"ಮನಸ್ಸಿಗೆ ತುಂಬಾ ಬೇಜಾರಾಗಿದೆ.."
"ನಿನ್ನ ಜೊತೆ ಮಾತಾಡಿದ್ರೆ ಮನಸ್ಸಿಗೆ ಸಮಾಧಾನ.."
"ನೋವನ್ನು ಇನ್ನೊಬ್ಬರ ಹತ್ತಿರ ಹೇಳಿಕೊಂಡ್ರೆ ಮನಸ್ಸು ಹಗುರಾಗುತ್ತೆ.."
ಮೇಲಿನ ವಾಕ್ಯಗಳು ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ನಮ್ಮಿಂದ ಸಾಮಾನ್ಯವಾಗಿ ಬಳಸಲ್ಪಡುತ್ತವೆ, ಅಲ್ಲವೇ? ಮನಸ್ಸು.. ಮನಸ್ಸು.. ಮನಸ್ಸು.. ನಮ್ಮ ಸುಪ್ತ ಭಾವನೆಗಳನೆಲ್ಲಾ ತನ್ನೊಳಗೆ ಅಡಗಿಸಿಟ್ಟುಕೊಂಡಿರುವ, ಅತ್ಯಂತ ಶಕ್ತಿಶಾಲಿ ಈ ಮನಸ್ಸು. ಆದರೆ, 'ಮನಸ್ಸು' - ಇದು ನಮ್ಮೊಳಗೆ ಇರುವುದಾದರೂ ಎಲ್ಲಿ? ಮನಸ್ಸಿಗೊಂದು ಅಸ್ತಿತ್ವ ನಿಜವಾಗಲೂ ಇದೆಯೇ??

ಭಾವುಕರಾಗಿ ನಾವು (ಮನಸಾರೆ?) ಮಾತನಾಡುವಾಗ, ಬಹುತೇಕ ನಮ್ಮ ಕೈಗಳು ನಮಗರಿವಿಲ್ಲದೆಯೇ ಹೃದಯದ ಮೇಲಿರುತ್ತವೆ. ಹಾಗಾದರೆ, ಮನಸ್ಸು ಎದೆಯ ಗೂಡಿನಲ್ಲಿದೆಯೇ? ವೈಜ್ಞಾನಿಕವಾಗಿ ಹೇಳುವುದಾದರೆ, ನಮ್ಮ ಎದೆಯ ಭಾಗದಲ್ಲಿರುವುದು ಎರಡು ಪ್ರಮುಖ ಅಂಗಗಳು; ಅವುಗಳೆಂದರೆ - ಹೃದಯ (Heart) ಮತ್ತು ಪುಪ್ಪುಸ (Lungs). ಹೃದಯವು ರಕ್ತಸಂಚಲನ ಮಾಡಿದರೆ, ಪುಪ್ಪುಸವು ಉಸಿರಾಟದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಹಾಗಾದರೆ, ಇವುಗಳಿಗೆ ಭಾವನೆಗಳನ್ನು ಸೃಷ್ಟಿಸುವ ಅಥವಾ ವ್ಯಕ್ತಪಡಿಸುವ ಶಕ್ತಿ ಇಲ್ಲ; ಅಂದ ಮೇಲೆ ಮನಸ್ಸು ಹೃದಯದಲ್ಲಿಲ್ಲ. ಇನ್ನೆಲ್ಲಿ ಇದ್ದೀತು?
"ವ್ಯಕ್ತಿಯ ಯಾವ ಅಂಶವು ಆತನಲ್ಲಿ ಪ್ರಾಪಂಚಿಕ ಅರಿವನ್ನು ಸೃಷ್ಟಿಸಿ, ಲೌಕಿಕ ಅನುಭವಗಳನ್ನು ಗಮನಕ್ಕೆ ತರುತ್ತಾ, ಅವನಿಗೆ ಆಲೋಚನಾಶಕ್ತಿಯನ್ನು ಕೊಟ್ಟು, ಪ್ರಜ್ಞಾ ಸ್ಥಿತಿಯಲ್ಲಿ ಚಿಂತಿಸುವುದಕ್ಕೆ ಸಹಾಯಕವಾಗುತ್ತದೆಯೋ, ಅದನ್ನು ಒಟ್ಟಾರೆಯಾಗಿ 'ಮನಸ್ಸು' ಎಂದು ಗುರುತಿಸಲಾಗಿದೆ" - ಇದು English ನಿಂದ ಕನ್ನಡಕ್ಕೆ ನೇರ ಅನುವಾದ ಮಾಡಿರುವ 'ಮನಸ್ಸಿನ' ಅರ್ಥ.
ಮನಸ್ಸಿಗೆ ಒಂದು ನಿರ್ದಿಷ್ಟವಾಗಿ ನಿರೂಪಿತಗೊಂಡ ವ್ಯಾಖ್ಯಾನ ನೀಡುವಲ್ಲಿ ಇಂದಿಗೂ ವಿಜ್ಞಾನಿಗಳಲ್ಲಿಯೇ ಸಹಮತ ಸಾಧ್ಯವಾಗಿಲ್ಲ. ಮನಸ್ಸು 'ಆರನೇ ಇಂದ್ರಿಯ', 'ಹನ್ನೊಂದನೇ ಇಂದ್ರಿಯ' ಎಂಬುದಾಗಿ ವಿವಿಧ ಶಾಸ್ತ್ರಗಳಲ್ಲಿ ಕೇವಲ ತರ್ಕಕ್ಕೆ ನಿಲುಕುವಂತೆ ವಿವರಣೆ ನೀಡಲಾಗಿದೆ. ಮನುಷ್ಯನ ಶಿರಸ್ಸಿನಿಂದ ಪ್ರಾರಂಭಗೊಂಡು ಪಾದದವರೆವಿಗೂ ದೇಹರಚನಾ ವಿಜ್ಞಾನದಲ್ಲಿ ಮನಸ್ಸನ್ನು ಗುರುತಿಸಲಾಗಿಲ್ಲ ಹಾಗೂ ಮನಸ್ಸಿನ ವ್ಯಾಖ್ಯಾನವಿಲ್ಲ. ಅಂದ ಮೇಲೆ, ಮನಸ್ಸಿಗೆ ಯಾವುದೇ ಭೌತಿಕ ಅಸ್ತಿತ್ವ (physical existence) ನಮ್ಮ ದೇಹದಲ್ಲಿ ಎಲ್ಲೂ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ.
"ಪ್ರತ್ಯಕ್ಷ ಕಾಣಸಿಗದೆ, ಕೇವಲ ಅವನು ನಡೆಸಿದನೆಂದು ಹೇಳಲಾಗುವ ಪವಾಡಗಳಿಂದ ನಂಬಲಾಗದ ಕಾರಣ - 'ದೇವರ' ಅಸ್ತಿತ್ವವು ಇಂದಿಗೂ ಪ್ರಶ್ನಾರ್ಥಕ" ಎನ್ನುವ ನಾಸ್ತಿಕರ ವಾದವನ್ನು ಇಲ್ಲಿ ಉಪಯೋಗಿಸಿಕೊಂಡು ಹೇಳುವುದಾದರೆ, "ಪ್ರತ್ಯಕ್ಷ ಕಾಣಸಿಗದೆ, ದೇಹರಚನಾ ವಿಜ್ಞಾನದಲ್ಲಿ ಉಲ್ಲೇಖವಿರದೆ, ಕೇವಲ ಅದು ನಮ್ಮೊಳಗೆ ನಡೆಸುವ ದ್ವಂದ್ವ-ಪವಾಡಗಳಿಂದ ನಂಬಲಾಗದ ಕಾರಣ - 'ಮನಸ್ಸು', ಇದರ ಅಸ್ತಿತ್ವವು ಪ್ರಶ್ನಾರ್ಥಕ" ಎಂದಾಗುತ್ತದಲ್ಲವೆ?!
ಪ್ರಖ್ಯಾತ ಮನಃಶಾಸ್ತ್ರಜ್ಞರಾದ ಡಾ. ಮೀನಗುಂಡಿ ಸುಬ್ರಮಣ್ಯ ರವರು ಅವರ ಪ್ರಸಿದ್ಧ 'ಮಾನಸಿಕ ಸಮಸ್ಯೆಗಳಿಗೆ ಮನಸ್ಸು ಇಲ್ಲದ ಮಾರ್ಗ' ಕೃತಿಯಲ್ಲಿ ಜನಸಾಮಾನ್ಯರಾದ ನಾವು ಆಗಿಂದಾಗ್ಯೆ 'ಮನಸ್ಸು' ಎಂದು ಗುರುತಿಸಿಕೊಳ್ಳುವುದು ತಾರ್ಕಿಕವಾಗಿ 'ನಾನು' ಎಂದಾಗಬೇಕು ಎಂದು ಪ್ರತಿಪಾದಿಸುತ್ತಾರೆ. ಅಂದರೆ, ದೇಹದಲ್ಲಿರುವ 'ಮೆದುಳು' ಎಂಬ ಅಂಗವನ್ನು ಉಪಯೋಗಿಸಿಕೊಂಡು ನಾವು ಮಾಡುವ ನಿರಂತರ ಚಿಂತನೆಗಳಿಗೆ ಕಾರಣ ಸ್ವತಃ 'ನಾವೆಯೇ' ಹೊರೆತು ಅಸ್ತಿತ್ವ ಹೊಂದಿರದ 'ಮನಸ್ಸು' ಅಲ್ಲ ಎಂಬುದು - ಈ ತಾತ್ವಿಕ ವಿವರಣೆಯು ವೈಜ್ಞಾನಿಕವಾಗಿ ಸರಿಯೆನಿಸುತ್ತದೆ. ಸೋಜಿಗದ ವಿಷಯವೆಂದರೆ, ದೇಹದಲ್ಲಿ ಇರದ 'ಮನಸ್ಸು' ನಮ್ಮ ಪ್ರತಿಯೊಂದು ಅಂಗಾಂಗಗಳನ್ನೊಳಗೊಂಡು ನಮ್ಮ ಮೇಲೆಯೇ ಇಡಿಯಾಗಿ ಸಾಧಿಸಿರುವ ಹಿಡಿತವು ಅಚ್ಚರಿಯೆನಿಸದೆ ಇರಲಾರದು.
"ನಾನು ನಿಮ್ಮನ್ನು ಮನಸಾರೆ ಪ್ರೀತಿಸುತ್ತೇನೆ.."
"ನನ್ನ ಮನಸ್ಸಿನ ತುಂಬೆಲ್ಲಾ ನೀವೇ ತುಂಬಿಕೊಂಡಿದ್ದೀರಿ.."
"ನನ್ನ ಮನಸ್ಸು ಎಂದೆಂದಿಗೂ ನಿಮ್ಮದೇ.."
ಕೆಲವರು ಹೀಗೆಲ್ಲಾ ಹೇಳುವುದುಂಟು. ಆದರೆ, ವಾಸ್ತವದಲ್ಲಿ ಇರದ ಮನಸ್ಸನ್ನು ಇತರರಿಗೆ ನೀಡುವುದಾದರೂ ಹೇಗೆ ಎಂಬುದೇ ನನ್ನೆದುರಿಗಿರುವ ಬಹು ದೊಡ್ಡ ಸವಾಲು.
'ಮನಸ್ಸಿನ' ಬೆನ್ನು ಹತ್ತಿ ಹೊರಟ ನನಗೆ ಕೊನೆಗೆ ದೊರೆತದ್ದು ಬರಿಯ 'ಶೂನ್ಯ'ವೆ ಹೊರೆತು ಅನ್ಯವಲ್ಲ!!




