Friday, August 20, 2010

ಬಸವನ ಹುಳು

ನಿನ್ನೆ ಬೆಳಿಗ್ಗೆ, ಕಛೇರಿ ತಲುಪಿದವನೇ ನನ್ನ ಕೊಠಡಿಯ ಹೊರಗಿರುವ ಚಿಕ್ಕ ಬಯಲಿಗೆ ಬಂದು, ಮೋಡಗಳ ಹಿಂದಿನಿಂದ ಕಣ್ಣಾಮುಚ್ಚಾಲೆ ಆಡುತ್ತಿದ್ದ ಸೂರ್ಯನಿಗೆ ಮೈಯೊಡ್ಡಿ ನಿಂತೆ. ಅದೇನೋ ಒಂದು ವಿಶಿಷ್ಟ ಅನುಭವ! ಕ್ಷಣಕಾಲ ಸೂರ್ಯನ ಕಿರಣಗಳು ನನ್ನನ್ನು ಮುಟ್ಟಿ ಬೆಚ್ಚಗಿನ ಅನುಭವವನ್ನು ಕೊಟ್ಟರೆ; ಮರುಕ್ಷಣ, ಸೂರ್ಯನನ್ನು ಮುಸಿಕಿದ ಮೋಡಗಳ ಹಿಂದೆಯೇ ಬೀಸಿದ ಚಳಿಗಾಳಿಯು ಮೈ ನಡುಗಿಸಿಬಿಟ್ಟಿತು. ಹೀಗೆ ಚಳಿಯಿಂದ ದೂರವಿರಲು ಕೈಗಳೆರಡನ್ನೂ ಕಿಸೆಯೊಳಗಿಟ್ಟು, ಸೂರ್ಯ-ಮೋಡ-ಗಾಳಿ ಇವುಗಳ ಚೆಲ್ಲಾಟದ ಆನಂದವನ್ನು ಮನಸ್ಸಿನಲ್ಲೇ ಸವಿಯುತ್ತಿದ್ದ ನನ್ನನ್ನು ಅಲ್ಲೊಂದು ಪುಟ್ಟ "ಜೀವಿ"ಯು ಕೈಬೀಸಿ ಕರೆದಿತ್ತು..

ಬಸವನ ಹುಳು

ಸದ್ದಿಲ್ಲದಂತೆ ಅದರ ಸಮೀಪಕ್ಕೆ ಹೋಗಿ ಕುಳಿತೆ; ಪ್ರಕೃತಿಯ ಮನಮೋಹಕ ಸೃಷ್ಟಿಯೇ ಮೈತಾಳಿದಂತೆ ಬಸವನ ಹುಳುವೊಂದು ತನ್ನ ಸುತ್ತಲಿನ ಪ್ರಪಂಚದ ಗೊಡವೆಯೇ ಇಲ್ಲವೇನೋ ಎಂಬಂತೆ ತನ್ನ ಪಾಡಿಗೆ ತಾನು ಹುಲ್ಲಿನ ಮೇಲೆ ನಿಧಾನವಾಗಿ ಹರಿಯುತಲಿತ್ತು. ಎಂತಹ ಅದ್ಭುತ ಸೃಷ್ಟಿ; ಮುಷ್ಟಿಯಲ್ಲೊಮ್ಮೆ ಹಿಡಿದು ತುಸು ಒಸಕಿದರೆ ಇನ್ನಿಲ್ಲವಾಗುವಂತಹ ಸೂಕ್ಷ್ಮ-ಕೃಷ ದೇಹದೊಳಗೆ ಅದೆಂತಹ ಸೌಂದರ್ಯನ್ನು ತುಂಬಿಕೊಂಡಿತ್ತು!! ಅದು ಸಾಗುತ್ತಿದ್ದ ದಾರಿಯಡ್ದಕ್ಕೆ ಇದ್ದ ಒಂದು ಸಣ್ಣ ಕಲ್ಲನ್ನು ನಾನು ಪಕ್ಕಕ್ಕೆ ತೆಗೆಯುತ್ತಿದ್ದಂತೆ ಎಚ್ಚೆತ್ತುಕೊಂಡ ಬನಸನ ಹುಳು, ತನ್ನ ಎಲುಬಿಲ್ಲದ ದೇಹವನ್ನು ಕ್ಷಣಮಾತ್ರದಲ್ಲಿ ಶಂಖದೊಳಗೆ ಅಡಗಿಸಿಕೊಂಡು ಕುಳಿತುಬಿಟ್ಟಿದ್ದನ್ನು ನೋಡಿದ ಮೇಲೆ ಅರಿವಾದದ್ದು, ಅದು ತನ್ನ ಸುತ್ತಲಿನ ಪರಿಸರಕ್ಕೆ ಅದೆಷ್ಟು ತ್ವರಿತವಾಗಿ ಸ್ಪಂದಿಸುತ್ತಿತ್ತೆಂದು!

ಮತ್ತೆ ಅದು ಮೊದಲಿನ ತನ್ನ ಸಹಜ ಸ್ಥಿತಿಗೆ ಬರಲು ಬಹಳ ಹೊತ್ತು ಬೇಕಾಯಿತು. ಅಷ್ಟರಲ್ಲಿ, ನನ್ನ ಆಲೋಚನೆಗಳು ಲಂಗು-ಲಗಾಮಿಲ್ಲದ ಅಶ್ವದಂತೆ ನಾಗಾಲೋಟ ಪ್ರಾರಂಭಿಸಿದ್ದವು - ಈ ಬಸವನ ಹುಳುವಿನದ್ದು ಅದೆಂಥಹ ನಿಸ್ವಾರ್ಥ, ಪಾರದರ್ಶಕ, ಸರಳ ಮತ್ತು ಸ್ವತಂತ್ರ ಜೀವನ!! ನಾಜೂಕಾದ ಮೈಕಟ್ಟನ್ನು ಹೊಂದಿರುವುದರಿಂದ ತನ್ನ ಜೀವವು ಅತ್ಯಂತ ಸೂಕ್ಷ್ಮ ಎಂಬುದರ ಅರಿವು ಅದಕ್ಕಿದೆಯೋ ಇಲ್ಲವೋ ತಿಳಿಯದು. ಅಂತಹ ಸದೃಢವಲ್ಲದ ಶಂಖದ ಹೊದಿಕೆಯೇ ತನ್ನ ಅರಮನೆ, ಅದೇ ಅದರ ಆಸ್ತಿ, ಅಷ್ಟೇ ಅದರ ಪ್ರಪಂಚ! ನಡೆಯಲು, ಓಡಲು ಕೈ-ಕಾಳುಗಲಿಲ್ಲ, ತನಗಿರುವ ಪುಟ್ಟ ದೆಹವೆಲ್ಲವನ್ನೂ ಉಪಯೋಗಿಸಿ, ನಿಧಾನವಾಗಿ, ಅಪಾರ ತಾಳ್ಮೆಯಿಂದ, ಸ್ವಚ್ಚಂದವಾಗಿ ತೆವಳುವುದೇ ಇದರ ಕಾಯಕ; ವೇಗ ಎಂಬುದರ ಅರ್ಥವೇ ಇದಕ್ಕೆ ತಿಳಿದಿರಲಿಕ್ಕಿಲ್ಲ, ಅದರ ಅಗತ್ಯವೂ ಇರಲಿಕ್ಕಿಲ್ಲ. ಇಷ್ಟಾದರೂ, ಅದು ತೋರುತ್ತಿರುವ ಜಿವನಾಸಕ್ತಿಯು ಪ್ರಶಂಸನೀಯ! ನಿಸ್ವಾರ್ಥತೆ, ಪಾರದರ್ಶಕತೆ, ಸರಳತೆ, ಸ್ವಾತಂತ್ರ್ಯ ಇವ್ಯಾವುದೂ ಇಲ್ಲದ; ಬದುಕಿರುವವರೆಗೂ ನಾನು, ನನ್ನದು, ಹೆಂಡತಿ, ಮಕ್ಕಳು, ಆಸ್ತಿ, ಅಂತಸ್ತು ಇವುಗಳಲ್ಲೇ ಸಂಪೂರ್ಣ ಮುಳುಗಿಹೋಗಿ; ಸಹನೆ, ತಾಳ್ಮೆ, ನೀತಿ, ನಿಯಮಗಳೆಲ್ಲವನ್ನೂ ಗಾಳಿಗೆ ತೂರಿ; ಇಹಲೋಕದ ಪಯಣ ಮುಗಿಸಿದಾಗ, ಸರ್ವಸ್ವವನ್ನೂ ತೊರೆದು, ಬರಿಯ ಬೆತ್ತಲಾಗಿ ಹಿಂತಿರುಗಿ ಹೋಗುವ ಮಾನವನ ಜೀವನದ ಅರ್ಥವಾದರೂ ಏನು? ಧ್ಯೇಯೋದ್ದೇಶಗಳಾದರೂ ಏನು? ಸಾರ್ಥಕತೆಯಾದರೂ ಏನು? ಹಾಗೆ ನೋಡಿಕೊಂಡರೆ, ನಮ್ಮ ಜೀವನಕ್ಕಿಂತ ಈ ಬಸವನ ಹುಳುವಿನ ಬದುಕು ಸಾರ್ಥಕವೆನಿಸುತ್ತದೆ! ನನಗೆ ಮುಂದಿನ ಜನ್ಮವೊಂದಿದ್ದರೆ, ಮನುಷ್ಯನಾಗಿದ್ದಾಗಿನ ಅರಿವು ಹೊಂದಿರುವ ಬಸವನ ಹುಳುವಾಗಿ ಹುಟ್ಟಿ, ಆ ಜೀವನಾನಂದದ ಅನುಭಾವದಲ್ಲಿ ಸಂಪೂರ್ಣವಾಗಿ ಲೀನವಾಗಿಬಿಡುವ ಬಯಕೆ. ಸಾಧ್ಯವಾದೀತೆ? ಸಾಧ್ಯವಾಗಿದ್ದೇ ಆದರೆ, ನಾನು ಧನ್ಯ!

2 comments:

  1. prashanth ur no more like a snail now i think.i could see shyla sis in ur writing.even she use to write like u.when u 2 can y not i..just joking.. i dont want people 2 vanish..

    ReplyDelete
  2. Ha ha ha.. yeah! Every one of us definitely have some 'hidden talents'. Very few nurture it and most of us won't. There lies the actual difference :o)

    ReplyDelete

ಖಂಡಿತಾ ನಿಮ್ಮ ಅನಿಸಿಕೆಗಳನ್ನು ತಿಳಿಸಿ. ಧನ್ಯವಾದಗಳು!
Please post your comments. Thank you!