Saturday, June 5, 2010

"ಚಾಕುವೇಟ್"

ಹಿರಿಯ ಆಪ್ತರೊಬ್ಬರು ನಾನು ಡಾ. ಮೀನಗುಂಡಿ ಸುಬ್ರಮಣ್ಯ ರವರ "ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ" ಪುರಸ್ಕೃತ "ಮಾನಸಿಕ ಸಯಸ್ಯೆಗಳಿಗೆ ಮನಸ್ಸು ಇಲ್ಲದ ಮಾರ್ಗ" (ನವಕರ್ನಾಟಕ ಪ್ರಕಾಶನ ಪ್ರಕಾಶಿತ) ಎಂಬ ಕೃತಿಯನ್ನು ಆದಷ್ಟೂ ಬೇಗ ಓದಲೇಬೇಕೆಂದು ಬೆಳಿಗ್ಗೆ ಶಿಫಾರಸ್ಸು ಮಾಡಿದ್ದರು. ಸಂಜೆ ಮನೆಗೆ ಬಂದವನೇ, ನವಕರ್ನಾಟಕ ಪ್ರಕಾಶನ ಕಛೇರಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿದೆ. ಪುಸ್ತಕ ಮಳಿಗೆ 6 ಗಂಟೆಯವರೆಗೆ ಮಾತ್ರ ತೆರೆದಿರುತ್ತದೆ ಎಂದು ತಿಳಿಸಿದರು; ಸಮಯ ಆಗಲೇ 5:14! ಆ ಪುಸ್ತಕವನ್ನು ಇಂದು ಖರಿದಿಸಲೇಬೇಕೆಂದು ನಿಶ್ಚಯಿಸಿದ್ದ ಕಾರಣ, ಆತುರಾತುರದಲ್ಲಿ ಬೈಕ್ ನಲ್ಲಿ ಹೊರಡುವವನಿದ್ದೆ.. ಕಿಟಕಿಯಿಂದ ಮುದ್ದಾದ ಧ್ವನಿ -

"ಮಾಮ, ಒಂದು ಚಾಕುವೇಟ್ ತಗೊಬಾ ನೀತಿಗೆ"...

ನನ್ನ ಅಕ್ಕನ ಮಗಳು, ಹೆಸರು "ನಿಯತಿ"; 2 ವರ್ಷ 7 ತಿಂಗಳ ಪುಟ್ಟ ಹುಡುಗಿ. ನಾನು ಪ್ರೀತಿಯಿಂದ "ನೀತಿ" ಎಂದು ಕರೆಯುತ್ತೇನೆ, ಆಕೆಗೂ ಅದು ಇಷ್ಟವಾಗಿರಬೇಕು - ತನ್ನನ್ನು "ನೀತಿ" ಎಂದೇ ಗುರುತಿಸಿಕೊಳ್ಳುತ್ತಾಳೆ. ನೀತಿ ಯಾವಾಗಲೂ ಹೀಗೇನೆ! ನಾನು ಬೈಕ್ ಅಥವಾ ಕಾರಿನಲ್ಲಿ ಹೊರಟರೆ, ಸೋಫಾ ಸಹಾಯದಿಂದ ಕಿಟಕಿಯ ಮೇಲೇರಿ ನಿಂತು "ಮಾಮ, ಒಂದು ಚಾಕುವೇಟ್ ತಗೊಬಾ ನೀತಿಗೆ" ಎನ್ನುತ್ತಾಳೆ. ಅಪ್ಪಿ-ತಪ್ಪಿಯೂ ಒಂದಕ್ಕಿಂತ ಹೆಚ್ಚಿಗೆ ಚಾಕೊಲೆಟ್ ಕೇಳುವುದಿಲ್ಲ - ಒಳ್ಳೆಯ ಪಾಪು. ನಾನು ಪ್ರತಿ ಬಾರಿಯೂ "ಒಂದೇ ಒಂದು ಸಾಕ?" ಎಂದು ಕೇಳುತ್ತೇನೆ, ಅದಕ್ಕವಳು "ಸಾಕು" ಎಂದು ಕಡ್ಡಿ ಎರಡು ತುಂಡು ಮಾಡಿದಂತೆ ಹೇಳುತ್ತಾಳೆ (ಇಂದು ಆಕೆಯನ್ನು ಚೇಡಿಸುವಷ್ಟು ಸಮಯವಿರಲ್ಲಿಲ್ಲ). ಆದರೆ, ಇಲ್ಲಿಯವರೆಗೂ ಒಂದೇ ಒಂದು ದಿನವಾದರೂ ನಾನು ಹಿಂತಿರುಗಿ ಬರುವಾಗ ಅವಳಿಗೆಂದು ಚಾಕೊಲೆಟ್ ತಂದವನಲ್ಲ. ಆದರೆ ನೀತಿಗೆ ನನ್ನ ಮೇಲೆ ತುಂಬಾ ನಂಬಿಕೆ, ತಪ್ಪದೇ ಪ್ರತೀ ಬಾರಿಯೂ ಹೇಳುತ್ತಾಳೆ - ನಾನು ಪ್ರತಿ ಬಾರಿಯೂ ಮರೆತಿರುತ್ತೇನೆ! ನಾನೆಂಥ ಮಾಮ ಅವಳಿಗೆ? ನಾಚಿಕೆಯಾಗಬೇಕು.

ಸ್ವಲ್ಪ ವೇಗವಾಗಿಯೇ ಬೈಕ್  ಶಿವಾನಂದ ವೃತ್ತದಲ್ಲಿರುವ ನವಕರ್ನಾಟಕ ಪ್ರಕಾಶನ ಕಛೇರಿ ತಲುಪಿತ್ತು, ಸಮಯ 5:40 ಗಂಟೆ. ಪುಸ್ತಕ ಸಿಕ್ಕಿತು. ನವಕರ್ನಾಟಕ ಪ್ರಕಾಶನಕ್ಕೆ 50 ರ ಸಂಭ್ರಮ (1960-2010), ಖರೀದಿಸಿದ ಪುಸ್ತಕದ ಜೊತೆಗೆ 'ಪುಸ್ತಕ ಪಟ್ಟಿ' ಯೊಂದನ್ನು ಉಚಿತವಾಗಿ ನೀಡಿದರು. ನಿಶ್ಚಯಿಸಿದಂತೆ ಪುಸ್ತಕವನ್ನು ಇಂದೇ ಖರೀದಿಸಿದ್ದಕ್ಕೆ ಸಮಾಧಾನವಿತ್ತು. ಕೆಲಸ ಮುಗಿಯಿತಲ್ಲ, ಬೈಕ್ ಏರಿ ಮನೆಯಕಡೆ ಹೊರಟೆ. ಇನ್ನೇನು ಮನೆ ತಲುಪಬೇಕು, ಹತ್ತಿರದಲ್ಲೇ ಇದ್ದ ಬೇಕರಿಯೊಂದರ ಮುಂದೆ ಬೈಕ್ ನಿಲ್ಲಿಸಿದೆ. ಇಂದು ನಾನು ನೀತಿಗೆ "ಚಾಕುವೇಟ್ " ತೆಗೆದುಕೊಳ್ಳಲು ಮರೆತಿರಲಿಲ್ಲ, good boy. ಬೇಕರಿಯಲ್ಲಿ ಇರಿಸಲಾಗಿದ್ದ ವಿವಿಧ ಬಗೆಯ ಚಾಕೊಲೆಟ್ ಗಳನ್ನು ನೋಡುತ್ತಿದ್ದರೆ, ಯಾವುದನ್ನು ತೆಗೆದುಕೊಳ್ಳಬೇಕು ಎಂದು ತೋಚಲೇ ಇಲ್ಲ! Eclairs ತಗೊಳ್ಲಾ? ಬೇಡ. Boomer? ಅದು ಚಾಕೊಲೆಟ್ ಅಲ್ವೇಅಲ್ಲ. Dairy Milk? Perk? Munch? ಚೆನ್ನಾಗಿಲ್ಲ. ಇನ್ನೇನು ತಗೊಳ್ಲಿ? ಇಷ್ಟು ಯೋಚಿಸುವಷ್ಟರಲ್ಲಿ ಬೇಕರಿಯ ಹುಡುಗ ನಾನು ಉಪಯೋಗವಿಲ್ಲದ ಗಿರಾಕಿಯೆಂದು ಪರಿಗಣಿಸಿ, ಬೇರೆಯವರೆಡೆಗೆ ಸಾಗಿದ್ದ. ಸರಿ, ಇನ್ನಷ್ಟು ಸಮಯ ಸಿಕ್ಕಿದ್ದರಿಂದ ಏನು ತೆಗೆದುಕೊಳ್ಳಲಿ ಎಂದು ಯೋಚಿಸತೊಡಗಿದೆ. ಅಷ್ಟರಲ್ಲಿ ಚಿಕ್ಕ ಹುಡುಗನೊಬ್ಬ ನನ್ನನ್ನು "ಏನ್ ಕೊಡ್ಲಿ ಸಾರ್?" ಎಂದು ಕೇಳಿದ. "ಒಂದು Milky Bar ಕೊಡೊ", ಆತ್ಮೀಯವಾಗಿ ಕೇಳಿದೆ. "ಒಂದೇ ಸಾಕ ಸಾರ್?".. ಹುಡುಗ ಬಹಳ ಚುರುಕಾಗಿದ್ದ! ನನ್ನ ಪ್ರಶ್ನೆ ನನಗೇ ತಿರುಗಿ ಬಂದದ್ದರಿಂದ ನಾನು ನಕ್ಕು "ಸಾಕು" ಎಂದೆ. ಹುಡುಗ ಕೊಟ್ಟ Milky Bar ಒಂದನ್ನು ಪುಸ್ತಕವಿದ್ದ ಕೈಚೀಲಕ್ಕೆ ಸೇರಿಸಿ, ಬೈಕ್ ಏರಿ ಹೊರಟೆ.

ಮನೆಗೆ ತಲುಪಿದ ನನಗೆ ಅದೇನೋ ಸಂಭ್ರಮ, ಇಂದು ಮರೆಯದೆ ನೀತಿಗೆ ಒಂದು "ಚಾಕುವೇಟ್" ತಂದೇಬಿಟ್ಟಿದ್ದೆ! ಬಾಗಿಲನ್ನು ತೆರೆದು ಒಳಗೆ ಬಂದೆ, ನೀತಿ ನಾನು ತಂದಿದ್ದ "ಚಾಕುವೇಟ್" ತೆಗೆದು ತಿನ್ನುತ್ತಾಳೆಂದು ಭಾವಿಸಿದ್ದವನಿಗೆ ನಿರಾಸೆಯಾಗಿತ್ತು. ಒಳಗೆ ಬಂದವನನ್ನು ಒಮ್ಮೆ ನೋಡಿದ ನೀತಿ ಮತ್ತೆ Cartoon Network ನಲ್ಲಿ Chhota Bheem ನೋಡುವುದರಲ್ಲಿ ಮಗ್ನಳಾದಳು. ಮಾಮ ಎಂದೂ ತನಗೆ "ಚಾಕುವೇಟ್" ತಂದವನಲ್ಲ ಎಂದು ಆಕೆಗೆ ಚೆನ್ನಾಗಿ ತಿಳಿದಿತ್ತು. ನಾನು ಅವಳ ಪಕ್ಕಕ್ಕೇ ಕುಳಿತೆ - ಆದರೂ ಅವಳ ಗಮನವೆಲ್ಲಾ Chhota Bheem ಕಡೆಗೇ ಇದ್ದಿತು. ಚಾಕೊಲೆಟ್ ತೆಗೆದು ಅವಳಿಗೆ ಕೊಟ್ಟೆ.. "ಹೇaaaaaa .. ಚಾಕುವೇಟ್!!", ಸೋಫಾದಿಂದ ಕೆಳಗಿಳಿದು ಚಾಕೊಲೆಟ್ ತೆಗೆದುಕೊಂಡು ರೂಮಿನಲ್ಲಿದ್ದ ಅಕ್ಕನ ಬಳಿಗೆ ಹೋಗಿ "ಅಮ್ಮ.. ಚಾಕುವೇಟ್ ತೆಕ್ಕೊಡಿ". ಅಕ್ಕ - "ಎಲ್ಲಿತ್ತೋ ಇದು?" ಕೇಳಿದಾಗ ನೀತಿ "ಮಾಮಂದು", ತನಗೂ ಅದಕ್ಕೂ ಏನೂ ನಂಟಿಲ್ಲವೆಂಬಂತೆ ಹೇಳಿಬಿಟ್ಟಳು. ಮತ್ತೆ ಬಂದು ನನ್ನ ಪಕ್ಕಕ್ಕೆ ಕುಳಿತು ಅಕ್ಕ ಬಿಡಿಸಿಕೊಟ್ಟ Milky Bar ಮೇಯುತ್ತಾ Chhota Bheem ನಲ್ಲಿ ಮುಳುಗಿಹೋದಳು. ನಾನು "ಚಾಕುವೇಟ್ ಚೆನ್ನಾಗಿದ್ಯ ನೀತಿ?" ಎಂದು ಕೇಳಿದೊಡನೆಯೇ ಥಟ್ಟನೆ "ಚೆನ್ನಾaaaaaaaaaaಇದೆ" ಎಂದು ನನ್ನ ಕಡೆ ತಿರುಗಿ ತಲೆಯಾಡಿಸುತ್ತಾ ಬಾಯ್ತುಂಬ ನಕ್ಕಳು. ಆ ಒಂದು Milky Bar ಆಕೆಯ ಮಾಮನ ಇಷ್ಟೂ ದಿನಗಳ ಬೇಜವಾಬ್ದಾರಿ-ಮರೆಗುಳಿತನವನ್ನೆಲ್ಲ ಮರೆಸಿದಂತೆ ಭಾಸವಾಯಿತು. ಆ ಮುಗ್ಧ ನಗು ನನ್ನ ಆಯಾಸವನ್ನೆಲ್ಲ ಮಾಯವಾಗಿಸಿ, ಮನಸು ಹಗುರವೆನಿಸಿತು. ನಾನು ಏನೋ ಸಾಧಿಸಿದವನಂತೆ ಬೀಗುತ್ತಿದ್ದೆ.

No comments:

Post a Comment

ಖಂಡಿತಾ ನಿಮ್ಮ ಅನಿಸಿಕೆಗಳನ್ನು ತಿಳಿಸಿ. ಧನ್ಯವಾದಗಳು!
Please post your comments. Thank you!