Thursday, September 9, 2010

ಅ(ಪ)ಘಾತ

ದೇವರ ಆಟ.. ಬಲ್ಲವರಾರು..?
ಆತನ ಇದಿರು.. ನಿಲ್ಲುವರಾರು..?
ಕೇಳದೆ ಸುಖವಾ ಕೊಡುವ.. ಹೇಳದೆ ದುಃಖವ ತರುವ..
ತನ್ನ ಮನದಂತೆ ಕುಣಿಸಿ ಆಡುವ..
ಆರೋಗ್ಯ ಕವಚ - 108 (ಛಾಯಾಚಿತ್ರದ ಹಕ್ಕು - ಶ್ರೀ ರಾಜೇಶ್ ಡಾಂಗಿ)

ಈ ಜೀವನವೇ ಹೀಗೆ, ವಿಸ್ಮಯ-ವಿಚಿತ್ರ!!

07-09-2010, ಕೊನೇಯ ಶ್ರಾವಣ ಶನಿವಾರ. ಸುತ್ತಲಿನ ಪರಿಸರ ಹಾಗೂ ಮಾನವರಲ್ಲಿ ನಡೆಯುತಲಿದ್ದ ವಿಚಿತ್ರಗಳ ವ್ಯೂಹದಲ್ಲಿ ಸಿಲುಕಿ, ಹೊರಬರಲು ದಿಕ್ಕೇ ತೋಚದೆ ಕಂಗಾಲಾಗಿದ್ದೆ. ಮನಸ್ಸಿನಲ್ಲಿ ಕವಿದಿದ್ದ ಕಾರ್ಮೋಡಗಳನ್ನು ಚದುರಿಸಲು ಬರವಣಿಗೆಯ ಅಸ್ತ್ರವನ್ನು ಬಳಸದೆ ಅನ್ಯ ಮಾರ್ಗವಿರಲಿಲ್ಲ; ಅದಕ್ಕೊಂದು ಮೊನಚಾದ 'ಶೀರ್ಷಿಕೆ', ಪ್ರಭಾವೀ 'ಛಾಯಾಚಿತ್ರ'ವನ್ನು ಆಯ್ದುಕೊಂಡೆ. ನನ್ನ ಆ ಬರವಣಿಗೆ ಬಿತ್ತರಗೊಂಡಿದ್ದರೆ, ಬಹುಶಃ ಪ್ರಮಾದವಾಗಿಹೊಗುತ್ತಿತ್ತೇನೂ.. ದೈವವಶಾತ್, ನನಗೆ ಬಂದ ದೂರವಾಣಿ ಕರೆಯೊಂದು ಅದನ್ನು ತಪ್ಪಿಸಿತ್ತು.

ನನಗೆ ಕರೆ ಮಾಡಿದವರು ಆಘಾತಕಾರಿ ಅಪಘಾತದ ಸುದ್ದಿಯನ್ನು ತಿಳಿಸಿದರು. ನಮ್ಮ ಪರಿಚಯಸ್ಥರೊಬ್ಬರಿಗೆ ಅಂದು ಸಂಜೆ ನಡೆದುಹೋದ ಆಕಸ್ಮಿಕ ಅಪಘಾತದಲ್ಲಿ ಕಾಲು ಊನವಾಗಿತ್ತು; "ಜೀವ ಉಳಿದದ್ದೇನೆ ಇದ್ದರೂ.. ಅವರ ಅದೃಷ್ಟವೇ ಸರಿ!" ಎಂಬಂತಿತ್ತು ಆ ಮಾತಿನ ಧಾಟಿ. ನಮ್ಮ ನಡುವೆ ಇಷ್ಟು ಮಾತುಗಳ ವಿನಿಮಯವಾಗುವಷ್ಟರಲ್ಲಿ 'ಆರೋಗ್ಯ ಕವಚ -108' ವಾಹನವು ಅಪಘಾತಕ್ಕೀಡಾದ ವ್ಯಕ್ತಿಯನ್ನು ತುರ್ತು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸಾಗಿಸಿತ್ತು. ಜೀವಕ್ಕೇನೂ ಅಪಾಯವಿರಲ್ಲಿಲ್ಲವಾದರೂ, ಕಾಲೊಂದು ಸಂಪೂರ್ಣ ಮುರಿದಿದ್ದರಿಂದ ಇನ್ನು 2-3 ತಿಂಗಳ ಚಿಕಿತ್ಸೆ-ವಿಶ್ರಾಂತಿಯ ಅಗತ್ಯವಿತ್ತು.

ವಿಧಿಯೇಕೆ ಇಷ್ಟು ಕ್ರೂರ? ತುಸು ಕರುಣೆಯಾದರೂ ಬೇಡವೇ ಅದಕ್ಕೆ? ತಾನಾಯಿತು, ತನ್ನ ಕೆಲಸವಾಯಿತು ಎಂಬಂತಿದ್ದವರ ಮೇಲೇಕೆ ಇಂಥಹ ಮುನಿಸು? ತನ್ನ ಚಿಂತನೆಯಲ್ಲಿ, ತನಗೆ ಸರಿಯೆನಿಸಿದಂತೆ ನಡೆದುಕೊಂಡದ್ದೇ ತಪ್ಪಾಗಿ ಹೋಯಿತೆ? ಸ್ವಾರ್ಥವನ್ನು ಕಡೆಗಣಿಸಿ, ಇತರರ ಒಳಿತಿಗಾಗಿ ಮೀಸಲಿಟ್ಟಂಥಹ ಬದುಕು ಅರ್ಥ ಕಳೆದುಕೊಂಡಿತೆ? ಪ್ರಾಮಾಣಿಕವಾಗಿ ಬದುಕಿ-ಬಾಳಬೇಕು ಎಂಬುದೇ ಅನೈತಿಕವೆ? ಹಾಗಾದರೆ, ಅರ್ಥಪೂರ್ಣ-ಸಾರ್ಥಕ ಜೀವನ ನಡೆಸುವುದಾದರೂ ಹೇಗೆ?

ಇಷ್ಟಿದ್ದರೂ, ಅಪಘಾತ ಸಂಭವಿಸಿದ್ದು 'ಕಡೆಯ ಶ್ರಾವಣ ಶನಿವಾರ'ದಂದು; ನಡೆದದ್ದು ಊರ ದೇವಾಲಯದ ಪ್ರಾಂಗಣದಲ್ಲಿ! ಹಾಗಿದ್ದರೆ, ಈ ಅಪಘಾತವು ಮೇಲ್ನೋಟಕ್ಕೆ ಕಾಣಿಸದ, ನಮ್ಮ ಅರಿವಿಗೆ ಬಾರದ, ಸತ್ಯದ ತರ್ಕವೊಂದನ್ನು ತನ್ನೊಳಗೆ ಅಡಗಿಸಿಟ್ಟುಕೊಂಡಿದೆಯೆ? ತನ್ಮೂಲಕ ಮಾನವರ ಸತ್ಯಾಸತ್ಯತೆಯ ಅರ್ಥವನ್ನು ಅಲ್ಲಗಳೆದಿದೆಯೆ? ಇದು, ಮಾನವರಾದ ನಾವು ಸತ್ಯವೆಂದು ಭಾವಿಸಿಕೊಂಡದ್ದನ್ನು ಮಿಥ್ಯವೆಂದು ತಿಳಿಸಿಕೊಡುವ ದೇವರ ಲೀಲೆಯೇ? ಮೇಲ್ನೋಟಕ್ಕೆ, ಸಾಮಾನ್ಯ ಮಾನವರಾದ ನಮಗೆ ಸರಿಯೆನಿಸುವುದು ಭಗವಂತನಲ್ಲಿ ತಪ್ಪೇ?

ದಿನಗಳು ಕಳೆದಂತೆಲ್ಲಾ ಜೀವನವು ಇನ್ನಿಲ್ಲದಂತೆ ಒಗಟಾಗಿ ಕಾಣುತ್ತಿದೆ; ದಾರಿ ತಪ್ಪಿದ ಪಯಣವೆಂಬಂತೆ ಭಾಸವಾಗುತ್ತಿದೆ. ನಮ್ಮ ಸೃಜನಶೀಲ ತರ್ಕಕ್ಕೆ ನಿಲುಕದ ಬದುಕನ್ನು ಬಾಳಬೇಕಾದದ್ದು ನಮ್ಮ ಜನ್ಮಸಿದ್ಧ ಹಕ್ಕೋ ಅಥವಾ ಅನಿವಾರ್ಯ ಶಿಕ್ಷೆಯೋ; ವರವೋ ಅಥವಾ ಶಾಪವೋ ತಿಳಿಯಲು ವಿಫಲನಾಗಿದ್ದೇನೆ.

7 comments:

 1. ನಡೆದದ್ದಕ್ಕೆ ಅರ್ಥ ಕಲ್ಪಿಸದೆ ಅದು ವಿಧಿಯೋ, ದೈವ ಲೀಲೆಯೊ ಅದನ್ನು ಅರಿಯಲು ನಮಗೆ ಅಷ್ಟು ಶಕ್ತಿಯಿಲ್ಲವೆಂದು ತಿಳಿಯುವ ನಾನು, ಈ ರೀತಿ ಆಗುವುದೆಲ್ಲ ಪ್ರಕೃತಿಯು ನಮಗೆ ಒಮೊಮ್ಮೆ ಕೊಡುವ ಛಾಟಿಯ ಏಟೆಂದು ಭಾವಿಸುತ್ತೇನೆ. ಹೇಗೆ ಅಪ್ಪ, ಅಮ್ಮನಿಂದ ತುಂಬಾ ಹಠ ಮಾಡುವ ಮಗುವು ಒಮೊಮ್ಮೆ ಏಟು ತಿನ್ನುತ್ತದೋ, ಹಾಗೆ ಇದು. ಇದು ನಮಗೆ ಪಾಠ ಕಲಿಸಲೆಂದು ಅರಿತು ಜೀವನದಲ್ಲಿ ಮೇಲೇಳಲೆಂದೇ ಹೊರತು ಇದರಿಂದ ಕುಗ್ಗಬಾರದೆನಿಸುತ್ತದೆ. ಯಾಕೆಂದರೆ ಈ ಪೆಟ್ಟು ದೈಹಿಕವಾಗಿದ್ದರೆ ಮದ್ದಿಂದ ಗುಣವಾಗಬಹುದು ಆದರೆ ಜೀವನದಲ್ಲಿ ಈ ರೀತಿಯ ಪೆಟ್ಟುಗಳು ಮಾನಸಿಕವಾಗಿ ಆದಾಗ ಯಾರಿಗೂ ಕಾಣಿಸದು ಅದಕ್ಕೆ ನಮ್ಮ ಸಹನೆ ಹಾಗೂ ಬಂದದ್ದೆಲ್ಲಾ ಎದುರಿಸುವ ಧೈರ್ಯವೊಂದೇ ಮದ್ದು.

  ReplyDelete
 2. ಇದು ದೇವರ ಆಟದಲ್ಲಿ ವಿದಿಯಬರಹ .ಅವರು ಒಳ್ಳೆಯ ಉದ್ದೇಶದಿಂದ ಅವರಿಗೆ ಉಪಕಾರಮಾಡಲು ಹೋಗಿ ಈ ಅಪಘಾತವನ್ನು ಅನುಭವಿಸಬೇಕಾಯಿತು .ಇದು ಅಕಸ್ಮಿಕವಾದರೂ ಇದನ್ನು ಅವರ ಹಣೆಯಲ್ಲಿ ಬರೆದಿದ್ದರಿಂದ ಯಾರು ತಪ್ಪಿಸಲಾಗಲಿಲ್ಲ .ಏಕೆಂದರೆ" ವಿಧಿ ಬರೆದ ಹಣೆಬರಹವಂ ಹರಿಹರರಿಂದ ತಪ್ಪಿಸಲು ಸಾದ್ಯವೇ?" .ಹೀಗಾಗಿ ಇದಕ್ಕೆ ಯಾರನ್ನು ಹೊಣೆ ಮಾಡುವಹಾಗಿಲ್ಲ .ಇದು ದೇವರ ಸನ್ನಿದಿಯಲ್ಲಿರಲಿ ಎಲ್ಲೇ ಇರಲಿ ನಡೆಯಬೇಕಾದದ್ದು ನಡೆದಿದೆ .ಇದು ತನ್ನ ಪುಣ್ಯ ಮತ್ತು ಉಪಕಾರದಿಂದಾಗಿ ಕಡಿಮೆ ಪ್ರಮಾಣದಲ್ಲಿ ಆಗಿದೆ .ಸದ್ಯಕ್ಕೆ ಪ್ರಾಣಕ್ಕೆ ಯಾವ ಅಪಾಯ ಆಗಲಿಲ್ಲವೆಂದು ಇಲ್ಲಿ ಖುಷಿಪದಬೇಕಾಗಿದೆ.

  ReplyDelete
 3. ಸುಮನ ರವರೆ, ನನ್ನ ಬ್ಲಾಗ್ ಗೆ ಆತ್ಮೀಯ ಸ್ವಾಗತ :o)

  ನಿಮ್ಮ ಮಾತು ಅಕ್ಷರಸಹ ಸತ್ಯ. ಹದ್ದು ಮೀರಿ ನಾವು ನಡೆದುಕೊಂಡಾಗ, ನಮ್ಮ ಇತಿ-ಮಿತಿಗಳನ್ನು ಕಡೆಗಣಿಸಿದಾಗ ನಮ್ಮನ್ನು ತಿದ್ದಿ ಸರಿ ದಾರಿಯಲ್ಲಿ ನಡೆಸಲು ಪ್ರಕೃತಿ/ದೈವವು ಛಾಟಿ ಏಟುಗಳಂಥಹ ಆಕಸ್ಮಿಕಗಳನ್ನು ತಂದೊಡ್ಡುತ್ತದೆ. ಇದರಿಂದ ನಾವು ನಮ್ಮ ತಪ್ಪು-ಸರಿಗಳ ಆತ್ಮಾವಲೋಕನ ಮಾಡಿಕೊಂಡು ಮಾನವೀಯತೆಯಿಂದ ಬದುಕು ಸಾಗಿಸುವುದನ್ನು ಕಲಿಯಬೇಕು.

  ಕೇಶು ಸರ್, ಇದು ಹಣೆಬರಹವೋ ಅಥವಾ ನಾವೇ ತಂದುಕೊಳ್ಳುವ ಗಂಡಾಂತರಗಳೋ ತಿಳಿಯದು. ಆದರೆ, ಇನ್ನು ಮುಂದೆಯಾದರೂ ಬುದ್ಧಿ ಕಲಿಯಲಿಲ್ಲವೆಂದರೆ, ಆ ದೇವರೂ ಮತ್ತೊಮ್ಮೆ ಕ್ಷಮಿಸಲಾರ ಎಂದನಿಸುತ್ತದೆ.

  ReplyDelete
 4. ವಿಧಿ ವಿಪರೀತ ವಿಧಿ ಆಘಾತ
  ಇದು ಎಲ್ಲರ ಬಾಳಿನಲ್ಲೂ ನಡೆದೇ ನಡೆಯುತ್ತದೆ.ಕಾರಣ ನಾವು ಎಸ್ಟೇ ಜಾಗೃತ ರಾಗಿದ್ದರು ನಮ್ಮೆಲ್ಲರನ್ನೂ ಆಡಿಸುವ ನಮ್ಮ ಭಾವನೆಗೂ ನಿಲುಕದ ಒಂದು ಶಕ್ತಿಯು ನಮ್ಮನ್ನು ಆಟವಾಡಿಸುತ್ತಿದ್ದು ಅದರ ಬಗ್ಗೆ ಗಮನ ವಿಲ್ಲದಾಗ ಹೀಗೆ ನಮಗೆ ಜ್ಞಾಪಿಸಲು ಸಹ ಈ ರೀತಿ ಮಾಡುತ್ತಿರಬಹುದು.ಈ ಆಘಾತ ಇದು ಹೇಗೆ, ಯಾವಾಗ, ಎಲ್ಲಿ,ಎಂಬುದು ನಿಗೂಡ ರಹಸ್ಯ. ಇಂತಹ ನಿಗೂಡ ರಹಸ್ಯಗಳ ನಡುವೆ ಬದುಕುವ ನಾವು ದೇವರನ್ನು ಮರೆತರೆ ಕೂಡುವ ಚಾಟಿ ಏಟು.ಇದನ್ನು ಮರೆತರೆ ಆಗಾಗ ಹಾಗುವುದು ಈ ರೀತಿಯ ಉಡುಗೊರೆ ಎಂಬುದು ನನ್ನ ಅನಿಸಿಕೆ.

  ReplyDelete
 5. ಚಂದು, ಬದುಕು ಒಂದು ನಿಗೂಢ ರಹಸ್ಯ ಎಂಬ ನಿಮ್ಮ ಮಾತು ಸತ್ಯವಾದುದು. ನಿಗೂಢವಾದ ಜೀವನ ಪಯಣದಲ್ಲಿ ಇಂಥ ಕಹಿ ಘಟನೆಗಳು ಆಕಸ್ಮಿಕ; ಆದರೂ, ನಮ್ಮ ಕರ್ಮಾ-ಕರ್ಮದ ಫಲದಿಂದ ಅನಿವಾರ್ಯ ಕೂಡ :o)

  ReplyDelete
 6. ನಿಜ ಆದರೂ ನನ್ನ ಅನಿಸಿಕೆ ಏನಂದರೆ ನಮ್ಮ ಕರ್ಮದ ಫಲ ಎಂದು ತಾವು ಏಗೆ ಹೇಳುವಿರಿ? ಕೆಲವೊಂದು ಸಲ ನಮ್ಮ ಅಚಾತುರ್ಯ,ಬೇರೆಯವರ ಅಚಾತುರ್ಯದಿಂದಲೂ ಸಹ ಹೀಗೆ ಕೆಲವು ಕಹಿ ಘಟನೆಗಳು ನಡೆಯ ಬಹುದಲ್ಲ.
  ಇದನ್ನು ಹೇಗೆ ನಾವು ನಮ್ಮ ಕರ್ಮದ ಫಲ ಹಾಗಲು ಸಾದ್ಯ. ಸರಿ ನಾನೇ ನನ್ನ ಮೂದಲ ಬರಹದಲ್ಲಿ ನನಗಾದ ಅಫಘಾತದ ಬಗ್ಗೆ ಬರೆದಿದ್ದು, ನಾವು ಸರಿಯಾದ ಮಾರ್ಗದಲ್ಲಿ ನಡೆದರೂ ಬೇರೆಯವರಿಂದ ಅಚಾತುರ್ಯ ನಡೆದಿದ್ದು ಇದು ನನ್ನ ಕರ್ಮದ ಫಲವೇ ಅಥವಾ ಅವರ ಕರ್ಮದ ಫಲವೇ .
  ಸರಿ ನಿಮ್ಮ ಪ್ರಕಾರ ಕರ್ಮದ ಫಲ ಎಂದು ತಾವು ತಿಳಿಸಿದ್ದು, ಕೇವಲ ಕಹಿ ಘಟನೆಗಳು ನಡೆದರೆ ಮಾತ್ರ ನಮ್ಮ ಜನ ಕರ್ಮದ ಫಲ ಎಂದು ಹೇಳುತ್ತಾರೆ.ಆದರೆ ಸಹಿ ಘಟನೆಗಳು ನಡೆದರೆ ಮಾತ್ರ ಯಾರಿಗೂ ತಿಳಿಸುವುದಿಲ್ಲ (ಬಂಗಾರ ಸಿಕ್ಕರೆ,ದುಡ್ಡು ಸಿಕ್ಕಿದರೆ )ಹೀಗೆ. ಕೆಲವುಂದು ಮಾತ್ರ ಹೇಳುತ್ತಾರೆ ಅದು ಬಿಡಿ ಕೆಲಸ ಸಿಕ್ಕಿದೆ ಎಂದು ಇದೆಲ್ಲಾ ಕಾಮನ್ ಬಿಡಿ.ಹೀಗೆ ನಮ್ಮ ಕರ್ಮದ ಫಲ ಅನ್ನುವ ಬದಲು ಆಕಸ್ಮಿಕ ಎಂದೂ ಹೇಳಬಹುದಲ್ಲವೇ.

  ReplyDelete
 7. ಚಂದು, ನಾವು ಏನನ್ನು ಆಕಸ್ಮಿಕ ಅಂದುಕೊಳ್ಳುತ್ತೆವೋ ಅದು ಮೂಲತಃ ಹಾಗಿಲ್ಲದಿರಲೂಬಹುದು! ಈ ಪಾಪ-ಪುಣ್ಯ-ಕರ್ಮಗಳ ತರ್ಕದ ಬಗ್ಗೆ ಸದ್ಯದಲ್ಲೇ ಬರೆಯಲಿದ್ದೇನೆ, ಅಲ್ಲಿ ಚರ್ಚಿಸೋಣ :o)

  ReplyDelete

ಖಂಡಿತಾ ನಿಮ್ಮ ಅನಿಸಿಕೆಗಳನ್ನು ತಿಳಿಸಿ. ಧನ್ಯವಾದಗಳು!
Please post your comments. Thank you!