Sunday, May 13, 2012

Web Browser : ಅಪಾಯದ ಹೊಸ್ತಿಲು?

ಬರವಣಿಗೆಯು ನನ್ನ ವೃತ್ತಿಯಲ್ಲ, ಹವ್ಯಾಸವಷ್ಟೇ! ಏಳನೇಯ ತರಗತಿಯಲ್ಲಿದ್ದಾಗೊಮ್ಮೆ ರಚಿಸದ 'ಕಥೆ'ಯೊಂದನ್ನು ಬಿಟ್ಟರೆ ನನ್ನ ಬರವಣಿಗೆಗಳೇನೇ ಇದ್ದರೂ ಅವು ಕೇವಲ ಈ ನನ್ನ ಬ್ಲಾಗ್ ಗೆ ಮಾತ್ರ ಸೀಮಿತವಾದಂಥವು. ಯಾವುದೊ ಪ್ರೇರಣೆಗೊಳಪಟ್ಟು ಈಗೊಮ್ಮೆ ಆಗೊಮ್ಮೆ ಲೇಖನಗಳನ್ನು ಕೆಲವು ದಿನಪತ್ರಿಕೆಗಳಿಗೆ ಕಳುಹಿಸಿದ್ದೂ ಉಂಟು; ಆದರೆ ಅವೆಲ್ಲವುಗಳೂ ಸಹ ಇತರೆ ಅನೇಕ ಬರೆಹಗಳ ಜೊತೆ 'ಕಸದ ಬುಟ್ಟಿ' ಸೇರಿಕೊಂಡದ್ದು ಈಗ ನೆನಪು ಮಾತ್ರ.

ಹೀಗಿರುವಾಗ, ಕರ್ನಾಟಕ ಪಶುವೈದ್ಯ ಸಂಘ, ಬೆಂಗಳೂರು ಇವರು ಹೊರತರುತ್ತಿರುವ 'ಪಶುವೈದ್ಯ ಧ್ವನಿ' ಎಂಬ ಚಾತುರ್ಮಾಸಿಕ ವೃತ್ತಿಪರ ಸುದ್ದಿ ಪತ್ರಿಕೆಯ ಸಂಪಾದಕ ಮಂಡಳಿಯ ಸದಸ್ಯನಾಗಿ ಕಾರ್ಯ ನಿರ್ವಹಿಸುವ ಅವಕಾಶ ಮಾಡಿಕೊಟ್ಟಾಗ ನನಗೆ ಆಶ್ಚರ್ಯದ ಜೊತೆಗೆ ಆಘಾತವೂ ಆಯಿತು. ತದನಂತರ ಪ್ರಕಟಗೊಂಡಿರುವ ಎರಡೂ ಸಂಚಿಕೆಗಳಿಗೆ ನನ್ನ ಕೊಡುಗೆ ಶೂನ್ಯ; ಇದರ ಸಂಪೂರ್ಣ ಅರಿವು ನನಗಿದ್ದು, ಮುಂಬರುವ ಸಂಚಿಕೆಗಳಿಗೆ ನನ್ನ ಶಕ್ತಿ-ಸಮಯಾನುಸಾರ ಕೆಲಸ ಮಾಡುವ ಆಶಯ ಹೊಂದಿದ್ದೇನೆ.

ಈ ಮಧ್ಯೆ, 'ಪಶುವೈದ್ಯ ಧ್ವನಿ' ಪತ್ರಿಕೆಯಲ್ಲಿ ಪಶುವೈದ್ಯ ವೃತ್ತಿಪರರಾದ ನಮ್ಮೆಲ್ಲರಿಗೆ ಉಪಯುಕ್ತವಾಗು ರೀತಿಯಲ್ಲಿ 'ಗಣಕ ಮತ್ತು ಅಂತರ್ಜಾಲ' ವಿಷಯವಾಗಿ ಮೂಲಭೂತ ಅಂಶಗಳನ್ನು ಚರ್ಚಿಸುವ ಉದ್ದೇಶದೊಂದಿಗೆ 'ಜಾಲ ಲೀಲ' ಎಂಬ ಅಂಕಣವನ್ನು ನಿಯತವಾಗಿ ಬರೆಯಲು ಅನುಮತಿ ನೀಡುವಂತೆ ನಾನು ಕೋರಿದಾಗ, ಒಮ್ಮತದಿಂದ ಒಪ್ಪಿಕೊಂಡ ಕರ್ನಾಟಕ ಪಶುವೈದ್ಯ ಸಂಘದ ಅಧ್ಯಕ್ಷರು ಹಾಗೂ ಪಶುವೈದ್ಯ ಧ್ವನಿ ಪತ್ರಿಕೆಯ ಪ್ರಧಾನ ಸಂಪಾದಕರಿಗೆ ನಾನು ಚಿರಋಣಿ.

ಗಣಕ ಮತ್ತು ಅಂತರ್ಜಾಲಗಳ ವಿಷಯವಾಗಿ ನನ್ನ ಜ್ಞಾನವು ಅತ್ಯಂತ ಸೀಮಿತವಾದುದು; ಆದರೂ, ನನಗೆ ತಿಳಿದಿರುವುದನ್ನು ನನ್ನ ಪಶುವೈದ್ಯ ವೃತ್ತಿಪರರೊಂದಿಗೆ ಹಂಚಿಕೊಳ್ಳುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಹೊರಟಿದ್ದೇನೆ. ಈ ನಿಟ್ಟಿನಲ್ಲಿ ಮೂಡಿಬಂದಿರುವ ಪ್ರಥಮ ಲೇಖನ 'Web Browser : ಅಪಾಯದ ಹೊಸ್ತಿಲು?' ಮುದ್ರಣ ಕಂಡಿದ್ದು, ಅದನ್ನು ನಿಮ್ಮೊಡನೆ ಹಂಚಿಕೊಂಡಿದ್ದೇನೆ. ನಿಮ್ಮ ಸಲಹೆ, ವ್ಯಾಖ್ಯಾನ, ಅನಿಸಿಕೆ ಹಾಗೂ ವಿಮರ್ಶೆಗಳಿಗೆ ನಾನು ಮುಕ್ತ.
ಲೇಖನ - 1

1995 ರ ಸುಮಾರಿನಲ್ಲಿ ಪ್ರಥಮವಾಗಿ ನಾನು ನನ್ನ personal computer ಗೆ dial-up ಸೇವೆಯ ಮೂಲಕ ಅಂತರ್ಜಾಲದ ಸಂಪರ್ಕ ಕಲ್ಪಿಸಿಕೊಂಡಾಗ ಎದೆಬಡಿತವು ನಿಮಿಷಕ್ಕೆ ನೂರು ದಾಟಿತ್ತು! ಅಂದಿನ ದಿನಗಳಲ್ಲಿ ಅಂತರ್ಜಾಲದೊಂದಿಗಿನ ಸಂಪರ್ಕ ಅತೀ ವಿರಳವಾದ್ದರಿಂದ, ಉದ್ವೇಗ-ಹೆದರಿಕೆ ಒಮ್ಮೆಲೇ ನನ್ನನ್ನು ಆವರಿಸಿಕೊಂಡಿದ್ದವು. ಇಂದು ಅನೇಕ ವಿನೂತನ ತಂತ್ರಜ್ಞಾನಗಳ ಆವಿಷ್ಕಾರವಾಗಿದ್ದು, ಅಂತರ್ಜಾಲದ ಒಡನಾಟವಿಲ್ಲದ ಗಣಕಯಂತ್ರವು ನಿಷ್ಪ್ರಯೋಜಕವೆಂಬ ಭಾವನೆ ಜನಸಾಮಾನ್ಯರಲ್ಲಲ್ಲದಿದ್ದರೂ ವೃತ್ತಿಪರರಲ್ಲಿ ಈಗಾಗಲೇ ಮೂಡಿದೆ.

ಇಂದಿಗೆ ಅಂತರ್ಜಾಲವು ಬೃಹದಾಕಾರವಾಗಿ ಬೆಳೆದು ನಿಂತಿದೆ. ಅಂತರ್ಜಾಲದ ಬೆಳವಣಿಗೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ ಹಲವಾರು ತಂತ್ರಜ್ಞಾನ-ತಂತ್ರಾಂಶಗಳಲ್ಲಿ web browsers ಗಳದ್ದೇ ಸಿಂಹಪಾಲು. Browser ಹೊರತುಪಡಿಸಿ ಬೇರೆ ಇನ್ನಾವ ಸಾಧನದ ಮೂಲಕವೂ ನಮ್ಮ ಅಂತರ್ಜಾಲದ ಬಳಕೆ ಕಷ್ಟಸಾಧ್ಯವೆನ್ನುವುದನ್ನು ಒಪ್ಪಿಕೊಳ್ಳಲೇಬೇಕು. ಪ್ರಪಂಚದ ಬೇರೆ ಯಾವುದೋ ಮೂಲೆಯಲ್ಲಿನ ಗಣಕಯಂತ್ರದಲ್ಲಿರುವ ಉಪಯುಕ್ತ ಮಾಹಿತಿಯನ್ನು ನಾವು ನಮ್ಮ ಯಂತ್ರದ ಪರದೆಯ ಮೇಲೆ ಕುಳಿತಲ್ಲಿಯೇ ಪಡೆದುಕೊಳ್ಳಲು ಅನುವುಮಾಡಿಕೊಡಲು ಹುಟ್ಟಿಕೊಂಡ ಈ browser ಎಂಬ ಸಾಧನವು ಇಂದು ಗಣಕಯಂತ್ರದಲ್ಲಿನ ನಮ್ಮ ಬಹುತೇಕ ಎಲ್ಲಾ ದೈನಂದಿನ ಕಾರ್ಯಗಳನ್ನು ಕ್ಷಣಮಾತ್ರದಲ್ಲಿಯೇ ಮಾಡಿಮುಗಿಸಿ, ಪ್ರತಿಯೊಬ್ಬರ ಬೇಡಿಕೆಗಳಿಗನುಸಾರವಾಗಿ ತನ್ನ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳುವ ಸಾಮರ್ಥ್ಯವನ್ನು ಪಡೆದುಕೊಂಡಿದೆ.

Browser ಗಳು ನಮಗೆ ಎಷ್ಟು ಉಪಕಾರಿಯಾಗಿವೆಯೋ, ಅಷ್ಟೇ ಅಪಾಯಕಾರಿಯಾಗಿ ಪರಿಣಮಿಸಬಹುದಾದ ಸಾಧ್ಯತೆಗಳಿರುವುದೂ ನಿಜವಷ್ಟೆ! ತಪ್ಪೆಸಗುವುದು ಹೇಗೆ ಮಾನವ ಸಹಜ ಗುಣವೋ ಹಾಗೆಯೇ ಮಾನವ ನಿರ್ಮಿತ browser ಗಳು ದೋಷಗಳನ್ನು ಹೊಂದಿರುವುದೂ ಸಹ ಅಷ್ಟೇ ಸಹಜ. ಇಂತಹ ಸೂಕ್ಷ್ಮ ತಾಂತ್ರಿಕ ದೋಷಗಳು ನಾವು ಊಹಿಸಿಕೊಳ್ಳಲಾಗದಂತಹ ತೀವ್ರತರ ಅಪಾಯಗಳಿಗೆ ನಮ್ಮನ್ನು ನಮ್ಮ ಅರಿವಿಗೆ ಬಾರದಂತೆಯೇ ಸಿಲುಕಿಸಿದರೆ ಆಶ್ಚರ್ಯವೇನಿಲ್ಲ! ಇದ್ದಕ್ಕಿದ್ದ ಹಾಗೆಯೇ Net Banking ಸೌಲಭ್ಯವಿರುವ ನಮ್ಮ ಉಳಿತಾಯ ಖಾತೆಯಲ್ಲಿನ ಹಣವು ಇಲ್ಲವಾಗುವುದು, Credit Card ತಂತಾನೇ ಅಂತರ್ಜಾಲ ತಾಣವೊಂದರಲ್ಲಿ ವ್ಯವಹರಿಸಿಕೊಳ್ಳುವುದು, ಯಾವುದೋ ಜಾಲತಾಣದ ಖಾತೆಗೆ ಪ್ರವೇಶಿಸಲು ಬಳಸುವ password ಬದಲಾಗಿಹೋಗುವುದು, ನಮ್ಮ ಗಣಕಯಂತ್ರದಲ್ಲಿ ಶೇಖರಿಸಿದ್ದ ಕಡತದಲ್ಲಿನ ಗುಪ್ತ ಮಾಹಿತಿಯ ಸೋರಿಕೆಯಾಗುವುದು, ನಿನ್ನೆಯವರೆಗೂ ಚಂದವಾಗಿ ಕಾರ್ಯನಿರ್ವಹಿಸುತ್ತಿದ್ದ computer ಇಂದು ದಿಢೀರ್ ಸ್ತಬ್ಧವಾಗುವುದು ಹಾಗೂ ಇನ್ನೂ ಇಂತಹ ಅನೇಕ ಚಮತ್ಕಾರಗಳು ನಡೆದುಹೋಗಲು browser ಗಳು ಕಾರಣವಾಗುವ ಎಲ್ಲಾ ಸಾಧ್ಯತೆಗಳೂ ಇವೆ ಎಂಬುದು ವಾಸ್ತವ.

SQL Injection, Phishing, URL Redirection, Session Hijacking, Cross-Site Request Forgery, Malware/Spyware Attack, DNS Hijacking ಮುಂತಾದ ಸುರಕ್ಷಾ-ಬೇಧ ಅನೈತಿಕ ಚಟುವಟಿಕೆಗಳು ನಾವು ಪ್ರತಿನಿತ್ಯ ಬಳಸುವ browser ಗಳ ಮೂಲಕವೂ ನಡೆಯುತ್ತವೆ ಎನ್ನುವುದರ ಅರಿವು ನಮಗಿರಬೇಕಾಗುತ್ತದೆ. ಈ ರೀತಿಯ ಬಹುತೇಕ ಅನಾಹುತಗಳು browser ಗಳಲ್ಲಿ ಇರಬಹುದಾದ ಸೂಕ್ಷ್ಮ ಅಭಿವೃದ್ಧಿ ದೋಷಗಳಿಂದ ಮಾತ್ರವಲ್ಲದೇ, ಬಳಕೆದಾರರಾದ ನಮ್ಮ ನಿರ್ಲಕ್ಷ್ಯ ಅಥವಾ ಉದಾಸೀನತೆಯಿಂದಲೂ ಸಹ ಸಂಭವಿಸುತ್ತವೆಂಬುದನ್ನು ಅಲ್ಲಗಳೆಯುವಂತಿಲ್ಲ.

ಅಂತರ್ಜಾಲವೆಂಬ ಮಹಾಸಾಗರದ ಹೆಬ್ಬಾಗಿಲಿಗೆ ಹೊಸ್ತಿಲಿನಂತಿರುವ Internet Explorer, Mozilla Firefox, Opera, Google Chrome ಮುಂತಾದ Web Browser ಗಳ ಆಯ್ಕೆ, ಬಳಕೆ ಮತ್ತು ನಿರ್ವಹಣೆಯಲ್ಲಿ ನಾವು ಎಡವಿದರೆ ಅಪಾಯ ತಪ್ಪಿದ್ದಲ್ಲ. ಹಾಗಾದರೆ ಉತ್ತಮ ಹಾಗೂ ಸುರಕ್ಷಿತ browser ನ ಆಯ್ಕೆ ಹೇಗೆ? ಸುರಕ್ಷತೆಯ ದೃಷ್ಟಿಯಿಂದ browser ನ ಬಳಕೆಗೆ ಎಲ್ಲೆ ಯಾವುದು? Browser ಗಳ ಬಳಕೆಯಲ್ಲಿ ನಾವು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳೇನು? Browser ಗಳ ಮೂಲಕ ನಡೆದುಹೋಗಬಹುದಾದ ಅಚಾತುರ್ಯಗಳನ್ನು ತಡೆಗಟ್ಟುವ ಮಾರ್ಗೋಪಾಯಗಳೇನು? ಇಂಥಹ ಹಲವಾರು ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳೋಣ, ಮುಂಬರುವ ಸಂಚಿಕೆಗಳಲ್ಲಿ. . .
(ಈ ಲೇಖನವನ್ನು ನುಡಿ ತಂತ್ರಾಂಶದ ASCII ಸ್ವರೂಪದಿಂದ UNICODE ಗೆ ಪರಿವರ್ತಿಸಲು ಹಳ್ಳಿಮನೆ ಅರವಿಂದ ಅವರ ASCII2UNICODE ತಂತ್ರಾಂಶ ಬಳಸಲಾಗಿದ್ದು, ಇಂಥಹ ಒಂದು ಉಪಯುಕ್ತ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದಕ್ಕಾಗಿ ಆತ್ಮೀಯ ಗೆಳೆಯ ಅರವಿಂದ ಅವರಿಗೆ ನನ್ನ ತುಂಬುಹೃದಯದ ಅಭಿನಂದನೆಗಳು)

ಮುಂದಿನ ಲೇಖನ ಇಲ್ಲಿದೆ: Web Browser : ಜಾಣ್ಮೆಯ ಆಯ್ಕೆ

5 comments:

  1. ಶುಭವಾಗಲಿ..

    ReplyDelete
  2. ಧನ್ಯವಾದ, ನಟರಾಜು :o)

    ReplyDelete
  3. Educative Blog :D very good Prashant
    volle research madi bardidiri good one :D

    ReplyDelete
  4. ವೆಬ್ ಬ್ರೌಸರ್ ಗಳ ಉತ್ತಮವಾಗಿ ಬಗ್ಗೆ ಬರೆದಿದ್ದೀರಿ. ಮುಂದಿನ ಭಾಗಗಳಿಗೆ ಕಾಯುತ್ತಿದ್ದೇನೆ.

    ReplyDelete
  5. Ramya, thanks. It actually is targetted to Doctors, so techie people like you might feel a little boaring to read through :o)

    ರಾಜು, ಈ ಅಂಕಣ ಜನವರಿ-ಏಪ್ರಿಲ್ 2012 ರ ಸಂಚಿಕೆಯಿಂದ ಪ್ರಾರಂಭಗೊಂಡಿದೆ. ಮುಂದಿನ ಸಂಚಿಕೆ ಮೇ-ಆಗಸ್ಟ್ 2012; ಬಹುಶಃ ಜೂನ್ ಅಥವಾ ಜುಲೈ ತಿಂಗಳಲ್ಲಿ ಹೊರಬರುವ ಸಾಧ್ಯತೆಯಿದೆ. ಮುಂದಿನ ಸಂಚಿಕೆ ಪ್ರಕಟಗೊಂಡ ನಂತರ ಇಲ್ಲಿಯೂ ಸಹ ಓದಬಹುದು. ನಿಮ್ಮ ಉತ್ಸುಕತೆಯೇ ನನಗೆ ಪ್ರೇರಣೆ. ಧನ್ಯವಾದ :o)

    ReplyDelete

ಖಂಡಿತಾ ನಿಮ್ಮ ಅನಿಸಿಕೆಗಳನ್ನು ತಿಳಿಸಿ. ಧನ್ಯವಾದಗಳು!
Please post your comments. Thank you!