Thursday, October 27, 2011

ಹೀಗೊಂದು ದೀಪಾವಳಿ..

ನಮ್ಮ ಮದುವೆಯ ನಂತರ, ಇದೇ ಮೊದಲ ದೀಪಾವಳಿ ಹಬ್ಬ; ತಿಂಗಳೆರಡರ ಹಿಂದೆಯೇ ನನ್ನ ಅತ್ತೆ-ಮಾವಂದಿರಿಂದ ಹಬ್ಬಕ್ಕೆ ಆಹ್ವಾನವೂ ಬಂದಿದ್ದಿತು. ಕೇಳಬೇಕೇ ನಮ್ಮ ಹೆಣ್ಣುಮಕ್ಕಳ ಸಂಭ್ರಮ ತವರುಮನೆಗೆ ಹೊರಡಲು? ನನ್ನಾಕೆಯು ನಮ್ಮ ಪ್ರಯಾಣಕ್ಕೆ ಬೇಕಾದ ತಯಾರಿಗಳನ್ನು ಅತ್ಯುತ್ಸಾಹದಿಂದಲೇ ಮಾಡಿಕೊಂಡು, ದಿನಕ್ಕೆರಡು ಬಾರಿಯಾದರೂ ನನಗೆ ಅದನ್ನು ತಪ್ಪದೇ ನೆನಪಿಸುತ್ತಿದ್ದುದರಿಂದ ನಾನೂ ಸಹ ಮಾವನವರ ಮನೆಯಲ್ಲಿ ಆತಿಥ್ಯ ಸ್ವೀಕರಿಸಲು ಮಾನಸಿಕವಾಗಿ ಎಲ್ಲಾ ತಯಾರಿ ನಡೆಸಿದ್ದೆ.

ಈ ಮಧ್ಯೆ ಕಛೇರಿ ಕೆಲಸದ ನಿಮಿತ್ತ ನಾನು ದೆಹಲಿಗೆ ತೆರಳುವುದು ಅನಿವಾರ್ಯವಾದಾಗ, ಅದನ್ನು ನನ್ನ ಹೆಂಡತಿಗೆ ತಿಳಿಸುವ ಧೈರ್ಯವಾಗಲೇ ಇಲ್ಲ ನನಗೆ. ಆಕೆ ದೀಪಾವಳಿ ಹಬ್ಬದ ಸಂಭ್ರಮಾಚರಣೆಗಾಗಿ ಕಟ್ಟಿಕೊಂಡಿದ್ದ ಆಶಾಗೋಪುರವನ್ನು ಕೆಡವಿಹಾಕುವ ಸಾಹಸಕ್ಕೆ ಬಹಳ ದಿನಗಳವರೆಗೆ ನಾನು ಕೈಹಾಕಲಿಲ್ಲ. ಹೀಗೊಂದು ದಿನ, ಕಛೇರಿಯಿಂದ ದೊರೆತ ಆದೇಶ ಪತ್ರ ಹಾಗೂ ನನ್ನ ಪ್ರಯಾಣಕ್ಕಾಗಿ ಮುಂಗಡ ಕಾಯ್ದಿರಿಸಿದ್ದ ಚೀಟಿಗಳನ್ನು ಉದ್ದೇಶಪೂರ್ವಕವಾಗಿಯೇ ಹಾಸಿಗೆಯ ಮೇಲಿರಿಸಿ ಕಛೇರಿಗೆ ತೆರಳಿದ್ದೆ. ಪ್ರಯತ್ನ ಫಲಿಸಿತ್ತು, ನಾನು ಈ ಬಾರಿಯ ದೀಪಾವಳಿ ಹಬ್ಬಕ್ಕೆ ಊರಿನಲ್ಲಿರದಿರುವ ಸಂಗತಿಯು ನನ್ನಾಕೆಗೆ ಅರಿವಾಗಿತ್ತು. ನಾನು ಕಛೇರಿಯಿಂದ ಹಿಂತಿರುಗಿ ಬಂದಾಗ, ಊರಿಗೆ ತೆರೆಳಲು ಕಾಯ್ದಿರಿಸಿದ್ದ ಮುಂಗಡ ರೈಲು ಚೀಟಿಗಳನ್ನು ರದ್ದುಮಾಡಿ ಮುದ್ರಿಸಿದ ದಾಖಲಾತಿಯು ನನಗಾಗಿ ಹಾಸಿಗೆಯ ಮೇಲೆ ಕಾದುಕುಳಿತು ನನ್ನಾಕೆಯ ಮನದಾಳದ ನೋವಿನ ದರ್ಶನ ಮಾಡಿಸಿತು. ಆದಿನ ಕಛೇರಿಯಿಂದ ಹಿಂತಿರುಗಿದ ನನ್ನ ಮಡದಿಯು ಮುಂದಿನ ಮೂರ್ನಾಲ್ಕು ದಿನಗಳವರೆಗೆ ನನ್ನೊಡನೆ ಪ್ರೀತಿಯಿಂದ ಮಾತನಾಡಲಿಲ್ಲ; ದೀಪಾವಳಿ ಹಬ್ಬದ ದಿನದಂದೂ ಸಹ ನಾನು ದೆಹಲಿಯಲ್ಲಿಯೇ ಉಳಿದುಕೊಳ್ಳುವುದು ಆಕೆಗೆ ಎಳ್ಳಷ್ಟೂ ಹಿಡಿಸಿದಂತೆ ಕಾಣಲಿಲ್ಲ.

ನಿನ್ನೆ ಇಲ್ಲಿ ನಾ ಕಂಡ ದೀಪಾವಳಿಯು, ನನ್ನ ಜೀವನದ ಅತ್ಯಂತ ನೀರಸ ದೀಪಾವಳಿ ಹಬ್ಬವೆಂದರೆ ಆಭಾಸವಾದೀತು. ಹೆತ್ತವರು-ಮೆನೆ-ಮಡದಿಯಿಂದ ದೂರವಿದ್ದು, ಹೊಸದೊಂದು ಸಂಸ್ಕೃತಿಯನ್ನು ಆನಂದದಿಂದ ಸ್ವೀಕರಿಸಿ ಸಂಭ್ರಮಿಸುವ ಉದಾರತೆಯು ನನ್ನಲ್ಲಿರಲಿಲ್ಲ. ಅದೇಕೋ ಮನಸ್ಸು ಖಿನ್ನತೆಗೆ ಜಾರಿಹೋದ ಅನುಭವವಾಯಿತು ನನ್ನಲ್ಲಿ. ಉತ್ತರ ಭಾರತದಲ್ಲಿ ಅದ್ಧೂರಿಯಾಗಿ ಆಚರಿಸಲ್ಪಡುವ ಹಬ್ಬಗಳ ಸಾಲಿಗೆ ದೀಪಾವಳಿಯೂ ಸೇರಿದೆಯೆಂದು ಹಿಂದೆ ಎಲ್ಲೋ ಓದಿ-ಕೇಳಿದ ನೆನಪು. ರಾತ್ರಿಯ ಕಗ್ಗತ್ತಲನ್ನು ದೂರಮಾಡಿ, ಆಕಾಶದಂಗಳದಲ್ಲಿ ಚುಕ್ಕಿಗಳನ್ನು ನಾಚಿಸಿ ಬಣ್ಣ-ಬಣ್ಣದ ಚಿತ್ತಾರ ರಂಗವಲ್ಲಿ ಮೂಡಿಸಿದ ಪಟಾಕಿ ಮದ್ದುಗಳನ್ನು ಹೊರೆತುಪದಿಸಿದರೆ ಇನ್ನಾವುದೇ ರೀತಿಯ ಸಡಗರ ನನಗೆ ಇಲ್ಲಿ ಕಾಣಸಿಗಲಿಲ್ಲ.

ದೀಪಾವಳಿ ಹಬ್ಬವೆಂದರೆ, ನಮ್ಮೂರಿನಲ್ಲಿನ ಹೆಣ್ಣುಮಕ್ಕಳು ರೇಷ್ಮೆ ರವಿಕೆ-ಲಂಗವನ್ನುಟ್ಟು ಅಂಗಳಕ್ಕೆಲ್ಲಾ ಸಗಣಿ-ನೀರಿನ ಮಡಿ ಮಾಡಿ, ಮನೆಯ ಬಾಗಿಲಿನುದ್ದಕ್ಕೂ ಬಣ್ಣದ ರಂಗೋಲಿ ಬಿಡಿಸುತ್ತಾರೆ. ಮನೆಯ ಹೊಸ್ತಿಳುಗಳೆಲ್ಲ ಹಸಿರು ತೋರಣ ಹಾಗೂ ಮಂಗಳದ್ರವ್ಯಗಳಿಂದ ಅಲಂಕೃತಗೊಂಡಿರುತ್ತವೆ. ಅಡುಗೆಯ ಮನೆಯಲ್ಲಿ ಅಕ್ಕಿಯನ್ನು ನೆನೆಸಿ-ಕುಟ್ಟಿ ಬಿಸಿ-ಬಿಸಿ ಕಜ್ಜಾಯ ಸುಡುವ ಸಂಭ್ರಮವಂತೂ ಹೇಳತೀರದು. ಸಂಜೆಯಾಗುತ್ತಿದ್ದಂತೆ ಎಲ್ಲರೂ ಕೂಡಿ ಸಾಲು ದಿಪಗಳನ್ನು ಹೊತ್ತಿಸಿ, ಮೆನೆ-ಮನಗಳನ್ನು ಬೆಳಗಿಸುವ ಪರಿ ಅದ್ಭುತವೇ ಸರಿ!
ಚಿತ್ರ ಕೊಡುಗೆ : ಕೃಷ್ಣ ಶರಣಂ
ವಸತಿಗೃಹದ ನನ್ನ ಕೊಠಡಿಯ ದೀಪಗಳನ್ನೆಲ್ಲಾ ಆರಿಸಿ, ತೆರೆದ ಕಿಟಕಿಯಿಂದಾಚೆಗೆ ದೂರದ ನನ್ನೂರಿನ ಚೆಂದದ ದೀಪಾವಳಿ ಹಬ್ಬದ ಸಂಭ್ರಮವನ್ನು ಬಾನಿನಲ್ಲಿ ದಿಟ್ಟಿಸಿನೋಡುವ ತವಕದಿಂದ ಮೆತ್ತನೆಯ ಹಾಸಿಗೆಯ ಮೇಲೆ ಒರಗಿಕೊಂಡಿದ್ದ ನನ್ನನ್ನು ನಿದ್ರಾದೇವಿಯು ನಿಧಾನವಾಗಿ ಆವರಿಸಿಕೊಂಡದ್ದು ಅರಿವಿಗೆ ಬಾರಲೇ ಇಲ್ಲ..

11 comments:

  1. Happy Deepavalli Prashant,
    Kayakave kailasa!!! yenu madokagala bidi :( but enjoy with what ever is around!!!

    But I still feel very bad for your wife and u missing your first deepavalli!!!

    ReplyDelete
  2. ರಮ್ಯ.. ಕಾಯಕವೇ ಕೈಲಾಸ ಅನ್ನೋದು ನಿಜ. ಆದ್ರೆ, ಕಾಯಕನೇ ಜೀವನ ಆಗ್ಬಾರ್ದು ಅಲ್ವಾ..? first ದೀಪಾವಳಿ miss ಮಾಡ್ಕೊಂಡಿದ್ದಕ್ಕೆ ಬೇಜಾರಿದೆ.. ಆದ್ರೆ ಏನ್ಮಾಡೋದು? ಬೇರೆ ದಾರಿ ಇರ್ಲಿಲ್ಲ :o|

    ReplyDelete
  3. ದೀಪಾವಳಿ ಶುಭಾಶಯಗಳು!
    ಮುಂದಿನ ದ್ವಾದಶಿಗೆ ಬರುವ ತುಳಸಿ ಪೂಜೆಯ ಸಮಯಕ್ಕೆ ಮಡದಿಯೊಡನೆ ಊರಿಗೆ ತೆರಳಿ ಹಬ್ಬ ಆಚರಿಸಿ :-)
    ದೀಪಾವಳಿಯನ್ನು missಮಾಡಿಕೊಂಡವರಿಗಾಗಿಯೇ ಈ ಹಬ್ಬ :-)

    ReplyDelete
  4. ಧನ್ಯವಾದಗಳು ಸರ್! ಉತ್ತಮ ಸಲಹೆ ನೀಡಿದ್ದೀರಿ, ಮುಂಬರುವ ತುಳಸಿ ಹಬ್ಬವನ್ನು ಇದಿರು ನೋಡುತ್ತಿದ್ದೇನೆ :o)

    ReplyDelete
  5. ಧನ್ಯವಾದ ರಾಜು. ಪರಕೀಯ ಜಾಗದಲ್ಲಿ ಬರವಣಿಗೆಯೇ ಭಾವನೆಗಳಿಗೆ ಜೀವ ತುಂಬುವುದು.. ಅಲ್ಲವೇ? :o)

    ReplyDelete
  6. DeepaavaLiya ShubhaashayagaLu Prashanth. Nange arivide, modalane deepaavaLiya utsaaha, tavarinalli aachariso santasa. KhanDita nimmaakege bejaaragirotte. Aadare mana ondu bagedare, daiva bereno bageyottante.
    Irali.. Manada beLaku hachhi deepavaLi aanandisi.
    Kshamisi. Mobile inda kalstirodrinda, kannada font nalli type madokkaglilla.

    ReplyDelete
  7. ಹೌದು ಸಹನಾ ಅವರೇ, ನಮ್ಮ ಮನೆಯವರು ತುಂಬಾ ದಿನಂದಿಂದ ಸಿದ್ಧತೆ ಮಾಡ್ಕೊಂಡಿದ್ರು ಊರಿಗೆ ಹೋಗೋಕೆ. ನಾನು ಬೆಂಗಳೂರಿಗೆ ಹಿಂತಿರುಗಿ ಬಂದಮೇಲೆ ಇದೆ ನನಗೆ ದೊಡ್ಡ 'ಪಟಾಕಿ' ಹಬ್ಬ.. :D

    ReplyDelete
  8. Prashanth,yuadi marali baruvante....deepawali marali baruwadu...baravanege moolaka aacharisidiralla uttarabharatadalli manadalada baravanegeyalli harivu sahaja.....

    ReplyDelete
  9. ಧನ್ಯವಾದಗಳು, ಸರ್ :o)

    ReplyDelete

ಖಂಡಿತಾ ನಿಮ್ಮ ಅನಿಸಿಕೆಗಳನ್ನು ತಿಳಿಸಿ. ಧನ್ಯವಾದಗಳು!
Please post your comments. Thank you!