Sunday, May 8, 2011

ಓಂ ಸಾಯಿ ರಾಮ್..

ಸತ್ಯ ಸಾಯಿ ಬಾಬ (ಕೃಪೆ - ಇಂಡಿಯಾ ಟಿವಿ)
ಶ್ರೀ ಸತ್ಯ ಸಾಯಿ ಬಾಬ ರವರ ಮೇಲಿನ ಚಿತ್ರವನ್ನು ನೋಡುತ್ತಿದ್ದಂತೆಯೇ ನನಗೆ ಎಲ್ಲಿಲ್ಲದ ಅಚ್ಚರಿಯಾಯಿತು. ಈ ಚಿತ್ರವು, ನಾನು ಕಂಡ ಸಾಯಿ ಬಾಬ ಅವರ ವಿಶೇಷ-ವಿಭಿನ್ನ ಛಾಯಾಚಿತ್ರ. ಸಾಮಾನ್ಯವಾಗಿ, ಸಾಯಿ ಬಾಬ ರವರ ಎಲ್ಲಾ ಚಿತ್ರಗಳು ಅವರು ಅಭಯ ಹಸ್ತವನ್ನು ತಮ್ಮ ಭಕ್ತರೆಡೆಗೆ ಆಶಿರ್ವದಿಸುವ ರೀತಿಯಲ್ಲಿ ಇರಿಸಿಕೊಂಡ ಭಂಗಿಯಲ್ಲೇ ಇರುವುದನ್ನು ನಾವು ಗಮನಿಸಿದ್ದೇವೆ. ಆದರೆ, ಇಲ್ಲಿ, ಸಾಯಿ ಬಾಬ ಅವರು ತಮ್ಮ ನೈಜ ದೈವೀಯತೆಯನ್ನು ತೊರೆದು, ದೀನ ಭಾವರಾಗಿರುವಂತೆ ತೋರುತ್ತದೆ. ಅಚ್ಚರಿಯಿಂದ ಮೊದಲುಗೊಂಡು ಕುತೂಹಲ ಮೂಡಿಸಿದ ಈ ಚಿತ್ರದ ಬೆನ್ನುಹತ್ತಿ ಹೊರಟ ನನಗೆ ದೊರೆತ ಮಾಹಿತಿ : 25 ನೇ ಮಾರ್ಚ್, 2011 ರಂದು ಸತ್ಯ ಸಾಯಿ ಬಾಬ ತಮ್ಮ ಭಕ್ತರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ, ಅಲ್ಲಿದ್ದ ಭಕ್ತರಲ್ಲೊಬ್ಬರು ಸೆರೆಹಿಡಿದ ಚಿತ್ರವಿದು. ಅದು ಬಾಬಾರೊಡನೆ ತಮ್ಮ ಕಟ್ಟಕಡೆಯ ಸಂದರ್ಶನವೆಂದು, ತಮ್ಮ ಕಣ್ಮುಂದೆ ಕಾಣುತ್ತಿದ್ದ ದೈವವು ಮತ್ತೆಂದೂ ತಮ್ಮ ಮುಂದೆ ಬರಲಾರದಷ್ಟು ದೂರ ಹೊರಟುಹೋಗುತ್ತದೆಂಬ ಅರಿವು ಅಲ್ಲಿ ನೆರೆದಿದ್ದ ಯಾರೊಬ್ಬ ಭಕ್ತನ ಮನಸ್ಸಿನಲ್ಲೂ ಅರಿಕೆಯಾಗಿರಲಿಕ್ಕಿಲ್ಲ. ಆದರೆ, ಅದು ತಮಗೆ ದೊರೆತ ಕೊನೆಯ ಅವಕಾಶವೆಂದು ಅರಿತಿದ್ದ ಬಾಬ, ತಮ್ಮ ಎರಡೂ ಕರಗಳನ್ನು ಜೋಡಿಸಿ ಭಕ್ತರಿಗೆ ಕೈಮುಗಿದಾಗ, ಅವರ ಮನದಾಳದಲ್ಲಿದ್ದ ಕೃತಜ್ಞತಾಭಾವವು ಅವರ ಮುಖದಲ್ಲಿ ಮಡುಗಟ್ಟಿತ್ತು.

ಮೂಲತಃ ನಾನು ಬಾಬ ಅವರ ಪರಮ ಭಕ್ತನೇನಲ್ಲ. ಬಾಲ್ಯದಲ್ಲಿ ನಾನು ಬಾಬಾರನ್ನು ಕಂಡದ್ದು ಒಬ್ಬ ಮಹಾನ್ ಮಾಂತ್ರಿಕನಂತೆ! ತಮಗೆ ಶರಣೆಂದು ಬಂದ ಭಕ್ತಕೊಟಿಗೆ ಕ್ಷಣಾರ್ಧದಲ್ಲಿ ವಿಭೂತಿಯನ್ನೋ ಅಥವಾ ಆಭರಣವನ್ನೋ ಶೂನ್ಯದಿಂದ ಸೃಷ್ಟಿಮಾಡಿ ಆಶಿರ್ವಾದವಾಗಿ ದಯಪಾಲಿಸುತ್ತಿದ್ದ ದೃಶ್ಯವು ಇಂದಿಗೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ನಾನು ಪ್ರಭುದ್ಧನಾದಂತೆಲ್ಲಾ ಬಾಬ ನನ್ನ ಸ್ಮೃತಿಯಿಂದ ಸಂಪೂರ್ಣವಾಗಿ ಮರೆಯಾಗಿಹೋಗಿದ್ದರು. ಅವರು ಕಟ್ಟಿ-ಬೆಳೆಸಿ-ಪೋಷಿಸುತ್ತಿದ್ದ ದಯಾಸಂಸ್ಥೆಗಳ ಒಂದು ಪ್ರಮುಖ ಅಂಗವಾಗಿ, ಮಾಹಿತಿ ತಂತ್ರಜ್ಞಾನದ ಸ್ಪರ್ಧೆಗಿಳಿದು ಬೆಂಗಳೂರಿನ ವೈಟ್-ಫೀಲ್ಡ್ ನಲ್ಲಿ ಕಂಗೆಟ್ಟು ತಲೆಯೆತ್ತಿರುವ ಸಹಸ್ರಾರು ಹವಾನಿಯಂತ್ರಿತ ಕಟ್ಟಡಗಳ ಮಧ್ಯೆ ಸದ್ದಿಲ್ಲದೆ, ಉಚಿತ ಉನ್ನತ ವೈದ್ಯಕೀಯ ಸೇವೆಯನ್ನು ನಿರಂತರವಾಗಿ ಒದಗಿಸುತ್ತಿರುವ 'ಶ್ರೀ ಸತ್ಯ ಸಾಯಿ ಸೂಪರ್ ಸ್ಪೆಶಾಲಿಟಿ ಹಾಸ್ಪಿಟಲ್' ಅನ್ನು ಹಲವಾರು ಬಾರಿ ನಾನು ತಿರುಗಿನೋಡದೇ ತಿರಸ್ಕರಿಸಿದಂತೆ ತಿರುಗಾಡಿದ್ದುಂಟು. ಆದರೆ ಇಂದು, ಅದೊಂದು ಪವಿತ್ರ ಸ್ಥಾನವೆಂಬ ಪ್ರಬಲ ನಂಬಿಕೆ-ಭಾವನೆಯು ನನ್ನಲ್ಲಿ ಮನೆಮಾಡಿದೆ.

ಬಾಬಾರವರು ತಾವು ತಮ್ಮ 96 ನೇ ವಯಸ್ಸಿನವರೆಗೂ ಆರೋಗ್ಯದಿಂದ ಜೀವಿಸುವುದಾಗಿ ಘೋಷಿಸಿದ್ದರು; ಆದರೆ, ವಿಧಿಯ ಹಲವಾರು ಅನಿರೀಕ್ಷಿತ ಅಪಘಾತಗಳ ಕಾರಣದಿಂದಾಗಿ ಬಾಬ 84 ರ ಹರೆಯದಲ್ಲೇ ದೈವನ ಅಧೀನರಾದರು. "ಅವರ ಭಕ್ತರು ಹೇಳುವಂತೆ, ಬಾಬ ಸತ್ತವರನ್ನು ಬದುಕಿಸುವ ಶಕ್ತಿ ಹೊಂದಿದ್ದರೆ, ತಮ್ಮನ್ನು ತಾವು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲವೇಕೆ?" ಎಂಬುದು ಕೆಲವರ ಪ್ರಶ್ನೆ. ಈ ಪ್ರಶ್ನೆಗೆ ಉತ್ತರಿಸುವುದು ಕಷ್ಟ-ಸಾಧ್ಯ. ರಾಮಾಯಣದಲ್ಲಿ ಉಲ್ಲೇಖಿತವಾಗಿರುವ ಪ್ರಸಂಗವೊಂದು ಇಲ್ಲಿ ಪ್ರಸ್ತುತವೆನಿಸಬಹುದು ಎಂಬುದು ನನ್ನ ಭಾವನೆ.
ಲಂಕೆಯನ್ನು ತಲುಪಲು ಶ್ರೀರಾಮನ ಕಪಿಸೈನ್ಯ ಬಂಡೆಕಲ್ಲುಗಳಿಂದ ಸಮುದ್ರಕ್ಕೆ ಸೇತುವೆಯನ್ನು ನಿರ್ಮಿಸುತ್ತಿದ್ದವು. ಪ್ರತಿಯೊಂದು ಬಂಡೆಯ ಮೇಲೆ 'ಶ್ರೀರಾಮ' ಎಂದು ಬರೆದು ಭಕ್ತಿಯಿಂದ ಸಮುದ್ರದ ನೀರಿನ ಮೇಲೆ ಹಾಕಲು, ಅವು ಮುಳುಗದೇ ತೇಲುತ್ತಿದ್ದವು. ಇದನ್ನು ಕಂಡ ಶ್ರೀರಾಮನಿಗೆ ಆಶ್ಚರ್ಯವಾಯಿತು. ಆದಿನ ರಾತ್ರಿ ಏಕಾಂತದಲ್ಲಿ ಶ್ರೀರಾಮ ತಾನೂ ಸಹ ಒಂದು ಕಲ್ಲನ್ನು ತೆಗೆದುಕೊಂಡು ಸಮುದ್ರದ ನೀರಿಗೆ ಹಾಕಲು, ಅದು ಮುಳುಗಿಹೋಯಿತು. ಇದನ್ನೆಲ್ಲಾ ಗಮನಿಸುತ್ತಿದ್ದ ಹನುಮಂತ, ಕಲ್ಲುಗಳು ನೀರಿನ ಮೇಲೆ ತೇಲಲು 'ರಾಮನಾಮ'ವೇ ಕಾರಣ ಎಂದು ಶ್ರೀರಾಮನನ್ನುದ್ದೇಶಿಸಿ ಹೇಳಿದನು. ಇದರಿಂದ, ರಾಮನಿಗೆ ಇರದ ಶಕ್ತಿಯು ಅವನ ಪರಮ ಭಕ್ತರು ಭಜಿಸುವ ಶ್ರೀರಾಮನಾಮದ ಮಹಿಮೆಯ ಅಖಂಡವಾದ ನಂಬಿಕೆಗೆ ಇದ್ದಿತು ಎಂಬುದನ್ನು ಇಡೀ ಜಗತ್ತಿಗೇ ತೋರಿಸಿಕೊಡಲಾಗಿದೆ.
ಮೇಲಿನ ಪ್ರಸಂಗದ ಸಾರಾಂಶವನ್ನು ಗ್ರಹಿಸಿಕೊಂಡು ಹೇಳುವುದಾದರೆ, ಅನ್ಯರಿಗೆ ಒಳಿತನ್ನು ಮಾಡುವ ಶಕ್ತಿ ಬಾಬಾರವರಿಗೆ ಇದ್ದಿತೆ ವಿನಃ ತಮ್ಮ ವೈಯಕ್ತಿಕ ಒಳಿತನ್ನು ಸಾಧಿಸಿಕೊಳ್ಳುವುದಕ್ಕಲ್ಲ. ಅವರು ಜನ್ಮ ತಳೆದದ್ದೇ ಜಗತ್ತಿನ ಕಲ್ಯಾಣಕ್ಕಾಗಿಯೇ ಹೊರೆತು ಸ್ವಾರ್ಥ ಸಾಧನೆಗಾಗಿ ಅಲ್ಲ. ಇದಕ್ಕೆಲ್ಲಾ ಮೂಕ ಸಾಕ್ಷಿಯೆಂಬಂತೆ ಪ್ರಪಂಚದಾದ್ಯಂತ ಅವರು ಹುಟ್ಟಿಹಾಕಿದ ಹತ್ತು ಹಲವು ದಯಾಸಂಸ್ಥೆಗಳು ನಮ್ಮೆದುರಿಗಿವೆ. ಆ ಸಂಸ್ಥೆಗಳಿಂದ ಪ್ರಯೋಜನ ಪಡೆದುಕೊಂಡ ಸಹಸ್ರಾರು ಮಂದಿ ನಮ್ಮ ನಡಿವೆಯೇ ಇದ್ದಾರೆ. ತಮ್ಮ ಹುಟ್ಟೂರಾದ ಪುಟ್ಟಪರ್ತಿಯಲ್ಲಿ ಅವರು ಮಾಡಿರುವ ಜನಸೇವೆಯನ್ನು ಅಲ್ಲಿನ ಘನ ಸರ್ಕಾರವು ಇಲ್ಲಿಯವರೆಗೂ ಮಾಡಲು ಸಾಧ್ಯವಾಗಿಲ್ಲ, ಇಂಥಹ ನಿಸ್ವಾರ್ಥ ಸಮಾಜ ಸೇವೆಯನ್ನು ಅಪಾರ ಪ್ರಮಾಣದಲ್ಲಿ ಒಬ್ಬೊಂಟಿಗರಾಗಿ ಸಾಧಿಸಿದ್ದೇ ಬಾಬಾರವರು ನಡೆಸಿದ ಅದ್ಭುತ ಪವಾಡ. ಅಗಲಿದ ಅಂಥಹ ಮಹಾನ್ ಚೇತನಕ್ಕೆ ಈ ಮೂಲಕ ನನ್ನ ಭಾವಪೂರ್ಣ ಶ್ರದ್ಧಾಂಜಲಿಯ ಅರ್ಪಣೆ..

2 comments:

 1. ಬಾಬಾರವರು ದೈವ ಎಂದು ನಾನು ನಂಬುವುದಿಲ್ಲ.. ಅವರು ಜನ ಮನ್ನಣೆಗಾಗಿ ಬಹಳ ತಪ್ಪು ಹಾದಿ ಹಿಡಿದ್ದದ್ದು ಉಂಟು.. ಮಂತ್ರ ಮಾಡಿ ವಿಭೂತಿ, ಶಿವಲಿಂಗ, ಉಂಗುರ ಹೀಗೆ ಏನೇನೋ ವಸ್ತುಗಳನ್ನ ಗಾಳಿ ಇಂದ ತರಿಸೋದು.. ನನ್ನ ಬುದ್ಧಿ ಇದನ್ನ ಪವಾಡ ಎಂದು ನಂಬಲು ಬಿಡುವುದಿಲ್ಲ..

  ಆದರೆ, ಅವರು ಮಾಡಿರುವ ಕೆಲವು ಕೆಲಸಗಳು ಅವರ ಜೀವವನ್ನ ಮಾಹಾತ್ಮರನ್ನಾಗಿ ಮಾಡುತ್ತದೆ..

  ೧) ಒಂದು ಬರದು ಭೂಮಿಗೆ, ನೆಲ ನೀರಿನ ಮಟ್ಟವೂ ಕುಸಿದು, ಕುಡಿಯುವ ನೀರಿಗೂ ಹಾಹಾಕಾರ ಇದ್ದಾಗ.. ಇಡೀ ಅನಂತಪುರಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ, ಸರಕಾರದಿಂದ ಒಂದು ಬಿಡಿಗಾಸು ತೆಗೆದುಕೊಳ್ಳದೆ! ಶ್ಲಾಘನೀಯ!
  ೨) ಅತಿ ಕಡಿಮೆ ದರದಲ್ಲಿ, ಅಥವಾ ಸ್ವಲ್ಪವೂ ಖರ್ಚಿಲ್ಲದೆ ದೊಡ್ಡ ದೊಡ್ಡ ಶಸ್ತ್ರ ಚಿಕಿತ್ಸೆಗಳನ್ನು ಹೆಸರಾಂತ ವೈದ್ಯರ ತಂಡ ಮಾಡುವ ಸೇವೆ - ನೀವು ಹೇಳಿರುವಂತೆ ಅವರ ಸಂಸ್ಥೆಯಲ್ಲಿಯೇ.. ಬಡವರು ಇಲ್ಲದಿದ್ದರೆ ಎಲ್ಲಿ ಹೋಗಬೇಕು?
  ೩) ಅವರ ವಿದ್ಯಾ ಸಂಸ್ಥೆಗಳು ಕೊಡುತ್ತಿರುವ ಪದವಿಗಳು, ಅಲ್ಲಿ ಕಲಿಸುವ ಉಪನ್ಯಾಸಕರು ಎಲ್ಲ ವಿಶ್ವಮಟ್ಟದಲ್ಲಿ ಹೆಸರು ಮಾಡಿದವರೇ.. ಅಲ್ಲಿ ಕಲಿಯಲು ಹೆಚ್ಚು ಹಣವು ವ್ಯಚ್ಚ ಆಗುವುದಿಲ್ಲ..

  ಈ ಸಾಧನೆಗಳಿಗೆ ಅವರು ಮಹಾತ್ಮ..
  "SELFLESS "

  -ಸಹನೆ

  ReplyDelete
 2. ನಿಮ್ಮ ಮಾತು ಅಕ್ಷರಸಹ ನಿಜ!

  ಡಾ|| ಯು. ಆರ್. ಅನಂತಮೂರ್ತಿ ರವರ 2005 ರ ಸಂದರ್ಶನಾಧಾರಿತ ಲೇಖನದಲ್ಲಿಯೂ ಸಹ ಬಾಬಾರವರ ಸಮಾಜಸೇವೆಯ ಬಗ್ಗೆ ಪ್ರಶಂಸನೀಯ ವಿಚಾರವನ್ನು ಇಂದು ಪ್ರಜಾವಾಣಿ ಪುರವಣಿಯಲ್ಲಿ ಓದಿದೆ. ಬಾಬಾರವರ ನಿಸ್ವಾರ್ಥ ಜನಪರ ಸೇವಾಕಾರ್ಯಕ್ರಮಗಳನ್ನು ಕುರಿತು ಯಾರೂ ಸಹ ಅಪಸ್ವರ ನುಡಿಯುವಂತಿಲ್ಲ. ಅವರ ಈ ಸೇವೆಯೇ ಬಾಬಾರವರಿಗೆ ಉಳಿದೆಲ್ಲ ಸ್ವಾಮೀಜಿಗಳಿಗಿಂತ ವಿಭಿನ್ನ-ಉನ್ನತ ಸ್ಥಾನವನ್ನು ತಂದುಕೊಟ್ಟಿದೆ.

  'ಶ್ರೀಶ್ರೀಶ್ರೀ ರವಿಶಂಕರ್ ಮತ್ತು ಬಾಬಾರವರನ್ನು ಹೋಲಿಸಿ ನೋಡುವುದಾದರೆ, ಸಾಯಿಬಾಬಾರೇ ಉತ್ತಮ' - ಅನಂತಮೂರ್ತಿಯವರ ಈ ಮಾತುಗಳನ್ನು ಒಪ್ಪಲೇ ಬೇಕು.

  ReplyDelete

ಖಂಡಿತಾ ನಿಮ್ಮ ಅನಿಸಿಕೆಗಳನ್ನು ತಿಳಿಸಿ. ಧನ್ಯವಾದಗಳು!
Please post your comments. Thank you!