Thursday, September 23, 2010

ಮನಸ್ಸಿನ ಬೆನ್ನು ಹತ್ತಿ..

"ಇವತ್ತು ಯಾಕೋ ಮನಸ್ಸೇ ಸರಿಯಿಲ್ಲ.."
"ಮನಸ್ಸಿಗೆ ತುಂಬಾ ಬೇಜಾರಾಗಿದೆ.."
"ನಿನ್ನ ಜೊತೆ ಮಾತಾಡಿದ್ರೆ ಮನಸ್ಸಿಗೆ ಸಮಾಧಾನ.."
"ನೋವನ್ನು ಇನ್ನೊಬ್ಬರ ಹತ್ತಿರ ಹೇಳಿಕೊಂಡ್ರೆ ಮನಸ್ಸು ಹಗುರಾಗುತ್ತೆ.."

ಮೇಲಿನ ವಾಕ್ಯಗಳು ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ನಮ್ಮಿಂದ ಸಾಮಾನ್ಯವಾಗಿ ಬಳಸಲ್ಪಡುತ್ತವೆ, ಅಲ್ಲವೇ? ಮನಸ್ಸು.. ಮನಸ್ಸು.. ಮನಸ್ಸು.. ನಮ್ಮ ಸುಪ್ತ ಭಾವನೆಗಳನೆಲ್ಲಾ ತನ್ನೊಳಗೆ ಅಡಗಿಸಿಟ್ಟುಕೊಂಡಿರುವ, ಅತ್ಯಂತ ಶಕ್ತಿಶಾಲಿ ಈ ಮನಸ್ಸು. ಆದರೆ, 'ಮನಸ್ಸು' - ಇದು ನಮ್ಮೊಳಗೆ ಇರುವುದಾದರೂ ಎಲ್ಲಿ? ಮನಸ್ಸಿಗೊಂದು ಅಸ್ತಿತ್ವ ನಿಜವಾಗಲೂ ಇದೆಯೇ??


ಭಾವುಕರಾಗಿ ನಾವು (ಮನಸಾರೆ?) ಮಾತನಾಡುವಾಗ, ಬಹುತೇಕ ನಮ್ಮ ಕೈಗಳು ನಮಗರಿವಿಲ್ಲದೆಯೇ ಹೃದಯದ ಮೇಲಿರುತ್ತವೆ. ಹಾಗಾದರೆ, ಮನಸ್ಸು ಎದೆಯ ಗೂಡಿನಲ್ಲಿದೆಯೇ? ವೈಜ್ಞಾನಿಕವಾಗಿ ಹೇಳುವುದಾದರೆ, ನಮ್ಮ ಎದೆಯ ಭಾಗದಲ್ಲಿರುವುದು ಎರಡು ಪ್ರಮುಖ ಅಂಗಗಳು; ಅವುಗಳೆಂದರೆ  - ಹೃದಯ (Heart) ಮತ್ತು ಪುಪ್ಪುಸ (Lungs). ಹೃದಯವು ರಕ್ತಸಂಚಲನ ಮಾಡಿದರೆ, ಪುಪ್ಪುಸವು ಉಸಿರಾಟದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಹಾಗಾದರೆ, ಇವುಗಳಿಗೆ ಭಾವನೆಗಳನ್ನು ಸೃಷ್ಟಿಸುವ ಅಥವಾ ವ್ಯಕ್ತಪಡಿಸುವ ಶಕ್ತಿ ಇಲ್ಲ; ಅಂದ ಮೇಲೆ ಮನಸ್ಸು ಹೃದಯದಲ್ಲಿಲ್ಲ. ಇನ್ನೆಲ್ಲಿ ಇದ್ದೀತು?

"ವ್ಯಕ್ತಿಯ ಯಾವ ಅಂಶವು ಆತನಲ್ಲಿ ಪ್ರಾಪಂಚಿಕ ಅರಿವನ್ನು ಸೃಷ್ಟಿಸಿ, ಲೌಕಿಕ ಅನುಭವಗಳನ್ನು ಗಮನಕ್ಕೆ ತರುತ್ತಾ, ಅವನಿಗೆ ಆಲೋಚನಾಶಕ್ತಿಯನ್ನು ಕೊಟ್ಟು, ಪ್ರಜ್ಞಾ ಸ್ಥಿತಿಯಲ್ಲಿ ಚಿಂತಿಸುವುದಕ್ಕೆ ಸಹಾಯಕವಾಗುತ್ತದೆಯೋ, ಅದನ್ನು ಒಟ್ಟಾರೆಯಾಗಿ 'ಮನಸ್ಸು' ಎಂದು ಗುರುತಿಸಲಾಗಿದೆ" - ಇದು English ನಿಂದ ಕನ್ನಡಕ್ಕೆ ನೇರ ಅನುವಾದ ಮಾಡಿರುವ 'ಮನಸ್ಸಿನ' ಅರ್ಥ.

ಮನಸ್ಸಿಗೆ ಒಂದು ನಿರ್ದಿಷ್ಟವಾಗಿ ನಿರೂಪಿತಗೊಂಡ ವ್ಯಾಖ್ಯಾನ ನೀಡುವಲ್ಲಿ ಇಂದಿಗೂ ವಿಜ್ಞಾನಿಗಳಲ್ಲಿಯೇ ಸಹಮತ ಸಾಧ್ಯವಾಗಿಲ್ಲ. ಮನಸ್ಸು 'ಆರನೇ ಇಂದ್ರಿಯ', 'ಹನ್ನೊಂದನೇ ಇಂದ್ರಿಯ' ಎಂಬುದಾಗಿ ವಿವಿಧ ಶಾಸ್ತ್ರಗಳಲ್ಲಿ ಕೇವಲ ತರ್ಕಕ್ಕೆ ನಿಲುಕುವಂತೆ ವಿವರಣೆ ನೀಡಲಾಗಿದೆ. ಮನುಷ್ಯನ ಶಿರಸ್ಸಿನಿಂದ ಪ್ರಾರಂಭಗೊಂಡು ಪಾದದವರೆವಿಗೂ ದೇಹರಚನಾ ವಿಜ್ಞಾನದಲ್ಲಿ ಮನಸ್ಸನ್ನು ಗುರುತಿಸಲಾಗಿಲ್ಲ ಹಾಗೂ ಮನಸ್ಸಿನ ವ್ಯಾಖ್ಯಾನವಿಲ್ಲ. ಅಂದ ಮೇಲೆ, ಮನಸ್ಸಿಗೆ ಯಾವುದೇ ಭೌತಿಕ ಅಸ್ತಿತ್ವ (physical existence) ನಮ್ಮ ದೇಹದಲ್ಲಿ ಎಲ್ಲೂ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ.

"ಪ್ರತ್ಯಕ್ಷ ಕಾಣಸಿಗದೆ, ಕೇವಲ ಅವನು ನಡೆಸಿದನೆಂದು ಹೇಳಲಾಗುವ ಪವಾಡಗಳಿಂದ ನಂಬಲಾಗದ ಕಾರಣ - 'ದೇವರ' ಅಸ್ತಿತ್ವವು ಇಂದಿಗೂ ಪ್ರಶ್ನಾರ್ಥಕ" ಎನ್ನುವ ನಾಸ್ತಿಕರ ವಾದವನ್ನು ಇಲ್ಲಿ ಉಪಯೋಗಿಸಿಕೊಂಡು ಹೇಳುವುದಾದರೆ, "ಪ್ರತ್ಯಕ್ಷ ಕಾಣಸಿಗದೆ, ದೇಹರಚನಾ ವಿಜ್ಞಾನದಲ್ಲಿ ಉಲ್ಲೇಖವಿರದೆ, ಕೇವಲ ಅದು ನಮ್ಮೊಳಗೆ ನಡೆಸುವ ದ್ವಂದ್ವ-ಪವಾಡಗಳಿಂದ ನಂಬಲಾಗದ ಕಾರಣ - 'ಮನಸ್ಸು', ಇದರ ಅಸ್ತಿತ್ವವು ಪ್ರಶ್ನಾರ್ಥಕ" ಎಂದಾಗುತ್ತದಲ್ಲವೆ?!

ಪ್ರಖ್ಯಾತ ಮನಃಶಾಸ್ತ್ರಜ್ಞರಾದ ಡಾ. ಮೀನಗುಂಡಿ ಸುಬ್ರಮಣ್ಯ ರವರು ಅವರ ಪ್ರಸಿದ್ಧ 'ಮಾನಸಿಕ ಸಮಸ್ಯೆಗಳಿಗೆ ಮನಸ್ಸು ಇಲ್ಲದ ಮಾರ್ಗ' ಕೃತಿಯಲ್ಲಿ ಜನಸಾಮಾನ್ಯರಾದ ನಾವು ಆಗಿಂದಾಗ್ಯೆ 'ಮನಸ್ಸು' ಎಂದು ಗುರುತಿಸಿಕೊಳ್ಳುವುದು ತಾರ್ಕಿಕವಾಗಿ 'ನಾನು' ಎಂದಾಗಬೇಕು ಎಂದು ಪ್ರತಿಪಾದಿಸುತ್ತಾರೆ. ಅಂದರೆ, ದೇಹದಲ್ಲಿರುವ 'ಮೆದುಳು' ಎಂಬ ಅಂಗವನ್ನು ಉಪಯೋಗಿಸಿಕೊಂಡು ನಾವು ಮಾಡುವ ನಿರಂತರ ಚಿಂತನೆಗಳಿಗೆ ಕಾರಣ ಸ್ವತಃ 'ನಾವೆಯೇ' ಹೊರೆತು ಅಸ್ತಿತ್ವ ಹೊಂದಿರದ 'ಮನಸ್ಸು' ಅಲ್ಲ ಎಂಬುದು - ಈ ತಾತ್ವಿಕ ವಿವರಣೆಯು ವೈಜ್ಞಾನಿಕವಾಗಿ ಸರಿಯೆನಿಸುತ್ತದೆ. ಸೋಜಿಗದ ವಿಷಯವೆಂದರೆ, ದೇಹದಲ್ಲಿ ಇರದ 'ಮನಸ್ಸು' ನಮ್ಮ ಪ್ರತಿಯೊಂದು ಅಂಗಾಂಗಗಳನ್ನೊಳಗೊಂಡು ನಮ್ಮ ಮೇಲೆಯೇ ಇಡಿಯಾಗಿ ಸಾಧಿಸಿರುವ ಹಿಡಿತವು ಅಚ್ಚರಿಯೆನಿಸದೆ ಇರಲಾರದು.

"ನಾನು ನಿಮ್ಮನ್ನು ಮನಸಾರೆ ಪ್ರೀತಿಸುತ್ತೇನೆ.."
"ನನ್ನ ಮನಸ್ಸಿನ ತುಂಬೆಲ್ಲಾ ನೀವೇ ತುಂಬಿಕೊಂಡಿದ್ದೀರಿ.."
"ನನ್ನ ಮನಸ್ಸು ಎಂದೆಂದಿಗೂ ನಿಮ್ಮದೇ.."
ಕೆಲವರು ಹೀಗೆಲ್ಲಾ ಹೇಳುವುದುಂಟು. ಆದರೆ, ವಾಸ್ತವದಲ್ಲಿ ಇರದ ಮನಸ್ಸನ್ನು ಇತರರಿಗೆ ನೀಡುವುದಾದರೂ ಹೇಗೆ ಎಂಬುದೇ ನನ್ನೆದುರಿಗಿರುವ ಬಹು ದೊಡ್ಡ ಸವಾಲು.

'ಮನಸ್ಸಿನ' ಬೆನ್ನು ಹತ್ತಿ ಹೊರಟ ನನಗೆ ಕೊನೆಗೆ ದೊರೆತದ್ದು ಬರಿಯ 'ಶೂನ್ಯ'ವೆ ಹೊರೆತು ಅನ್ಯವಲ್ಲ!!

17 comments:

 1. Though I did not understand a word of this, I feel ashamed that I don't blog as regularly as you do!! : o

  ReplyDelete
 2. Deepa, that is understood as you are from a busy Profession - Journalism.

  The post is written about our 'MIND' :o)

  ReplyDelete
 3. Oh cool.
  My mind is the only organ in my body whose presence I miss the most. Lol! : D

  ReplyDelete
 4. Deepa, the post tries to find the so-called organ 'MIND' within human body.

  First of all, where is the organ called 'MIND' located in our body?

  ReplyDelete
 5. "ಮನಸ್ಸು" ಇದು ಎಲ್ಲಿದೆಯೋ ಯಾರಗೂ ತಿಳಿಯದ ಸಂಗತಿ.
  "ಮನಸ್ಸು" ನಮ್ಮ ಭಾವನೆಗೆ ಕಾಣಸಿಗದ ಅಂಶವಾಗಿದೆ. ಇದನ್ನು ಯಾರೂ ಸಹ ಅರಿಯಲಾರರು.ಇದನ್ನು ತಿಳಿಯಲು ನಾವು ಯಾವುದಾದರು ಒಂದು ಹೊಸ ಸಂಶೋದನೆ ಮಾಡುವುದು ಸರಿ ಅಲ್ಲವೆ.ಇಲ್ಲವಾದಲ್ಲಿ ನಾವು ಯಾವುದಾದರು ಮನಸಿಗೆ ಸಂಬಂದಿಸಿದ ಮನೋತಜ್ನರನ್ನು ಸಂಪರ್ಕಿಸಲು ಪ್ರಯತ್ನಿಸೋಣ.

  ReplyDelete
 6. ಚಂದು, ನಿಮ್ಮ ಅನಿಸಿಕೆಗೆ ಸ್ವಾಗತಾರ್ಹ! ತಜ್ಞರನ್ನು ಕಾಣುವ ಬದಲು, ಒಂದು ಹೊಸದಾದ ಸಂಶೋಧನೆಯನ್ನೇ ಕೈಗೊಂಡರೆ ಹೇಗೆ? :o)

  Deepa, yes! It is not just interesting, but very very interesting. The fact we try to attribute every of our sentiments, thoughts, feelings, intellect, etc. to MIND is really astonishing. Astonishing because, though we all know there is no ORGAN called MIND in our body, we still continue to make MIND responsible for everything that is actually done by OUR SELF :o)

  ReplyDelete
 7. ನಿಮ್ಮ ಬರವಣಿಗೆ ಅಚ್ಚುಕಟ್ಟಾಗಿದೆ.
  ಇದೊಂದು ಸಂಶೊಧನೆಗೆ ಸಿಗದ ವಿಷಯ ಅನಿಸುತ್ತದೆ ನನಗೆ. ಇದು ಭಾವನೆಗೆ ಕಾಣಸಿಗದ ಎನ್ನುವದಕ್ಕಿಂತ, ನಮ್ಮ ಭಾವನೆಗಳೇ ಈ ಮನಸ್ಸು ಅನಿಸುವುದಿಲ್ಲವೇ? ಮನಸ್ಸನ್ನು ಒಂದು ಶರೀರದ ಅಂಗವೆಂದುಕೊಂಡಿದ್ದೇವೆ. ’ನಾನು’ ಎನ್ನುವುದು ನಮ್ಮ ದೈಹಿಕ ಇರುವಿಕೆಯನ್ನು ಪ್ರತಿಬಿಂಬಿಸುವುದರಿಂದ ಈ ಮನಸ್ಸು ಎಂಬುದು ನಮ್ಮ ಭಾವನೆಗಳಿಗೆ ಕೊಟ್ಟ ಮತ್ತೊಂದು ಕಾವ್ಯಗಳಿಂದ ಹುಟ್ಟಿದ ಪದವೇನೊ. ಅಥವಾ ನಮ್ಮೆಲ್ಲಾ ಭಾವನೆಗಳಿಂದ ’ನಾನು’ ಎಂಬುದು ಆಗಿರುವಾಗ, ನನಗೆ ಒಮೊಮ್ಮೆ ಪ್ರಶ್ನೆ ಬರುವುದು ಈ ಭಾವನೆಗಳೆಲ್ಲಾ ನಮ್ಮ ಹುಟ್ಟಿನಂದಿನಿಂದ ಬಂದ ನಮ್ಮ ಸುತ್ತ ಮುತ್ತಲಿನ ಪರಿಸರದ ಪ್ರಭಾವದಿಂದ ನಮ್ಮ ಮಿದುಳಿನಲ್ಲಿ ಹಿಡಿದಿಟ್ಟಲ್ಪಟ್ಟಂಥ ತರಂಗಗಳೇಕೆ ಅಲ್ಲ? ಕೆಲವೊಬ್ಬರು ಹೃದಯ ಎಂದರೆ, ಮತ್ತೆ ಕೆಲವರು ಮಿದುಳು ಎನ್ನುವುದುಂಟು.

  ಕೆಲವೊಮ್ಮೆ ನಾವು ಕೇಳಿರುವುದು ಉಂಟು "ನಿನ್ನ ಬುದ್ದಿಯನ್ನು ಕೇಳು ಮನಸ್ಸನ್ನಲ್ಲ" ಎಂದು. :)

  ReplyDelete
 8. ಸುಮನ ರವರೆ, ನನ್ನ ಬರವಣಿಗೆಯ ಬಗೆಗಿನ ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು!

  ಸಂಶೋಧನೆ ಎಂದರೆ, ಅದು ಬರಿಯ ಪ್ರಯೋಗಶಾಲೆಯಲ್ಲಿ ನಡೆಸುವ ಪರೀಕ್ಷೆಗಳು ಎಂದು ಪರಿಗಣಿಸಬೇಕಾಗಿಲ್ಲ. ಮೇಲಿನ ನಿಮ್ಮ ಅನಿಸಿಕೆಗಳು ಹಾಗೂ ವಿಚಾರಧಾರೆಗಳೂ ಸಹ ಒಂದು ರೀತಿಯ 'ನಮ್ಮೊಳಗಿನ ಸಂಶೋಧನೆ', ಇಂಥಹ 'ಸಂ'-'ಶೋಧನೆ' ಈ ವಿಷಯದಲ್ಲಿ ಅತ್ಯಂತ ಪ್ರಸ್ತುತ ಎನಿಸುತ್ತದೆ ನನಗೆ.

  'ಮೆದುಳು' ಎನ್ನುವುದು ವೈಜ್ಞಾನಿಕವಾದರೆ, 'ಮನಸ್ಸು' ಎನ್ನುವುದು ಭಾವನಾತ್ಮಕವಾದುದು'; 'ಮೆದುಳಿನ' ಕ್ರಿಯಾತ್ಮಕ ಚಟುವಟಿಕೆಗಳನ್ನು 'ಮನಸ್ಸು' ಎಂದು ಪರಿಗಣಿಸಬಹುದೇ? ಮೆದುಳು ಶರೀರದಲ್ಲಿರುವ ಇತರೆ ಅಂಗಗಳು ಹಾಗೂ ಸುತ್ತಲಿನ ಪರಿಸರದೊಂದಿಗೆ ನಮ್ಮ ಬಾಲ್ಯದಿಂದ ಬೆಳೆಸಿಕೊಂಡು ಬಂದಿರುವ ಸಂವಹನಾ ಸಾಧನವೇ 'ಮನಸ್ಸು' ಇರಬಹುದಲ್ಲವೇ?

  ತರ್ಕ ಅದೇನೇ ಇರಲಿ, ನಾನು ಇಲ್ಲಿ ಸ್ಪಷ್ಟಪಡಿಸಲು ಬಯಸುವುದೇನೆಂದರೆ - 'ಮನಸ್ಸು' ನಮ್ಮ ಹಿಡಿತದಲ್ಲಿದೆಯೋ ಹೊರೆತು ನಾವು ಮನಸ್ಸಿನ ಹಿಡಿತದಲ್ಲಿಲ್ಲ ಎಂಬುದು :o)

  ReplyDelete
 9. ನಿಮ್ಮ ಕೊನೆಯ ಮಾತು ಮತ್ತೆ ಪ್ರಶ್ನೆಯನ್ನೆಬ್ಬಿಸಿದೆ ನನ್ನಲ್ಲಿ :) ’ನಾವು’ ಮನಸ್ಸಿನ ಹತೋಟಿಯಲ್ಲಿಲ್ಲ ಎಂದೇನೋ ನಾನೂ ಹೇಳಿರುವುದುಂಟು :) ...ಆದರೆ, ಯಾಕೋ ಹಲವು ಪ್ರಶ್ನೆಗಳು ಕಾಡತೊಡಗಿತು, ’ನಾವು’ ಮನಸ್ಸಿನ ಹತೋಟಿಯಲ್ಲಿಲ್ಲ ಎಂದರೆ, ಇನ್ಯಾವುದರ ಹತೋಟಿಯಲ್ಲಿದ್ದೇವೆ? ಹಾಗು ನಾನು ಮತ್ತು ನನ್ನ ಮನಸ್ಸು ಅನ್ನುವುದನ್ನು ಬೇರ್ಪಡಿಸಬಹುದೇ? ಯಾವುದು ಯಾವುದನ್ನು ಹತೋಟಿಯಲ್ಲಿಟ್ಟಿದೆ ಎಂದು ನಾವು ಇವರೆಡನ್ನು ಬೇರ್ಪಡಿಸಬಹುದೇ? ಇಲ್ಲಿ ದ್ವೈತವಿಲ್ಲವೇನೊ ಅನಿಸುವುದಿಲ್ಲವೇ? ’ನಾನು’ ಎನ್ನುವುದಕ್ಕೆ ’ಮನಸ್ಸು’ ಅಥವಾ ಭಾವನೆಗಳೇ ಇಲ್ಲದಿದ್ದರೆ, ’ನಾನು’ ಎನ್ನುವುದು ಇರುವುದೇ? ಒಳ್ಳೆಯ ಭಾವನೆಗಳಿಂದ ಒಳ್ಳೆಯ ಮನಸ್ಸು ಎನ್ನಬಹುದು ಹಾಗೂ ಅದಕ್ಕೆ ತಕ್ಕಂತೆ ನಮ್ಮ ನಡುವಳಿಕೆ ಆದ್ದರಿಂದ ’ನಾನು’ ಎನ್ನುವುದಕ್ಕೆ ಇರುವಿಕೆ...ಎಂಬುದು ನನ್ನ ಅನಿಸಿಕೆ. ಆದ್ದರಿಂದ, ನಮ್ಮ ಭಾವನೆಗಳನ್ನು ವ್ಯಕ್ತ ಪಡಿಸುವುದನ್ನ ಹತೋಟಿಯಲ್ಲಿಡಬಹುದೇ ಹೊರತು ಮನಸ್ಸಿಗೆ, ಭಾವನೆಗಳಿಗೆ ಹತೋಟಿಯಲ್ಲಿಟ್ಟಷ್ಟು ಹೆಚ್ಚುತ್ತದೆ...

  ReplyDelete
 10. Hi Prashanth,
  Really an interesting article. That's why Sivaram Karanth has has written 'Hucchu Manassina Hattu Mukhagalu'

  ReplyDelete
 11. Chaitra, welcome to my Blog! :o)

  Yes, MIND has always fascinated Writers. If there was no MIND, we obviously wouldn't have been writing. There exists a positive correlation between MIND and WRITING.

  ReplyDelete
 12. ಅದ್ಭುತ ಸುಮನ! ಈ ಮನಸ್ಸೇ ಹೀಗೆ.. ಅಲ್ಲವೇ? ಮನಸ್ಸಿನ ಬಗ್ಗೆ ನಿಮ್ಮಲ್ಲಿ ಇನ್ನಿಲ್ಲದಂತೆ ಪ್ರಶ್ನೆಗಳನ್ನು ನನ್ನ ಮೇಲಿನ ವಾಕ್ಯಗಳು ಹುಟ್ಟಿಹಾಕಿವೆಯೆಂದರೆ, ನನ್ನ ಬರವಣಿಗೆ ಸಾರ್ಥಕ.

  ಮನುಷ್ಯ ತನ್ನ ದೇಹದಲ್ಲಿನ ವಿವಿಧ ಅಂಗಗಳ ನೇರ ಹತೋಟಿಯಲ್ಲಿರುತ್ತಾನೆ. 'ಮೆದುಳು' ಎಂಬ ಅಂಗದಿಂದ ಉದ್ಭವಿಸುವ ಚಿಂತನೆ-ಭಾವನೆ-ಯೋಚನೆಗಳ ಲಹರಿಯನ್ನು ನಾವು 'ಮನಸ್ಸು' ಎಂದರೆ ಅಡ್ಡಿಯಿಲ್ಲ, ಆದರೆ 'ಮನಸ್ಸು' ಒಂದು ಅಂಗವಲ್ಲ. ನಿರಂತರ ಪರಿಶ್ರಮದಿಂದ ನಾವು ನಮ್ಮ 'ಮನಸ್ಸನ್ನು' ಹತೋಟಿಗೆ ತಂದು ಸ್ತಬ್ಧವಾಗಿಸಬಹುದು; ಆಗಲೂ ನಾವು ಜೀವಂತವಾಗಿರುತ್ತೇವೆ. ಆದರೆ, ನಮ್ಮ ದೇಹದ ಯಾವುದಾದರೊಂದು ಅಂಗವು ಸ್ತಬ್ಧವಾಗಿಹೊದರೆ?

  'ಮನಸ್ಸು' ಎಂದರೆ 'ನಾನು' ಎನ್ನುವಷ್ಟು ಅದರಲ್ಲಿ ಲೀನವಾಗಿ ಹೋಗಿದ್ದೇವೆ. ಇದು ಹೀಗಾಗಬಾರದು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಮನಸ್ಸಿನ ಬಗೆಗಿನ ತರ್ಕಕ್ಕೆ ಕೊನೆಯಂತೂ ಇಲ್ಲ. ಮೇಲಿನ ವಾಕ್ಯಗಳನ್ನು ಓದಿದ ಕೂಡಲೇ ನಿಮ್ಮ 'ಮನಸ್ಸು' ಮತ್ತಿನ್ನೇನನ್ನೋ ಹೇಳಿದರೆ, ಅದು 'ನಿಮ್ಮ' ತಪ್ಪಲ್ಲ :o)

  ReplyDelete
 13. ಮನಸ್ಸು ಎಂಬುದು ಒಂದು "ಅಂಗ" ವೆಂದು ತಿಳಿದು ನನಗೆ ಅದನ್ನು ನೋಡುವ ತವಕ.
  ಕಾರಣ ಸುಮನ ರವರು ಈ ರೀತಿ ಹೇಳಿರುವುದರಿಂದ ಮನಸ್ಸು ಇದೂ ಸಹ ದೇಹದ ಅಂಗವೆಂದು ತಿಳಿಸಿದ್ದು ಇದಕ್ಕೆ ಕಾರಣ.
  ಮೂದಲಿಗೆ ನಮಗೆ ಮನಸ್ಸು ಎಂದರೆ ಏನು ? ಎಂದು ತಿಳಿಯುವ ಹಂಬಲ.
  ಕಾರಣ ಮನಸ್ಸು ಎನ್ನುವುದು ನಮ್ಮ ತರ್ಕಕ್ಕೆ ಸಿಗದ, ನಮ್ಮ ಭಾವನೆಗೆಳಿಗೂ ನಿಲುಕದ ಯಾವುದೋ ಒಂದು ಸಕ್ರಿಯಾತ್ಮಕ ಕಲರವಗಳ ಆಗರ.
  ಏಕೆಂದರೆ ನಮ್ಮ ಮನಸ್ಸನ್ನು ನೋಡಿದವರು ಯಾರು ಇಲ್ಲ. ಆದರೆ ನಾವು ಆಡು ಭಾಷೆ ಯಲ್ಲಿ ನಮ್ಮ ಮನ:ಸಾಕ್ಷಿಗೆ ಮೂದಲ ಸ್ಥಾನ.
  ಕೋರ್ಟಿನಲ್ಲಿ ಪ್ರಥಮವಾಗಿ ನಿನ್ನ ಮನಸ್ಸಾಕ್ಷಿಯನ್ನು ಮುಟ್ಟಿ ಪ್ರಮಾಣ ಮಾಡು ಎನ್ನುತ್ತಾರೆ.
  ನಿಜವಾಗಲು ಆಗ ನಮಗೆ ಸಿಗುವ ಒಂದೇ ಒಂದು ಚಾನ್ಸ್ ಏನೆಂದರೆ ಜಡ್ಜ್ ರವರಿಗೆ ಒಂದು ಪ್ರಶ್ನೆ ಕೇಳಬಹುದು ಸಾರ್ ಸಯವಿತ್ತು ಮನಸ್ಸು ಎಲ್ಲಿದೆ ಎಂದು ಕೇಳಬಹುದು ಅಲ್ಲವೇ.

  ReplyDelete
 14. ನ್ಯಾಯ ದೇವತೆಗೆ ಕಣ್ಣುಕಟ್ಟಿ, ಅನ್ಯಾಯವನ್ನು ತೊಲಗಿಸಲು ಹೊರಟಿರುವ 'ನ್ಯಾಯಮೂರ್ತಿಗೆ' ಅತ್ಯಂತ ಸಮಂಜಸವಾದ ಪ್ರಶ್ನೆಯನ್ನೇ ಹಾಕಿದ್ದೀರಿ. ಶಹಬಾಸ್ ಚಂದು!!

  ReplyDelete
 15. ನಿಮ್ಮ ಬರವಣಿಗೆ ಸಮಂಜಸ ಅದರೂ ನ್ಯಾಯ ಅನ್ಯಾಯದ ಬಗ್ಗೆ ನಮಗೇಕೆ ಬಿಡಿ.
  ನನ್ನ ಅಭಿಪ್ರಾಯ ಅವರನ್ನು ಕೇಳಿದರೆ ಹೇಗೆ ಎಂದೇ ಅಸ್ಟೆ. ಇನ್ನು ನಾವು ಅವರನ್ನು ಕೇಳಲು ಹೋದರೆ ಅವರು ಅದಕ್ಕೊಂದು ಸಪರೆಟ್ ನ್ಯಾಯಮಂಡಳಿಯನ್ನು ರಚನೆ ಮಾಡಿ ಅದನ್ನು ಕೂಲಂಕುಷವಾಗಿ ಪರಿಶೀಲಿಸಲು ನಮ್ಮ ಜೀವನದ ಕಾಲು, ಮುಕ್ಕಾಲು, ಅಥವಾ ಜೀವನದ ಪೂರ್ತಿ ಕೋರ್ಟಿಗೆ ಯ್ಯಾಕೆ ಹೋಗಬೇಕು ಅಲ್ವ. ಅದರ ಬದಲು ನಾವೇ ಒಂದು ಸಂಶೋಧನೆ ಕೈಗೊಂಡು ಅದನ್ನು ಯಶಸ್ವಿಯಾಗಿ ಪೂರ್ತಿ ಮಾಡುವುದು ಸರಿ ಅಲ್ವೇ.
  ಇದರ ಬಗ್ಗೆ ತಿಳಿಯಲು ನಾವು ಹುಡುಕ ಹೊರಟಾಗ ನಮಗೆ ಗೊತ್ತಿಲ್ಲದೆ ಹಲವಾರು ವಿಷಯಗಳು ಪ್ರಸ್ತಾಪವಾಗಿರುತ್ತವೆ.
  ಮಾನವ ಜೀವನದಲ್ಲಿ ಮನಸ್ಸಿಗೆ ಬೆಲೆ ಇದ್ದು, ಇದನ್ನು ಬೆನ್ನು ಹತ್ತಲು ಹೋದ ನನಗೆ ತಿಳಿದಿರುವ ವಿಷಯ ಮನಸ್ಸು ಒಂದು ಮಾನವನ ಊಹೆಗೆ ನಿಲುಕದ,ಯಾರಿಗೂ ಕಾಣದ ವಸ್ತು.
  ಮಹತ್ವದ ಸಂಗತಿ ಇದನ್ನು ನೋಡಿದವರು ಇಲ್ಲ. ಅದರೂ ಎಲ್ಲರಿಗೂ ಗೊತ್ತು ಇದು ನಮ್ಮ ಜೊತೆಯಲ್ಲಿ ಇದೆ ಎಂದು.
  ಆದರೆ ಇದು ಎಲ್ಲಿದೆ? ಯಾವರೀತಿ ಇದೆ? ಎಂಬುದು ತಿಳಿಯದ "ನಿಗೂಢ ರಹಸ್ಯ" ಇಂತಹ ರಹಸ್ಯಗಳ ನಡುವೆ ಎಲ್ಲಿದೆ ಈ ಮನ್ನಸ್ಸು?

  ReplyDelete
 16. 'ಮನಸ್ಸು' - ಇದನ್ನು ಹುಡುಕಿ ಹೊರಟ ನನಗೆ ಮಾತ್ರ ದೊರೆತದ್ದು ಶೂನ್ಯ ಎಂದುಕೊಂಡಿದ್ದೆ. ಆದರೆ, ಮೇಲಿನ ನಿಮ್ಮ ಕೊನೆಯ ವಾಕ್ಯ ಓದಿದ ನಂತರ, ನನ್ನಂತೆಯೇ ನಿಮಗೂ ಸಹ ಮನಸ್ಸಿನ ಬಗ್ಗೆ ಶೂನ್ಯ ಆವರಿಸಿದಂತೆ ಭಾಸವಾಗುತ್ತದೆ!? ಈ ಮನಸ್ಸೇ ಹೀಗೆ, ಅಲ್ಲವೆ ಚಂದು??

  ReplyDelete

ಖಂಡಿತಾ ನಿಮ್ಮ ಅನಿಸಿಕೆಗಳನ್ನು ತಿಳಿಸಿ. ಧನ್ಯವಾದಗಳು!
Please post your comments. Thank you!