Prayer (Google Image) |
ಮದುವೆಯಾದ ಕೂಡಲೇ 'ಪ್ರಾರ್ಥನೆ' ಮಾಡುವುದು ನನಗೆ ಅನಿವಾರ್ಯವಾಗಿದೆಯೇನೋ ಎಂದುಕೊಂಡಿರ? ಹಾಗೇನಿಲ್ಲ ಬಿಡಿ. ಬಹು ದಿನಗಳಿಂದ ಪ್ರಾರ್ಥನೆಯ ಬಗ್ಗೆ ಬರೆಯಬೇಕೆಂಬ ಹಂಬಲವಿದ್ದಿತು. ಈ ಲೇಖನವನ್ನು ಬರೆಯಲು ಪ್ರಾರಂಭಿಸಿ ಇಂದಿಗೆ ಸುಮಾರು ಹತ್ತು ದಿನಗಳೇ ಕಳೆದುಹೋಗಿವೆ; ಆದರೆ ಬರವಣಿಗೆಯಿನ್ನೂ ಪೂರ್ಣವಾಗಿಲ್ಲ. ಇದುವೇ 'SOME-ಸಾರ' ಸಾಗರ!!
ವಿಷಯಕ್ಕೆ ಬರುತ್ತೇನೆ.
ಪ್ರಾರ್ಥನೆ - ಬೇರೆ ಬೇರೆ ಧರ್ಮಗ್ರಂಥಗಳಲ್ಲಿ ಬೇರೆ ಬೇರೆ ರೀತಿಯಾಗಿ ವ್ಯಾಖ್ಯಾನಗೊಂಡಿದೆ. ಆದರೆ, ಎಲ್ಲ ವ್ಯಾಖ್ಯಾನಗಳ ಸಾರ ಒಂದೇ - 'ಭಗವಂತನ ಜೊತೆಗಿನ ನಮ್ಮ ನೇರ ಸಂವಹನವೇ ಪ್ರಾರ್ಥನೆ'. ವಾಸ್ತವಕ್ಕೆ ತೀರ ಹತ್ತಿರವಾಗಿ ಹೇಳಬೇಕೆಂದರೆ, 'ಪ್ರಾರ್ಥನೆ, ಭಗವಂತನ ಮೊಬೈಲ್ ಸಂಖ್ಯೆ'! - ಇದು ನನ್ನ ಸ್ವಂತ ವಿಚಾರವಲ್ಲ, ಎಲ್ಲೋ ಓದಿದ್ದನ್ನು ನೆನಪಿಸಿಕೊಂಡು ಇಲ್ಲಿ ಪುನರಾವರ್ತಿಸುತ್ತಿದ್ದೇನೆ ಅಷ್ಟೇ.
ಮೇಲಿನ ಪ್ರಾರ್ಥನೆಯ ಅರ್ಥವನ್ನು ಗ್ರಹಿಸುತ್ತಿದ್ದಂತೆಯೇ, ನಾಸ್ತಿಕರಲ್ಲಿ ಉದ್ಭವಿಸಬಹುದಾದ ಮೊದಲ ಪ್ರಶ್ನೆ - 'ಎಲ್ಲಿದ್ದಾನೆ ಆ ಭಗವಂತ?'. ಈ ತರ್ಕವು ಪ್ರಸ್ತುತ ವಿಷಯಕ್ಕೆ ನೇರವಾಗಿ ಸಂಬಂಧಿಸದಿದ್ದರೂ ಸಹ, ಪ್ರಸಕ್ತ ಚೌಕಟ್ಟಿನಲ್ಲಿ 'ಭಗವಂತ' ಅಥವಾ 'ದೇವರು' ಎಂದರೆ 'ಮನುಷ್ಯರಾದ ನಮಗೆಲ್ಲರಿಗಿಂತ ಹಿರಿದಾದ ಒಂದು ಶಕ್ತಿ'; ಆ ಶಕ್ತಿಯನ್ನು 'ದೇವರು' ಎನ್ನದಿದ್ದರೂ, 'ಪ್ರಕೃತಿ' ಎಂದುಕೊಂಡರೂ ಅಡ್ಡಿಯಿಲ್ಲ. ಪ್ರಾರ್ಥನೆಯನ್ನು ಈಗ ಅರ್ಥೈಸಿ - 'ನಮಗಿಂತ ಪ್ರಬಲವಾದ ಶಕ್ತಿಯೊಡನೆಯ ನಮ್ಮ ನೇರ ಸಂವಾದ' ಎಂದುಕೊಳ್ಳೋಣ.
ಬಹಳಷ್ಟು ಮಂದಿ 'ಪ್ರಾರ್ಥನೆ' ಎಂದಕೂಡಲೇ, 'ಬೇಡುವುದು' ಎಂದುಕೊಳ್ಳುವುದುಂಟು; ಅದು ಸಮಂಜಸವಲ್ಲ. ಬೇಡುವುದೂ ಒಂದು ರೀತಿಯ ಪ್ರಾರ್ಥನೆ, ಹೌದು; ಆದರೆ, ಬೇಡುವುದೇ ಪ್ರಾರ್ಥನೆಯಲ್ಲ. ಪ್ರಾರ್ಥನೆಯು ಮೂಲಭೂತವಾಗಿ ಬರಿಯ 'ಸಂವಾದ' ಅಷ್ಟೇ. ಈ ಸಂವಾದವು ವ್ಯಕ್ತಿಯಿಂದ ವ್ಯಕ್ತಿಗೆ, ಅವರವರ ಭಾವ-ತರ್ಕ-ಇಚ್ಛೆ ಇವುಗಳಿಗನುಗುಣವಾಗಿ ಭಿನ್ನವಾಗಿರುತ್ತದೆ ಎನ್ನುವುದು ಸತ್ಯ. ಮನುಷ್ಯರಾಗಿ ಹುಟ್ಟಿದ ಮೇಲೆ, ಜೀವನದಲ್ಲಿ ಒಂದಲ್ಲ ಒಂದು ದಿನ, ಒಂದಲ್ಲ ಒಂದು ರೀತಿ, ಅರಿವಿದ್ದೋ, ಅರಿವಿಲ್ಲದೆಯೋ, ನಾವೆಲ್ಲರೂ 'ಪ್ರಾರ್ಥನೆ' ಮಾಡಿಯೇ ತಿರುತ್ತೇವೆ. ಆದರೆ, ನಮ್ಮ ಪ್ರಾರ್ಥನೆಯ ಸಾರ-ಉದ್ದೇಶ ವಿಭಿನ್ನವಷ್ಟೇ.
ಪ್ರಾರ್ಥನೆಯ ಸಾರಾಂಶವನ್ನು ಒಂದೇ ಲೇಖನದಲ್ಲಿ ಬರೆದಿಡುವಷ್ಟು ಪ್ರಬುದ್ಧತೆ ನನಗಿಲ್ಲವಾದ್ದರಿಂದ, ಸರಣಿಗಳಲ್ಲಿ ಬಿತ್ತರಿಸುವ ನಿರ್ಧಾರ ಸಮಂಜಸವೆನಿಸುತ್ತದೆ. ನಮ್ಮ ಬದುಕಿನ ಬಹು ಮುಖ್ಯ ಅಂಶಗಳಲ್ಲಿ ಪ್ರಾರ್ಥನೆಯೂ ಒಂದು ಎನ್ನುವುದು ನನ್ನ ಭಾವನೆ, ಆದ್ದರಿಂದ ಈ ಲೇಖನ ಸರಣಿಯು ಆತ್ಮಾವಲೋಕನದ ಒಂದು ಪ್ರಾಮಾಣಿಕ ಪ್ರಯತ್ನ ಎಂದರೂ ತಪ್ಪಾಗಲಾರದು.
ಭಾಗ-2 ರ ಸಂಚಿಕೆಯಲ್ಲಿ ಮುಂದುವರೆದಿದೆ..