೋದಳಂತೆ .ಇದು ಎಷ್ಟು ಕ್ರೂರತನದ ವರ್ತನೆಯಲ್ಲವೇ .ಹೀಗೆಯೇ ಈ ಹೆಣ್ಣು ಮಕ್ಕಳ ಬಗ್ಗೆ ತಿರಸ್ಕಾರ ಮುಂದುವರಿಯುತ್ತಿದ್ದರೆ ಗಂಡು ಮಕ್ಕಳ ಸಂಖ್ಯೆ ಹೆಚ್ಚಾಗಿ ,ಮಧುವೆಗೆ ಹೆಣ್ಣುಗಳೇ ಸಿಗುವುದೇ ಕಷ್ಟವಾಗಿ ಪರಿಣಮಿಸಬಹುದು .ಇದನ್ನು ತಪ್ಪಿಸಲಾದರೂ ಇನ್ನು ಮುಂದೆ ಯಾವುದೇ ಜನಾಂಗ ವರ್ಗದವರಾಗಲಿ ಹೆಣ್ಣು ಶಿಶುಗಳ ಹತ್ಯೆಗೆ ಮುಂದಾಗಬಾರದೆಂದು ನನ್ನ ಕಳಕಳಿಯ ಮನವಿ ಮಾಡುತ್ತೇನೆ .

  ReplyDelete
 5. ಸರ್, ನೀವು ಹಂಚಿಕೊಂಡ ಘಟನೆಯ ಬಗ್ಗೆ ಓದಿ ದುಃಖವಾಯಿತು.

  ಮುಂದೊಂದು ದಿನ ಮದುವೆಗೆ ಹೆಣ್ಣು ಮಕ್ಕಳೇ ಸಿಗಲಾರರು ಎಂಬ ನಿಮ್ಮ ಮಾತು ಈಗಲೂ ಸತ್ಯ!! ಪ್ರಸ್ತುತ ಲಭ್ಯವಿರುವ ಗಣತಿ ವರದಿ ಪ್ರಕಾರ ಪುರುಷ-ಮಹಿಳೆಯರ ಅನುಪಾತ 1000-946. ಇದು ಹಿಂದಿನ ಗಣತಿಯ ವರದಿಯಂತಿದ್ದ ಅನುಪಾತಕ್ಕಿಂತ ಕಡಿಮೆ ಇದೆ. ಹೆಣ್ಣು ಸಬಲಳು ಎಂದು ಅರಿತು, ಹೆಣ್ಣು ಮಕ್ಕಳನ್ನು ಪ್ರೀತಿಯಿಂದ ಪೋಷಿಸಿ-ಬೆಳೆಸುವ ಮನೋಭಾವ ನಮ್ಮ ಸಮಾಜದಲ್ಲಿ ಎಂದು ಬರುವುದೋ ತಿಳಿಯದು.

  ReplyDelete

ಖಂಡಿತಾ ನಿಮ್ಮ ಅನಿಸಿಕೆಗಳನ್ನು ತಿಳಿಸಿ. ಧನ್ಯವಾದಗಳು!
Please post your comments. Thank you!