Tuesday, June 22, 2010

'ಪರಕೀಯ'

Green DATACENTER 2010 ಸಮಾವೇಶವನ್ನು ITC Royal Gardenia, Bengaluru ಇಲ್ಲಿ ಏರ್ಪಡಿಸಲಾಗಿತ್ತು, ನಾನು ಕೂಡ ವಿಶೇಷ ಅಹ್ವಾನಿತರಲ್ಲಿ ಒಬ್ಬ(?)! ITC Royal Gardenia ಬೆಂಗಳೂರಿನ ಹೃದಯ ಭಾಗದಲ್ಲಿರುವ '5-STAR HOTEL'. ಇಂಥಹ ಹೋಟೆಲ್ ಗೆ ನನ್ನ ಭೇಟಿ ಇದೇ ಮೊದಲನೆಯ ಬಾರಿ. ಸಮಾವೇಶ ಬೆಳಿಗ್ಗೆ 9 ಕ್ಕೆ ಪ್ರಾರಂಭವಾಗಿತ್ತು, 11:30 ರ ಚಹಾ-ವಿರಾಮದ ಸಮಯ; ನನ್ನ ದೃಷ್ಟಿಗೆ ನಿಲುಕಿದಷ್ಟೂ ದೂರ 'ಅತ್ತ-ಇತ್ತ' ನೋಡಿ ಸೋತ ಮೇಲೆ ಅಲ್ಲಿನ ಸಿಬ್ಬಂದಿಯೊಬ್ಬರನ್ನು ಸ್ವಲ್ಪ ಹಿಂಜರಿಕೆಯಿಂದಲೇ ಕೇಳಿದ್ದೆ "Urinals?".. ಒಂದೇ ಪದ ಬಳಸಿ, ಕೇಳಿದ ಧಾಟಿಯಲ್ಲೇ ಆ ಪದವನ್ನು ಪ್ರಶ್ನೆಯಾಗಿಸಿದ್ದ ನನಗೆ ಆ ಸಿಬ್ಬಂದಿ ಅತ್ಯಂತ ವಿನಯದಿಂದ ಹೇಳಿದ್ದ "it's in the mid-way Sir". "Thank you..", ಆತ ತೋರಿಸಿದ ದಾರಿಯಲ್ಲಿ ಸಾಗಿದ ಮೇಲೆ ನಾನು ಹುಡುಕುತ್ತಿದ್ದುದು ಕಾಣಿಸಿ, ಆತುರದಲ್ಲೇ (ಆತುರ ಏಕೆ ಎಂದು ಬೇರೆ ಹೇಳಬೇಕಾಗಿಲ್ಲ..) ಒಳನಡೆದೆ. ಒಳಹೊಕ್ಕವನು ಇದ್ದಕ್ಕಿದ್ದ ಹಾಗೆ ಕ್ಷಣ ಮಾತ್ರ ತಡೆದೆ - ಯಾರೋ ಎದುರಿಗೆ ನಿಂತಂತೆ ಭಾಸವಾದ ನನಗೆ, ಅದು ನನ್ನದೇ ಬಿಂಬವೆಂದು (ಸುತ್ತ-ಮುತ್ತ ಗೋಡೆಯುದ್ದಕ್ಕೂ ಕನ್ನಡಿಗಳನ್ನು ಅಳವಡಿಸಿದ್ದರು) ತಿಳಿದ ಮೇಲೆ ಸಮಾಧಾನದಿಂದ ಮುಂದೆ ಹೆಜ್ಜೆ ಹಾಕಿದೆ.

ಒಳಗಡೆ ಯಾರೂ ಇರಲಿಲ್ಲ; ಅಚ್ಚುಕಟ್ಟಿನ ವ್ಯವಸ್ಥೆ. ಪ್ರದರ್ಶನಕ್ಕೆ ತಯಾರುಮಾಡಿಟ್ಟ ಮಾದರಿಯಂತೆ ಕಾಣುತ್ತಿತ್ತು. ಹುಡುಕಿದರೂ ಸಹ ಒಂದು ಚೂರೂ ಕಸ-ಕೊಳಕು ಕಾಣಸಿಗದು. ಎಚ್ಚರಿಕೆ ವಹಿಸಿ ಪ್ರತಿ ಇಂಚು-ಇಂಚನ್ನೂ ಸಹ ಮಾಲಿಶ್ ಮಾಡಿದಂತೆ ಹೊಳೆಯುತ್ತಿತ್ತು ಆವರಣ. ಮಾಡಬೇಕಾದ್ದನ್ನು ಮರೆತು ಅಲ್ಲಿನ ವಾತಾವರಣವನ್ನು ಆಸ್ವಾದಿಸುತ್ತಾ ನಿಂತಿದ್ದ ನನ್ನನ್ನು ಬಾಗಿಲ ಶಬ್ದ ಎಚ್ಚರಿಸಿತ್ತು; ಮುಂದೆ ಸಾಗಿ ನಾನು ಪ್ರಕೃತಿಸಹಜವಾದ ಕರೆಗೆ ಓಗೊಟ್ಟು 'ನಿಂತಿದ್ದೆ'. ಯಾರೋ ಒಳಗೆ ಬಂದು ನನ್ನ ಎರಡನೇ ಪಕ್ಕಕ್ಕೇ 'ನಿಂತರು'. ನಿಂತ ಕೆಲವೇ ಕ್ಷಣಗಳಲ್ಲಿ ನನಗೊಂದು ಅನುಮಾನ ಶುರುವಾಗಿಹೋಗಿತ್ತು. ಅಲ್ಲಿ ನೀರಿನ ವ್ಯವಸ್ಥೆ ಕಲ್ಪಿಸಿದ ನಲ್ಲಿಯೇ ಇರಲಿಲ್ಲ!? ಹಾಗಾದರೆ ನೀರು ಹಾಯಿಸುವುದಾದರೂ ಹೇಗೆ? ಬಂದ 'ಕೆಲಸ' ಮುಗಿದರೂ ಸಹ ಅಲ್ಲಾಡದೆ ಹಾಗೇ ನಿಂತೆ; ಪಕ್ಕಕ್ಕಿದ್ದ ವ್ಯಕ್ತಿ ನೀರು ಹಾಯಿಸುವ ಗೊಜಿಗೇ ಹೋಗದೆ ಕೈತೊಳೆಯಲು ಹೊರಟೇಬಿಟ್ಟ! ಆತ ಹೊರಟ ಹಿಂದೆಯೇ ನೀರು ತಂತಾನೇ 'ಅಲ್ಲಿ' ಹರಿಯುತ್ತಿತ್ತು. ನಾನೂ ಸಹ ಹಿಂದೆ ಸರಿದೆನಾದರೂ, ನನ್ನ ಗಮನವೆಲ್ಲಾ ನೀರು ಹರಿಯುವುದೋ ಇಲ್ಲವೋ ಎಂಬುದರ ಮೇಲೆಯೇ ಇದ್ದಿತು. ನಾನು ದೂರ ಸರಿಯುತ್ತಿದ್ದಂತೆ ನೀರು ಸರಾಗವಾಗಿ ಹರಿಯತೊದಗಿದ್ದು ನನ್ನಲ್ಲಿ ಸಮಾಧಾನ ತಂದಿತ್ತು. ಕೈತೊಳೆದು 'tissue paper' ಉಪಯೋಗಿಸಿ.. 'ಬಿಸಾಡುವುದೆಲ್ಲಿ?' ಎಂದು ಕಣ್ಣಾಯಿಸಲು, ಬಿದಿರಿನ ಕಡ್ಡಿಗಳಿಂದ ಹೆಣೆದು ತಯಾರಿಸಿದ ಸುಂದರವಾದ ಕಸದ ಬುಟ್ಟಿಯೊಂದು ಕಾಣಿಸಾಲಾಗಿ, (ಎರಡು ಬಾರಿ ಯೋಚಿಸಿ) ಅದರೊಳಗೆ ಎಸೆದು ಹೊರನಡೆದೆ.

ಸಮಾವೇಶ ನಡೆಯುತ್ತಿದ್ದ ಮಧ್ಯದಲ್ಲೇ ಎದ್ದು ಹೊರಬಂದಿದ್ದೆ; ಮುಖ್ಯವಾದ ದೂರವಾಣಿ ಕರೆಯನ್ನು ಉತ್ತರಿಸಿ ಮಾತನಾಡಿ ಮುಗಿಸುವಷ್ಟರಲ್ಲಿ ನಾನು ಮತ್ತೆ 'ಅಲ್ಲಿಗೆ' ಬಂದು ಸೇರಿದ್ದೆ! ಸರಿ, ಬಾಗಿಲನ್ನು ತಳ್ಳಿಕೊಂಡು ಒಳಗೆ ಬಂದವನೇ ಕನ್ನಡಿಯ ಮುಂದೆ ನಿಂತು ನನ್ನ ತಲೆ-ಕೂದಲು, ಮುಖ, ಬಟ್ಟೆಗಳೆಲ್ಲವೂ ಸರಿಯಾಗಿವೆಯೇ ಎಂದು ಪರೀಕ್ಷಿಸಿದೆ. ಕುತ್ತಿಗೆಗೆ ಜೋತುಬಿದ್ದ 'Delegate' ಗುರುತಿನ ಚೀಟಿಯು ಎದ್ದು ಕಾಣುತ್ತಿತ್ತು. ಎಲ್ಲ ಮುಗಿಸಿ, ಕೈ ತೊಳೆದುಕೊಂಡಮೇಲೆ ಗಮನಿಸಿದ್ದೆ, 'tissue paper' ಖಾಲಿಯಾಗಿತ್ತು (ಮೊದಲೇ ನೋಡಿದ್ದರೆ ಕೈ ತೊಳೆಯುತ್ತಲೇ ಇರಲಿಲ್ಲವೇನೂ). ಈಗೇನು ಮಾಡುವುದು? ಬಾಗಿಲ ಕಡೆ ಕಣ್ಣಾಯಿಸಿದ ನನಗೆ ಎರಡು ಯಂತ್ರಗಳು ಕಂಡವು. ಹತ್ತಿರ ಹೋಗಿ ನೋಡಿದೆ; ಅದರಲ್ಲಿ ಒಂದು 'hand dryer'. METRO MALL ನಲ್ಲಿ ಇದನ್ನು ಉಪಯೋಗಿಸಿದ ಅನುಭವವಿದ್ದುದರಿಂದ ನೇರವಾಗಿ ಗುಂಡಿ ಒತ್ತಿ ಹಸ್ತಗಳನ್ನು ಮುಂದೆ ಚಾಚಿ ಹಿಡಿದೆ. ರಭಸವಾಗಿ, ಉಗುರು ಬೆಚ್ಚಗಿನ ಗಾಳಿ ನನ್ನ ಹಸ್ತಗಳನ್ನು ಕ್ಷಣಮಾತ್ರದಲ್ಲಿ ಒಣಗಿಸಿಬಿಟ್ಟಿತ್ತು. ಪಕ್ಕದಲ್ಲಿದ್ದ ಯಂತ್ರದ ಮೇಲಿದ್ದ ಚಿತ್ರಗಳನ್ನು ಗಮನಿಸಿದ ನನಗೆ ತಿಳಿಯಿತು, ಅದು 'shoe polisher'. ಕುತೂಹಲದಿಂದ ಗುಂಡಿಯನ್ನು ಒತ್ತಿದೆ, ಯಂತ್ರದ ಕೆಳಗಡೆ ವೃತ್ತಾಕಾರದ 'brush' ತಿರುಗತೊಡಗಿತು. 'ಒಹ್! ಇದು ಹೀಗೆ..' ನನ್ನ ಬೂಟನ್ನು ಅದಕ್ಕೆ ನಯವಾಗಿ ತಾಕುವಂತೆ ಹಿಡಿದೆ. ಚೆನ್ನಾಗಿ ಮಾಲಿಶ್ ಮಾಡಿತ್ತು. ನಾನು ಹೊರನಡೆಯುವಷ್ಟರಲ್ಲಿ ನನ್ನ ಬೂಟುಗಳು ಫಳ-ಫಳ ಹೊಳೆಯುತ್ತಿದ್ದವು.

ಹೋಟೆಲ್ ನ ಕೆಳಮಾಳಿಗೆಯಲ್ಲಿ ನಿಂತಿದ್ದ ನನ್ನ ಕಾರು ಅಲ್ಲಿಂದ ಹೊರಟು, ಕಿಕ್ಕಿರಿದ ವಾಹನಗಳ ಮಧ್ಯೆ ಸಾಗಿ, ಚಾಮರಾಜಪೇಟೆಯ ಉಮಾ ಚಿತ್ರಮಂದಿರದ ಮುಂದೆ ಎಡಕ್ಕೆ ತಿರುಗಿ ನಿಂತಿತು. ಕೆಳಗಿಳಿದ ನಾನು ಸ್ವಲ್ಪ ದೂರ ನಡೆದು ನೇರವಾಗಿ ಹತ್ತಿರದಲ್ಲೇ ಇದ್ದ 'ನಿರ್ಮಲ ಶೌಚಾಲಯ'ಕ್ಕೆ ಹೋದೆ. ಬೆಳಿಗ್ಗೆಯಿಂದ ಅದೇನೋ ಕಸಿವಿಸಿ; 'ಮಾಡಿದರೂ' 'ಮಾಡದ' ಭಾವನೆ, ಏನೋ ಹೊತ್ತುಕೊಂಡು ಓಡಾಡುತ್ತಿದ್ದ ಅನುಭವ. ಒಳಗೆ ಬಂದವನಿಗೆ ಅಲ್ಲಿನ 'ಸುಗಂಧ'ವು ಮೊದಲಿಗೆ ಸ್ವಾಗತ ಕೋರಿತ್ತು. ಆದಷ್ಟೂ ಉಸಿರು ಕಟ್ಟಿಕೊಂಡು 'ನಿಂತೆ'. ಆರೋಗ್ಯವೆನಿಸಿಕೊಂಡರೂ ಕಾಣೆಯಾಗಿದ್ದ ನೈರ್ಮಲ್ಯ ನನ್ನ ಗಮನ ಸೆಳೆಯದೆ ಇರಲಿಲ್ಲ. ಕೆಟ್ಟಿದ್ದ ನಲ್ಲಿಯಿಂದ ಹ(ಸು)ರಿಯುತ್ತಿದ್ದ ನೀರು ನನ್ನ ಕೆಲಸವನ್ನು ತಾನೇ ಮಾಡಿ ಮುಗಿಸಿತ್ತು. ಬೇಗನೆ ಹೊರಬಂದು ಕಟ್ಟಿದ್ದ ಉಸಿರನ್ನು ಸಡಿಲಿಸುವ ತವಕ, ಬಾಗಿಲ ಬಳಿಗೆ ಬಂದ ನನಗೆ ಕಾವಲುಗಾರ ಎದುರಾದ; ಕಿಸೆಯಿಂದ ಐದರ ನಾಣ್ಯವನ್ನು ತೆಗೆದು ಅವನ ಮೇಜಿನ ಮೇಲಿಟ್ಟೆ. "change ಕೊಡಿ" ಕಾವಲುಗಾರನೆಂದ. ಬೆಳಿಗ್ಗೆಯಿಂದ ನನ್ನಲ್ಲಿದ್ದ ಕಸಿವಿಸಿಯನ್ನು ಹೋಗಲಾಡಿಸಿ, ಸಮಾಧಾನವನ್ನು ತಂದುಕೊಟ್ಟಿದ್ದ 'ನಿರ್ಮಲ(?) ಶೌಚಾಲಯ'ಕ್ಕೆ ನಾನು ಋಣಿಯಾಗಿರಬೇಡವೇ? "ಪರ್ವಾಗಿಲ್ಲ.. ಇಟ್ಕೊಳ್ಳಿ.." ಎಂದು ಹೇಳಿ ಹೊರಬಂದೆ. '5-STAR' ಹೋಟೆಲ್ ನಲ್ಲಿ ಸಿಗದ ನೆಮ್ಮದಿ ಇಲ್ಲಿ ಸಿಕ್ಕಿತ್ತು. ಅತ್ಯಂತ ಆಧುನಿಕ, ಶುಚಿ ಹಾಗು ಆರೋಗ್ಯಕರವಾಗಿದ್ದ ಅಲ್ಲಿನ ವಾತಾವರಣವು ನನಗೆ 'ಪರಕೀಯ'ವೆನಿಸಿತ್ತು - ನನಗೆ ಹೊಂದುವುದು ಇದಲ್ಲವೆಂಬ ಅಗಾಧ ನಂಬಿಕೆ. ಬೆಳಿಗ್ಗೆಯಿಂದಲೂ ಹೊತ್ತುಕೊಂಡಿದ್ದ ಭಾರಿ ತೂಕವೊಂದನ್ನು ಕೆಳಗಿಳಿಸಿದ ಅನುಭವ.. ಅದನ್ನು ಅನುಭವಿಸಿಯೇ ತಿಳಿಯಬೇಕು. ವಾಸ್ತವದಲ್ಲಿ ನಡೆಯುತ್ತಿದ್ದರೂ ಸಹ ಅಂತರಂಗದಲ್ಲಿ ಕುಣಿಯುತ್ತಾ ನಾನು ಕಾರಿನ ಕಡೆಗೆ ಹೆಜ್ಜೆ ಹಾಕಿದೆ. ಮನೆಗೆ  ಹಿಂತಿರುಗಿ ಬರುತ್ತಿದ್ದವನಿಗೆ ನಮ್ಮ 'ಹಳ್ಳಿಯ ನೈಸರ್ಗಿಕ ಸಂಸ್ಕೃತಿ'ಯು ಎಲ್ಲಕ್ಕಿಂತ ಸ್ವಂತ-ಉತ್ತಮವೆನಿಸಿ ನನ್ನನ್ನು ಕಾಡುತಲಿತ್ತು.

No comments:

Post a Comment

ಖಂಡಿತಾ ನಿಮ್ಮ ಅನಿಸಿಕೆಗಳನ್ನು ತಿಳಿಸಿ. ಧನ್ಯವಾದಗಳು!
Please post your comments. Thank you!