Saturday, November 20, 2010

ಏಕೀ ಮುನಿಸು?

When Nature Laughs, Humans Cry.. (© The Hindu)
ಮುಳುಗಿಹೋದ ಮನೆಗಳು..
ಕಾಳಿಲ್ಲದ ಕಣಜಗಳು..
ಮಸುಕಾದ ಮನಸುಗಳು..
ಕೆಲಸವಿಲ್ಲದ ಕೈಗಳು..
ನಗುವಿಲ್ಲದ ಮೊಗಗಳು..
ಆಸರೆಯಿಲ್ಲದ ಆಕಳುಗಳು..
ನಾಶವಾದ ಬೆಳೆಗಳು..
ಕೊಚ್ಚಿಹೋದ ಕನಸುಗಳು..

ಇವಿಷ್ಟೇ ಇಂದು ನಮ್ಮ ರೈತರ ಬದುಕಲ್ಲಿ ಉಳಿದಿರುವುದು-ಕಾಣಸಿಗುವುದು. ಜಗತ್ತಿಗೇ ಅನ್ನವನ್ನು ನೀಡುವ ಕೈಗಳು ಇಂದು ಆಸರೆಗಾಗಿ ಕೈಚಾಚಿ ಕುಳಿತಿರುವ ದೃಶ್ಯವು ಆಘಾತವನ್ನುಂಟುಮಾಡಿದೆ. ಅತೀವೃಷ್ಟಿಯಿಂದಾಗಿ ಎದೆಯೆತ್ತರಕ್ಕೆ ಬೆಳೆದು ನಿಂತ ಚಿನ್ನದಂಥ ಬೆಳೆಗಳು ನೆಲಕ್ಕುರುಳಿ, ಮೊಳಕೆಯೊಡೆದು ಹಾಳಾಗಿವೆ. ಈಗಾಗಲೇ ಬೆಟ್ಟದಷ್ಟಿದ್ದ ಸಾಲದ ಹೊರೆಗೆ ಮತ್ತಷ್ಟು ಹೇರಿಕೊಂಡಿದೆ. ದುಖದ ಅಳು ಮುಂದುವರೆದರೂ ಸಹ ರೈತರ ಕಣ್ಣೀರು ಬತ್ತಿಹೋಗಿದೆ.

ಇತರರ ಸುಖಕ್ಕಾಗಿ ತನ್ನ ತ್ಯಾಗದಿಂದಲೇ ಜೀವನದ ಸಾರ್ಥಕತೆಯನ್ನು ಕಂಡುಕೊಂಡು ಬದುಕುತ್ತಿರುವ ನಮ್ಮ ರೈತರನ್ನು ಘನ ಸರ್ಕಾರಗಳು ಹಿಂದಿನಿಂದಲೂ ಕಡೆಗಾಣುತ್ತಾ ಬಂದಿವೆ. ಆದರೆ, ಅದೇಕೋ ಈಗ ಪ್ರಕೃತಿಯೂ ಸಹ ರೈತನ ಮೇಲೆ ಕೆಂಗಣ್ಣು ಬೀರಿದೆ. ಮುಂಗಾರಿನಿಂದಲೂ ಸಕಾಲದಲ್ಲಿ ಮಳೆಯಾಗಿ, ಸೊಂಪಾಗಿ ಕಂಗೊಳಿಸುತ್ತಿದ್ದ ಬೆಳೆಯು ರೈತರ ಜೀವನದಲ್ಲಿ ಹೊಸ ಹುರುಪನ್ನು ತಂದುಬಿಟ್ಟಿತ್ತು. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೆಂಬಂತೆ, ಅಕಾಲಿಕ ಮಳೆಯಿಂದಾಗಿ ಈಗ ಬೆಳೆಗಳು ನಾಶವಾಗಿ, ಫಸಲು ನೀರಿನ ಪಾಲಾಗಿಹೋಗಿದೆ.

ಹೊಲಸಿನ ರಾಜಕೀಯದಲ್ಲಿ ಮುಳುಗಿ ತೇಲುತ್ತಿರುವ ನಾಯಕರುಗಳಿಗೆ ರೈತರ ಕಣ್ಣಿರಿನ ಅರಿವೆಯೂ ಇಲ್ಲ; ಕೊಚ್ಚಿಹೋದ ರೈತರ ಬದುಕಿನ ಬಗೆಗೆ ಕಾಳಜಿಯೂ ಇಲ್ಲ. ಕೋಟಿಗಟ್ಟಲೆ ಹಣ ಲೂಟಿ ಮಾಡಿ, ಸಿಕ್ಕ ಸಿಕ್ಕ ಭೂಪ್ರದೇಶಗಳನ್ನು ಅಕ್ರಮವಾಗಿ ಕಸಿದುಕೊಂಡು ರಾಜಾರೋಷವಾಗಿ ತಿರುಗುತ್ತಿರುವ ರಾಜಕಾರಣಿಗಳ ಮಧ್ಯೆ ತಮ್ಮದೇ  ಅಂಗೈ ಅಗಲದ ಬರಡು ಭೂಮಿಯಲ್ಲಿ ಸಾಲ ತಂದು ಬೆಳೆದ ಧಾನ್ಯವನ್ನು ಕಳೆದುಕೊಂಡು ತುತ್ತು ಅನ್ನಕ್ಕಾಗಿ ರೈತರು ಪರದಾಡುತ್ತಾ ಮೂಲೆಗುಂಪಾಗಿರುವುದು ದುರಂತವೇ ಸರಿ. ಪ್ರಕೃತಿಯೂ ಸಹ ನಂಬಿಕೆದ್ರೋಹವೆಸಗಿ ರಾಜಕಾರಣಿಗಳ ಸಾಲಿನಲ್ಲಿ ನಿಂತಿರುವಾಗ ರೈತರಿಗೆ ಆಸರೆ ನೀಡುವವರು ಯಾರು? ಅವರ ಮೊರೆ ಆಲಿಸುವವರು ಯಾರು? ರೈತರಿಗೆ ಸಹಾಯ ಮಾಡುವವರಾದರೂ ಯಾರು?

ಹೇ ವರುಣದೇವ, ನಿನಗೆ ಪೌರುಷವೆನಾದರೂ ಇದ್ದರೆ; ಮುಳುಗಿಸು ಹೊಲಸು ರಾಜಕಾರಣಿಗಳನ್ನು, ಕೊಚ್ಚಿಕೊಂಡು ಹೋಗುವಂತೆ ಮಾಡು ಬ್ರಷ್ಟಾಚಾರವನ್ನು, ನೆಲಸಮಗೊಳಿಸು ರೈತರ ಸಾಲದ ಹೊರೆಯನ್ನು, ನಿರ್ಮೂಲನೆ ಮಾಡು ಸಮಾಜಘಾತುಕ ಶಕ್ತಿಗಳನ್ನು, ಬುಡಮೇಲು ಮಾಡು ಭಯಾನಕ ರೋಗಗಳ ಅಸ್ತಿತ್ವವನ್ನು. ಇವ್ಯಾವುವೂ ಸಾಧ್ಯವಾಗದಿದ್ದರೆ, ದಯಮಾಡಿ-ಕರುಣೆತೋರಿ ಕೈಕಟ್ಟಿ ಕುಳಿತುಕೋ. ಅನ್ಯತಾ ಬಡ ರೈತನ ಮೇಲೆ ನಿನಗೆ ಏಕೀ ಮುನಿಸು?

4 comments:

  1. @Prashanth
    Though I couldn't read any of that post, I guess they are right when they say "pictures speak a thousand words"...

    ReplyDelete
  2. Deepa, you are right; A picture speak thousand words!

    And also, am glad you got the right glimpse of the theme of this post :o)

    ReplyDelete
  3. ನಮಸ್ಕಾರ ಪ್ರಶಾಂತ್. ಲೇಖನ ಚೆನ್ನಾಗಿದೆ.
    "ಪಾಪಿ ಚಿರಾಯು" ಎಂದಂತೆ ಈ ಕಲಿ ಕಾಲದಲ್ಲಿ ಭ್ರಷ್ಟರೇ ವಿಜ್ರಂಬಿಸುತ್ತಿರುವುದು. ಕಷ್ಟಪಟ್ಟು ೨ ಹೊತ್ತು ಹೊಟ್ಟೆ ತುಂಬಿಸಿಕೊಳ್ಳುವ ಜನರಿಗೆ ಮೇಲಿಂದ ಮೇಲೆ ವಿಪತ್ತು!!!!

    ReplyDelete
  4. ಅಮಾಯಕರ ಬದುಕು ಎಂದಿಗೂ ದುಸ್ತರ ಎನ್ನುವುದು ಇದಕ್ಕೇ ಇರಬೇಕು ಅನಿಸುತ್ತದೆ.

    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಸುಧೀರ್ ಸರ್ :o)

    ReplyDelete

ಖಂಡಿತಾ ನಿಮ್ಮ ಅನಿಸಿಕೆಗಳನ್ನು ತಿಳಿಸಿ. ಧನ್ಯವಾದಗಳು!
Please post your comments. Thank you!