ಮದುವೆಯ ಸಡಗರ!! ಮನೆಯ ಕಿರಿಯ ಮಗನ ಮದುವೆಗೆ ತರಾತುರಿಯ ತಯಾರಿ ನಡೆದಿದೆ. ಮದುವೆಯನ್ನು ಇನ್ನು ಒಂದು ತಿಂಗಳೊಳಗಾಗಿ ಮಾಡಿ ಮುಗಿಸಬೇಕೆಂದು ವರನ ತಂದೆ ನಿಶ್ಚಯಿಸಿದ್ದರು. ಅದ್ದರಿಂದ, ಸ್ವಲ್ಪ ತರಾತುರಿ ಅಷ್ಟೆ.
ಆದರೆ, ವಧುವಿನ ತಾಯಿಯ ಮುಖದಲ್ಲಿ ಏನೋ ಕಳವಳ. ಮಗಳ ಮದುವೆಯ ಸಡಗರದಲ್ಲಿ ಸಂಪೂರ್ಣ ತನ್ಮಯತೆ ತಾಯಿಗಿದ್ದಂತೆ ಕಾಣುತ್ತಿಲ್ಲ. ಆಕೆ ವರನ ತಂದೆಯ ಬಳಿ ಕೇಳುತ್ತಾರೆ - "ಮದುವೆಗೆ ಏಕಿಷ್ಟು ಆತುರ? ಸ್ವಲ್ಪ ಮುಂದೂಡಲು ಸಾಧ್ಯವಿಲ್ಲವೇ?". ಇದೇಕೆ ಹೀಗೆ? ಮಗಳ ಮದುವೆಯನ್ನು ಮುಂದೂಡುವಂತೆ ಕೇಳುತ್ತಿರುವ ಇವರೆಂಥಹ ತಾಯಿ? ವರನ ತಂದೆ ಸ್ವಷ್ಟವಾಗಿ ಹೇಳುತ್ತಾರೆ: "ನಮ್ಮ ಸಂಭಂಧಿಕರಲ್ಲಿ ನನ್ನ ಮಗನಿಗಿಂತ ಕಿರಿಯರಿಗೆಲ್ಲ ಮಾಡುವೆ ಈಗಾಗಲೇ ನಿಶ್ಚಯವಾಗಿ ಹೋಗಿದೆ. ಅವರ ಮದುವೆಗೆ ಮುಂಚೆ ನನ್ನ ಮಗನ ಮಾಡುವೆಯನ್ನು ನಾನು ಮಾಡಬೇಕು. ದಯವಿಟ್ಟು ಸಹಕರಿಸಿ". ಮಗನ ಬಗ್ಗೆ ಎಂಥ ಕಾಳಜಿ ತಂದೆಗೆ?! ಸಂಭಂಧದಲ್ಲಿ ಯಾರದೋ ಮಕ್ಕಳ ಮದುವೆ ನಿಶ್ಚಯವಾದರೆ, ಅವರು ತನ್ನ ಮಗನಿಗಿಂತ ಚಿಕ್ಕವರೆಂಬ ಒಂದೇ ಕಾರಣ - ಮಗನ ಮದುವೆಗೆ ಎಲ್ಲ ಸಿದ್ಧತೆ ನಡೆಸಿದ್ದಾರೆ. ಎಲ್ಲರಿಗೂ ಇಂಥಹ ಅಪ್ಪ ಸಿಗುವುದು ಸುಲಭವಲ್ಲ. ಒಲ್ಲದ ಮನಸ್ಸಿನಿಂದ ವಧುವಿನ ತಾಯಿ ಸುಮ್ಮನಾಗುತ್ತಾರೆ. ಆದರೂ, ಅವರ ಮುಖದಲ್ಲಿ ಏನೋ ಕಳವಳ..
ವರನ ತಂದೆ ತನ್ನ ಮಗನ ಮದುವೆಯ ದಿನಾಂಕವನ್ನು ಗೊತ್ತುಪಡಿಸಿದ್ದಾರೆ. ಇನ್ನು 20 ದಿನಗಳಲ್ಲಿ ಮದುವೆ ನಿಶ್ಚಯವಾಗಿದೆ. ಬಹಳ ಸಮಯಾವಕಾಶವೇನೂ ಇದ್ದಂತಿಲ್ಲ. ಎಲ್ಲಾ ತಯಾರಿಗಳನ್ನೂ ತರಾರುತಿಯಲ್ಲೇ ಮಾಡುತ್ತಿದ್ದಾರೆ. ದಿನಗಳು ಕಳೆಯುತ್ತಿವೆ, ಮದುವೆಯ ದಿನಾಂಕ ಹತ್ತಿರವಾಗುತ್ತಲಿದೆ.
ಮದುವೆಯ ದಿನ.. ಎಲ್ಲಾ ಸಮರ್ಪಕವಾಗಿದೆಯೇ ಎಂದು ನಾಲ್ಕಾರು ಬಾರಿ ಪರಿಶೀಲಿಸಿದ್ದರು ವರನ ತಂದೆ. ತನ್ನ ಮಗನ ಮದುವೆ ಸರಾಗವಾಗಿ ನೆರವೇರಬೇಕೆಂಬುದು ಅವರ ಆಸೆ, ತಪ್ಪೇನಿದೆ? ಬಂಧು-ಬಳಗದವರೆಲ್ಲಾ ನೆರೆದಿದ್ದರು, ವಧೂ-ವರರನ್ನು ಆಶೀರ್ವದಿಸಲು. ವರನ ತಂದೆಯ ಶ್ರಮ ವ್ಯರ್ಥವಾಗಿರಲಿಲ್ಲ, ಅವರು ಅಂದುಕೊಂಡಂತೆ ಎಲ್ಲವೂ ಸುಸೂತ್ರವಾಗಿಯೇ ನಡೆಯುತ್ತಿತ್ತು. ಸಂಭ್ರಮವೋ ಸಂಭ್ರಮ.
ವಧುವಿನ ಜೊತೆ ಚೆಂದದೊಂದು ಹುಡುಗಿ.. ವಧುವಿನ ಎಲ್ಲಾ ಬೇಕು-ಬೇಡಗಳನ್ನು ತಾನೇ ತಿಳಿದು ಉಪಚರಿಸುತ್ತಿದ್ದಳು ಆ ಹುಡುಗಿ. ತನ್ನದೇ ಮದುವೆಯೇನೊ ಎನ್ನುವಷ್ಟು ಸಂಭ್ರಮ (??!!) ಹುಡುಗಿಯ ಮೊಗದಲ್ಲಿ. ಏಕೋ ಆ ಹುಡುಗಿ ನನಗೆ ಆತ್ಮೀಯಳೆನಿಸಿದಳು. ವಿಚಾರಿಸಿದಾಗ ತಿಳಿದಿದ್ದು - ಆ ಹುಡುಗಿ ವಧುವಿನ 'ಅಕ್ಕ', ಆಕೆಗಿನ್ನೂ ಮದುವೆಯೇ ಆಗಿರಲಿಲ್ಲ!!
ನಾನು ಸೋತಿದ್ದೆ; ಹುಡುಗಿ ನನ್ನ ಮನಸ್ಸನ್ನು ಗೆದ್ದಿದ್ದಳು.
No comments:
Post a Comment
ಖಂಡಿತಾ ನಿಮ್ಮ ಅನಿಸಿಕೆಗಳನ್ನು ತಿಳಿಸಿ. ಧನ್ಯವಾದಗಳು!
Please post your comments. Thank you!