Sunday, July 11, 2010

ಹೀಗೊಂದು ಪಯಣ..

ನಿನ್ನೆ ಎರಡನೇ ಶನಿವಾರ, ಕಛೇರಿಗೆ ರಜೆ! ಮೊನ್ನೆಯೇ ಅಪ್ಪ ಹೇಳಿದ್ದರು, ಹಳ್ಳಿಯಲ್ಲಿರುವ ಹಿರಿಯರೊಬ್ಬರನ್ನು ಭೇಟಿ ಮಾಡಿ ಅವರ ಆರೋಗ್ಯ-ಯೋಗಕ್ಷೇಮ ವಿಚಾರಿಸಿ ಬರೋಣವೆಂದು. ನನ್ನ ಪ್ರೀತಿಯ ಬೆಂಗಳೂರಿನಲ್ಲಿ ಅದೆಷ್ಟು ಬೆರೆತುಹೋಗಿದ್ದೇನೆಂದರೆ, ಹಳ್ಳಿಗಳಿಗೆ ಭೇಟಿಕೊಟ್ಟು ವರುಷಗಳೇ ಕಳೆದುಹೋಗಿದ್ದವು. ಮತ್ತೆ ಹಳ್ಳಿಗೆ ಹೋಗುತ್ತಿದ್ದೇನೆ - ಅದೇನೋ ಸಡಗರ, ಉಲ್ಲಾಸ ಮನಸ್ಸಿಗೆ.

ಬೆಳಿಗ್ಗೆ ಬೇಗನೆ ಎದ್ದು (9 ಗಂಟೆಗೆ, ರಜೆಯಂದು ನನಗೆ ಬೆಳಗಾಗುವುದೇ ಮಧ್ಯಾಹ್ನ!!) ಕಾರನ್ನು ಶುಚಿಗೊಳಿಸಿ, ಒಮ್ಮೆ ಪರೀಕ್ಷಿಸಿ (ನಮ್ಮ ಮನೆಯಲ್ಲಿ ನಾನೊಬ್ಬನೇ ಚಾಲಕ), ಸ್ನಾನ ಮಾಡಿ, ಉಪಹಾರ ಮುಗಿಸುವ ವೇಳೆಗೆ ಅಪ್ಪ-ಅಮ್ಮ ಹೊರಡಲು ಸಿದ್ಧರಾಗಿದ್ದರು. ಸರಿ, ಹೊರಟೇಬಿಟ್ಟಿದ್ದೆವು.. ಸುಮಾರು ಅರ್ಧ ಗಂಟೆಯ ಪ್ರಯಾಣದ ನಂತರ ನಾವು ರಾಷ್ಟ್ರೀಯ ಹೆದ್ದಾರಿ 209 ಸೇರಿದ್ದೆವು. ಹೆದ್ದಾರಿಗಳಲ್ಲಿ ವಾಹನ ಚಾಲನೆ ಮಾಡುವುದೇ ಒಂದು ವಿಶಿಷ್ಟ ಅನುಭವ!
ಅದೇ ದಾರಿ.. ಅದೇ ತಿರುವು.. ಈ ಪಯಣ ನೂತನ..
(click image to enlarge)
ರಾಷ್ಟ್ರೀಯ ಹೆದ್ದಾರಿ 209 - ಕರ್ನಾಟಕದಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ವಿಶಾಲ ರಸ್ತೆ. 'ಬೆಂಗಳೂರಿನ ರಸ್ತೆ'ಗಳ ಇಕ್ಕೆಲಗಳಲ್ಲಿರುವಂತೆ ಇಲ್ಲಿ ಕಾಂಕ್ರಿಟ್ ಕಾಡಿಲ್ಲ; ರಸ್ತೆಗಳನ್ನು ಆವರಿಸಿಕೊಂಡಿರುವ 'ನಮ್ಮ ಮೆಟ್ರೋ' ಗೊಡವೆಯಂತೂ ಮೊದಲೇ ಇಲ್ಲ! ಅಕ್ಕ-ಪಕ್ಕ ಸುಂದರ ಪರಿಸರ; ಸ್ವಚ್ಛಂದ ಗಾಳಿ. ರಸ್ತೆಯುದ್ದಕ್ಕೂ ಇದ್ದ ಗಿಡ-ಮರಗಳು ನಮ್ಮನ್ನು ಸ್ವಾಗತಿಸಲೆಂದೇ ಸಿಂಗರಿಸಿ ನಿಂತ ಹಸಿರು ತೋರಣದಂತೆ ಕಾಣುತ್ತಿದ್ದವು. ದೂರದಲ್ಲೆಲ್ಲೋ ಬೆಟ್ಟಗಳ ಸಾಲು; ನೀಲಿ ಆಕಾಶದಲ್ಲಿನ ಬೆಳ್ಳಿ ಮೋಡಗಳು; ಪಕ್ಕದಲ್ಲಿ ಮೆಳೆನೀರು ತುಂಬಿದ ಸಿಂಗಾರಿ ಕೆರೆ; ಕೆರೆಯ ಏರಿಯ ಮೇಲೆ ಹಾದುಹೋಗುವ ರಸ್ತೆ; ಎಲ್ಲೆಲ್ಲೂ ಹಚ್ಚ ಹಸಿರು - ರೋಮಾಂಚನಗೊಂಡಿದ್ದೆ.
ನೋಡು ಬಾ ನೋಡು ಬಾ ನಮ್ಮೂರ..
(click image to enlarge)
"ಅರೆರೆ!.. ಇದೇನಿದು? ಇಲ್ಲೂ ಮರಗಳನ್ನು ಕಡಿದಿದ್ದಾರಲ್ಲ?!" ಅಚ್ಚರಿಯಾಯಿತು. ತುಸು ಬೇಸರಿಕೆ ಮೂಡಿತಾ ದರೂ, ಅದನ್ನು ಕಡಿದದ್ದು ರಸ್ತೆ (ಅಗಲೀಕರಣ) ಅಭಿವೃದ್ಧಿಗಾಗಿ ಎಂದು ಸಮಾಧಾನಪಟ್ಟುಕೊಂಡೆ.
ಮಾಮರವೆಲ್ಲೋ?.. ಕೋಗಿಲೆಯೆಲ್ಲೋ?..
(click image to enlarge)
ಹಳ್ಳಿಯನ್ನು ತಲುಪಿದ್ದೆವು. ಊರ ಬಾಗಿಲಿಗೊಂದು ಪುಟ್ಟ ದೇವಾಲಯ; ಅದರ ಮುಂದೆ 'ದೇವರಂತೆ' ನಿಂತಿದ್ದ ಕೋಲೇಬಸವ! ಕಣ್ಣಾರೆ ನೋಡುವ ತವಕ; ಆದರೆ ನಿಲ್ಲಿಸುವಂತಿರಲಿಲ್ಲ. ಊರ ಮನೆ ತಲುಪಿದವನೇ, ಒಂದೆರಡು ಮಾತನಾಡಿ, ಗುಟುಕು ನೀರು ಗಂಟಲೊಳಗಿಳಿಸಿ ಹೊರಟವನು ಬಿರುಸಾಗಿ ನಡೆದು ದೇವಾಲಯ ತಲುಪಿದ್ದೆ. ನನಗಾಗಿ ಕಾಯುತ್ತಾ (??) ಅಲ್ಲೇ ನಿಂತಿದ್ದ ಕೋಲೇಬಸವನ ಚೆಂದವನ್ನು ಕಣ್ತುಂಬಿಕೊಂಡೆ.
ನಿನ್ನ ಚೆಲುವ ವದನ ಕಮಲ ನಯನ..
(click image to enlarge)
ಊರಿನಲ್ಲಿ ಎಲ್ಲಾ ತಕ್ಕ ಮಟ್ಟಿಗೆ ಸೌಖ್ಯ. ಮಧ್ಯಾಹ್ನ ಪಕ್ಕಾ ಹಳ್ಳಿಯ ಸೊಗಡಿನ ಭೋಜನ, ಬಡಿಸುವವರ ಪ್ರೀತಿಯೂ ತುಂಬಿ ಅದೇನು ರುಚಿ! ಇಲ್ಲಿ ನನಗೆ ಸಿಕ್ಕ ತೃಪ್ತಿ ಬೆಂಗಳೂರಿನಲ್ಲಿನ ಯಾವುದೇ ಹೋಟೆಲ್ ನಲ್ಲಿ ಹಣಕೊಟ್ಟೂ ಪಡೆಯಲು ಅಸಾಧ್ಯ. ದಿನನಿತ್ಯ ಈ ತೃಪ್ತಿ ಅನುಭವಿಸುತ್ತಿರುವ ಇವರೇ ಧನ್ಯರು ಎಂದೆನಿಸಿತು. ಊಟ ಮುಗಿಸಿ, ವಿಶ್ರಾಂತಿ ಪಡೆದು, ಹೊರಡಲು ಸಿದ್ಧವಾದೆವು. ಅವರುಗಳ ಹೃದಯಪೂರ್ವಕ ಬಿಳ್ಕೊಡುಗೆ ಅತ್ಮೀಯವೆನಿಸಿತ್ತು.

ಹಿಂತಿರುಗಿ ರಾಷ್ಟ್ರೀಯ ಹೆದ್ದಾರಿ 209 ಕ್ಕೆ ಸೇರಿದ್ದೆವು. ಊಟ ಸ್ವಲ್ಪ ಜೋರಾಗಿದ್ದರಿಂದ ನಿದ್ರೆ ಬಾರದಿರಲೆಂದು FM 91.1 ನ ಸಂಗೀತದಲ್ಲಿ ತಲ್ಲೀನನಾಗಿದ್ದೆ. ಎದುರಿನಲ್ಲಿ ಒಂದು ಜೋಡಿ-ಎತ್ತಿನ ಗಾಡಿ! ಘಲ್ ಘಲ್ ಎಂದು ಸದ್ದು ಮಾಡುತ್ತಾ ಓಡುತ್ತಿದ್ದ ಎತ್ತುಗಳು.. ಕಾರಿನಿಂದಿಳಿದು ಎತ್ತಿನ ಗಾಡಿಯಲ್ಲಿ ಕುಳಿತುಕೊಳ್ಳುವಾಸೆ. ಆದರೇನು ಮಾಡುವುದು? ಅದು ಸಾಧ್ಯವಿರಲಿಲ್ಲ.
ಬದುಕಿದು ಜಟಕಾ ಬಂಡಿ..
(click image to enlarge)
ಹೀಗೆ ಬೆಂಗಳೂರಿನ ಕಡೆಗೆ ಬರುತ್ತಿದ್ದ ನನ್ನ ಮುಖದಲ್ಲಿದ್ದ ನಗು ದೂರದಲ್ಲಿ ಕಂಡ ದೃಶ್ಯದಿಂದ ಇದ್ದಕ್ಕಿದ್ದ ಹಾಗೆ ಮಾಯವಾಯಿತು. ಕಾರು ತಂತಾನೇ ವೇಗ ನಿಯಂತ್ರಿಸಿ, ರಸ್ತೆಯ ಬದಿಯಲ್ಲಿ ನಿಂತಿತು. ನಾನು ಕೆಳಗಿಳಿದು ಹೋಗಿ ನೋಡಲು.. 
ಆಡಿಸಿದಾತ ಬೇಸರ ಮೂಡಿ, ಆಟ ಮುಗಿಸಿದ..
(click image to enlarge)
ಹೆದ್ದಾರಿಗಳಲ್ಲಿ ಸಂಚರಿಸುವಾಗ ನಾನು ಏನನ್ನು ನೋಡಬಾರದು ಎಂದುಕೊಳ್ಳುತ್ತೇನೋ ಅದೇ ನನಗೆ ಕಾಣಿಸಿಬಿಟ್ಟಿತು. ಕೆಲವೇ ದಿನಗಳ ಹಿಂದೆ ಈ ಪ್ರಪಂಚಕ್ಕೆ ಕಾಲಿರಿಸಿದ್ದ ಮುದ್ದಿನ ನಾಯಿಮರಿಯೊಂದರ 'ದಾರುಣ ಹತ್ಯೆ' ನಡೆದೇಹೊಗಿತ್ತು. ಯಾವುದೊ ವಾಹನವು ತನಗರಿವಿಲ್ಲದೆಯೇ ಈ ನಾಯಿಮರಿಯ ಇಹಲೋಕದ 'ಪಯಣ'ಕ್ಕೆ ನಾಂದಿ ಹಾಡಿ ಮುಗಿಸಿತ್ತು. ರಸ್ತೆಯ ಮಧ್ಯದಲ್ಲಿ 'ಕರುಳು' ಚೆಲ್ಲಿ ಮಲಗಿದ್ದ ಕಂದಮ್ಮನ ದೃಶ್ಯ ಮನಕಲಕುವಂತಿತ್ತು. ಆ ತಾಯಿಯ ರೋದನೆ ಕೇಳುವವರಾದರೂ ಯಾರು? ಸುತ್ತ-ಮುತ್ತ ಕಣ್ಣಾಯಿಸಿದೆ, ನನ್ನ ದೃಷ್ಟಿ ನಿಲುಕುವಷ್ಟೂ ದೂರಕ್ಕೆ ಯಾವುದೇ (ಹೆಣ್ಣು) ನಾಯಿ ಕಾಣಲಿಲ್ಲ. ರಸ್ತೆಯ ಮಧ್ಯದಿಂದ ನಾಯಿಮರಿಯನ್ನು ತೆಗೆದು ಪಕ್ಕಕ್ಕೆ ಮಲಗಿಸಬೇಕೆನಿಸಿತು, ಆದರೆ ಅದರ ಪುಟ್ಟ ದೇಹ ನನ್ನ ಬೊಗಸೆಯಲ್ಲಿ ಹಿಡಿಯಾಗಿ ಬರದಷ್ಟು ಛಿದ್ರವಾಗಿಹೊಗಿತ್ತು.
ಈ ದೇಹದಿಂದ ದೂರವಾದೆ ಏಕೆ ಆತ್ಮನೆ? ಈ ಸಾವು ನ್ಯಾಯವೇ?
(click image to enlarge)
ಬೆಳಗ್ಗಿನಿಂದ ನನ್ನಲ್ಲಿದ್ದ ಉತ್ಸಾಹ-ಆನಂದವೆಲ್ಲ ಮರೆಯಾಗಿ, ಮನಸ್ಸಿನ ತುಂಬೆಲ್ಲಾ ಬರಿಯ ನಾಯಿಮರಿಯ ದೃಶ್ಯ ಆವರಿಸಿತ್ತು. ಈ ಚಿಂತನೆಯಿಂದ ಹೊರಬರಲು ಸಾಧ್ಯವೇ ಆಗಲಿಲ್ಲ ನನಗೆ. "ಮುದ್ದು ಮರಿಯ ಆತ್ಮಕ್ಕೆ ಶಾಂತಿ ಸಿಗಲಿ" ದೇವರಲ್ಲಿ ಪ್ರಾರ್ಥಿಸಿದ್ದೆ. ಪ್ರಾರ್ಥನೆಗೆ ಓಗೊಟ್ಟಿದ್ದ ವರುಣ ದೇವ, ನನ್ನ ಮನಸ್ಸನ್ನು ಕವಿದಿದ್ದ ದುಃಖದ ಕಾರ್ಮೋಡ ಕರಗಿ ಮಳೆಯಾಗಿ ಧೋ ಎಂದು ಧರೆಗಿಳಿದಿತ್ತು.
ಈ ಲೋಕವೆಲ್ಲ ನೀನೇ ಇರುವ ಪೂಜಾ ಮಂದಿರ..
(click image to enlarge)

2 comments:

  1. ಈ ಸುಂದರ ಪಯಣವು ಬಹಳ ಮೆಚ್ಚುಗೆಯಾಯಿತು. ನಿಮ್ಮ ಅನುಭವಗಳ ಸರಮಾಲೆಯನ್ನು ಫೋಟೋಗಳ ಮುಖಾಂತರ ತೋರಿಸಿ ಒಂದು ಟಿವಿಯ ಧಾರವಾಹಿಯನ್ನು ನೋಡಿದ ಅನುಭವವಾಯಿತು. ಎಲ್ಲಕ್ಕಿನ್ನ ಒಂದು ದುಃಖದ ಸಂಗತಿಯೆಂದರೆ, ಒಂದು ನಾಯಿಮರಿಯ ದುರಂತ ಮರಣ. ವಾಹನ ಚಾಲಕನು ಸ್ವಲ್ಪ ಜಾಗ್ರತೆ ವಹಿಸಿದ್ದರೆ ಈ ದುರಂತವನ್ನು ತಪ್ಪಿಸಲು ಸಾಧ್ಯವಿತ್ತೇನೋ ಎಂದು ಅನಿಸುತ್ತದೆ.

    ReplyDelete
  2. ನಿಮ್ಮ ಅನಿಸಿಕೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಸರ್. ದಿನನಿತ್ಯ ಹೆದ್ದಾರಿಗಳಲ್ಲಿ ಇಂಥಹ ಅನೇಕ ಮುಗ್ದ ಜೀವಗಳ ಬಲಿದಾನ ನಿರಂತರವಾಗಿ ನಡೆದಿದೆ. ಮನುಷ್ಯನ ಸ್ವಾರ್ಥಕ್ಕೆ ಇನ್ನೆಷ್ಟು ಜೀವಗಳ ಅಗತ್ಯವಿದೆಯೋ ತಿಳಿಯದು.

    ReplyDelete

ಖಂಡಿತಾ ನಿಮ್ಮ ಅನಿಸಿಕೆಗಳನ್ನು ತಿಳಿಸಿ. ಧನ್ಯವಾದಗಳು!
Please post your comments. Thank you!