Social Responsibility? |
ಪರಿಸರವನ್ನು (ಶಕ್ತಿಮೀರಿ) ಕಲುಷಿತಗೊಳಿಸುತ್ತಿದ್ದ ಬೆಂಕಿಯಿಂದ ಸುತ್ತ-ಮುತ್ತಲಿದ್ದ ಯಾರೊಬ್ಬರೂ ವಿಚಲಿತರಾದಂತೆ ಕಾಣಲಿಲ್ಲ; ಹೀಗಿದ್ದಾಗ, ಬೆಂಕಿಯನ್ನು ನಂದಿಸುವ ಪ್ರಯತ್ನ ದೂರದ ಮಾತೇ ಸರಿ! ಕುತೂಹಲ ತಡೆಯಲಾರದ ನಾನು ವಾಹನವನ್ನು ನಿಲ್ಲಿಸುವಂತೆ ನಮ್ಮ ಚಾಲಕರಿಗೆ ಹೇಳಿ, ಕೆಳಗಿಳಿದು ಹೋಗಿ ತುದಿಗಾಲಿನ ಮೇಲೆ ನಿಂತು ಬೆಂಕಿಗೆ ಕಾರಣವೇನು ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡಿದೆ. ಕೆಲವು ಹಳೆಯ ವಾಹನ ಚಕ್ರ (ಟೈರ್)ಗಳನ್ನು ಗುಡ್ಡೆ ಹಾಕಿ ಯಾರೋ ಬೆಂಕಿ ಹೊತ್ತಿಸಿದ್ದರು. ಇದು ಯಾರ ದುಷ್ಕೃತ್ಯವಿರಬಹುದೆಂದು ಸುತ್ತ ಕಣ್ಣಾಡಿಸಲು, ರಸ್ತೆಯ ಇನ್ನೊಂದು ಬದಿಯಲ್ಲಿ ದ್ವಿಚಕ್ರ ವಾಹನಗಳ ದುರಸ್ತಿ ಕಾರ್ಯಾಗಾರವೊಂದು ಕಾಣಿಸಿತು.
ಅದೊಂದು ಪುಟ್ಟ ಅಂಗಡಿ; ದ್ವಿಚಕ್ರ ವಾಹನಗಳ ದುರಸ್ತಿಗೆ ಬೇಕಾಗುವ ಯಂತ್ರಗಳು ಚಿಕ್ಕ ಅಂಗಡಿಯ ಅಳತೆಯನ್ನು ಮೀರಿ ತಮ್ಮ ಅಸ್ತಿತ್ವವನ್ನು ಒಳಗಡೆ ಸ್ಥಾಪಿಸಿಕೊಂದಿದ್ದವು. ಅಲ್ಲೊಬ್ಬ ಐವತ್ತರ ಹರೆಯದ ಮಾಲಿಕ; ಅವನೊಡನೆ ಕೆಲಸದಲ್ಲಿ ತಲ್ಲೀನರಾಗಿದ್ದ ಇಬ್ಬರು ಹುಡುಗರು - ಶಾಲೆಯಲ್ಲಿ ಕಲಿಯುವ ವರವನ್ನು ದೇವರಲ್ಲಿ ಆ ಇಬ್ಬರೂ ಪಡೆದುಕೊಂಡು ಬಂದಂತೆ ಕಾಣಲಿಲ್ಲ. ರಸ್ತೆಯ ಪಾದಚಾರಿ ಮಾರ್ಗವೇ ಅವರುಗಳ ಕಾರ್ಯಾಗಾರ. ವಾಹನವೊಂದರ ಚಕ್ರ ಕಳಚುವಲ್ಲಿ ನಿರತನಾಗಿದ್ದ ಹುಡುಗನೊಬ್ಬನಿಗೆ ಮಾಲಿಕ ಕೂಗಿ ಕರೆದು ಅದೇನನ್ನೋ ಹೇಳಿದ. ಎದ್ದು ಹೋದ ಹುಡುಗ ಮಾಲಿಕನಿಂದ ಹೊಗೆ-ಕೊಳವೆ (ಸೈಲೆನ್ಸರ್) ಒಂದನ್ನು ತೆಗೆದುಕೊಂಡು, ರಸ್ತೆ ದಾಟಿ ನೇರವಾಗಿ ಬಂದವನು ಅಲ್ಲೇ ನಿಂತಿದ್ದ ನನ್ನನ್ನು ಹಾದು ಕಾಂಪೌಂಡ್ ಗೋಡೆ ಹಾರಿ ಹೋದ. ತಂದಿದ್ದ ಹೊಗೆ-ಕೆಳವೆಯನ್ನು ಉರಿಯುತ್ತಿದ್ದ ಬೆಂಕಿಗೆ ಆಹುತಿ ನೀಡಿ, ಈ ಮೊದಲೇ ಅಲ್ಲಿ ಇರಿಸಿದ್ದ ವಸ್ತುಗಳ ಸ್ಥಿತಿಯನ್ನು ಪರಿಶೀಲಿಸಿ ಹಿಂತಿರುಗಿ ಹೋಗಿ ತನ್ನ ಕಾಯಕದಲ್ಲಿ ಲೀನನಾದ.
ಇದನ್ನೆಲ್ಲಾ ನೋಡಿಕೊಂಡು ನಿಂತಿದ್ದ ನನ್ನ ಭಾವನೆಯು ಆ ಹೊತ್ತಿಗಾಗಲೇ ಕೋಪದಿಂದ ಕರುಣೆಯಾಗಿ ಮಾರ್ಪಟ್ಟಿತ್ತು. ಮಾಲಿಕ ಹಾಗೂ ಇಬ್ಬರು ಹುಡುಗರ ದಿನನಿತ್ಯದ ಬದಿಕಿನ ಕರಾಳ ಚಿತ್ರಣವನ್ನು ನೆನೆದ ನಾನು, ಅವರುಗಳಿಗೆ ಪರಿಸರ ಮಾಲಿನ್ಯ ಹಾಗೂ ಸಂರಕ್ಷಣೆಯ ಕುರಿತು ಹೇಳಬೇಕೆಂದಿದ್ದ ಮಾತುಗಳನ್ನು ನನ್ನೊಳಗೆಯೇ ಸಮಾಧಿ ಮಾಡಿ ಮೂಕನಾಗಿ ನಿಟ್ಟುಸಿರಿಟ್ಟೆ. ಪರಿಸರ ಸಂರಕ್ಷಣೆಯ ಸಾಮಾಜಿಕ ಹೊಣೆಗಾರಿಕೆಯನ್ನು ಅರಿತೂ ಮರೆತಂತಿರುವ ಬೆಂಗಳೂರಿನ ಅಸಂಖ್ಯಾತ ನಗರವಾಸಿಗಳಲ್ಲಿ ನಾನೂ ಒಬ್ಬನಾಗಿ ಹೆಮ್ಮೆಯಿಂದ (?!) ಅಲ್ಲಿಂದ ವಾಹನವೇರಿ ಹೊರಟೆ.
ತನ್ನನ್ನು ತಡೆಯುವ ಧೈರ್ಯ-ಶಕ್ತಿ ಯಾರಿಗೂ ಇಲ್ಲವೆಂಬುದನ್ನು ಎತ್ತಿ ತೋರಿಸುವಂತೆ, ದಟ್ಟ ಹೊಗೆಯನ್ನು ಹೊರಸೂಸುತ್ತಾ ಪ್ರಜ್ವಲವಾಗಿ ಹೊತ್ತಿ ಬೆಂಕಿ ಉರಿಯುತ್ತಿತ್ತು. ತನ್ನನ್ನು ಸಂರಕ್ಷಿಸಿ ಕಾಪಾಡುವ ಆಸಕ್ತಿ-ಕಾಳಜಿ ಯಾರಿಗೂ ಇಲ್ಲವೆಂಬುದನ್ನು ಅರಿತು, ಉಸಿರುಕಟ್ಟಿ ಶೋಕದಿಂದ ಮನುಜರನ್ನು ಹೊತ್ತು ಭೂಮಿ ಸಾಗುತಲಿತ್ತು. ವೇಗವಾಗಿ ಚಲಿಸುತ್ತಿದ್ದ ವಾಹನದೊಳಗೆ ಕುಳಿತಿದ್ದ ನನ್ನೊಳಗಿನ ವಿವೇಕವು ಬದುಕಿಯೂ ಸತ್ತಂತಿತ್ತು..!
No comments:
Post a Comment
ಖಂಡಿತಾ ನಿಮ್ಮ ಅನಿಸಿಕೆಗಳನ್ನು ತಿಳಿಸಿ. ಧನ್ಯವಾದಗಳು!
Please post your comments. Thank you!