ನಾನು ಅಪ್ರೂಪಕ್ಕೆ ಭಾನ್ವಾರ ಬೆಳಿಗ್ಗೆ ಬೇಗ್ನೆ ಎದ್ದು ನಿದ್ದೆಗಣ್ಣಲ್ಲೇ ಹಲ್ಲುಜ್ತಾ ತೂಕಡ್ಸ್ಕೊಂಡ್ ನಿಂತಿದ್ದಾಗ, ಅದ್ಯಾರೋ ನಮ್ ಮನೆ ಹತ್ರ ಕೂಗ್ಕೊಳ್ತಾ ಇದ್ದ್ರು.. ಥಟ್ ಅಂತ ನಿದ್ದೆ ಮಾಯ ಆಯ್ತು! ಹಲ್ಗೂ-ಬ್ರಶ್ಗೂ ಯುದ್ಧ ನಿಲ್ಸಿ, ಕಿವಿ ಕೊಟ್ ಕೇಳ್ಸ್ಕೋ೦ಡೆ.. ಹೆಣ್ಧ್ವನಿ.. ಒಂದೇ ಸೆಕೆಂಡ್ನಲ್ಲಿ ಸುಮಾರ್ ಧ್ವನಿ-ಸದ್ಗಳು ಸೇರ್ಕೊಂಡು ಏನ್ ನಡೀತಿದೆ ಅಂತ ಅರ್ಥಆಗ್ದಷ್ಟು ಗೊಂದ್ಲ ಆಗ್ಹೋಯ್ತು.. 'ಬೆಳಿಗ್ಗೆ ಬೆಳಿಗ್ಗೆನೇ ಇದೇನಪ್ಪಾ ಗಲಾಟೆ?' ಅನ್ಕೊಂಡು ಮತ್ತೆ ಬ್ರಶ್ ಮಾಡೋಕೆ ಶುರು ಮಾಡ್ದೆ.
ನಾನು-Snowy ವಾಕಿಂಗ್ ಹೊರ್ಟು ಮನೆಯಿಂದ 50 ಮೀಟರ್ ಹೋಗಿದ್ವಿ ಅಷ್ಟೇ, ಅಲ್ಲಿ ಒಂದ್ 10-15 ಜನ ಸೇರಿದ್ರು, ಕಾರು-ಬೈಕು ಎಲ್ಲಾ ನಿಲ್ಸ್ಕೊಂಡು ಅದೇನೋ ಮಾತಾಡ್ಕೋತಾ ಇದ್ದ್ರು. ನಾವೂ ಹತ್ರ ಹೋಗಿ ನಿಂತ್ವಿ. Snowy, ಮನೆಗೆ ಯಾರದ್ರೂ ಬಂದ್ರೆ ಸ್ವಲ್ಪ ಗಲಾಟೆ ಮಾಡ್ತಾನೆ; ಆದ್ರೆ ಅವ್ನಿಗೆ ಈ Road-Sense ತುಂಬಾ ಇದೆ, ಅಷ್ಟೆಲ್ಲ ಜನ ಇದ್ದ್ರೂ ಸುಮ್ನೆ ನಿಂತಿದ್ದ ನಂಜೊತೆಗೆ. ನಾವೂ ಯಾರ್ಗೂ ಕಡ್ಮೆ ಏನಿಲ್ಲ ಅನ್ನೋಥರಾ, ನಮ್ ಏರಿಯಾ ಬೀದಿ-ನಾಯ್ಗಳೂ ಅಲ್ಲೇ ಸೇರ್ಕೊಂಡು ಅವ್ಗಳ್ ಭಾಷೇಲಿ ಏನೇನೋ ಹೇಳ್ಕೋತಾ ಇದ್ದ್ವು.
"ಒಬ್ಬ ಅಟೋ ಓಡ್ಸ್ತಿದ್ದ, ಇನ್ನೊಬ್ಬ ಹಿಂದೆ ಕೂತ್ಕೊಂಡಿದ್ದ.." ಒಬ್ರು ಹೇಳ್ತಿದ್ದ್ರು.
"ನಾನು ಮೇಲಿಂದ ನೋಡ್ತಿದ್ದೆ, ಕೆಳ್ಗಡೆ ಇಳ್ದು ಬರೋದ್ರಲ್ಲಿ ಹೋಗ್ಬಿಟ್ಟ್ರು.." ಇನ್ನೊಬ್ರು ಹೇಳಿದ್ದ್ರು.
"Turning ನಲ್ಲಿ ಆಟೋ pass ಆಯ್ತು, ಇಲ್ಲಿಗೆ ಬಂದ್ಮೇಲೆ ಸರ ಕಿತ್ಕೊಂಡಿದ್ದಾರೆ ಅಂತ ಗೊತ್ತಾಯ್ತು" - ಮೇರು ಟ್ಯಾಕ್ಸಿ ಡ್ರೈವರ್ ಹೀಗೆ ಹೇಳ್ದಾಗ್ಲೇ ನನ್ಗೆ ಗೊತ್ತಾಗಿದ್ದು ಯಾರೋ ಇಬ್ಬ್ರು ಆಟೋಲಿ ಬಂದು ಸರ ಕಿತ್ಕೊಂಡು ಹೋಗಿದಾರೆ ಅಂತ.
ಅಣ್ಣಾವ್ರ 'ಸಂಪತ್ತಿಗೆ ಸವಾಲ್' ಪಿಕ್ಚರ್ ನ ಕೊನೇ ರೀಲ್ ನಲ್ಲಿ ಬರೋ ಪೋಲಿಸ್ ಥರಾ 'ಹೊಯ್ಸಳ-84' ಜಿಪ್ ಬಂತು. ಅಷ್ಟ್ರಲ್ಲಿ ಆಗ್ಲೇ ಸರ ಕಳ್ಕೊಂಡೋರು ಪೋಲಿಸ್ ಸ್ಟೇಷನ್ ಗೆ ಹೋಗಿ ಆಗಿತ್ತು. ಹೊಯ್ಸಳ ಪೋಲಿಸ್ ಗೆ ಜನ್ರೆಲ್ಲಾ ಅಲ್ಲಿ ಏನು-ಹೇಗೆ-ಯಾವಾಗ ನಡೀತು ಅಂತ ಹೇಳೋಕೆ ಶುರು ಮಾಡಿದ್ರು. ಮೊದ್ಲೇ ಅದೆಲ್ಲಾ ಕೇಳಿದ್ದ Snowy ಒಂದೆರ್ಡು ಹೆಜ್ಜೆ ಮುಂದೆ ಹೋದ, ನಾನೂ ಅವ್ನ ಹಿಂದೆ ಅಲ್ಲಿಂದ ಹೊರ್ಟೆ.
'ಪುಷ್ಪಾಂಜಲಿ ಉದ್ಯಾನವನ' - ಗಿರಿನಗರ ಪೋಲಿಸ್ ಸ್ಟೇಷನ್ ಹತ್ರ ಇರೋ ಬಿ.ಬಿ.ಎಂ.ಪಿ. ಪಾರ್ಕ್. ಬೆಳಿಗ್ಗೆ ಇಂದ ಶುರು ಆಗಿ ಸಂಜೆ-ರಾತ್ರಿ ತನಕ ಜನ್ರು ಬೇರೆ-ಬೇರೆ(?) ಕಾರ್ಣಕ್ಕೆ ಆ ಪಾರ್ಕ್ ಗೆ ಬರ್ತಾರೆ. ಅಂಥವ್ರಲ್ಲಿ ವೇಟ್-ಷುಗರ್ ಕಂಟ್ರೋಲ್ ಗೆ ವಾಕ್-ಜಾಗ್ ಮಾಡೋರೆ ಜಾಸ್ತಿ; ಅರ್ಥದಷ್ಟು ಹೆಂಗಸ್ರೆ ಇರ್ತಾರೆ. ಪೋಲಿಸ್ ಸ್ಟೇಷನ್ ನಿಂದ ಹೆಚ್ಚು ಅಂದ್ರೆ 200 ಮೀಟರ್ ದೂರ ಇರೋ ಈ ಪಾರ್ಕ್ ಸುತ್ತ-ಮುತ್ತ ಹೋದ್ವರ್ಷ ಸರಗಳ್ರು ಜಾಸ್ತಿ ಆಗಿದ್ರಿಂದ, ಗಿರಿನಗರ ಪೋಲಿಸ್ ಬೆಳಿಗ್ಗೆ-ಸಂಜೆ ಹೊತ್ನಲ್ಲಿ ಪಾರ್ಕ್ ಹತ್ರ ಕಾವಲು ಇರ್ತಿದ್ದ್ರು, ಈಗ್ಲೂ ಇರ್ತಾರೆ. ಇದ್ರಿಂದ ಕಳ್ರೂ ಕಡ್ಮೆ ಆಗಿದಾರೆ ಅನ್ನಿ. ಆದ್ರೆ, ಇವತ್ತು ಕಳ್ರು ಪಾರ್ಕ್ ಬಿಟ್ಟು ಸ್ವಲ್ಪ ದೂರ ಬಂದು ಕೆಲ್ಸ ಮಾಡಿದಾರೆ. ಇದ್ರಲ್ಲಿ ಪೋಲಿಸ್ ತಪ್ಪೇನಿಲ್ಲ ಬಿಡಿ, ಪಾಪ.
ಚಿನ್ನದ ಬೆಲೆ ಎರ್ಡು ಸಾವ್ರಕ್ಕಿಂತ ಜಾಸ್ತಿ ಆಗಿರೋವಾಗ, ಸರ ಕಳ್ಕೊಳ್ಳೋದು ತಮಾಷೆ ಮಾತಲ್ಲ. ಅದೆಷ್ಟು ಕಷ್ಟಪಟ್ಟು ದುಡ್ಡು ಜೋಡ್ಸಿ ಈ ಅಕ್ಷಯ ತೃತೀಯಕ್ಕೆ ಸರ ತಂದ್ಕೊಂಡಿದ್ರೋ ಗೊತ್ತಿಲ್ಲ, ಇವತ್ತು ಯಾರ್ದೋ ಪಾಲಾಯ್ತು. ಈ ಕಳ್ರೂ ಅಷ್ಟೇ.. ಅದ್ಯಾಕೆ ಹೀಗೆ ಮಾಡ್ತಾರೋ ಗೊತ್ತಾಗಲ್ಲ. ಅವ್ರು ತುಂಬಾ ದಿನ ಆರಾಮಾಗಿ ಇರೋಕಾಗಲ್ಲ; ಅಬ್ಬಬ್ಬಾ ಅಂದ್ರೆ ಒಂದ್ ಸರಕ್ಕೆ ಲಕ್ಷ ಬೆಲೆ ಇರ್ಬಹುದು. ಲಕ್ಷ ಹಣ ಅದೆಷ್ಟು ದಿನ ಬರುತ್ತೆ? ಒಂದಲ್ಲ ಒಂದಿವ್ಸ ಕಳ್ರು ಕಂಬಿ ಏಣ್ಸೋದಂತೂ ತಪ್ಪಲ್ಲ, ಅದಿಕ್ಯಾಕೆ ಈ ಕೆಲ್ಸ ಮಾಡ್ಬೇಕು? ಅನ್ನೋ ಯೋಚ್ನೇನೇ ಅವ್ರಿಗೆ ಬರ್ದಿರೋದು ಆಶ್ಚರ್ಯ!
ಅದೇನೇ ಇರ್ಲಿ, ಆದಷ್ಟೂ ನಾವು ನಮ್ ಎಚ್ಚರ್ಕೆಲಿರೋದು ಒಳ್ಳೇದು. ಅದಕ್ಕೆ, ವಾಕಿಂಗ್/ಜಾಗಿಂಗ್ ಮಾಡೋ ಹೆಂಗಸ್ರು ಮತ್ತು ಹೆಣ್ಮಕ್ಳು ಈ ಕೆಳ್ಗಿರೋ ಅಂಶಗಳ್ನ ಗಮ್ನಿಸ್ಕೊಬೇಕು:
- ಹೆಂಗಸ್ರು ಒಬ್ಬೊಬ್ರೇ ವಾಕಿಂಗ್ ಹೋಗೋ ಬದ್ಲು, ಏರ್ಡು-ಮೂರ್ ಜನ ಗುಂಪಲ್ಲಿ ಹೋಗೋದು.
- ಆದಷ್ಟೂ ಬೆಲೆ ಬಾಳೋ ವಸ್ತುಗಳ್ನ ಅಗತ್ಯವಿಲ್ದಾಗ ಮನೇಲೆ ತೆಗ್ದಿಡೋದು.
- ಜನ ಹೆಚ್ಚಾಗಿರೋ ಜಾಗ್ದಲ್ಲಿ ವಾಕಿಂಗ್ ಮಾಡೋದು.
- ತೀರ ಬೆಳಿಗ್ಗೆ ಅಥ್ವಾ ತಿರಾ ಸಂಜೆ ಕತ್ಲಾಗೋವರ್ಗೂ ವಾಕಿಂಗ್ ಮಾಡ್ದೆ ಇರೋದು.
- ಕತ್ನಲ್ಲಿರೋ ಸರ ಮುಚ್ಚೋ ಹಾಗೆ ಸೆರಗು/ದುಪಟ್ಟಾ ಹಾಕೊಳೋದು.
- ಪ್ರತಿ ದಿನ ಬೇರೆ-ಬೇರೆ ದಾರಿ/ಟೈಮಲ್ಲಿ ವಾಕಿಂಗ್ ಮಾಡೋದು.
- ವಾಕಿಂಗ್ ಮಾಡ್ವಾಗ ಪಕ್ದಲ್ಲಿ ಬರೋ ಜನ-ಗಾಡಿ ಬಗ್ಗೆ ಎಚ್ಚರ್ಕೆಯಿಂದಿರೋದು.
- ಸಾಧ್ಯವಾದ್ರೆ ಮೊಬೈಲ್ ಫೋನ್ ಜೊತೇಲಿ ಇಟ್ಕೊಳ್ಳೋದು.
ಬನ್ನಿ, ನಾವೆಲ್ಲಾ ಸೇರಿ ಬೆಂಗ್ಳೂರ್ನಲ್ಲಿ ಸುರಕ್ಷಿತವಾಗಿ ಜೀವ್ನ ನಡಸೋ ಪ್ರಾಮಾಣಿಕ ಪ್ರಯತ್ನ ಮಾಡೋಣ. ಆದ್ರೆ, ಅದು ಸಾಧ್ಯನಾ? ಅನ್ನೋದು ಬೇರೆ ಪ್ರಶ್ನೆ!!