'ನೈಸ್ ಕಾರಿಡಾರ್ ಯೋಜನೆ'ಯು ಬೇರೆ ಬೇರೆ ಕಾರಣಗಳಿಂದ ಸುದ್ದಿಯಲ್ಲಿದೆ. ನಿನ್ನೆ, ಅಂದರೆ 20 -05 -2010 ರಂದು ಇದೇ ನೈಸ್ ರಸ್ತೆಯಲ್ಲಿ ಪ್ರಯಾಣ ಮಾಡಬೇಕಾದ ಪ್ರಮೇಯ ಒದಗಿ ಬಂತು. ನೈಸ್ ರಸ್ತೆಯಲ್ಲಿ ನಾನು ಸಂಚರಿಸುತ್ತಿರುವುದು ಇದು ಮೊದಲನೆಯ ಬಾರಿಯೇನಲ್ಲ, ಸ್ವಂತ ವಾಹನದಲ್ಲಿ ಹಲವಾರು ಬಾರಿ ಓಡಾಡಿದ್ದೇನೆ. ನಿನ್ನೆ, ಕಛೇರಿ ಕೆಲಸದ ಮೇಲೆ ಮೈಸೂರಿನ ಕಡೆಗೆ ಪ್ರಯಾಣಿಸುತ್ತಿದ್ದರಿಂದ ಸರ್ಕಾರಿ ವಾಹನದಲ್ಲೇ ಹೊರಟಿದ್ದೆ. ನನಗೆ ತಿಳಿದ ಮಟ್ಟಿಗೆ ದೇಶದ ಯಾವುದೇ ಹೆದ್ದಾರಿ/ಕಾರಿಡಾರ್ ರಸ್ತೆಗಳಲ್ಲಿ ಸಂಚರಿಸುವಾಗ ಸರ್ಕಾರಿ ವಾಹನಗಳಿಗೆ TOLL ಶುಲ್ಕದಿಂದ ವಿನಾಯಿತಿ ನೀಡಲಾಗುತ್ತದೆ. ಆದರೆ, ನಿನ್ನೆ ನನಗೆ ಆದ ಅನುಭವವೇ ಬೇರೆ:
ಸರಿ ಸುಮಾರು ಮಧ್ಯಾಹ್ನ 1 ಗಂಟೆ, ಕಛೇರಿಯ ವಾಹನದಲ್ಲಿ ನಾವು ನೈಸ್ ರಸ್ತೆಯನ್ನು ನೆಲಮಂಗಲ ಕಡೆಯಿಂದ ಪ್ರವೆಶಿಸಿದ್ದೆವು. ಕಛೇರಿ ಕೆಲಸವಾದ್ದರಿಂದ, ಕೆಲವು ದಾಖಲಾತಿಗಳನ್ನು ತಿರುವಿಹಾಕುತ್ತಾ ಕುಳಿತಿದ್ದೆ. TOLL BOOTH ನಲ್ಲಿದ್ದ ವ್ಯಕ್ತಿ ನಮ್ಮ ಚಾಲಕರಿಗೆ ಹಣ ಪಾವತಿಸಿ ಎನ್ನುತ್ತಿದ್ದ. ಇದು ನನಗೆ ಮಾತ್ರವಲ್ಲ, ನಮ್ಮ ಚಾಲಕರಿಗೂ ಆಶ್ಚರ್ಯವನ್ನುಂಟುಮಾಡಿತ್ತು.
Driver: "ಇದು govt. ಗಾಡಿನಪ್ಪ, ದುಡ್ಡು ಕೊಡೊಹಾಗಿಲ್ಲ".
TOLL Person: "white boardಗೆ free, ನಿಮ್ದು yellow board, ದುಡ್ಡು ಕಟ್ಬೇಕು".
Driver: "ಹೇ.. ಇಲ್ಲಾಪ್ಪ, ನಾವು ಕೊಡೋಹಾಗಿಲ್ಲ".
ಅಷ್ಟರಲ್ಲಿ ಹಿಂದಿನಿಂದ ವಾಹನವೊಂದು ತನಗೆ ತಡವಾಗುತ್ತಿದೆ ಎಂದು ನಮಗೆ ತಿಳಿಸುವಂತೆ ಜೋರಾಗಿ ಶಬ್ಧ ಮಾಡಿತು.
TOLL Person: (ಸೆಕ್ಯುರಿಟಿಯನ್ನು ಕೂಗಿ ಕರೆದು) "ASO ಕರಿ ಸ್ವಲ್ಪ".
ನಾನು, ಯಾರಿರಬಹುದು ಈ ASO? ಅವರ ಪದನಾಮ (designation) ಏನಿರಬಹುದೆಂದು ಯೋಚಿಸುತ್ತಾ ಸೆಕ್ಯೂರಿಟಿಯತ್ತ ತಿರುಗಿ ನೋಡಿದೆ, ಅತ ಯಾರಿಗೋ ಸನ್ನೆ ಮಾಡಿ ಕರೆಯುತ್ತಿದ್ದ.
TOLL Person: (ಸೆಕ್ಯುರಿಟಿಯ ಸನ್ನೆಯನ್ನು ASO ನೋಡಿಲ್ಲವೇನೋ, ಈತ TOLL BOOTH ನಿಂದ ತಲೆಯನ್ನು ಹೊರಹಾಕಿ ಕೈ ಬೀಸಿ ಜೋರಾಗಿ ಕೂಗಿದ) "ಸಾaaaaaರ್......".
ಆತ ಕೈ ಬೀಸಿ ಸನ್ನೆ ಮಾಡಿದ ಕಡೆಗೆ ನಾನು ನೋಡಿದೆ, ASO ಇರಬೇಕು, ವಾಕಿ-ಟಾಕಿ ಹಿಡಿದು ಯತ್ತಲೋ ಹೋಗುತ್ತಿದ್ದವರು ಈತನ ಕೂಗನ್ನು ಕೇಳಿ ನಮ್ಮತ್ತ ಹೆಜ್ಜೆ ಹಾಕಿದರು. ASO ಬರುವುದಕ್ಕೂ, ಹಿಂದಿನ ಲಾರಿಯ ಚಾಲಕ ಇಳಿದು ಬರುವುದಕ್ಕೂ ಒಂದೇ ಆಗಿ,
Lorry Driver: "ಏನ್ರಿ, ನಿಮ್ ರೋಡಲ್ಲಿ time save ಆಗುತ್ತೆ ಅಂತ ಬಂದ್ರೆ ಇಲ್ಲೂ ಅದೇ ಗೋಳು.., sideಗೆ ಹಾಕ್ಸಿ ಇವ್ನನ್ನ" - ನಮ್ಮ ವಾಹನವನ್ನು ಕುರಿತು ಹೇಳಿದ.
TOLL GATE ನಿಂದ ಸ್ವಲ್ಪ ಮುಂದೆ ಸಾಗಿ, ಎಡಗಡೆಗೆ ವಾಹನ ನಿಲ್ಲಿಸಿದರು John (ನಮ್ಮ ಚಾಲಕರು, ಹೆಸರು ಬದಲಿಸಲಾಗಿದೆ, ಹಾಗೆ ಸುಮ್ಮನೆ...). ASO ನಮ್ಮಲ್ಲಿಗೆ ಬರಲು, John ಇಳಿದು ಹೋಗಿ ಅವರೊಂದಿಗೆ ಹೇಳತೊಡಗಿದರು:
John: "ಸಾರ್, ನಮ್ದು govt. vehicle, ದುಡ್ಡು ಕಟ್ಟೋಹಾಗಿಲ್ಲ".
ASO: "ನೋಡಿ, ನಾವು ಯಾರನ್ನೂ ಬಿಟ್ಟಿಲ್ಲ, railway dept. vehicleಗೂ ನೆನ್ನೆ ಕಟ್ಸಿದಿವಿ".
John: "ಇಲ್ಲ ಸಾರ್, ನಾವು ಎಲ್ಲಿ ಹೋದ್ರು ಕಟ್ಟಲ್ಲ..".
ಇವರ ವಾದ ಬಗೆಹರಿಯುವಂತೆ ಕಾಣಲಿಲ್ಲವಾದ್ದರಿಂದ, ನಾನು ಕೊಡ ಅವರಲ್ಲಿಗೆ ಹೋದೆ.
Me: "ಏನಪ್ಪಾ John?".
John: "ಸಾರ್, ದುಡ್ಡು ಕಟ್ಬೇಕಂತೆ..".
ASO: (ನನ್ನನ್ನುದ್ದೇಶಿಸಿ) "ನೋಡಿ, ನಾವು ಹಾಗೆಲ್ಲ ಸುಮ್ಮನೆ ದುಡ್ಡು ತಗೋಳಲ್ಲ, ನಾನು ex-servicemen, ನಮ್ಮ Defence officer ಒಬ್ರು transfer ಆಗಿ ಸಾಮಾನೆಲ್ಲ Defence ಗಾಡೀಲಿ ಹಾಕೊಂಡು ಬಂದ್ರು, ಅವ್ರು transfer order, ID card ತೋರ್ಸೋವರ್ಗು ಬಿಡ್ಲಿಲ್ಲ".
Me: "ನಾನು ಸಹ officer, office ಕೆಲಸದ್ಮೇಲೆ govt. ಗಾಡಿನಲ್ಲೇ ಹೋಗ್ತಿದ್ದೀನಿ, ನಂದು ID card ನೋಡ್ತಿರ?".
ASO: (ಹುಡುಗನಂತೆ ಕಾಣುತ್ತಿದ್ದ ನಾನು ಒಬ್ಬ ಅಧಿಕಾರಿಯಿರಬಹುದೆಂದು ಆತ ಊಹಿಸಿರಲಿಲ್ಲವೇನೋ, ಮಾತಿನ ಧಾಟಿ ಸ್ವಲ್ಪ ಬದಲಾಗಿ) "ಅಲ್ಲ ಅಲ್ಲ ಸಾರ್, ನಾನೂ ಒಬ್ಬ govt. servant, ಆದ್ರೆ rules ಮೀರಿ ಹೋಗೋಕಾಗುತ್ತ?".
Me: "ಸರಿ, yellow board ಇರೋ govt. vehicle not exempted from TOLL FARE ಅಂತ ಇರೋ ruleನ ಒಂದು ಕಾಪಿ ನನಗೆ ಕೊಡಿ, TOLL FARE ಕಟ್ತೀನಿ".
ASO: "copy ಹೇಗೆ ಕೊಡ್ಲಿ ಸಾರ್?".
Me: "Xerox ಇಲ್ವಾ?".
ASO: "ಇಲ್ಲ ಸಾರ್?".
Me: "At least ಒಂದ್ copy ತೋರ್ಸಿ".
ASO: "copy ಇಲ್ಲಿ ಇಲ್ಲ ಸಾರ್, ಈಗ ನನ್ನ duty ಇದೆ ನಾನು ಬಿಟ್ಬಿಡ್ತೀನಿ, ಆದ್ರೆ ನಿಮ್ಗೆ ಬೇರೆ TOLL ನಲ್ಲಿ ತೊಂದ್ರೆ ಆಗೇ ಆಗುತ್ತೆ. ಒಂದ್ಕೆಲ್ಸ ಮಾಡಿ, ನೀವು ಯಾವ್ಕಡೆ ಹೋಗ್ಬೇಕು?".
Me: "Mysore ಕಡೆಗೆ".
ASO: "ಸರಿ, mysore road exitಗಿಂತ ಸ್ವಲ್ಪ ಮುಂದೆ 4km ಹೋದ್ರೆ ನಮ್ಮ office ಇದೆ, ಅಲ್ಲಿ confirm ಮಾಡ್ಕೊಳ್ಳಿ ಸಾರ್".
Me: "Thank you ..".
ASO: "Ok ಸಾರ್..".
ನಮ್ಮ ವಾಹನವು ನೈಸ್ ರಸ್ತೆಯಲ್ಲಿ ಸಾಗುತ್ತಿತ್ತು:
John: "ಏನ್ ಸಾರ್, ದುಡ್ಡು ಕಟ್ಬೇಕಂತೆ.. govt. vehicle ಅಂತ ಗೊತ್ತಿಲ್ವ?".
Me: "ಅವ್ರ officeಗೆ ಹೋಗಿ ವಿಚಾರ್ಸೋಣ ಬಿಡಿ".
ಮಾತು ನಿಲ್ಲಿಸಿದ John ವಾಹನ ಚಲಿಸುವಲ್ಲಿ ಮಗ್ನರಾದರು. ನಾನು ದಾಖಲಾತಿಗಳನ್ನು ನೋಡುತ್ತಾ ಕುಳಿತೆ.
ವಾಹನವು ಮೈಸೂರು ರಸ್ತೆಗೆ ಸೇರುವ ತಿರುವನ್ನು ತಲುಪಿತ್ತು. ವಾಹನವನ್ನು ಮೈಸೂರಿನ ಕಡೆಗೆ ತಿರುಗಿಸುತ್ತಿದ್ದ Johnರನ್ನು ತಡೆದು:
Me: "ಅವ್ರ officeಗೆ ಹೋಗೋಣ.. straight ಆಗಿ ಹೋಗಿ..". ನನ್ನ ಮುಖವನ್ನು ಆಶ್ಚರ್ಯವೆನ್ನುವ ಭಾವದಿಂದ ನೋಡಿದ John ವಾಹನವನ್ನು ನೈಸ್ ರಸ್ತೆಯಲ್ಲಿ ಮುಂದೆ ನಡೆಸಿದರು. ಕೇವಲ ಎರಡು ನಿಮಿಷಗಳ ಬಳಿಕ ನಾವು ನೈಸ್ ಕಛೇರಿ ತಲುಪಿದ್ದೆವು. ಮುಖ್ಯದ್ವಾರದ ಮುಂದೆ ನಿಂತ ನಮ್ಮ ವಾಹನದ ಕಡೆಗೆ ಸೆಕ್ಯುರಿಟಿ ಓಡಿಬಂದು "आगे चलो.. आगे चलो.." ಎಂದ.
Me: "I want to meet your officer..".
Security: "क्या?..". ಅಷ್ಟರಲ್ಲಿ ಆತನಿಗೆ ಇಂಗ್ಲಿಷ್ ಅರ್ಥವಾಗುವುದಿಲ್ಲವೆಂದು ತಿಳಿದ ನಾನು, ನನ್ನ ಅಲ್ಪ-ಸ್ವಲ್ಪ ಹಿಂದಿ ಭಾಷೆಯಲ್ಲಿ "ನಮಗೆ ಸ್ವಲ್ಪ ತೊಂದರೆಯಾಗಿದೆ, ಕಚೇರಿಯಲ್ಲಿ ಮಾತನಾಡಬೇಕು" ಎಂದು ಹೇಳಿದೆ. ಆತ ಮೊದಲಿಗೆ ಇಲ್ಲವೆಂದನಾದರೂ, ಕೊನೆಗೆ ನನ್ನೋಬ್ಬನನ್ನು ಒಳಗೆ ಕಳುಹಿಸಲು ಒಪ್ಪಿದ. "ಸರ್, U -turn ಮಾಡ್ಕೊಂಡ್ ಬರ್ತೀನಿ" ಎಂದರು John, ಸರಿಯೆಂದು ನಾನು ಒಳಗೆ ಹೊರಟೆ.
ನೈಸ್ ಕಛೇರಿ ಆವರಣದಲ್ಲಿ ಅದೇನೋ ನಡೆಯುತ್ತಿತ್ತು. ವಾಹನಗಳು, ಜನರ ಸಂಖ್ಯೆ ಹೆಚ್ಚಿತ್ತು. ಕಛೇರಿಯ ಬಾಗಿಲ ಮುಂದೆ ಸುಮಾರು 30 -50 ಜನರ ಗುಂಪೊಂದು ಇದ್ದಿತು. ಗುಂಪಿನ ಮಧ್ಯದಲ್ಲಿ ಚಿತ್ರನಟ-ಶಾಸಕ ಶ್ರೀ. ಅಂಬರೀಶ್ ಕಾಣಿಸಿದರು. ಮಂಡ್ಯ ಜಿಲ್ಲೆಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಜಯಿಸಿದ್ದ ಕಾರಣ ಶ್ರೀ. ಅಂಬರೀಶ್ ಹಾಗು NICE CEO ಶ್ರೀ. ಖೇಣಿ (ಕಾಂಗ್ರೆಸ್ ಗೂ, ಅಂಬರೀಶ್ ಗೂ, ಖೇಣಿ ಗೂ ಏನು ಸಂಬಂಧ? ಈ ತರ್ಕ ಪ್ರಸ್ತುತ ವಿಷಯವಸ್ತುವಿನ ಚೌಕಟ್ಟನ್ನು ಮೀರಿದ್ದು..) ಇಬ್ಬರಿಗೂ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು. ನಾನು ಕಛೇರಿಗೆ ಹೋಗಿ ಯಾರನ್ನು ಮಾತನಾಡಿಸಬೇಕು ಎಂದು ನೋಡಿದೆ - ಎಲ್ಲ ಕುರ್ಚಿಗಳೂ ಖಾಲಿ, ಇದೇನಚ್ಚರಿ!! ಪ್ರಾಂಗಣದಲ್ಲಿ ಸುಮಾರು ಐನೂರಕ್ಕೂ ಹೆಚ್ಚು ಮಂದಿ ಇದ್ದರೂ ಸಹ, ಕಛೇರಿಯ ಕುರ್ಚಿಗಳಲ್ಲಿ ಯಾರು ಇಲ್ಲ. ಅಷ್ಟೊಂದು ಜನರಲ್ಲಿ ಸಾರ್ವಜನಿಕರು ಯಾರು, ಸಿಬ್ಬಂದಿ ವರ್ಗದವರು ಯಾರು ಎಂದು ಗುರುತಿಸುವುದು ಸಾಧ್ಯವಾಗದೆ ಅಸಹಾಯಕನಾಗಿ ನಿಂತಿದ್ದಾಗ, ಅಲ್ಲಿಗೆ ಬಂದ ಸೆಕ್ಯುರಿಟಿ ಅನ್ನು ತಡೆದು ನಾನು "ನಿಮ್ಮ officer ಜೊತೆ ಮಾತಾದ್ಬೇಕಲ್ಲ" ಎಂದೆ. ಅದಕ್ಕೆ ಆತ "ಇವತ್ತು ಯಾರು ಸಿಕ್ಕಲ್ಲ ಸಾರ್, ಮಿಟಿಂಗ್ ಇದೆ" ಅಂದುಬಿಟ್ಟ. ಸ್ವಲ್ಪ ಸಮಯ ಅಲ್ಲೇ ಕಾದನಂತರ ಕಛೇರಿಯೊಳಗೆ ಬಂದ ಒಬ್ಬರನ್ನು ವಿಚಾರಿಸಲು, ನಾನು ಶ್ರೀ. ಪಾಟೀಲ್ ಎಂಬುವವರನ್ನು ಭೇಟಿ ಮಾಡಿ ಮಾತನಾಡಬೇಕೆಂದು ತಿಳಿಸಿದರು. ಸರಿ, ಸುಮಾರು 15-20 ನಿಮಿಷಗಳ ನಂತರ ಶ್ರೀ. ಪಾಟೀಲ್ ತಮ್ಮ ಕುರ್ಚಿಯಲ್ಲಿ ಕಾಣಿಸಿಕೊಂಡರು.
Me: "ನಮಸ್ತೆ ಸರ್".
ಅವರು "ಏನು?" ಎಂಬಂತೆ ತಲೆಯಾಡಿಸಿದರು. ನನ್ನ ಸ್ಥೂಲ ಪರಿಚಯ ಮಾಡಿಕೊಂಡ ನಂತರ ನಮ್ಮ TOLL FARE ವಿಚಾರವನ್ನು ತಿಳಿಸಿದೆ.
Patil: "ನಿಮ್ ಗಾಡಿ ನಂಬರ್ ಎನೈತ್ರಿ?".
ಓಹ್! ಅಚ್ಚ ಕನ್ನಡ ಭಾಷೆ! ಬಹುಶಃ ಉತ್ತರ ಕನ್ನಡದವರಿರಬೇಕು. ಅವರ ಮೇಲಿನ ನನ್ನ ಅಭಿಮಾನ ಇಮ್ಮಡಿಸಿತು. ನಾನು ಇನ್ನೂ ವಿನಯದಿಂದ "KA-01 G-XXXX ಸರ್" ಎಂದೆ.
Patil: "G registration ಇದ್ದ್ರ ಏನೂ charges ಇಲ್ಲ್ರಿ".
Me: "ಇಲ್ಲ ಸರ್, ನೆಲಮಂಗಲ TOLL GATE ನಲ್ಲಿ ಸುಮಾರು 15 ನಿಮಿಷ ನಮ್ಮನ್ನು ನಿಲ್ಸಿದ್ದ್ರು".
Patil: "number ಇನ್ನೊಮ್ ಹೇಳ್ರಿ".
Me: "KA-01 G-XXXX ಸರ್".
Patil: "XXXX, ಹೇಳ್ತಿನ್ ಬಿಡ್ರಿ..".
Me: "ಇಲ್ಲ ಸರ್, ನಮ್ಗೆ ಮತ್ತೆ ತೊಂದರೆ..."
ಸರ್ಕಾರಿ ವಾಹನಗಳಿಗೆ ವಿನಾಯಿತಿ ಘೋಷಿಸಿರುವ ಒಂದು ದಾಖಲೆಯನ್ನು ಕೇಳಬೇಕೆನ್ನುವ ನನ್ನನ್ನು ತಡೆದು ಪಾಟೀಲರು "ನಾ ಹೇಳ್ತಿನ್ ಬಿಡ್ರಿ" ಎಂದರು. ಅವರ ಮಾತಿನ ಧಾಟಿ "ಇನ್ನು ನೀವು ಹೋಗಬಹುದು" ಎಂದು ಸೂಚಿಸುವಂತಿತ್ತು. ಒಲ್ಲದ ಮನಸ್ಸಿನಿಂದ ನಾನು "thank you ಸರ್" ಎಂದು ಹೇಳಿ ಕಛೇರಿಯಿಂದ ಹೊರನಡೆದೆ.
ಪ್ರಾಂಗಣದಲ್ಲಿ ಇನ್ನೂ ಅಭಿನಂದನಾ ಸಮಾರಂಭ ನಡೆಯುತ್ತಿತ್ತು, ಗದ್ದಲ ಕೇಳಿಸುತ್ತಿತ್ತು. ನಾನು ನೋಡಿಯೂ ನೋಡದವನಂತೆ ಮುಖ್ಯದ್ವಾರದ ಬಳಿ ಬಂದೆ. ಅದೇ ಸೆಕ್ಯುರಿಟಿ ಇನ್ಯಾರ ವಾಹನವನ್ನೋ ತಡೆದು ಅದೇನೋ ನಿರ್ದೇಶನ ನೀಡುತ್ತಿದ್ದ. ಗಣ್ಯರಿದ್ದರೂ ಸಹ ನನ್ನನ್ನು ಒಳಹೋಗಲು ಬಿಟ್ಟಿದ್ದಕ್ಕೆ ಅವನಿಗೆ ಧನ್ಯವಾದ ಹೇಳಬೇಕೆನ್ನಿಸಿತು. ಕಾದೆ. ಆತ ಎಲ್ಲವನ್ನು ಹೇಳಿ ನನ್ನೆಡೆಗೆ ನೋಡಿದಾಗ - "thank you" ಎಂದೆ. ಆತ ಖುಷಿಯಿಂದ ಬೀಳ್ಕೊಟ್ಟ.
ರಸ್ತೆಯ ಇನ್ನೊಂದು ಬದಿಯಲ್ಲಿ ನಿಲ್ಲಿಸಿದ್ದ ನಮ್ಮ ವಾಹನವನ್ನು ಗಮನಿಸಿದ ನಾನು ರಸ್ತೆಯನ್ನು ದಾಟಲು ಮುಂದಾದೆ. ಜಾಗರೂಕನಾಗಿ ರಸ್ತೆ ದಾಟುತ್ತಿದ್ದ ನನ್ನನ್ನು ಎಚ್ಚರಿಸಲೆಂದು ವಾಹನ ಚಾಲಕರು ಶಬ್ದ ಮಾಡುತ್ತಿದ್ದರು. ನಾನು ಅವರ ಎಚ್ಚರಿಕೆಗೆ ಸ್ಪಂದಿಸುತ್ತಿದ್ದೆನೆಂದು ತೋರಿಸುವ ಸಲುವಾಗಿ ಬಿರುಸಾಗಿ ನಡೆದು ರಸ್ತೆ ದಾಟಿದೆ. ನಾನು ವಾಹನದೊಳಗೆ ಕುಳಿತುಕೊಳ್ಳುತ್ತಿದ್ದಂತೆ John "ಏನಂತೆ ಸಾರ್?" ಎಂದರು. ನಾನು "G registration ಗಾಡಿಗೆ free ಅಂತೆ" ಎನ್ನುವಷ್ಟರಲ್ಲಿ ವಾಹನ ಚಲಿಸುತ್ತಿತ್ತು. John ಮುಖದಲ್ಲಿ ಹಣ ಪಾವತಿಸಬೇಕಾಗಿಲ್ಲ ಎಂಬ ಖುಷಿಯಿಂದ ಮಂದಹಾಸ ಮೂಡಿದರೆ, ನಾನು ಏನೋ ಸಾಧಿಸಿದವನಂತೆ ನಕ್ಕೆ. ಇಷ್ಟಾಗುವ ಹೊತ್ತಿಗೆ ಸಮಯ 2:45 ರ ಆಸುಪಾಸಿನಲ್ಲಿತ್ತು. ನನ್ನ ತಲೆಯಲ್ಲಿ ನೂರೊಂದು ವಿಚಾರಗಳು - "ಸುಮ್ಮನೆ ವಿನಾಕಾರಣ ನಮ್ಮನ್ನು ತಡೆದರಲ್ಲ, ನಮ್ಮ ಸಮಯ ವ್ಯರ್ಥವಯಿತಲ್ಲ, ಹಿಗಾಗಿಲ್ಲದಿದ್ದರೆ ನಾವು ಇಷ್ಟರಲ್ಲಿ ಉಟ ಮುಗಿಸಿ ಸುಮಾರು ದೂರ ಹೊಗಿರಬಹುದಿತ್ತಲ್ಲ, ಸರಿಯಾದ ಅರಿವು ಇಲ್ಲದೆ ಅದು ಹೇಗೆ ಬೇಜವಬ್ದಾರಿಯಿಂದ ಸಿಬ್ಬಂದಿ ಕೆಲಸ ನಿರ್ವಹಿಸುತ್ತಾರಲ್ಲ , ಸುಮ್ಮನೆ ಹೆದರಿಸಿ ಹಣ ವಸೂಲಿ ಮಾಡುತ್ತಾರಲ್ಲ, ಇದು ಸರಿಯೇ? ಮತ್ತೆ ನಮ್ಮನ್ನು TOLL GATE ನಲ್ಲಿ ತಡೆದರೆ ಏನು ಮಾಡುವುದು, ಪಾಟೀಲ್ ಗೆ ದೂರವಾಣಿ ಮೂಲಕ ಮಾತನಾಡಿ ಎಂದರೆ ಆಯ್ತು" ಎಂದು ಯೋಚಿಸುವಷ್ಟರಲ್ಲಿ ನಾವು TOLL GATE ನಿರ್ಗಮನಕ್ಕೆ ಬಂದು ಸೇರಿದ್ದವು.
John ವಾಹನವನ್ನು TOLL GATE ಬಳಿ ನಿಲ್ಲಿಸಿದರು, TOLL GATE ಸಿಬ್ಬಂದಿ ವಾಹನ ಸಂಖ್ಯೆಯನ್ನು ಗಮನಿಸಿದರು. "ಅವರು ಈಗ ಏನು ಕೇಳಬಹುದು?" ಎಂದು ನಾನು ಯೋಚಿಸುತ್ತಿರುವಾಗಲೇ ನಾವು ನಿಂತಿದ್ದ TOLL GATE ನ ಕೆಂಪು ದೀಪ ಹಸಿರಾಗಿತ್ತು, ಬಾಗಿಲು ತಾನಾಗಿಯೇ ಮೇಲಕ್ಕೆ ಸರಿದು ನಮಗೆ ಹೊರಹೋಗಲು ದಾರಿ ಮಾಡಿಕೊಟ್ಟಿತ್ತು, ನಾನು ನಿಟ್ಟುಸಿರಿಟ್ಟೆ, ನಮ್ಮ ಪಯಣ ನೈಸ್ ರಸ್ತೆಯಿಂದಾಚೆಗೆ ಸಾಗಿತ್ತು...
oooh... olle experience.. birubisilinalli.. incident description yestu adbhutavagithu andre nanu alle idneno ansta ithu.. waiting for more... !!! :-)
ReplyDelete