Sunday, June 13, 2010

ಸತ್ಯ ಸಂಗತಿ..

ಇತ್ತೀಚಿಗೆ, ಅಂದರೆ 30-05-2010 ರಂದು ನನ್ನ ಆತ್ಮೀಯ ಸ್ನೇಹಿತ ಗುರುರಾಜ ತನ್ನ ಜೀವನದ 'ಬ್ರಹ್ಮಚರ್ಯೆ'ಗೆ ವಿದಾಯ ಹೇಳಿ, 'ಗೃಹಸ್ತ'ನಾದ (ಸಾಮಾನ್ಯವಾಗಿ ಸ್ನೇಹಿತರನ್ನು ಗುರುತಿಸುವಾಗ ನಾನು 'ಏಕವಚನ'ದಲ್ಲಿ ಸಂಭೋದಿಸುತ್ತೇನೆ; ಇದು ಅವರ ಮೇಲಿನ ಆತ್ಮೀಯತೆ, ಪ್ರೀತಿ, ಹಾಗು ಸಲಿಗೆಯನ್ನು ತೋರುತ್ತದೆಯೋ ಹೊರೆತು ಅಗೌರವವನ್ನಲ್ಲ). ಈ ವಿಷಯವನ್ನು ನನಗೆ ಆತ ಜನವರಿಯಲ್ಲೇ ದೂರವಾಣಿ ಮೂಲಕ ತಿಳಿಸಿದ್ದ. ಮೇ ತಿಂಗಳಲ್ಲಿ ಗುರುರಾಜ ಮದುವೆಯಾಗುತ್ತಿರುವ ಬಗ್ಗೆ ನನ್ನ ಬಾಲ್ಯ ಸ್ನೇಹಿತ ಪ್ರದೀಪ್ ಜೊತೆ ಪ್ರಸ್ತಾಪ ಮಾಡಿದ್ದೆ. ಗುರುರಾಜ-ಪ್ರದೀಪ್ ಇವರ ಸ್ನೇಹವು ನನ್ನ ಮೂಲಕವೇ ಮೊದಲುಗೊಂಡರೂ ಸಹ, ನಂತರದ ದಿನಗಳಲ್ಲಿ ಅವರ ಸ್ನೇಹ ತೀರ ಘಾಡವಾಗಿ ಬೆಳೆದಿತ್ತು. ಪರಸ್ಪರ ಅವರು ಒಬ್ಬರನ್ನೊಬ್ಬರು ತುಂಬಾ ಗೌರವಿಸುತ್ತಿದ್ದುದ್ದು (ಸ್ನೇಹಿತರಲ್ಲಿ ಇದು ಇತ್ತೀಚಿಗೆ ಮರೆಯಾಗುತ್ತಿರುವುದೇನೋ ಎಂಬ ಭಾವನೆ ನನಗೆ) ನನ್ನ ಗಮನಕ್ಕೂ ಬಂದಿತ್ತು. ಇದನ್ನು ತಿಳಿದೇ ನಾನು, ಗುರುರಾಜ ತನ್ನ ಮದುವೆಗೆ ಪ್ರದೀಪ್ ನನ್ನ ಕರೆಯದೆ ಇರಲಾರನೆಂದು ಭಾವಿಸಿ ಗುರುರಾಜನ ಮದುವೆಯ ವಿಷಯವಾಗಿ ಪ್ರದೀಪ್ ಜೊತೆ ಮಾತುಕತೆ ನಡೆಸಿದ್ದೆ.

ಮೇ ತಿಂಗಳ ಕೊನೆಯ ಭಾಗ; ನಾನು ಕಛೇರಿ ಕೆಲಸದ ಮೇಲೆ (ತೀವ್ರ) ಪ್ರಯಾಣ ಮಾಡುತ್ತಿರಬೇಕಾದ ಸಂದರ್ಭದಲ್ಲೊಂದು ದಿನ ಹಿಂತಿರುಗಿ ಮನೆಗೆ ಬಂದಾಗ ನನ್ನ ಮೇಜಿನ ಮೇಲೆ 'ಮದುವೆಯ ಕರೆಯೋಲೆ'ಯೊಂದು ಇದ್ದಿತು. ಕೈಗೆತ್ತಿಕೊಳ್ಳುತ್ತಿದ್ದಂತೆಯೇ ತಿಳಿಯಿತು ಅದು ನನಗೆ ಗುರುರಾಜ ತನ್ನ ಮದುವೆಗೆ ನೀಡಿದ ಆಮಂತ್ರಣ. ರಾತ್ರಿ ಬಹಳ ಸಮಯವಾಗಿದ್ದರೂ ಸಹ, ನನ್ನ ಇಡೀ ದಿನ ಪ್ರಯಾಣದ ಆಯಾಸ ಕ್ಷಣಮಾತ್ರ ಮಾಯವಾಗಿ, ಮನಸ್ಸಿನಲ್ಲಿ ಏನೋ ಸಡಗರ-ಸಂತೋಷ. ಮದುವೆಯ ದಿನಾಂಕ, ಮದುವೆಯ ಸ್ಥಳ, ವಧುವಿನ ಹೆಸರು, ವರನ ಹೆಸರು ಎಲ್ಲವೂ ತಿಳಿದಿದ್ದರೂ ಸಹ, ಕರೆಪತ್ರದ ಮೊದಲುಗೊಂಡು ಪ್ರತಿಯೊಂದೂ ಅಕ್ಷರವನ್ನು ನಿಧಾನವಾಗಿ, ತಾಳ್ಮೆಯಿಂದ ಓದಿದೆ. ಇದಕ್ಕೆ ಕಾರಣವೂ ಇತ್ತು; ಗುರುರಾಜ ಎಲ್ಲರಂತೆ ಸಾಮಾನ್ಯ ವ್ಯಕ್ತಿತ್ವದವನಲ್ಲ - ಆತ ಎಲ್ಲದರಲ್ಲೂ ವಿಶಿಷ್ಟ ರೀತಿಯ ಹೊಸತನವನ್ನು ತನ್ನದೇ ಧಾಟಿಯಲ್ಲಿ ಮೂಡಿಸುವಾತ.

"Because you have blessed me with Friendship, Love, Care and Guidance, I would like to.."

ಹೀಗೆ ಶುರುವಾದ ಆಮಂತ್ರಣದಲ್ಲಿ ಅರ್ಥವಿತ್ತು, ಗೌರವವಿತ್ತು, ವಿಧೇಯತೆಯಿತ್ತು, ಸರಳತೆಯಿತ್ತು, ಆತ್ಮೀಯತೆ ಎದ್ದು ತೋರುತ್ತಿತ್ತು. ಗುರುರಾಜ ಹಿಂದೆಂದಿಗಿಂತಲೂ ಅತ್ಮಿಯನೆನಿಸಿದ. ಹೃದಯಕ್ಕಾದ ಆನಂದವು ನನಗರಿವಿಲ್ಲದೆಯೇ ನಗುವಿನ ಮೂಲಕ ಮುಖದಲ್ಲಿ ಕಾಣಿಸಿಕೊಂಡಿತ್ತು. ಇಂಥಹ ಸ್ನೇಹಿತನನ್ನು ಪಡೆದುದಕ್ಕೆ ನಾನೇ ಅದೃಷ್ಟಶಾಲಿ ಎಂಬಂತೆ ನಿಟ್ಟುಸಿರಿಡುತ್ತಲೇ ನನ್ನ ಹಾಸಿಗೆಯ ಜೋಗುಳಕ್ಕೆ ವಶನಾಗಿದ್ದೆ..

ಮಾರನೆಯ ದಿನ ಪ್ರದೀಪ್ ಗೆ ಕರೆಮಾಡಿ ವಿಚಾರಿಸಿದೆ; ಆದರೆ ಪ್ರದೀಪ್ ತನಗೆ ಗುರುರಾಜ್ Invitation ಕೊಟ್ಟಿಲ್ಲವೆಂದು ಹೇಳಿದಾಗ ನನಗೆ ಆಶ್ಚರ್ಯ!! ಗುರುರಾಜ್ ಮನೆಯಿಂದ ನಮ್ಮ ಮನೆಗೆ ಬರುವ ದಾರಿಯಲ್ಲೇ ಪ್ರದೀಪ್ ಮನೆ; ರಾಜು ಪ್ರದೀಪ್ ನನ್ನು ಕರೆಯಲು ಮರೆತದ್ದು ಏಕೆ..? ಹೀಗೆ ಇನ್ನೆರಡು ದಿನಗಳು ಕಳೆದ ನಂತರ, "Wedding Invitation" - "Gururaj" ನಿಂದ ಇ-ಮೇಲ್ ಸಂದೇಶ ನನಗೆ ತಲುಪಿತ್ತು. ಉತ್ಸುಕನಾಗಿಯೇ ಇ-ಮೇಲ್ ನಲ್ಲಿ "To" ಪಟ್ಟಿಯನ್ನು ಗಮನಿಸಿದೆ, ಗುರುರಾಜ "To" ಪಟ್ಟಿಯನ್ನು "BCC" ಮಾಡಿದ್ದ. ಮತ್ತೆ ಪ್ರದೀಪ್ ಗೆ ಕೇಳಲು, ಯಾವುದೇ ಇ-ಮೇಲ್ ಬಂದಿಲ್ಲ ಎಂದು ಹೇಳಿದ. "ಎಲ್ಲಾ mail ಸರಿಯಾಗಿ ನೋಡಪ್ಪ, Spam ಕೂಡ ನೋಡು", ಪ್ರದೀಪ್ ಗೆ ಶಿಫಾರಸ್ಸು ಮಾಡಿದ್ದೆ - ಅಷ್ಟು ನಂಬಿಕೆ ನನಗೆ ಗುರುರಾಜನ ಮೇಲೆ. ಪ್ರದೀಪ್ ಗೆ ಮದುವೆ ಇನ್ನು ಕೇವಲ ಎರಡು ದಿನಗಳಿರುವಾಗಲೂ ಯಾವುದೇ ಸಂದೇಶ ಬಾರದಿದ್ದರಿಂದ, ಈ ವಿಷಯ ತರ್ಕಕ್ಕೆ ನಿಲುಕದೆ ನನ್ನನ್ನು ಗೆದ್ದು ನಿಂತಿತ್ತು.

30-05-2010 ರಂದು ಮದುವೆಯು ನಡೆಯುತ್ತಿದ್ದ ಸ್ಥಳವನ್ನು ತಲುಪಿದಾಗ ಮತ್ತೆ ಪ್ರದೀಪ್ ಗೆ ಕರೆ ಮಾಡಿದ್ದೆ. ತನ್ನ Institute ನಲ್ಲಿ ಪ್ರದೀಪ್ ಯಾವುದೊ Class ನ ಪಾಠ ಮಾಡುವುದರಲ್ಲಿ ನಿರತನಾಗಿದ್ದ. ಮದುವೆಯು ನಡೆಯುತ್ತಿದ್ದ ಸ್ಥಳಕ್ಕೂ ಪ್ರದೀಪ್ Institute ಗೂ ಕೇವಲ ನೂರು ಮೀಟರ್ ಗಳ ಅಂತರ ಅಷ್ಟೇ. ನಾನು ಸುಮಾರು 10 ನಿಮಿಷಗಳವರೆಗೂ ಪ್ರದೀಪ್ ಜೊತೆ ಮಾತನಾಡಿದ್ದಕ್ಕೆ ಕಾರಣವೂ ಇತ್ತು. ಸ್ವಲ್ಪ ಹಿಂಜರಿಕೆಯಿಂದಲೇ ಪ್ರದೀಪ್ ನನ್ನು ಕೇಳಿದ್ದೆ "ಬಾರಪ್ಪ ಮದುವೆಗೆ ಹೋಗಿ ಬರೋಣ.." ಇದಕ್ಕೆ ಪ್ರದೀಪ್ ಒಪ್ಪುವುದಿಲ್ಲವೆಂಬ ನನ್ನ ಕಲ್ಪನೆ ಸುಳ್ಳಾಗಿರಲಿಲ್ಲ. ನಾನೊಬ್ಬನೇ ಮದುವೆಗೆ ಹೋಗಿ ಬಂದಿದ್ದೆ. ನಂತರದ ದಿನಗಳಲ್ಲಿ ಈ ವಿಚಾರವಾಗಿ ಗುರುರಾಜನ ಬಳಿಯಾಗಲಿ ಅಥವಾ ಪ್ರದೀಪ್ ನ ಜೊತೆಯಾಗಲಿ ನಾನು ಪ್ರಸ್ತಾಪ ಮಾಡಲಿಲ್ಲ. ಇಬ್ಬರೂ ನನಗೆ ತೀರ ಅತ್ಮೀಯರಾದ್ದರಿಂದ, ಯಾರನ್ನೂ ಗೊಂದಲಕ್ಕೆ ದೂಡುವ ಬಯಕೆ ನನಗಿರಲ್ಲಿಲ್ಲ.

ನಿನ್ನೆ ಗುರುರಾಜ ಮತ್ತು ನಾನು ಜಯನಗರಕ್ಕೆ ಯಾವುದೋ ಕೆಲಸದ ಮೇಲೆ ಹೊರಟಿದ್ದೆವು. ಹೋಗುವ ದಾರಿಯಲ್ಲಿ ನಮ್ಮಿಬ್ಬರ ಸಂಭಾಷಣೆ ಎಲ್ಲೆಲ್ಲೋ ತಿರುಗಿ, ಪ್ರದೀಪ್ ನನ್ನು ತಲುಪಿತ್ತು. ಗುರುರಾಜು ಹೇಳಿದ "ಪ್ರದೀಪ್ ಮದುವೆಗೆ ಬರಲಿಲ್ಲ". ನನಗೆ ಆಶ್ಚರ್ಯ!! "Card ಕೊಟ್ಟಿಲ್ಲ ಅಂತಿದ್ದ, ನಾನು ಮದುವೆಗೆ ಬಂದಾಗ್ಲೂ phone ಮಾಡಿ ಕರ್ದೆ, ಬಂದ್ರೆ ಸರಿಹೊಗಲ್ಲಪ್ಪ ಅಂದ್ಬಿಟ್ಟ" ಗುರುರಾಜನಿಗೆ ಹೇಳಿದೆ. "ಹಾಗ್ಯಾಕೆ ಅನ್ಕೊಂಡರು ಪ್ರದೀಪ್? ನಿಮ್ಮ ಮನೆಗೆ ಬಂದಿದ್ದ ದಿನಾನೆ ಅವರಿಗೂ Card ಕೊಡ್ಬೇಕು ಅನ್ಕೊಂಡಿದ್ದೆ; ಆ ದಿನ ಜೋರು ಮಳೆ ಬರ್ತಿತ್ತು, ಆಟೋ ಹಿಡಿದು ವಾಪಸ್ ಬಂದ್ಬಿಟ್ಟಿದ್ದೆ. ಇ-ಮೇಲ್ ಮಾಡಿದ್ದೆ ಅವ್ರಿಗೂ, rediffmail id ಅನ್ಸುತ್ತೆ.." ರಾಜು ಹೇಳಿದ. ನಾನು "ಹೇಳಿದೆ ಪ್ರದೀಪ್ ಗೆ, ಸರಿಯಾಗಿ ಎಲ್ಲಾ id ಗಳ್ನು check ಮಾಡು ಅಂತ, but ಅವ್ನು rediff id check ಮಾಡಿರೋದು doubt" ಎಂದೆ. ನನ್ನನ್ನು ಗೆದ್ದು ನಿಂತಿದ್ದ ಈ ವಿಷಯವು ಈಗ ವಾಸ್ತವವನ್ನು ಬಿಚಿಟ್ಟು, ನಗುತ್ತಿತ್ತು.

ಆಗಿದ್ದು ಇಷ್ಟೇ; ಗುರುರಾಜ ಆಮಂತ್ರಣ ಪತ್ರ ಕೊಡುವುದಕ್ಕೆ ಮರೆತಿದ್ದನಾದರೂ, ಇ-ಮೇಲ್ ಕಳುಹಿಸಿದ್ದ. ಪ್ರದೀಪ್ ತನ್ನ ಸಾಕಷ್ಟು ಇ-ಮೇಲ್ ಗಳನ್ನು ಪರಿಶೀಲಿಸಿದ್ದನಾದರೂ, ಗುರುರಾಜನ ಸಂದೆಶವಿದ್ದ ಇ-ಮೇಲ್ ಓದಿರಲಿಲ್ಲ. ಯಾರದ್ದು ತಪ್ಪು ಇದರಲ್ಲಿ? ಒಂದರ್ಥದಲ್ಲಿ ಇಬ್ಬರದ್ದೂ ತಪ್ಪು - ಅದರೂ ಇಬ್ಬರದ್ದೂ ತಪ್ಪಿಲ್ಲ! ಚಲನಚಿತ್ರಗಳಲ್ಲಿ ಬರುವ ಇಂಥಹ ಕೆಲವು ಸನ್ನಿವೇಶಗಳು ಪರದೆಯ ಮೇಲೆ ನಾಟಕೀಯವೆನಿಸಿದರೂ, ಅವುಗಳಿಗೆ ನಿಜಜೀವನದ ಅನುಭವಗಳೇ ಸ್ಪೂರ್ತಿ ಎನ್ನುವುದಕ್ಕೆ ಇದಕ್ಕಿಂತ ನಿದರ್ಶನ ಬೇಕಿಲ್ಲ. ನಾನು ಚಿತ್ರ ನಿರ್ದೇಶಕನಾಗಿದ್ದರೆ (ಸಧ್ಯ! ಬದುಕಿದರು ಪ್ರೇಕ್ಷಕರು..), ಇಂಥದ್ದೊಂದು ಪ್ರಸಂಗವನ್ನು ಚಿತ್ರಿಸದೆ ಇರುತ್ತಿರಲಿಲ್ಲ. ವಾಸ್ತವದ ಅರಿವಾದಾಗ ಗುರುರಾಜ-ಪ್ರದೀಪ್ ಇವರಿಬ್ಬರೂ ಒಬ್ಬರಿಗೊಬ್ಬರು ಇನ್ನೂ ಆತ್ಮೀಯ-ಹತ್ತಿರವಾಗುವುದಂತೂ ಸತ್ಯ ಸಂಗತಿ. ಇದು ನನ್ನ ಬರವಣಿಗೆಯ ಮೂಲಕವೇ ನೆರವೇರಿದರೆ, ನಾನು ಧನ್ಯ!

2 comments:

  1. ಸ್ನೇಹಿತರನ್ನು ಪಡೆಯುವುದು ಕಷ್ಟ ಹಾಗೆ ಸಂಪಾದಿಸಿದ ಸ್ನೇಹವನ್ನು ಮುದುವರೆಸಿ ಕೊಂಡು ಓಗುವುದು ಇನ್ನೂ ಕಷ್ಟ.....ಚಿಕ್ಕ ಚಿಕ್ಕ ವಿಷಯಗಳು ಸ್ನೇಹಕಿಂತ ದೊಡ್ಡದಲ್ಲ

    ReplyDelete
  2. ನಿಮ್ಮ ಮಾತು ಅಕ್ಷರಸಃ ಸತ್ಯ!!
    ಕನ್ನಡದಲ್ಲಿ ಬರೆಯಲು ಒಳ್ಳೆಯ ಪ್ರಯತ್ನ ಮಾಡಿದ್ದಿರಿ, ದಯವಿಟ್ಟು ಮುಂದುವರೆಸಿ :o)

    ReplyDelete

ಖಂಡಿತಾ ನಿಮ್ಮ ಅನಿಸಿಕೆಗಳನ್ನು ತಿಳಿಸಿ. ಧನ್ಯವಾದಗಳು!
Please post your comments. Thank you!